47 ಸಂತ್ರಸ್ತರಿಗೆ ₹ 64.88 ಲಕ್ಷ ಪರಿಹಾರ

ಮಂಗಳವಾರ, ಮಾರ್ಚ್ 19, 2019
28 °C

47 ಸಂತ್ರಸ್ತರಿಗೆ ₹ 64.88 ಲಕ್ಷ ಪರಿಹಾರ

Published:
Updated:
Prajavani

ವಿಜಯಪುರ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿವಿಧ ಸಮಸ್ಯೆಗಳ ಬಗ್ಗೆ ಪರಿಶೀಲಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ,`ಗಂಗಾ ಕಲ್ಯಾಣ ಯೋಜನೆಯಡಿ ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆಯಡಿ 2 ವರ್ಷದ ಅವಧಿಯಲ್ಲಿ ಕೊರೆಯಿಸಲಾದ ಬಾವಿಗಳ ಸಂಖ್ಯೆ, ಕಲ್ಪಿಸಿರುವ ಪಂಪ್‌ಸೆಟ್‌ಗಳ ವಿವರ, ಪಂಪ್‌ಸೆಟ್‌ಗಳ ಸುಸ್ಥಿತಿ, ವಿವಿಧ ಫಲಾನುಭವಿಗಳ ಮಾಹಿತಿ, ನಿಯಮಾವಳಿಗಳನ್ವಯ ಕೈಗೊಳ್ಳಲಾದ ಕ್ರಮಗಳ ಕುರಿತು ಸಮಗ್ರ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಸಲ್ಲಿಸಬೇಕು' ಎಂದರು.

`ಅಲ್ಲದೆ ಯಾವುದೇ ರೀತಿಯ ದೂರುಗಳು ಬಂದಲ್ಲಿ ತಕ್ಷಣ ಸ್ಪಂದಿಸಬೇಕು. ಎಸ್.ಸಿ, ಎಸ್.ಟಿ ಜನಾಂಗಕ್ಕೆ ಅತ್ಯುತ್ತಮ ಗುಣಮಟ್ಟದ ಕಂಪನಿಗಳ ಪಂಪ್‌ಸೆಟ್ ಸರಬರಾಜಿಗೆ ಸಂಬಂಧಪಟ್ಟ ಮನವಿ ಪತ್ರವೊಂದನ್ನು ಕೇಂದ್ರ ಕಚೇರಿಗೆ ಕಳುಹಿಸಬೇಕು. ಈಗಾಗಲೇ ಪೂರೈಕೆಯಾಗಿರುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಬಗ್ಗೆಯೂ ಮಾಹಿತಿ ಒದಗಿಸಬೇಕು. ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರ ಗಮನಕ್ಕೂ ತರುವಂತೆ' ತಿಳಿಸಿದರು.

ಬಸವನಬಾಗೇವಾಡಿ ತಾಲ್ಲೂಕಿನ ಮಟ್ಟಿಹಾಳ ಗ್ರಾಮದ ಪ್ರಕರಣದಲ್ಲಿ 19 ದಲಿತ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಈಗ ಮತ್ತೆ 31 ದಲಿತರ ಮೇಲೆ ಪ್ರಕರಣ ದಾಖಸಿದ್ದಕ್ಕೆ ಸಂಬಂಧಪಟ್ಟಂತೆ ಸೂಕ್ತ ತನಿಖೆ ನಡೆಸುವಂತೆ ಸಮಿತಿ ಸದಸ್ಯರು ಕೋರಿರುವ ಹಿನ್ನೆಲೆಯಲ್ಲಿ, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಸಭೆಗೆ ತಿಳಿಸಿದರು.

ಪರಿಹಾರಧನ ವಿತರಣೆ: 2018ರ ಜನವರಿ 1ರಿಂದ 2019ರ ಫೆ.28 ರವರೆಗೆ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಎಸ್ಸಿ-ಎಸ್ಟಿ ಜನಾಂಗದ 47 ಸಂತ್ರಸ್ತರಿಗೆ ₹ 64.88 ಲಕ್ಷ ಪರಿಹಾರವನ್ನು ಜಿಲ್ಲಾಡಳಿತದಿಂದ ಬುಧವಾರ ವಿತರಿಸಲಾಯಿತು.

ಜಿಲ್ಲೆಯಲ್ಲಿ 2018 ರಿಂದ 2019ರವರೆಗೆ ಒಟ್ಟು 55 ಎಸ್ಸಿ-ಎಸ್ಟಿ ಜನಾಂಗದ ಮೇಲೆ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇದಕ್ಕಾಗಿ ₹ 1.15 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 47 ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಸಂತ್ರಸ್ತರಿಗೆ ₹ 64.88 ಲಕ್ಷ ಪರಿಹಾರ ಧನ ವಿತರಿಸಲಾಗಿದ್ದು, ಉಳಿದ 8 ಪ್ರಕರಣಗಳಿಗೆ ಪರಿಹಾರ ಧನ ವಿತರಿಸಲಾಗುವುದು.

ಅದರಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆ 1989ರಡಿಯಲ್ಲಿ ಒಟ್ಟು 162 ಪ್ರಕರಣಗಳು ಫೆಬ್ರುವರಿ ತಿಂಗಳ ಅಂತ್ಯಕ್ಕೆ ನ್ಯಾಯಾಲಯದಲ್ಲಿ ದಾಖಲಾಗಿದ್ದು, ಈವರೆಗೆ 8 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ವಿವಿಧ ಪ್ರಕರಣಗಳು ನ್ಯಾಯಾಲಯ ಹಂತದಲ್ಲಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಸಮಿತಿಯ ಸದಸ್ಯರಾದ ಅಡಿವೆಪ್ಪ ಸಾಲಗಲ್ಲ, ಸುರೇಶ ಮಣ್ಣೂರ, ಅರವಿಂದ ಸಾಲವಾಡಗಿ, ಮನೋಹರ ಕಾಂಬಳೆ, ಮುತ್ತಣ್ಣ ಸಾಸನೂರ, ಬಸವರಾಜ ಪೂಜಾರಿ, ಅಶೋಕ ಕರೆಕಲ್ಲ ಇದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋದ್ದಾರ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !