ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | MI vs KKR: ಸುಧಾರಣೆ ಕಾಣಲು ಕೋಲ್ಕತ್ತಕ್ಕೆ ಅವಕಾಶ

Published 2 ಮೇ 2024, 23:55 IST
Last Updated 2 ಮೇ 2024, 23:55 IST
ಅಕ್ಷರ ಗಾತ್ರ

ಮುಂಬೈ: ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ಕೊನೆಯಿಂದ ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡಗಳು ಶುಕ್ರವಾರ ಇಲ್ಲಿ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.

ಒಂಬತ್ತು ಪಂದ್ಯಗಳನ್ನು ಆಡಿ ಆರನ್ನು ಗೆದ್ದಿರುವ ನೈಟ್‌ ರೈಡರ್ಸ್ ಈಗ ಪ್ಲೇಆಫ್‌ಗೆ ಸನಿಹದಲ್ಲಿದೆ. ಆದರೆ ಶ್ರೇಯಸ್‌ ಅಯ್ಯರ್‌ ಬಳಗ ತನ್ನಲ್ಲಿರುವ ದೋಷ, ದೌರ್ಬಲ್ಯಗಳನ್ನು ತಿದ್ದಿಕೊಂಡು ಸ್ಥಿರ ಪ್ರದರ್ಶನ ಕಂಡುಕೊಳ್ಳಲು ಉಳಿದ ಪಂದ್ಯಗಳು ಅವಕಾಶ ಕಲ್ಪಿಸಲಿವೆ.

ಕಳೆದ ಆರು ಪಂದ್ಯಗಳಲ್ಲಿ ಕೋಲ್ಕತ್ತ ಮೂರರಲ್ಲಿ ಸೋತಿದೆ. ‍ಪಂಜಾಬ್ ಕಿಂಗ್ಸ್ ತಂಡವು, ದಾಖಲೆಯ ಚೇಸ್‌ನಲ್ಲಿ ಯಶಸ್ವಿ ಆಗಿದ್ದು ಕೋಲ್ಕತ್ತಕ್ಕೆ ಅನಿರೀಕ್ಷಿತ ಹಿನ್ನಡೆ ಉಂಟುಮಾಡಿತು. ಆದರೆ ಮರುಪಂದ್ಯದಲ್ಲೇ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಜಯಗಳಿಸಿ ಹಳಿಗೆ ಮರಳಿದೆ.

ಆಕ್ರಮಣಕಾರಿ ಬ್ಯಾಟರ್‌ಗಳನ್ನು ಹೊಂದಿರುವ ಕೆಕೆಆರ್‌ ತಂಡ ಪ್ರಬಲವಾಗಿದೆ. ಆದರೆ ಬೌಲಿಂಗ್‌ ಬಗ್ಗೆ ಇದೇ ಮಾತನ್ನು ಹೇಳುವಂತಿಲ್ಲ. ಈ ವಿಭಾಗದಲ್ಲಿ ಸುಧಾರಣೆ ಅಗತ್ಯವಿದೆ. ಐಪಿಎಲ್‌ನ ಅತಿ ದುಬಾರಿ ಆಟಗಾರ ಎನಿಸಿರುವ ಮಿಚೆಲ್‌ ಸ್ಟಾರ್ಕ್ ಅವರು ಪ್ರತಿ ಓವರಿಗೆ 12 ರನ್ ನೀಡಿದ್ದಾರೆ. ಎಂಟು ಪಂದ್ಯಗಳಿಂದ ಅವರು ಪಡೆದಿರುವುದು ಏಳು ವಿಕೆಟ್‌ಗಳನ್ನಷ್ಟೇ. ಅದರ ಯಶಸ್ವಿ ಬೌಲರ್ ಹರ್ಷಿತ್ ರಾಣಾ, ಅತಿಯಾದ ಸಂಭ್ರಮಾಚರಣೆ ಕಾರಣ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿದ್ದಾರೆ.

‘ಫಿನಿಷರ್‌’ ರಿಂಕು ಸಿಂಗ್ ಪ್ರದರ್ಶನದ ಮೇಲೂ ಗಮನವಿಡಲಾಗಿದೆ. ವಿಶ್ವಕಪ್ ತಂಡದಿಂದ ಕೈಬಿಟ್ಟಿರುವುದಕ್ಕೆ 26 ವರ್ಷದ ಬ್ಯಾಟರ್‌ ಮೇಲೆ ಅನುಕಂಪ ವ್ಯಕ್ತವಾಗಿದೆ.

ಮುಂಬೈ ತಂಡಕ್ಕೆ ಐದು ಪಂದ್ಯಗಳು ಆಡಲು ಇದ್ದರೂ ಪ್ಲೇ ಆಫ್‌ ಬಾಗಿಲು ಬಹುತೇಕ ಮುಚ್ಚಿದೆ. ಉಳಿದೆಲ್ಲ ಪಂದ್ಯಗಳನ್ನು ಗೆದ್ದರಷ್ಟೇ ಸಾಲದು, ಉಳಿದ ಪಂದ್ಯಗಳ ಫಲಿತಾಂಶ ಅದು ಬಯಸಿದಂತೆ ಬಂದರೆ ಮಾತ್ರ ಕ್ಷೀಣ ಅವಕಾಶವಿದೆ.

ಜಸ್‌ಪ್ರೀತ್ ಬೂಮ್ರಾ (14 ವಿಕೆಟ್‌) ಮತ್ತು ಜೆರಾಲ್ಡ್ ಕೋಝಿ (13) ಅವರು ಮುಂಬೈ ಪರ ಯಶಸ್ವಿ ಬೌಲರ್‌ಗಳೆನಿಸಿದ್ದಾರೆ. ಬೌಲಿಂಗ್ ಪರಿಣಾಮಕಾರಿ ಎನಿಸಿದರೂ, ಬ್ಯಾಟರ್‌ಗಳು ಸಾಂಘಿಕ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಐದು ಬಾರಿಯ ಚಾಂಪಿಯನ್ ತಂಡ ಪರದಾಡುತ್ತಿದೆ. ತಿಲಕ್‌ ವರ್ಮಾ ಮೂರು ಅರ್ಧ ಶತಕ ಸಹಿತ 343 ರನ್ ಗಳಿಸಿದ್ದು, ಅದರ ಯಶಸ್ವಿ ಬ್ಯಾಟರ್ ಎನಿಸಿದ್ದಾರೆ. ಆದರೆ ಅವರ ಆಟ ಇತರ ಬ್ಯಾಟರ್‌ಗಳ ವೈಫಲ್ಯ ಮುಚ್ಚುವಂತಿರಲಿಲ್ಲ.

ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟ್‌ನಿಂದಾಗಲಿ, ಚೆಂಡಿನಿಂದಾಗಲಿ ಮಿಂಚಲು ವಿಫಲರಾಗಿದ್ದಾರೆ. ಆದರೆ ವಿಶ್ವಕಪ್ ತಂಡಕ್ಕೆ ಉಪನಾಯಕನಾಗಿ ಆಯ್ಕೆ ಆಗಿರುವುದು ಅವರಿಗೆ ಸ್ಫೂರ್ತಿ ನೀಡಬಹುದೇ ಎಂಬುದನ್ನು ಕಾದುನೋಡಬೇಕಾಗಿದೆ.

ಪಂದ್ಯ ಆರಂಭ: ರಾತ್ರಿ 7.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೊ ಸಿನಿಮಾ ಆ್ಯಪ್‌.

ಮುಖಾಮುಖಿ

ಒಟ್ಟು ಪಂದ್ಯಗಳು: 32

ಮುಂಬೈ ಗೆಲುವು: 23

ಕೆಕೆಆರ್ ಗೆಲುವು 9

ತಿಲಕ್‌ ವರ್ಮಾ
ಎಎಫ್‌ಪಿ ಚಿತ್ರ
ತಿಲಕ್‌ ವರ್ಮಾ ಎಎಫ್‌ಪಿ ಚಿತ್ರ
ಶ್ರೇಯಸ್‌ ಅಯ್ಯರ್
ಪಿಟಿಐ ಚಿತ್ರ
ಶ್ರೇಯಸ್‌ ಅಯ್ಯರ್ ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT