ಶನಿವಾರ, ಏಪ್ರಿಲ್ 17, 2021
33 °C

ಪದವೀಧರರಿಗೆ ಕೌಶಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಷಗಟ್ಟಲೇ ಓದಿ ಪಡೆದ ಪದವಿ ಬಳಿಕ ಉದ್ಯೋಗದ `ಬೇಟೆ~ ಆರಂಭವಾಗುತ್ತದೆ. ಆದರೆ ಸಂದರ್ಶನ, ಪರೀಕ್ಷೆ ಎದುರಿಸುವಾಗ ಏನೇನೋ ಅಡೆತಡೆ ಕಾಡುತ್ತವೆ. ಅವೆಲ್ಲ ಮೆಟ್ಟಿನಿಂತು ಉದ್ಯೋಗ ಪಡೆಯುವುದೂ ಒಂದು ಸಾಹಸವೇ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮಲ್ಲಿ ಅಪಾರ ಪ್ರತಿಭೆಯಿದ್ದರೂ ಅತ್ಮವಿಶ್ವಾಸದ ಕೊರತೆಯಿಂದಾಗಿ ಪೈಪೋಟಿಯಲ್ಲಿ ಹಿಂದೆ ಬೀಳುತ್ತಾರೆ. ಇಂಥ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ, ಅವರನ್ನು ಸ್ಪರ್ಧಾತ್ಮಕ ಜಗತ್ತಿಗೆ ತಯಾರು ಮಾಡುವ ಉದ್ದೇಶದಿಂದ `ಗ್ರಾಜುಯೇಟ್ ಫಿನಿಶಿಂಗ್ ಸ್ಕೂಲ್~ (ಜಿಎಫ್‌ಎಸ್) ಕಾರ್ಯನಿರ್ವಹಿಸುತ್ತಿದೆ.ಧಾರವಾಡ ಮೂಲದ ವಿದ್ಯಾಪೋಷಕ ಸಂಸ್ಥೆಯ `ಜಿಎಫ್‌ಸಿ~ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಕನಸು ಸಾಕಾರಗೊಳ್ಳಲು ನೆರವಾಗಿದೆ. ಗುಲ್ಬರ್ಗದ ವೀರೇಂದ್ರ ಪಾಟೀಲ ಬಡಾವಣೆಯಲ್ಲಿ 2008ರಲ್ಲಿ ಆರಂಭವಾದ ಈ ಸ್ಕೂಲ್, ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಪದವೀಧರರಿಗೆ ನೆರವಿನ ಹಸ್ತ ಚಾಚುತ್ತಿದೆ. ಈಗಾಗಲೇ 13 ತಂಡಗಳ ತರಬೇತಿ ಪೂರ್ಣಗೊಂಡಿದೆ.ವ್ಯಕ್ತಿತ್ವ ವಿಕಸನ: ತರಬೇತಿಯ ಆರಂಭದಲ್ಲಿ ಪ್ಲ್ಯಾನ್, ಬಜೆಟ್‌ನಂಥ ಲೆಕ್ಕಾಚಾರ ಕಲಿಸುವುದರ ಜತೆಗೆ ಜನರ ಜತೆ ಸಂವಹನ ನಡೆಸುವುದು ಹೇಗೆ? ಎಂಬ ಬಗ್ಗೆಯೂ ಮಾಹಿತಿ- ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ವ್ಯಕ್ತಿತ್ವ ವಿಕಸನ ತಜ್ಞರು ಜೀವನ ಕೌಶಲ, ಸಾಮರ್ಥ್ಯವೃದ್ಧಿ, ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡುತ್ತಾರೆ. ನಂತರದಲ್ಲಿ ಇಂಗ್ಲಿಷ್ ಕಲಿಕೆ. ಬರೀಮಾತಾಡುವುದಷ್ಟೇ ಅಲ್ಲ; ಉಚ್ಚಾರ, ವ್ಯಾಕರಣ ಹಾಗೂ ವಾಕ್ಯರಚನೆ ಹೇಗಿರಬೇಕು ಎಂಬುದರತ್ತ ವಿದ್ಯಾರ್ಥಿಗಳ ಗಮನ ಸೆಳೆಯಲಾಗುತ್ತದೆ. ಏಳೆಂಟು ಅಭ್ಯರ್ಥಿಗಳಿಗೆ ಒಬ್ಬ `ಮೆಂಟರ್~ (ಗುರು) ಇದ್ದು, ಪ್ರತಿಯೊಬ್ಬನೂ ತನ್ನ ನಿತ್ಯದ ಅಭ್ಯಾಸವನ್ನು `ಮೆಂಟರ್~ಗೆ ಒಪ್ಪಿಸಬೇಕು.ಉದ್ಯೋಗಕ್ಕೂ ಯತ್ನ: “ದಿನಕ್ಕೆ ಸುಮಾರು ಹತ್ತು ತಾಸಿನಂತೆ ಮೂರು ತಿಂಗಳ ಅವಧಿಯಲ್ಲಿ ಸಂಭಾಷಣಾ ಕಲೆ, ಕಂಪ್ಯೂಟರ್ ತರಬೇತಿ, ಮಾನಸಿಕ ಸಾಮರ್ಥ್ಯ, ವ್ಯಕ್ತಿತ್ವ ವಿಕಸನ ಹಾಗೂ ಜೀವನ ಕೌಶಲ ಬೋಧಿಸಲಾಗುವುದು. ಖ್ಯಾತ ಉಪನ್ಯಾಸಕರು, ವಿಶೇಷಜ್ಞರು ತರಬೇತಿ ನೀಡುತ್ತಾರೆ. ಜೀವನಶೈಲಿ ಹಾಗೂ ಆಲೋಚನಾ ಕ್ರಮದಲ್ಲಿ ಬದಲಾವಣೆ ತರುವ ಮೂಲಕ ಅವರ ಭವಿಷ್ಯ ಉಜ್ವಲವಾಗುವಂತೆ ನೋಡಿಕೊಳ್ಳುತ್ತೇವೆ” ಎನ್ನುತ್ತಾರೆ, ಗುಲ್ಬರ್ಗ ಕೇಂದ್ರದ ಮುಖ್ಯಸ್ಥ ಆರ್. ಜೋಶುವಾ.ಇತ್ತ ತರಬೇತಿ ನಡೆಯುತ್ತಿರುವಂತೆಯೇ ಅತ್ತ ಇದೇ ಕೇಂದ್ರದ ಬೆಂಗಳೂರು ವಿಭಾಗದ ಮಾನವ ಸಂಪನ್ಮೂಲ ಇಲಾಖೆಯ ಸಿಬ್ಬಂದಿಯು ವಿವಿಧ ಕಂಪೆನಿಗಳ ಜತೆ ಮಾತುಕತೆ ನಡೆಸಿ ಉದ್ಯೋಗ ದೊರಕಿಸಿಕೊಡಲು ಯತ್ನಿಸುತ್ತಾರೆ. “ಹಲವಾರು ಕಂಪೆನಿಗಳು ನಮ್ಮ ಕೇಂದ್ರದ ಅಭ್ಯರ್ಥಿಗಳಿಗೆ ಉದ್ಯೋಗ ಕೊಡಲು ಮುಂದೆ ಬರುತ್ತಿವೆ. ಒಂದು ವೇಳೆ ಸಂದರ್ಶನದಲ್ಲಿ ವಿಫಲವಾದರೆ, ಅವರ ತಪ್ಪುಗಳೇನು ಎಂಬುದನ್ನು ಮನವರಿಕೆ ಮಾಡಿಕೊಟ್ಟು ಮತ್ತೆ ಸಫಲವಾಗುವಂತೆ ನೋಡಿಕೊಳ್ಳುತ್ತೇವೆ” ಎಂದು ಜೋಶುವಾ ಹೇಳುತ್ತಾರೆ.ಈ ಕೇಂದ್ರದಲ್ಲಿ ಪ್ರವೇಶ ಪಡೆಯಲು ಆಸಕ್ತ ಪದವೀಧರರು ಅರ್ಜಿ ಸಲ್ಲಿಸಬಹುದು. ಇನ್ನೊಂದು ವಿಧಾನದಲ್ಲಿ ಕೇಂದ್ರದ ಮುಖ್ಯಸ್ಥರು ಕಾಲೇಜು ಕಾಲೇಜಿಗಳಿಗೆ ಭೇಟಿ ನೀಡಿ, ಸಂಸ್ಥೆಯ ಕಾರ್ಯವೈಖರಿ ವಿವರಿಸುತ್ತಾರೆ. ಪ್ರವೇಶ ಬಯಸುವ ಪದವೀಧರರು ಕಿರು ಪರೀಕ್ಷೆಯೊಂದನ್ನು ಸಹ ಬರೆಯಬೇಕು. ತರಬೇತಿಯ ಒಟ್ಟು ವೆಚ್ಚ ಪ್ರತಿ ಅಭ್ಯರ್ಥಿಗೆ ಸುಮಾರು 25,000 ರೂಪಾಯಿ. ಈ ಪೈಕಿ ಶ್ರೀಮತಿ ಸರೋಜಿನಿ ದಾಮೋದರನ್ ಚಾರಿಟಬಲ್ ಟ್ರಸ್ಟ್ ರೂ. 10,000 ಭರಿಸಿದರೆ ಉಳಿದ ಹಣವನ್ನು ವಿದ್ಯಾರ್ಥಿಗಳು ನೀಡಬೇಕು. ಅಭ್ಯರ್ಥಿಗಳಿಗೆ ಸಂಸ್ಥೆಯು ಅಭ್ಯಾಸ ಸಲಕರಣೆ, ಪುಸ್ತಕ ಸೌಲಭ್ಯ ಒದಗಿಸುತ್ತದೆ. ಆರಂಭದಿಂದಲೂ ಸಂಸದ ಬಸವರಾಜ ಪಾಟೀಲ ಸೇಡಂ ಅವರ ಸತತ ನೆರವು- ಮಾರ್ಗದರ್ಶನ ಈ ಕೇಂದ್ರಕ್ಕಿದೆ.ಹೆಮ್ಮೆ- ಸಂತಸ...:
ನಾಲ್ಕು ಸಿಬ್ಬಂದಿಯಿರುವ ಕೇಂದ್ರದಿಂದ ಪ್ರತಿ ವರ್ಷ ಸುಮಾರು 80 ಪದವೀಧರರು ತರಬೇತಿ ಪೂರ್ಣಗೊಳಿಸುತ್ತಿದ್ದಾರೆ. ಈವರೆಗೆ ತರಬೇತಿ ಪಡೆದವರು ಬಹುರಾಷ್ಟ್ರೀಯ ಕಂಪೆನಿಗಳಲ್ಲೂ ಉದ್ಯೋಗ ಪಡೆಯುವಲ್ಲಿ ಸಫಲರಾಗಿದ್ದಾರೆ. ಬಡತನ ಕುಟುಂಬದಲ್ಲಿ ಬೆಳೆದು, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆಂದೇ ರೂಪುಗೊಂಡ ತರಬೇತಿಯು ಅನೇಕರಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸಿದೆ. “ನಮ್ಮಲ್ಲಿ ತರಬೇತಿ ಪಡೆದು ಮಹಾನಗರಗಳಲ್ಲಿ ಈಗ ಉದ್ಯೋಗದಲ್ಲಿರುವ ಎಷ್ಟೋ ಪದವೀಧರರು ಈಗ ಆತ್ಮವಿಶ್ವಾಸದಿಂದ ಬೀಗುವುದನ್ನು ಕಂಡಾಗ ನಮ್ಮ ಕೇಂದ್ರದ ಬಗ್ಗೆ ಹೆಮ್ಮೆ ಹಾಗೂ ಸಂತೋಷ ಮೂಡುತ್ತದೆ” ಎಂದು ಜೋಶುವಾ ಅಭಿಮಾನದಿಂದ ನುಡಿಯುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.