ಶನಿವಾರ, ಫೆಬ್ರವರಿ 27, 2021
19 °C

ಪತ್ನಿವ್ರತಸ್ಥ-ಗಂಡಿಗೆ ಶೀಲ ಪರೀಕ್ಷೆ ಏಕಿಲ್ಲ? ನೀರಿನಲ್ಲಿ ಉರಿದ ದೀಪ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ನಿವ್ರತಸ್ಥ-ಗಂಡಿಗೆ ಶೀಲ ಪರೀಕ್ಷೆ ಏಕಿಲ್ಲ? ನೀರಿನಲ್ಲಿ ಉರಿದ ದೀಪ...!

ಗುಲ್ಬರ್ಗ: ನಗರದ ವೀರಮ್ಮ ಗಂಗಸಿರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ `ಪವಾಡ~ ನಡೆದವು. ವಿದ್ಯಾರ್ಥಿನಿ ಭಾಗಮ್ಮ ಹಣತೆಗೆ ನೀರು ಹಾಕಿ ದೀಪ ಉರಿಸಿದಳು. ಇನ್ನೊಬ್ಬಳು ಬಾಯಿಯಲ್ಲಿ ಕರ್ಪೂರ ಬೆಳಗಿದಳು. ಮತ್ತೊಬ್ಬಳು ಉರಿಯುತ್ತಿದ್ದ ದೊಂದಿಯನ್ನು ಮೈಮೇಲೆ ಸವರಿಕೊಂಡಳು. ಪ್ರಾಂಶುಪಾಲ ಅಶೋಕ ಜೀವಜಣಗಿ ಸೇರಿದಂತೆ ಶಿಕ್ಷಕ, ವಿದ್ಯಾರ್ಥಿ ವೃಂದವೆಲ್ಲ ನಿಬ್ಬೆರಗಾಗಿ ನೋಡುತ್ತಿದ್ದರು.ಶೂನ್ಯದಿಂದ ವಿಭೂತಿ ಸೃಷ್ಟಿಯಾದರೆ, ಕೈಗಳಲ್ಲಿ ನೋಟುಗಳು ಬರಲಾರಂಭಿಸಿದವು. ಇದೇ ವೇಳೆ ಕುದಿಯುತ್ತಿದ್ದ ಎಣ್ಣೆಗೆ ಕೈ ಹಾಕಿ ಪೂರಿ ತೆಗೆಯುವ, ಖಾಲಿ ಚೀಲದಿಂದ ಪ್ರಸಾದ ತೆಗೆಯುವ ಅಚ್ಚರಿಗಳು ನಡೆದವು. ಯಾವುದೋ ದೈವೀ ಶಕ್ತಿ ಅವತರಿಸಿದಂತೆ, ಅವತಾರ ಪುರಷ ಬಾಬಾ, ಆನಂದಮಯೀ, ಧರ್ಮಗುರುಗಳಂತೆ ಸ್ವತಃ ವಿದ್ಯಾರ್ಥಿಗಳೇ ಪವಾಡ ನಡೆಸಿದರು. ವಿಷಯಕ್ಕೆ ಮಾರು ಹೋಗಿ ನೀವೂ ಹೋಗುತ್ತೀರಾ...!-ಅದು ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ಡಾ.ನರೇಂದ್ರ ನಾಯಕ  ಶುಕ್ರವಾರ ಸಂಜೆ ನಡೆಸಿಕೊಟ್ಟ ಪವಾಡ ರಹಸ್ಯ ಕಾರ್ಯಕ್ರಮದ ತುಣುಕುಗಳು. ರಹಸ್ಯವನ್ನು ಬಯಲು ಮಾಡಲು ನಡೆಸಿದ ಕೈಚಳಕ. ಮೇಣದ ಅಂಶದ ಬತ್ತಿಯು ನೀರಿನಲ್ಲಿ ಉರಿಯುತ್ತದೆ. ನಿಂಬೆ ರಸ ಕುದಿಯುವ ಎಣ್ಣೆಯನ್ನು ತಾಪವನ್ನು ತಡೆಯುತ್ತದೆ ಮತ್ತು ತಣ್ಣಗೆ ಎಣ್ಣೆ ಸವರಿ ಕುದಿಯುವ ಎಣ್ಣೆಗೆ ಕೈ ಹಾಕಿದರೆ ಸುಡುವುದಿಲ್ಲ, ಕರ್ಪೂರವು ಘನ ರೂಪದಿಂದಲೇ ಆವಿಯಾಗುವ ಪರಿಣಾಮ ಕರ್ಪೂರ ನಾಲಗೆಯಲ್ಲಿ ಉರಿಸಲು ಸಾಧ್ಯ.ಹೀಗೆ  ಒಂದೊಂದು ಪವಾಡಗಳ ಹಿಂದಿನ ಸತ್ಯವನ್ನು ಹೊರಗೆಡವಿದರು. ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಬಿಡಿಸಿ ಹೇಳಿದರು. ಶೂನ್ಯದಿಂದ ಸೃಷ್ಟಿ ಅಸಾಧ್ಯ ಎಂದರು.ಲಂಚ-ಸವಾಲು: `ನನ್ನ ಕೆಲಸ ಈಡೇರಿಸು~ ಎಂದು ಯಾವುದೇ ವ್ಯಕ್ತಿ ಅಥವಾ ದೇವರಿಗೆ ಸೇವೆ ಅಥವಾ ಯಾವುದೇ ರೂಪದಲ್ಲಿ ಲಂಚ ನೀಡಿಲ್ಲ. ಹೀಗಾಗಿ ಭ್ರಷ್ಟಮುಕ್ತನಾಗಿ ಬದುಕಿದ್ದೇನೆ ಎಂದ ಅವರು, ದೇವಮಾನವ, ಬಾಬಾ, ಗುರುಗಳು ಪವಾಡ ನಡೆಸಿ ಸಾಬೀತು ಪಡಿಸಿದರೆ ತಮ್ಮ ಸಕಲ ಆಸ್ತಿಯನ್ನು ನೀಡುವುದಾಗಿ ಸವಾಲು ಹಾಕಿ ವರ್ಷಗಳು ಕಳೆದಿವೆ. ಈ ತನಕ ಒಬ್ಬ ದೇವಮಾನವನೂ ಬರಲಿಲ್ಲ ಎಂದು ತಿಳಿಸಿದರು.ಪ್ರಶ್ನಿಸಿ: ಯಾವುದೇ ವಿಚಾರಗಳನ್ನು ಪ್ರಶ್ನಿಸದೇ ಒಪ್ಪಿಕೊಳ್ಳಬೇಡಿ. ದೊಡ್ಡವರು, ಹಿರಿಯರು, ಮುಖಂಡರು, ಧರ್ಮಗುರು ಹೇಳಿದ್ದು ಎಂದು ನಂಬಬೇಡಿ. ಕನಿಷ್ಠ ತಲೆ ಉಪಯೋಗಿಸಿ. ಆಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು. ದೈವೀ ಶಕ್ತಿ ಇದ್ದರೆ ಬಾಬಾಗಳು ಸಾಯಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಭವಿಷ್ಯ ಹೇಳುವ ಬಾಬಾ, ಜ್ಯೋತಿಷಿಗಳ ಮುಂದೆ `ನಿಮ್ಮ ಕಿಸೆಯಲ್ಲಿನ ನೋಟಿನ ಸಂಖ್ಯೆಯನ್ನು ಕೇಳಿ. ಸರಿಯಾಗಿ ಉತ್ತರಿಸುತ್ತಾರಾ ನೋಡಿ~ ಎಂದು ಸಲಹೆ ನೀಡಿದರು.  ಮಹಿಳೆ: ಮಹಿಳಾ ದೌರ್ಜನ್ಯಕ್ಕೆ ಧಾರ್ಮಿಕ ವಿಚಾರಗಳೇ ಕಾರಣ. ಎಲ್ಲ ಧರ್ಮಗಳೂ ಮಹಿಳೆಗೇ ಕಟ್ಟುಪಾಡುಗಳನ್ನು ಹೇರುತ್ತವೆ ಎಂದ ಅವರು, ಪತಿವ್ರತೆಯಂತೆ ಪತ್ನಿವೃತಸ್ಥ ಯಾಕಿಲ್ಲ, ವರದಕ್ಷಿಣೆಯಂತೆ ವಧುದಕ್ಷಿಣೆ, ಸಂಕಷ್ಟಿ- ಅಸ್ಪೃಶ್ಯತೆಗಳು, ಅಗ್ನಿ-ಶೀಲ ಪರೀಕ್ಷೆಗಳು, ವಸ್ತ್ರ ಸಂಹಿತೆಗಳು ಗಂಡಿಗೆ ಏಕಿಲ್ಲ? ಎಂದು ಕೇಳಿದರು. ಮಹಿಳೆ ವಿವಾಹಿತಳೇ ಎಂದು ತಿಳಿಯಲು ತಾಳಿ ನೋಡುತ್ತಾರೆ, ಗಂಡಿನ ಮುಖ ನೋಡಿದರೆ ತಿಳಿಯುತ್ತದೆ ಎಂದು ಚಟಾಕಿ ಹಾರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.