ಚಿಕಿತ್ಸೆ ವೇಳೆ ₹50 ಸಾವಿರ ಕಳವು ಆರೋಪ

7
ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಉದ್ಯಮಿ * ಬಸವೇಶ್ವರ ನಗರ ಠಾಣೆಯಲ್ಲಿ ಎನ್‌ಸಿಆರ್‌

ಚಿಕಿತ್ಸೆ ವೇಳೆ ₹50 ಸಾವಿರ ಕಳವು ಆರೋಪ

Published:
Updated:

ಬೆಂಗಳೂರು: ‘ಮಂಜುನಾಥ್‌ ನಗರದ ಕಾಡೆ ಆಸ್ಪತ್ರೆಯ ಸಿಬ್ಬಂದಿ, ಚಿಕಿತ್ಸೆ ನೀಡುವ ವೇಳೆಯಲ್ಲಿ ₹50 ಸಾವಿರ ಕಳವು ಮಾಡಿದ್ದಾರೆ’ ಎಂದು ಉದ್ಯಮಿ ಲಿಂಗಮೂರ್ತಿ ಎಂಬುವರ ಪುತ್ರ ಸಂತೋಷ್, ಬಸವೇಶ್ವರನಗರ ಠಾಣೆಗೆ ದೂರು ನೀಡಿದ್ದಾರೆ.

‘ಕುರುಬರಹಳ್ಳಿ ಸಮೀಪದ ಜೆ.ಸಿ.ನಗರ ನಿವಾಸಿಯಾದ ಲಿಂಗಮೂರ್ತಿ, ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ವೇಳೆ ಹಣ ಕಳುವಾಗಿದೆಯೆಂದು ಉದ್ಯಮಿ ಹಾಗೂ ಅವರ ಪುತ್ರ ದೂರುತ್ತಿದ್ದಾರೆ. ಆಸ್ಪತ್ರೆ ಸಿಬ್ಬಂದಿ ವಿರುದ್ಧ ಎನ್‌ಸಿಆರ್‌ (ಗಂಭೀರವಲ್ಲದ ಅಪರಾಧ) ಮಾಡಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಬನಿಯನ್‌ ಕತ್ತರಿಸುವ ವೇಳೆ ಹಣ ಕದ್ದರು: ‘ತಂದೆ ಲಿಂಗಮೂರ್ತಿ, ₹6 ಲಕ್ಷ ತೆಗೆದುಕೊಂಡು ಡಿ. 31ರಂದು ಮಧ್ಯಾಹ್ನ ಬೈಕ್‌ನಲ್ಲಿ ಹೊರಟಿದ್ದರು. ಮಂಜುನಾಥ್ ನಗರದ ತಿಮ್ಮಯ್ಯ ರಸ್ತೆಯಲ್ಲಿ ಬೈಕ್‌ ಉರುಳಿಬಿದ್ದಿದ್ದರಿಂದ ಅವರ ತಲೆಗೆ ಪೆಟ್ಟು ಬಿದ್ದಿತ್ತು. ಸ್ಥಳೀಯರೇ  ಅವರನ್ನು ಕಾಡೆ ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಮಗ ಸಂತೋಷ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಷಯ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ಹೋಗಿದ್ದೆ. ನನ್ನ ಜೊತೆ ಮಾತನಾಡಿದ ತಂದೆ, ‘ಜೇಬಿನಲ್ಲಿ ₹6 ಲಕ್ಷ ಹಣ ಇದೆ. ತೆಗೆದುಕೊ’ ಎಂದು ಹೇಳಿದ್ದರು. ಆದರೆ, ಅವರ ಬಳಿ ಕೇವಲ ₹5 ಲಕ್ಷ ಮಾತ್ರ ಇತ್ತು. ₹1 ಲಕ್ಷ ಇರಲಿಲ್ಲ’

‘₹1 ಲಕ್ಷ ಕಳವು ಮಾಡಿದ್ದೀರಾ ಎಂದು ಹೇಳಿದಾಗ ಆಸ್ಪತ್ರೆಯ ಸಿಬ್ಬಂದಿ, ಚಿಕಿತ್ಸಾ ಕೊಠಡಿಯಿಂದ ನನ್ನನ್ನು ಹೊರಗೆ ಕಳುಹಿಸಿದ್ದರು. ಕೆಲವು ನಿಮಿಷಗಳ ಬಳಿಕ ಕೊಠಡಿಯೊಳಗೆ ವಾಪಸ್‌ ಹೋದಾಗ, ಬೆಡ್‌ ಮೇಲೆ ₹50 ಸಾವಿರ ಇತ್ತು. ಉಳಿದ ₹50 ಸಾವಿರ ಎಲ್ಲಿ ಎಂದು ಸಿಬ್ಬಂದಿಯನ್ನು ಕೇಳಿದಾಗ, ಯಾವುದೇ ಉತ್ತರ ನೀಡಲಿಲ್ಲ’ ಎಂದು ಸಂತೋಷ್ ಹೇಳಿದರು.

‘ತಂದೆಯನ್ನು ಮನೆಗೆ ಕರೆದುಕೊಂಡು ಬಂದಿದ್ದೇವೆ. ಚಿಕಿತ್ಸೆ ನೀಡುವ ವೇಳೆಯಲ್ಲಿ ಅವರ ಬನಿಯನ್‌ನನ್ನು ಸಿಬ್ಬಂದಿ ಕತ್ತರಿಸಿದ್ದರು. ಆ ಬನಿಯನ್‌ನಲ್ಲಿದ್ದ ಹಣವೇ ಕಳುವಾಗಿರುವುದಾಗಿ ತಂದೆ ಹೇಳುತ್ತಿದ್ದಾರೆ’ ಎಂದರು.

ಕೆಲಸ ಮಾಡದ ಕ್ಯಾಮೆರಾ: ‘ಆಸ್ಪತ್ರೆಯ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ಮಾಡಲಾಯಿತು. ಎರಡು ಕ್ಯಾಮೆರಾಗಳು, ಶಾರ್ಟ್‌ ಸರ್ಕೀಟ್‌ನಿಂದ ಹಾಳಾಗಿವೆ. ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !