ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ನವೋದ್ಯಮಿ‌

ಒಂದಲ್ಲ 2 ಸ್ಟಾರ್ಟ್‌ಅಪ್‌, 30 ಮಂದಿಗೆ ಉದ್ಯೋಗದಾತ
Last Updated 22 ಮೇ 2019, 19:32 IST
ಅಕ್ಷರ ಗಾತ್ರ

‘ಓದುವ ಟೈಮಲ್ಲಿ ಎಂತಹ ಸ್ಟಾರ್ಟ್‌ಅಪ್‌ ವ್ಯವಹಾರ ನಿನ್ದು?’, ಇದೆಲ್ಲಾ ಮಾಡುವಂತಿದ್ದರೆ ಕಾಮರ್ಸ್‌ ತಗೋಬೇಕಿತ್ತು; ಎಂಜಿನಿಯರಿಂಗ್‌ಗ್ಯಾಕ್ ಬಂದೆ?! ಅಪ್ಪನ ಹಣ ಖರ್ಚು ಮಾಡ್ಕೊಂಡು ಓಡಾಡ್ತಿದ್ದೀಯಾ?!...’ ಹೀಗೆಂದು ಅಂದು ಮೂದಲಿಸಿದ್ದವರು, ತರಗತಿಯಿಂದ ಹೊರ ಕಳುಹಿಸಿ ಅವಮಾನಿಸಿದ್ದವರು, ಈಗ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಬೆಳೆದು ನಿಂತಿದ್ದಾನೆ ಈ ಯುವಕ. ಹೊಸ ಐಡಿಯಾಗಳ ಮೂಲಕ ಭವಿಷ್ಯವನ್ನು ಕಂಡುಕೊಳ್ಳವ ಜತೆಗೆ, ಎರಡು ಕಂಪನಿಗಳ ಸಿಇಒ ಹಾಗೂ ಮಾಲೀಕರಾಗಿ, ತನ್ನ ಓರಗೆಯ ಯುವಕ–ಯುವತಿಯರಿಗೆ ಉದ್ಯೋಗ ನೀಡಿದ್ದಾರೆ !

ಇಂಥ ಉತ್ಸಾಹಿ ಯುವಕನ ಹೆಸರು ಕರಣ್ ಜವಳಿ. ಬೆಳಗಾವಿಯ 24ರ ಹರೆಯದ ಕರಣ್‌, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿಗೆ ಸೇರಿದ್ದರು; ಎಂಜಿನಿಯರಿಂಗ್‌ನಲ್ಲಿ ಕೆಲವು ವಿಷಯಗಳು ಬ್ಯಾಕ್‌ಲಾಗ್‌ ಇದ್ದರೂ ಜೀವನದ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಅವರಿಗಿದ್ದ ಬೈಕ್‌ಗಳ ಮೇಲಿನ ಕ್ರೇಜ್‌ನಿಂದಾಗಿ, ಈಗ ಎರಡು ಸ್ಟಾರ್ಟ್‌ಅಪ್‌ಗಳನ್ನು (ನವೋದ್ಯಮ) ಆರಂಭಿಸಿದ್ದಾರೆ. ಹತ್ತಾರು ಯುವಕ – ಯುವತಿಯ ರಿಗೆ ಉದ್ಯೋಗ ನೀಡಿದ್ದಾರೆ.

ಎಂಜಿನಿಯರಿಂಗ್ ಪದವೀಧರರಿಗಿಂತಲೂ ಹೆಚ್ಚು ಗಳಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು– ‘ಉದ್ಯಮಿಯಾಗಿರುವ ಅಪ್ಪನ ನೆರಳಿನಿಂದ ಹೊರಬಂದು ಏನಾದರೂ ಸಾಧಿಸಬೇಕೆಂಬ ಛಲ; ಹಾಲಿ ಟ್ರೆಂಡ್‌ಗೆ ತಕ್ಕಂತೆ ಐಡಿಯಾ ಮಾಡುವ ಮನೋಭಾವ, ಉದ್ಯೋಗ ಕೇಳುವ ಬದಲು, ಕೊಡುವಂಥವನಾಗಬೇಕು’ ಎಂಬ ಬಯಕೆ. ಇಂಥ ಹಲವು ಆಕಾಂಕ್ಷೆಗಳೊಂದಿಗೆ ಮೂರು ವರ್ಷಗಳ ಹಿಂದೆ ₹ 2 ಲಕ್ಷ ಸಾಲ ಮಾಡಿ ನವೋದ್ಯಮ ಆರಂಭಿಸಿದ್ದ ಕರಣ್ ಈಗ ₹ 2 ಕೋಟಿಗೂ ಹೆಚ್ಚು ಮೌಲ್ಯದ ಕಂಪನಿಯ ಒಡೆಯ!‌

ಸಾಲದೊಂದಿಗೆ...

ಕರಣ್ ಸದ್ಯ ಮೂವ್ ಆನ್‌ ವೀಲ್ಸ್‌ ಹಾಗೂ ಮೋಟೊಕ್ರಾಸ್‌ ಇಂಡಿಯಾ ಎಂಬ ಸ್ಟಾರ್ಟ್‌ಅಪ್‌ಗಳನ್ನು ನಡೆಸುತ್ತಿದ್ದಾರೆ. ‘ಹುಡುಗಾಟ ಬೇಡ, ಓದಿನ ಕಡೆಗೆ ಗಮನಕೊಡು’ ಎಂದು ತಂದೆ ಹೇಳಿದ್ದಕ್ಕೆ, ಪರಿಚಯಸ್ಥರೊಬ್ಬರಿಂದ ₹ 2 ಲಕ್ಷ ಸಾಲ ಪಡೆದು 2015ರಲ್ಲಿ ಮೂವ್ಆನ್‌ ವೀಲ್ಸ್‌ ಕಂಪನಿ ಶುರು ಮಾಡಿದರು. ದ್ವಿಚಕ್ರವಾಹನ ಬಾಡಿಗೆಗೆ (ಗಂಟೆಗಳು ಹಾಗೂ ದಿನದ ಲೆಕ್ಕದಲ್ಲಿ) ನೀಡುವ ಸ್ಟಾರ್ಟ್‌ಅಪ್‌ ಇದು. 10 ಬೈಕ್‌ಗಳೊಂದಿಗೆ ಆರಂಭವಾದ ಈ ನವೋದ್ಯಮದಿಂದ ಮೊದಲು ಸ್ನೇಹಿತರು ಹಾಗೂ ಪರಿಚಯದವರಿಗಷ್ಟೇ ಬೈಕ್ ಬಾಡಿಗೆ ಕೊಡುತ್ತಿದ್ದರು. ಈಗ ತಮ್ಮದೇ ಶೋರೂಂ, ಕಚೇರಿ, ವರ್ಕ್‌ಶಾಪ್‌ ಮಾಡಿಕೊಂಡಿದ್ದಾರೆ.

‘ಹಾರ್ಲಿ ಡೆವಿನ್‌ಸನ್‌’ ಸೇರದಂತೆ ಆಕ್ಟಿವ್ ಹೋಂಡಾ, ಅಕ್ಸೆಸ್, ಕೆಟಿಎಂ, ಪಲ್ಸರ್, ಕವಾಸಕಿ... ಹೀಗೆ 23 ದ್ವಿಚಕ್ರವಾಹನಗಳಿವೆ. 2 ಬೈಸಿಕಲ್‌ಗಳಿವೆ. ಇವುಗಳನ್ನು ಗುತ್ತಿಗೆ ಹಾಗೂ ಬಾಡಿಗೆ–ಎರಡಕ್ಕೂ ಕೊಡುತ್ತಾರೆ. ತಾವೇ ವಿನ್ಯಾಸಗೊಳಿಸಿದ ವೆಬ್‌ಸೈಟ್, ಆ್ಯಪ್‌ ಮೂಲಕ ಕಂಪನಿ ಪ್ರಚಾರ ಮಾಡುತ್ತಿದ್ದಾರೆ. ತಿಂಗಳಿಗೆ ಸರಾಸರಿ 300ಕ್ಕೂ ಹೆಚ್ಚಿನ ಗ್ರಾಹಕರು ಇವರ ಬಳಿ ಬೈಕ್‌ಗಳನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ. ‘ಗ್ರಾಹಕರುಎಲ್ಲಿಗೆ ಬೈಕ್ ತೆಗೆದುಕೊಂಡು ಹೋಗುತ್ತಾರೆ’ ಎಂಬ ಎಂದು ಮಾಹಿತಿ ಸಂಗ್ರಹಿಸಲು ತಾವೇ ಹ್ಯಾಂಡ್‌ ಮೇಡ್‌ ಜಿಪಿಎಸ್‌ ವಿನ್ಯಾಸಗೊಳಿಸಿದ್ದಾರೆ!

ಎಲ್ಲರೂ ಯುವಕರೇ

ಕರಣ್ ಜತೆ ಕೆಲಸ ಮಾಡುತ್ತಿರುವವರಲ್ಲಿ ಇಬ್ಬರು ಹಿರಿಯ ಮೆಕ್ಯಾನಿಕ್‌ಗಳನ್ನು ಬಿಟ್ಟರೆ ಉಳಿದವರೆಲ್ಲರೂ 25–26 ವರ್ಷ ವಯಸ್ಸಿನೊಳಗಿನವರು. ಎಂಜಿನಿಯರಿಂಗ್, ಬಿಬಿಎ, ಎಂಬಿಎ ಪದವೀಧರರು; ತಾಂತ್ರಿಕವಾಗಿ ಪರಿಣತರು. ವೆಬ್‌ಸೈಟ್, ಸಾಮಾಜಿಕ ಜಾಲತಾಣದ ಮೂಲಕ ವಿಭಿನ್ನ ಹಾಗೂ ಆಕರ್ಷಕವಾಗಿ ಪೋಸ್ಟರ್‌ಗಳನ್ನು ಮಾಡಿ ಯುವ ಮತ್ತು ಕ್ರೇಜಿ ಮನಸ್ಸುಗಳನ್ನು ಸೆಳೆಯುತ್ತಿದ್ದಾರೆ. ಕರಣ್ ಸಾರಥ್ಯದಲ್ಲಿ ಸಿಎಂಒ (ಚೀಫ್ ಮಾರ್ಕೆಟಿಂಗ್ ಆಫೀಸರ್) ಸಾಗರ್ ಗೌಡ್, ಮೈಕ್ರೋಮಾರ್ಕೆಟ್‌ ಸಿಇಒ ಆಗಿ ಕರಣ್‌ ಶೆಟ್ಟಿ ಹಾಗೂ ಸಿಎಫ್‌ಒ ಹಾಗೂ ಸಿಎಚ್‌ಆರ್‌ ಆಗಿ ಸುಧೀರ್‌ ಕೋಲಿ ಕಂಪನಿ ಕಟ್ಟುತ್ತಿದ್ದಾರೆ.

ಒಂದೇ ಬೈಕ್‌ ಓಡಿಸಿ ಬೋರಾದವರು ಹಾಗೂ ಬೇರೆ ಬೈಕ್‌ಗಳಲ್ಲಿ ಥ್ರಿಲ್ಲಿಂಗ್‌ ಜರ್ನಿ ಮಾಡಬೇಕೆಂದು ಬಯಸುವ ಈಗಿನ ಯುವಜನರ ಟ್ರೆಂಡ್‌ ಅನ್ನೇ ಬಂಡವಾಳವಾಗಿಸಿಕೊಂಡಿದ್ದಾರೆ. ಪರಿಣಾಮವಾಗಿ, ಮೂವ್ ಆನ್ ವೀಲ್ಸ್‌ ಕಂಪನಿ ಒಂದೇ ವರ್ಷದಲ್ಲಿ ₹ 14 ಲಕ್ಷ ವರಮಾನ ಕಂಡಿದೆ.

ಬೈಕ್‌ಗಳನ್ನು ಬಾಡಿಗೆಗೆ ಕೊಡುವ ಉದ್ಯಮವೇನೋ ಚೆನ್ನಾಗಿ ನಡೆಯುತ್ತಿದೆ. ಆದರೆ, ಆ ಬೈಕ್‌ ಕೆಟ್ಟಾಗ? ಮೆಕ್ಯಾನಿಕ್‌ಗಳು ರಜಾ ದಿನಗಳಲ್ಲೂ ಸಿಗಬೇಕಲ್ಲವೇ? ಅದಕ್ಕಾಗಿ ಸರ್ವಿಸ್ ಪಾಯಿಂಟ್‌ ಕೂಡ ಮಾಡಿದ್ದಾರೆ. ಅದರ ಫಲವೇ ‘ಮೋಟೊಕ್ರಾಸ್‌’ ಕಂಪನಿ ಶುರುಮಾಡಿದ್ದು. ಕೆಲವು ತಿಂಗಳುಗಳ ಹಿಂದಷ್ಟೇ ಆರಂಭವಾಗಿರುವ ಈ ಕಂಪನಿ ಸರ್ವೀಸ್ ಆಧಾರಿತ ಸ್ಟಾರ್ಟ್‌ಅಪ್‌. ಉದ್ಯಮ ಬಾಗ್‌ನಲ್ಲಿ ಈ ವರ್ಕ್‌ಶಾಪ್‌ ಇದೆ. ಇದರ ಮೂಲಕ 150 ಮಂದಿಗೆ ಕೆಲಸ ಕೊಡುವ ಗುರಿ ಇವರದ್ದು. ಇದಕ್ಕಾಗಿ ವಿಸ್ತರಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಪಿಜ್ಜಾ ಡೆಲಿವರಿ ರೀತಿಯ ಬಾಕ್ಸ್

ಪಿಜ್ಜಾ ಡೆಲಿವರಿ ಮಾಡುವವರು ಬಯಸುವ ರೀತಿಯ ಬಾಕ್ಸ್‌ ಸಿದ್ಧಪಡಿಸಿದ್ದಾರೆ. ಅದರೊಂದಿಗೆ ಅವರ ಮೆಕ್ಯಾನಿಕ್‌ ಸ್ಥಳಕ್ಕೆ ತೆರಳಿ ಬೈಕ್‌ ರಿಪೇರಿ ಮಾಡಿಕೊಡುತ್ತಾರೆ. ಸರ್ವೀಸ್ ಹಾಗೂ ಈ ರೀತಿಯ ಕೆಲಸಕ್ಕಾಗಿ ಅವರಲ್ಲಿ ಮೊದಲು ನೋಂದಣಿ ಮಾಡಿಕೊಂಡಿರಬೇಕು. ಬೈಕ್‌ನ ಸರ್ವೀಸ್ ಹಿಸ್ಟರಿ ಗ್ರಾಹಕರಿಗೆ ಒದಗಿಸಲು ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ. ಸರ್ವೀಸ್ ಶುಲ್ಕ ಕಂತಿನಲ್ಲಿ ಕಟ್ಟುವುದಕ್ಕೂ ಅವಕಾಶವಿದೆ. ರೀ ಸೇಲ್ ಗ್ಯಾರೆಂಟಿ ಸ್ಕೀಂನಲ್ಲಿ, ಐದು ವರ್ಷದ ನಂತರ ಶೇ 50 ರಷ್ಟು ಹಣ ನೀಡಿ ದ್ವಿಚಕ್ರವಾಹನಖರೀದಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈ ಯುವಕರು ಹುಬ್ಬಳ್ಳಿ–ಧಾರವಾಡ, ದಾವಣಗೆರೆಗೂ ವಿಸ್ತರಿಸಿದ್ದಾರೆ. ಈ ಸ್ಟಾರ್ಟ್‌ಅಪ್‌ಗಳಿಗೆ ಕೇಂದ್ರ ಸರ್ಕಾರದ ಡಿಪಾರ್ಟ್‌ಮೆಂಟ್ ಆಫ್‌ ಇಂಡಸ್ಟ್ರಿಯಲ್ ಪಾಲಿಸಿ ಅಂಡ್ ಪ್ರಮೋಷನ್‌ನಿಂದ ಸರ್ಟಿಫಿಕೆಟ್‌ ಆಫ್‌ ರೆಕಗ್ನಿಷನ್ (ಮಾನ್ಯತಾ ಪತ್ರ) ದೊರೆತಿದೆ. ಹೀಗೆ ಪ್ರಮಾಣಪತ್ರ ಪಡೆದ ಬೆಳಗಾವಿಯ ಕೆಲವೇ ನವೋದ್ಯಮಗಳಲ್ಲಿ ಇವು ಸೇರಿವೆ.

ಮನೆಗೆ ಬಾಡಿಗೆ!

ಬೆಳಗಾವಿಯ ಕ್ಲಬ್‌ ರಸ್ತೆಯಲ್ಲಿರುವ ತಮ್ಮ ಮನೆಯ ಒಂದು ಭಾಗದಲ್ಲಿ ಕಚೇರಿ ಹಾಗೂ ಔಟ್‌ಹೌಸ್‌ನಲ್ಲಿ ಕಚೇರಿ, ಬೈಕ್‌ಗಳ ನಿಲುಗಡೆಗೆ ಜಾಗ ಮಾಡಿಕೊಂಡಿದ್ದಾರೆ. ಆ ಎಲ್ಲ ಕೊಠಡಿಗಳಿಗೂ ಬಾಡಿಗೆ ಪಾವತಿಸುತ್ತಿದ್ದಾರೆ. ‘ವ್ಯವಹಾರದಲ್ಲಿ ಎಲ್ಲ ಲೆಕ್ಕ ಪಕ್ಕಾ ಇರಬೇಕು’ ಎನ್ನುವುದು ಕರಣ್ ಅಭಿಪ್ರಾಯ.

‘ಈ ಸ್ಟಾರ್ಟ್‌ ಅಪ್‌ ಆರಂಭಕ್ಕೆ ಪ್ರೇರಣೆ ಏನು’ ಎಂಬ ಪ್ರಶ್ನೆಗೆ ‘ಅವಮಾನವೇ ಪ್ರೇರಣೆ’ ಎನ್ನುತ್ತಾರೆ.

ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಂಕಗಳಿಗಷ್ಟೇ ಪ್ರೋತ್ಸಾಹ ಕೊಡುತ್ತಾರೆ. ಅಂಕ ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಪ್ರತಿಭೆ ಇರುವವರಿಗೆ ಆದ್ಯತೆ ನೀಡುವುದಿಲ್ಲ’ ಎಂಬ ಬೇಸರ ಅವರದು. ‘ನನ್ನೊಂದಿಗೆ ಎಂಜಿನಿಯರಿಂಗ್‌ ಓದಿದವರು ಕೆಲಸ ಸಿಗದೇ ಪರದಾಡುತ್ತಿದ್ದಾರೆ; ಕೆಲವರು ಸೇಲ್ಸ್ ವಿಭಾಗದಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ನಾನು ಅವರೆಲ್ಲರಿಗಿಂತಲೂ ಬಹಳ ಮುಂದಿದ್ದೇನೆ. ನಿಂದಿಸಿದವರು ಗೌರವಿಸುವ ದಿನಗಳು ಬಾರದಿರವು’ ಎಂಬ ವಿಶ್ವಾಸ ಅವರದ್ದು.

‘ಕಾಲೇಜು ಕಲಿಯುವಾಗಲೇ 10 ವಿವಿಧ ಸ್ಟಾರ್ಟ್‌ಅಪ್‌ಗಳಿಗೆ ವೆಬ್‌ಸೈಟ್ ವಿನ್ಯಾಸ ಮಾಡಿಕೊಟ್ಟಿದ್ದೆ. ಅದರಿಂದ ಬಂದಿದ್ದ ಹಣವೂ ನನಗೆ ನೆರವಾಯ್ತು’ ಎಂದು ಆ ದಿನಗಳನ್ನು ಮೆಲುಕು ಹಾಕಿದರು. ಮೋಟೊಕ್ರಾಸ್‌ ಕಂಪನಿಯಿಂದ ಸರ್ವೀಸ್‌ಗಾಗಿ 800 ಮಂದಿ ಸದಸ್ಯತ್ವ ಪಡೆದಿದ್ದಾರೆ. ಫ್ರಾಂಚೈಸಿಗಾಗಿ ಹುಬ್ಬಳ್ಳಿ, ಚಿಕ್ಕೋಡಿ ಹಾಗೂ ನಿಪ್ಪಾಣಿಯಿಂದ ಕೆಲವರು ಮುಂದೆ ಬಂದಿದ್ದಾರೆ.

‘ಕಡಿಮೆ ಸಮಯದಲ್ಲಿ ₹1 ಕೋಟಿ ವಹಿವಾಟು ನಡೆಸುವ ಗುರಿ‌ ಇದೆ. ಮನೆಯ ಹಿತ್ತಲಿನಲ್ಲಿ ಕಂಪನಿ ಇರುವುದರಿಂದ ಕೆಲವರು ನಮ್ಮದು ಅಮೆರಿಕನ್ ಸ್ಟಾರ್ಟ್‌ ಅಪ್‌ ಎನ್ನುತ್ತಾರೆ’ ಎಂದು ಖುಷಿಯಿಂದ ಹೇಳಿಕೊಂಡರು. ಕರಣ್‌ ಸಂಪರ್ಕಕ್ಕೆ: 78877 27772

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT