ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮತದಾನ ಮುಕ್ತಾಯ: ಬಹುತೇಕ ಶಾಂತಿಯುತ

ಕೆಲವೆಡೆ ಬಹಿಷ್ಕಾರ– ಹನೂರಿನಲ್ಲಿ ಮತಗಟ್ಟೆ ಮೇಲೆ ಕಲ್ಲು ತೂರಾಟ
Published 26 ಏಪ್ರಿಲ್ 2024, 14:23 IST
Last Updated 26 ಏಪ್ರಿಲ್ 2024, 14:43 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಶುಕ್ರವಾರ ನಡೆಯಿತು. ಚಾಮರಾಜನಗರದಲ್ಲಿ ಕಲ್ಲು ತೂರಾಟ, ಕೆಲವೆಡೆ ಮತದಾನ ಬಹಿಷ್ಕಾರ, ಹೊರತುಪಡಿಸಿದರೆ ಬಹುತೇಕ ಕಡೆಗಳಲ್ಲಿ ಮತದಾನ ಶಾಂತಿಯುತವಾಗಿತ್ತು.

ಬೆಳಿಗ್ಗೆಯಿಂದಲೂ ಜನ ಉತ್ಸಾಹದಿಂದಲೇ ಬಂದು ತಮ್ಮ ಹಕ್ಕು ಚಲಾಯಿಸಿದರು. ಮೊದಲ ಬಾರಿ ಮತ ಚಲಾಯಿಸುವರೂ ಉಮೇದು ತೋರಿದರು.

ಕೆಲವೆಡೆ ಮತಯಂತ್ರ ಸಮಸ್ಯೆಯಿಂದ ಮತದಾನ ತಡವಾಗಿ ಆರಂಭವಾಯಿತು. ಬಿಸಿಲನ್ನು ಲೆಕ್ಕಿಸಿದ ಜನ ಮತ ಚಲಾಯಿಸಿದರು. ರಾಜಕಾರಣಿಗಳು, ಸಿನಿಮಾ ತಾರೆಯರು, ವೃದ್ಧರೂ ಮತ ಚಲಾಯಿಸಿ ಶಾಹಿ ಹಚ್ಚಿದ ಬೆರಳು ತೋರಿಸಿ ಸಂಭ್ರಮಿಸಿದರು.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರು, ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿ, ಇವಿಎಂಗೆ ಹಾನಿ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಗಿಫ್ಟ್ ಕಾರ್ಡುಗಳನ್ನು ಹಂಚಲಾಗಿದೆ ಎಂದು ಸಾಕ್ಷಿ ಸಮೇತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಪಾರದರ್ಶಕ, ಮುಕ್ತ ಚುನಾವಣೆ ನಡೆಸುವಲ್ಲಿ ಚುನಾವಣೆ ಆಯೋಗ ಸಂಪೂರ್ಣ ವಿಫಲ ಎಂದು ಕಿಡಿಕಾರಿದ್ದಾರೆ. ಹಣ ಹಂಚಿಕೊಂಡು ಚುನಾವಣಾ ನಡೆಸಲು ಅವಕಾಶ ಮಾಡಿಕೊಟ್ಟುಬಿಡಿ ಎಂದು ಆಯೋಗದ ಮೇಲೆ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಕ್ಯೂ ಆರ್ ಕೋಡ್ ಇರುವ ಕೂಪನ್‌ಗಳ ಹಂಚಿಕೆ ತಡೆಯಲು ಹೋದ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ರಾಯಚೂರಿನ ಲಿಂಗಸಗೂರಿನ ಮನೆಯೊಂದರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ₹ 500 ಮುಖ ಬೆಲೆಯ ನೋಟಿನ 62 ಬಂಡಲ್ ಜಪ್ತಿ ಮಾಡಿದ್ದಾರೆ.

ಎಸ್‌ಟಿಎಫ್‌ ತಂಡದ ಮುಖ್ಯಸ್ಥ ವಿಜಯಕುಮಾರ, ಅಬಕಾರಿ ಇನ್‌ಸ್ಪೆಕ್ಟರ್ ಪಾಂಡುರಂಗ ನೇತೃತ್ವದಲ್ಲಿ ಗೌಳಿಪುರದ ಚೋಟುಸಾಬ ಉರ್ಫ್ ಚಟ್ಯಾ ಮನೆ ಮೇಲೆ ದಾಳಿ ನಡೆದಾಗ ₹ 500 ಮುಖ ಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಹೋಬಳಿ ದೇವಿ ಕುಂಟೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

ಮಾರ್ಗಾನುಕುಂಟೆಯಿಂದ ದೇವಿಕುಂಟೆ ಗ್ರಾಮಕ್ಕೆ 1994ರಲ್ಲಿ ರಸ್ತೆ ಮಾಡಲಾಗಿದೆ. ಆದರೆ ಆ ರಸ್ತೆ ತೀವ್ರವಾಗಿ ಹಾಳಾಗಿದೆ. ರಸ್ತೆ ಮಾಡಿಸುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಮತದಾನ ಬಹಿಷ್ಕರಿಸುತ್ತಿದ್ದೇವೆ ಗ್ರಾಮಸ್ಥರು ತಿಳಿಸಿದ್ದಾರೆ.

ಬೆಂಗಳೂರಿನ ಮಂಜುನಾಥ್ ನಗರ ಗೌತಮ್ ಕಾಲೇಜಿನಲ್ಲಿ ಮತ ಹಾಕಲು ಬಂದ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್‌ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಚೊಂಬು‌, ಖಾಲಿ ಸಿಲಿಂಡರ್ ಪ್ರದರ್ಶಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100ರಷ್ಟು ಮತದಾನವಾಗಿದೆ. ಚಾರ್ಮಾಡಿ ಘಾಟಿಯ ತಪ್ಪಲಿನಲ್ಲಿರುವ ಈ ಊರಿನ ಮತಗಟ್ಟೆಯಲ್ಲಿ 111 ಜನ ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದರು. ಸಂಜೆ 4ರ ವೇಳೆಗೆ ಎಲ್ಲರೂ ಮತದಾನ ಮಾಡಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ‌ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅಭಿಮಾನಿಯೊಬ್ಬರು ಅವರಿಗೆ ಮತ ಚಲಾಯಿಸುವುದನ್ನು ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ಮಂಗಳೂರಿನ ಕಪಿತಾನಿಯೊ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಘಟನೆ ನಡೆದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರು ಮತ ಚಲಾಯಿಸಿ ಹೊರಗೆ ಬಂದಾಗ ಈ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT