ಬುಧವಾರ, ಜೂನ್ 23, 2021
30 °C

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡನೂರರ ಕರಾಳ ನೆನಪು

ರಾಘವೇಂದ್ರ ಕೆ. Updated:

ಅಕ್ಷರ ಗಾತ್ರ : | |

Prajavani

ಬಾಳು ಬೇವು–ಬೆಲ್ಲದ ಸಮ್ಮಿಶ್ರಣ ಎಂಬ ಲೋಕರೂಢಿಯ ಮಾತು ಸಾರ್ವಕಾಲಿಕ. ಮಧ್ಯಾಹ್ನ ಬೆಲ್ಲದ ಸವಿ ಚಪ್ಪರಿಸಿ ಸಂಭ್ರಮಪಟ್ಟು ಇಳಿಹೊತ್ತಿಗೆ ನಡೆದುಹೋದ ಮಾರಣಹೋಮ ಜೀವನದಲ್ಲಿ ಕಂಡರಿಯದಷ್ಟು ಬೇವಿನ ಕಹಿಯನ್ನು ಉಣಬಡಿಸಿದೆ. ಪಂಜಾಬಿನ ಸುಗ್ಗಿಯ ಹಿಗ್ಗಿನ ದಿನವೇ ಅದರ ಮಣ್ಣಿನಲ್ಲಿ ರಕ್ತದೋಕುಳಿ ಚೆಲ್ಲಿ ನರಹತ್ಯೆಯ ಕರಾಳ ಕಹಿ ನೆನಪು ಅನುಗಾಲ ಇಣುಕುವಂತೆ ಮಾಡಿದೆ.

ಪಂಜಾಬ್‌ನಲ್ಲಿ ಬೇಸಿಗೆ ದಿನವೊಂದರ ಮಧ್ಯದಲ್ಲಿ ‘ಬೈಸಾಕಿ’ ಸುಗ್ಗಿ ಹಬ್ಬದ ಸಂಭ್ರಮ ಕಳೆಗಟ್ಟುತ್ತದೆ. ಪಂಜಾಬಿ ಭಾಷೆಯಲ್ಲಿ ‘ಬೈಸಾಕಿ’ ಎಂದರೆ ಸುಗ್ಗಿ ಎಂದರ್ಥ. ಕನ್ನಡಿಗರ ಸಂಕ್ರಾಂತಿಯಷ್ಟೇ ಮೆರುಗು ತುಂಬುವ ಹಬ್ಬವಿದು. ಬೈಸಾಕಿ ನಂತರವೇ ಗೋಧಿ ಕಟಾವು ಆರಂಭಿಸುವುದು ಅಲ್ಲಿನ ಸಂಪ್ರದಾಯ. ಆ ಹಬ್ಬಕ್ಕೆ ಚಾರಿತ್ರಿಕ ಮಹತ್ವವೂ ಇದೆ. ಸಿಖ್‌ರ ಗುರು 10ನೇ ಗುರುಗೋವಿಂದ ಸಿಂಗ್ ‘ಖಾಲ್ಸಾ’ ಪಂಥವನ್ನು ಏಪ್ರಿಲ್ 13, 1699ರಂದು ಸ್ಥಾಪಿಸುತ್ತಾರೆ. ಸಂಪ್ರದಾಯಸ್ಥರಿಗೆ ಅದೇ ಸುಗ್ಗಿ ಹಬ್ಬವೂ ಹೊಸ ವರ್ಷದ ಆರಂಭವೂ. ಆಗುತ್ತದೆ. ಇದು ಬೆಲ್ಲದ ಸವಿಯ ಭಾಗ. ಕಾಲಾನಂತರ ದುರಂತದ ಸಂಸ್ಮರಣೆಯ ಬೇವಿನ ದಿನ ಕೂಡ ಏಪ್ರಿಲ್‌ 13 ಹೌದಾಗಿರುವುದು ಕರಾಳ ಸತ್ಯ.

ಅದು ಸ್ವಾತಂತ್ರ್ಯ ಚಳವಳಿಯ ಸಂದರ್ಭ. ಪಂಜಾಬಿಗರಿಗೆ 1919ರ ಏಪ್ರಿಲ್‌ 13ರಂದು ಸುಗ್ಗಿ ಸಂಭ್ರಮದ ದಿನ. ಅಂದು ಇಳಿಹೊತ್ತು. ಅಮೃತಸರದ ಜಲಿಯನ್‌ ವಾಲಾಬಾಗ್‌ನಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಬ್ರಿಟಿಷ್‌ರ ದೌರ್ಜನ್ಯದ ವಿರುದ್ಧ ಪ್ರತಿರೋಧ ದಾಖಲಿಸಲು ನೆರೆದಿದ್ದರು. ಸಾರ್ವಜನಿಕ ಪ್ರತಿಭಟನಾ ಸಭೆಯ ನಿಷೇಧದ ನೆಪದಲ್ಲಿ ಬ್ರಿಟಿಷ್‌ ಸರ್ಕಾರ ಏಕಾಏಕಿ ಜನಸ್ತೋಮದ ಮೇಲೆ ಗುಂಡಿನ ದಾಳಿ ನಡೆಸಿ ಸಾವಿರಾರು ಸ್ವಾತಂತ್ರ್ಯ ಸೇನಾನಿಗಳನ್ನು ಕೊಂದುಹಾಕಿತು. ಆ ಕೃತ್ಯದಲ್ಲಿ ಪ್ರಾಣಬಿಟ್ಟ ಹುತಾತ್ಮರ ಬಲಿದಾನವನ್ನು ಗೌರವಿಸುವ ದಿನಗೂಡಿ ಹಬ್ಬ ಬೇವು–ಬೆಲ್ಲದ ಸಮ್ಮಿಳತದಂತೆ ಇಂದೂ ಕಾಣಿಸುತ್ತದೆ. ಅದಕ್ಕೀಗ ನೂರು ವರ್ಷ ತುಂಬಿದೆ.

ಅಮೃತಸರದ ಸ್ವರ್ಣಮಂದಿರ ಪಂಜಾಬಿಗರಿಗೆ ಹೃದಯಕಮಲದ ಪವಿತ್ರ ಭಾವ. ಸ್ವರ್ಣಮಂದಿರ ಎಂದ ಕೂಡಲೇ ಅವರು ಭಾವಪರವಶರಾಗುತ್ತಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ, ಅದರ ನಂತರದಲ್ಲಿ ನಡೆದ ಗಲಭೆಯ ಕೇಂದ್ರವೂ ಇದೇ ಆಗಿತ್ತು. ಕರಾಳ ಹತ್ಯಾಕಾಂಡದ ಕಾರಣಕ್ಕೆ ಇತಿಹಾಸದಲ್ಲಿ ಕಪ್ಪು ಚುಕ್ಕೆಯಂತೆ ಕಾಣುವ ಜಲಿಯಾನ್‌ ವಾಲಾಬಾಗ್‌ ಕೂಡ ಅಮೃತಸರದ ಸ್ವರ್ಣಮಂದಿರದ ಸಮೀಪದಲ್ಲಿದೆ. ಇಂದಿಗೂ ಅದರ ಕರಾಳ ನೆನಪು ಭಾರತೀಯರ ಮನದಲ್ಲಿ ದೇಶಪ್ರೇಮದ ರೋಮಾಂಚನ ಮೂಡಿಸುತ್ತದೆ. ಮನಸ್ಸಿನ ಅಂತರಾಳದಲ್ಲಿ ಕ್ರೋಧದ ತಿದಿಯನ್ನು ಒತ್ತಿ ನಿಟ್ಟುಸಿರ ಬಿಸಿಯನ್ನು ಹೊರಹೊಮ್ಮಿಸುತ್ತದೆ.

ಪಂಜಾಬಿನಲ್ಲಿ ಏನಾಗಿತ್ತು ಎಂದರೆ...
ಲೆಫ್ಟಿನೆಂಟ್‌ ಗವರ್ನರ್‌ ಮೈಕೆಲ್‌ನ ದಬ್ಬಾಳಿಕೆಯ ಹೆಚ್ಚಾಗಿತ್ತು. ನಾಗರಿಕ ಹಕ್ಕುಗಳ ನಿರಾಕರಣೆಯಿಂದ ಅಲ್ಲಿನ ಜನ ರೋಸಿದ್ದರು. 1918ರಲ್ಲಿ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ವಿಶೇಷ ಅಧಿವೇಶನ ಮುಂಬೈಯಲ್ಲಿ ನಡೆದಿತ್ತು. ಅಲ್ಲಿಗೆ ಬಂದ ಪಂಜಾಬಿನ ಪ್ರತಿನಿಧಿಗಳು ತಮ್ಮ ಬೇಗುದಿಯನ್ನು ವೇದಿಕೆಯ ಮುಂದೆ ತೋಡಿಕೊಂಡು, ‘ಒಡಲು ಜ್ವಾಲಾಮುಖಿಯನ್ನು ತುಂಬಿಕೊಂಡಿದೆ. ಹಿಂಸಾ ಆಡಳಿತದ ವಿರುದ್ಧ ಅದು ಯಾವ ಕ್ಷಣದಲ್ಲಾದರೂ ಸ್ಫೋಟಿಸಬಹುದು’ ಎಂದಿದ್ದರು. ಅವರ ಅಂತರಾಳದ ಸಿಟ್ಟು ಜ್ವಾಲಾಮುಖಿಯಾಗಿ ಸ್ಫೋಟಗೊಳ್ಳಲು ರೌಲತ್‌ ಕಾಯ್ದೆ ಭೂಮಿಕೆ ಆಯಿತು.

ರೌಲತ್‌ ಕಾಯಿದೆ ನಿಷೇಧಕ್ಕೆ ಒತ್ತಾಯಿಸಿ ಏಪ್ರಿಲ್‌ 6, 1919ರಂದು ಪಂಜಾಬಿನ ಪ್ರಮುಖ ಪಟ್ಟಣಗಳಲ್ಲಿ ಪ್ರತಿಭಟನೆಗಳು ಜರುಗಿದವು. ಈ ಕಾಯ್ದೆ ವಿರೋಧಿಸಿ ಚಳವಳಿ ರೂಪಿಸಿದ್ದ ನೇತಾರರಿಬ್ಬರನ್ನು ಅಮೃತಸರದಿಂದ ಗಡಿಪಾರು ಮಾಡಲಾಗಿದೆ ಎಂದು ಸ್ಥಳೀಯ ಆಡಳಿತ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಮತ್ತಷ್ಟು ಆಕ್ರೋಶ ಹುರಿಗಟ್ಟಿ ತೋಳ್ಬಲವೂ ಪ್ರದರ್ಶನವಾಯಿತು. ರೊಚ್ಚಿಗೆದ್ದ ಹೋರಾಟಗಾರರ ಹೊಡೆತಕ್ಕೆ ಐವರು ಬ್ರಿಟಿಷ್‌ ಅಧಿಕಾರಿಗಳು ಸಾವನಪ್ಪಿದ್ದರು. ಆಗ ಜನ ಹೋರಾಟವನ್ನು ಹತ್ತಿಕ್ಕಲು ನಡೆಸಿದ ಗೋಲಿಬಾರ್‌ನಲ್ಲಿ ಸುಮಾರು 30 ಮಂದಿ ಸತ್ತರು. ಉದ್ವಿಗ್ನ ಪರಿಸ್ಥಿತಿಯನ್ನು ನಿಭಾಯಿಸುವಂತೆ ನಿರ್ದೇಶಿಸಿ ಬ್ರಿಗೇಡಿಯರ್‌ ಜನರಲ್‌ ಡಯರ್‌ನನ್ನು ಪಂಜಾಬ್‌ ಪ್ರಾಂತ್ಯಕ್ಕೆ ಬ್ರಿಟಿಷ್‌ ಸರ್ಕಾರ ಕಳುಹಿಸಿತು. ಬ್ರಿಗೇಡಿಯರ್‌ ಜನರಲ್‌ ಡಯರ್‌ ವಿರುದ್ಧ ದೊಡ್ಡ ಹೋರಾಟಗಳು ನಡೆದವು.

ಜನರಲ್ಲಿ ಭೀತಿ ಹುಟ್ಟಿಸಲು ಸಾರ್ವಜನಿಕ ಸಭೆ–ಸಮಾರಂಭಗಳನ್ನು ಡಯರ್‌ ನಿಷೇಧಿಸಿದ. ಅವತ್ತು ಏಪ್ರಿಲ್‌ 13. ಪಂಜಾಬಿಗರಿಗೆ ಸುಗ್ಗಿಯ ಸಂಭ್ರಮ. ಅದೇ ನೆಪದಲ್ಲಿ ಜಲಿಯನ್‌ ವಾಲಾಬಾಗ್‌ನಲ್ಲಿ ಸಾರ್ವಜನಿಕ ಸಭೆ ಕರೆಯಲಾಗಿತ್ತು. ಸಭೆ ಕರೆದ ಧುರೀಣರಿಗೆ ಡಯರ್‌ ಹಾಕಿದ್ದ ಸಭಾನಿಷೇಧದ ನಿಯಮ ತಿಳಿದಿರಲಿಲ್ಲ. ಕಾರಣ, ದೊಡ್ಡ ಮಟ್ಟಿನ ಪ್ರಚಾರ, ಸಾರ್ವಜನಿಕ ಪ್ರಕಟಣೆಯನ್ನು ಸರ್ಕಾರ ನೀಡಿರಲಿಲ್ಲ. ಜಲಿಯನ್‌ ವಾಲಾಬಾಗ್‌ ಚಿಕ್ಕ ಬಾಗಿಲಿನ ಒಳಗೆ ವಿಸ್ತಾರವಾದ ಒಳಾಂಗಣ ಪಂಜರದಂತಿತ್ತು. ಹಬ್ಬದ ಸವಿಯುಂಡ ಹತ್ತು ಸಾವಿರಕ್ಕೂ ಅಧಿಕ ಮಂದಿ ಅಲ್ಲಿ ನೆರೆದಿದ್ದರು. ಡಯರ್‌ ಅಲ್ಲಿಗೆ ಸಶಸ್ತ್ರ ಸೇನೆ ನುಗ್ಗಿಸಿದ. ಡಯರ್‌ನ ಸೇನೆ ಪಂಜರದೊಳಗಿನ ಗಿಳಿವಿಂಡಿನಂತೆ ಸ್ವಾತಂತ್ರ್ಯದ ಕನಸಿನಲ್ಲಿ ಹಾರಾಡುತ್ತಿದ್ದ ನಿಶ್ಶಸ್ತ್ರ ಸೇನಾನಿಗಳ ಮೇಲೆ ಏಕಾಏಕಿ ಹತ್ತು ನಿಮಿಷಗಳ ವರೆಗೆ 1,650 ಸುತ್ತು ಗುಂಡಿನ ದಾಳಿ ನಡೆಸಿ, ಸಾವಿರಾರು ಮಂದಿಯನ್ನು ಹತ್ಯೆ ಮಾಡಿತು. ಸತ್ತವರು 500 ಮಂದಿ ಎಂದು ಸರ್ಕಾರ, ಸಾವಿರ ಮಂದಿ ಎಂದು ಭಾರತೀಯರು ಹೇಳುತ್ತಾರೆ.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬೆನ್ನಲ್ಲೆ ಬ್ರಿಟಿಷ್‌ ಆಡಳಿತಕ್ಕೆ ತನ್ನ ದರ್ಪದ ಆಡಳಿತವನ್ನು ವಿಸ್ತರಿಸುವ ಹಪಹಪಿ ಹೆಚ್ಚಾಯಿತು. ಏಪ್ರಿಲ್‌ 15ರಂದು ಪಂಜಾಬಿನಲ್ಲಿ ಸಂಘನಟನಾ ಚಟುವಟಿಕೆಯನ್ನು ಹತ್ತಿಕ್ಕುವ ಸಂಬಂಧ ಹೊಸ ಕಾಯ್ದೆಯನ್ನು ಹೇರಲಾಯಿತು. ಜನಮನದಲ್ಲಿ ಶಾಶ್ವತವಾಗಿ ಭಯ ಮನೆ ಮಾಡಿರಬೇಕೆಂಬ ಉದ್ದೇಶದಿಂದ ತನ್ನ ದೌರ್ಜನ್ಯದ ನೀತಿಯನ್ನು ಮತ್ತಷ್ಟು ವಿಸ್ತರಿಸಿತು. ಆದರೆ, ದೇಶವ್ಯಾಪಿ ಖಂಡನಾ ಸಭೆಗಳು ಜರುಗಿದವು. ಸ್ವಾತಂತ್ರ್ಯ ಸೇನಾನಿಗಳ ವೀರಮರಣ ಯುವ ಉತ್ಸಾಹಿಗಳಲ್ಲಿ ಸ್ಫೂರ್ತಿಯ ಚಿಲುಮೆಯನ್ನು ಮೂಡಿಸಿತು.

ಅದೇ ಸಂದರ್ಭದಲ್ಲಿ ರವೀಂದ್ರನಾಥ ಟ್ಯಾಗೋರ್ ತಮಗೆ ನೀಡಿದ್ದ ‘ಸರ್‌’ ಪದವಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿದರು. ಆ ಸಂಬಂಧ ಅವರು ‘ನನ್ನ ದೇಶದ ಜನತೆಗಾಗಿ ಎಂತಹ ಕಷ್ಟಗಳನ್ನು ನಾನು ಎದುರಿಸಲು ಸಿದ್ಧ. ನನ್ನ ಬಂಧುಗಳನ್ನು ಮನುಷ್ಯರೆಂದು ನೋಡದ ತುಚ್ಚ ಪರಿಸರದಲ್ಲಿ ನನಗೆ ದೊರೆತ ಎಲ್ಲ ಗೌರವ, ಪುರಸ್ಕಾರವನ್ನು ತಿರಸ್ಕರಿಸಿ ಜನರೊಟ್ಟಿಗೆ ನಾನಿರುತ್ತೇನೆ’ ಎಂದು ವೈಸರಾಯ್‌ ಅವರಿಗೆ ಪತ್ರ ಬರೆದರು. ಮಹಾತ್ಮ ಗಾಂಧಿ ಕೂಡ ರೆಡ್‌ಕ್ರಾಸ್‌ ಸೇವೆಗೆ ಅವರು ಪಡೆದಿದ್ದ ‘ಕೈಸರ್‌ ಎ ಹಿಂದ್‌’ ಎಂಬ ಪದವಿಯನ್ನು ಹಿಂತಿರುಗಿಸುವುದಾಗಿ ಪತ್ರ ಬರೆದರು.

ಪಂಜಾಬ್‌ನ ಅಮೃತಸರದ ಜಲಿಯನ್‌ ವಾಲಾಬಾಗ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಪ್ರಾಣಬಿಟ್ಟ ಹುತಾತ್ಮರನ್ನು ಪ್ರತಿವರ್ಷ ಏಪ್ರಿಲ್‌ 13ರಂದು ಸ್ಮರಿಸಿ ಗೌರವವನ್ನು ದೇಶಾದ್ಯಂತ ಸಮರ್ಪಿಸಲಾಗುತ್ತಿದೆ.

ಉದಯಿಸಿತು ಕ್ರಾಂತಿಯ ಕಿಡಿ
12 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ ‌ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ನಡೆದ ಸ್ಥಳಕ್ಕೆ ಭೇಟಿ ನೀಡಿ ಪ್ರತಿಜ್ಞೆ ಸ್ವೀಕರಿಸುತ್ತಾನೆ. ಹೆಪ್ಪುಗಟ್ಟಿದ ರಕ್ತದ ಮಣ್ಣನ್ನು ಡಬ್ಬಿಯೊಂದರಲ್ಲಿ ಸಂಗ್ರಹಿಸಿ ಮನೆಗೆ ತೆಗೆದುಕೊಂಡು ಹೋಗಿದ್ದ ಆ ಬಾಲಕ, ನಿತ್ಯ ಅದನ್ನು ಪೂಜಿಸಿ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡುತ್ತಿದ್ದ. ಆ ಬಾಲಕನೇ ಕ್ರಾಂತಿಯ ಕಿಡಿ ಭಗತ್‌ ಸಿಂಗ್‌.

ಭಗತ್‌ರ ತಂದೆ ಮದುವೆಯ ತಯಾರಿಯಲ್ಲಿ ಇರುತ್ತಾರೆ. ಅದನ್ನು ಅರಿತ ಭಗತ್‌ ಪತ್ರ ಬರೆದಿಟ್ಟು ಮನೆ ಬಿಟ್ಟು ಹೋಗುತ್ತಾರೆ. ಆ ಪತ್ರದಲ್ಲಿ ‘ನನ್ನ ಜೀವನವನ್ನು ಸ್ವಾತಂತ್ರ್ಯ ಚಳವಳಿಗೆ ಸಮರ್ಪಿಸಿದ್ದೇನೆ. ಈಗ ನನಗೆ ಯಾವ ಆಸೆಗಳಾಗಲಿ, ಬಯಕೆಗಳಾಗಲಿ ಇಲ್ಲ. ನನ್ನ ಪ್ರಾಣ ಸ್ವಾತಂತ್ರ್ಯಕ್ಕೆ ಮುಡಿಪು’ ಎಂದು ಬರೆದಿದ್ದರಂತೆ. ಉಗ್ರ ಹೋರಾಟದ ಹಾದಿ ತುಳಿದ ಭಗತ್‌ಸಿಂಗ್‌ರನ್ನು ಬ್ರಿಟಿಷ್‌ ಸರ್ಕಾರ ಮಾರ್ಚ್ 24, 1931ರಂದು ಗಲ್ಲಿಗೆ ಏರಿಸಿತು.

ಅಂದೂ ಹಿಂಸಾವಿನೋದ
ಬ್ರಿಟಿಷ್‌ ಸೇನಾಧಿಕಾರಿ ಡಯರ್‌ ಸಾವಿರಾರು ಮುಗ್ಧ ಭಾರತೀಯರನ್ನು ಹತ್ಯೆ ಮಾಡಿದ ಕಾರಣಕ್ಕೆ ಅವನನ್ನು ಪುರಸ್ಕರಿಸಲಾಯಿತು. ಭಾರತೀಯ ನಿವಾಸಿ ಯೂರೋಪಿಯನ್ನರ ಸಂಘ ಡಯರ್‌ ಮಾಡಿದ ಪಾತಕವನ್ನು ಮುಕ್ತಕಂಠದಿಂದ ಪ್ರಶಂಸಿತು. ಆತನಿಗೆ ‘ಬ್ರಿಟಿಷ್‌ ಸಾಮ್ರಾಜ್ಯ ರಕ್ಷಕ’ ಎಂಬ ಬಿರುದಾವಳಿಯನ್ನು ಧಾರೆಯರೆದು ಅವನ ವೀರತ್ವದ ಪ್ರತೀಕ ಎನ್ನುವಂತೆ ಅವನಿಗೆ ಕತ್ತಿಯನ್ನು ಉಡುಗೊರೆಯಾಗಿ ನೀಡಿದ್ದರು. ಸಂಘದ ವತಿಯಿಂದ 20 ಸಾವಿರ ಪೌಂಡ್‌ ನಿಧಿಯನ್ನು ನೀಡಿದ್ದು ಅಂದಿನ ನರಹತ್ಯೆಯ ವಿನೋದದ ಮನಸ್ಥಿತಿಯನ್ನು ಬಿಂಬಿಸುತ್ತದೆ.

ಕನ್ನಡದಲ್ಲೂ ಕುರುಹು
ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಅಖಂಡ ಭಾರತವೇ ಸಿಡಿದೆದ್ದಿತ್ತು. ಕನ್ನಡ ನಾಡು ಕೂಡ ಹಲವು ಘಟನೆಗಳಿಗೆ ಅದಕ್ಕೆ ಸಾಕ್ಷಿಯಾಗಿದೆ. ನಾಡಿನ ಸ್ವಾತಂತ್ರ್ಯ ಸೇನಾನಿಗಳು 1938ರ ಏಪ್ರಿಲ್‌ 8–9 ಮತ್ತು 10ರಂದು ಬ್ರಿಟಿಷರ ವಿರುದ್ಧ ಪ್ರತಿಭಟಿಸಿ ಮಂಡ್ಯ ಜಿಲ್ಲೆಯ ಶಿವಪುರದಲ್ಲಿ ಧ್ವಜ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ಅದು ನಾಡಿನ ಬೇರೆ ಬೇರೆ ಕಡೆ ತನ್ನ ಪ್ರಭಾವವನ್ನು ಬೀರಿತ್ತು. ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ವಿದುರಾಶ್ವತ್ಥವನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಚಳವಳಿ ರೂಪುಗೊಂಡಿತ್ತು. ಏಪ್ರಿಲ್ 25ರಂದು ವಿದುರಾಶ್ವತ್ಥದಲ್ಲಿ ಧ್ವಜ ಸತ್ಯಾಗ್ರಹ ನಡೆಸಲು ಉದ್ದೇಶಿಸಲಾಗಿತ್ತು. ಅಂದಿನ ಕೋಲಾರ ಜಿಲ್ಲಾಧಿಕಾರಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಯಿತು. ಜನರ ದಟ್ಟಣೆ ನಿಯಂತ್ರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದರು. ಪರಿಣಾಮ ಮಹಿಳೆಯರೂ ಸೇರಿದಂತೆ ಮೂವತ್ತೆರಡು ದೇಶಪ್ರೇಮಿಗಳ ಮಾರಣಹೋಮ ನಡೆಯಿತು. ಆ ಹತ್ಯಾಕಾಂಡವನ್ನು ‘ಕರ್ನಾಟಕದ ಜಲಿಯನ್‌ ವಾಲಾಬಾಗ್‌’ ಎಂದು ಗುರುತಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು