ಶನಿವಾರ, ಏಪ್ರಿಲ್ 17, 2021
30 °C

ಮುಜುಗರದ ಮಾತಿಲ್ಲ; ಎಲ್‌ಪಿಜಿ ಹಂಗಿಲ್ಲ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಜ ಬಬಲಾದ (ಗುಲ್ಬರ್ಗ ಜಿ.): ಸೆಗಣಿ ಜತೆ ಮಾನವ ಮಲಮೂತ್ರ ಬೆರೆಸಿ ಉತ್ಪಾದಿಸುವ ಜೈವಿಕ ಅನಿಲವನ್ನು (ಬಯೊ  ಗ್ಯಾಸ್) ಅಡುಗೆಗೆ ಬಳಸುವ ಪ್ರಯತ್ನ ಆಳಂದ ತಾಲ್ಲೂಕಿನ ಈ ಗ್ರಾಮದಲ್ಲಿ ಸಫಲವಾಗಿದೆ.

`ಛೀ... ಪಾಯಿಖಾನೆಯಿಂದ ಬರೋ ಗ್ಯಾಸ್ ಅಡುಗೆಗೆ ಬಳಸೋದಾ?` ಎನ್ನುತ್ತಿದ್ದ ಜನರೇ ಈಗ ಈ ವಿಧಾನ ಅಳವಡಿಸಿಕೊಳ್ಳುತ್ತಿದ್ದಾರೆ. ಶೌಚಾಲಯ ಕಟ್ಟಿಸಿಕೊಳ್ಳಲು ಇನ್ನೂ ಹಿಂಜರಿಯುತ್ತಿರುವ ಇಂದಿನ ದಿನದಲ್ಲಿ, ಹತ್ತು ವರ್ಷಗಳ ಹಿಂದೆಯೇ ಶೌಚಾಲಯ ನಿರ್ಮಿಸಿಕೊಂಡು ಅದರ `ಸದ್ಬಳಕೆ~ ಮಾಡಿಕೊಂಡ ಪ್ರಯತ್ನವೇ ಬಲು ವಿಶಿಷ್ಟ.





ಜೈವಿಕ ಅನಿಲ ಘಟಕಕ್ಕೆ ಒಂದೆಡೆ ಸೆಗಣಿ ಇನ್ನೊಂದೆಡೆ ಶೌಚಾಲಯದಿಂದ ಮಲಮೂತ್ರ ಬಂದು ಸೇರುವಂತೆ ಮಾಡಿ, ಅಡುಗೆ ಅನಿಲ ಉತ್ಪಾದನೆಗೆ ಮುಂದಾದ ಶಿಕ್ಷಕ ನಿಂಗಪ್ಪ ಮುಂಗೊಂಡಿ

ಈ ಸಫಲತೆಯ ಹಿಂದಿರುವ ವ್ಯಕ್ತಿ- ನಿಂಗಪ್ಪ ಮಂಗೊಂಡಿ. ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ನಿಂಗಪ್ಪ, ನೈರ್ಮಲ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಯತ್ನಿಸುತ್ತಿದ್ದರು. 2002ರಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ನಿರ್ಧರಿಸಿ, ಜನರ ಮನವೊಲಿಸಿದಾಗ 25 ಕುಟುಂಬಗಳು ಮುಂದೆ ಬಂದವು. ಆಗ ಈ ಭಾಗದಲ್ಲಿ ಸ್ವಯಂಸೇವಾ ಸಂಸ್ಥೆಯೊಂದರ ಪರವಾಗಿ ಕೆಲಸ ಮಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸುಭಾಷಚಂದ್ರ ಎಂಬುವವರು `ಬರೀ ಶೌಚಾಲಯ ಕಟ್ಟಿಸಿಕೊಂಡರೆ ಸಾಲದು; ಜೈವಿಕ ಅನಿಲ ಉತ್ಪಾದನೆಗೂ ಇದನ್ನು ಬಳಸಿಕೊಳ್ಳಬಹುದು~ ಎಂಬ ಕಲ್ಪನೆ ಮುಂದಿಟ್ಟರು. ಸೆಗಣಿಯಿಂದ ಮಾತ್ರ ಜೈವಿಕ ಅನಿಲ ಉತ್ಪಾದನೆ ಮಾಡಬಹುದು ಎಂದು ತಿಳಿದವರಿಗೆ ಮಾನವನ ಮಲಮೂತ್ರದಿಂದಲೂ ಇದು ಸಾಧ್ಯ ಎಂಬುದು ಅಚ್ಚರಿ ಮೂಡಿಸಿತ್ತು.



ಸಮರ್ಪಕ ಪ್ರಮಾಣದ ತ್ಯಾಜ್ಯವಿಲ್ಲದೇ ಜೈವಿಕ ಅನಿಲ ಉತ್ಪಾದನೆಯಾಗದು. ಹೀಗಾಗಿ ಸೆಗಣಿ ಜತೆಗೆ ಮಾನವ ಮಲಮೂತ್ರ ಬೆರೆಯುವಂತೆ ಮಾಡಲು ಬೇರೊಂದು ವ್ಯವಸ್ಥೆ ರೂಪಿಸಲಾಯಿತು. ಜೈವಿಕ ಅನಿಲ ಘಟಕಕ್ಕೆ ಒಂದು ಕಡೆಯಿಂದ ನೀರು ಮಿಶ್ರಿತ ಸೆಗಣಿ ಹಾಗೂ ಇನ್ನೊಂದು ಕಡೆಯಿಂದ ಶೌಚಾಲಯ ಸಂಪರ್ಕ ಕಲ್ಪಿಸಿ, ಎರಡೂ ತ್ಯಾಜ್ಯಗಳು ಚೇಂಬರ್‌ನಲ್ಲಿ ಸಂಗ್ರಹವಾಗುವಂತೆ ಮಾಡಲಾಯಿತು. ಇದಕ್ಕೆ ಆಗ ಖರ್ಚಾಗಿದ್ದು ರೂ 18,000.



ಆರಂಭದಲ್ಲಿ ನಿಂಗಪ್ಪ ಮುಂಗೊಂಡಿ ಹಾಗೂ ಇತರ ಇಬ್ಬರು ಈ ಘಟಕ ಸ್ಥಾಪಿಸಿಕೊಂಡರು. ಉಳಿದವರಿಗೆ ಅದೇನೋ ಮುಜುಗರ. `ಪಾಯಿಖಾನೆಯಿಂದ ಹೊರಾಗ್ ಬರೋ ಗ್ಯಾಸ್‌ನಿಂದ ಅಡಿಗಿ ಮಾಡ್ತೀರಲ್ಲ?` ಎಂದು ಪ್ರಶ್ನಿಸಿದವರಿಗೆ `ಹಂಗೇನಾದ್ರ ಇದ್ರ ನಾವಾದ್ರೂ ಯಾಕ್ ಅದನ್ನ ಬಳಸ್ತೀವಿ?` ಎಂದು ಮರುಪ್ರಶ್ನೆ ಹಾಕಿದ್ದು ನಿಂಗಪ್ಪ ಅವರ ಪತ್ನಿ ನಂದಾದೇವಿ. ಮಹಿಳಾ ಸ್ವಸಹಾಯ ಸಂಘದ ನೇತೃತ್ವ ವಹಿಸಿದ್ದ ನಂದಾದೇವಿ, ಇತರ ಸದಸ್ಯೆಯರ ಮನವೊಲಿಸಿ ಇಂಥದೇ ಘಟಕ ಸ್ಥಾಪಿಸಿಕೊಳ್ಳಲು ಒತ್ತಾಯಿಸಿದರು. ಇದರ ಫಲವಾಗಿ ಗ್ರಾಮದಲ್ಲಿ 18 ಘಟಕಗಳು ಸ್ಥಾಪನೆಯಾದವು.



ಅಡುಗೆ ಅನಿಲ ಸುಲಭವಾಗಿ ಪಡೆಯುವ ಈ ವಿಧಾನ ಇತರರ ಗಮನ ಸೆಳೆದಿದ್ದು, ಈಗ ಇನ್ನೂ 28 ಶೌಚಾಲಯಗಳು ನಿರ್ಮಾಣವಾಗುತ್ತಿವೆ.



ಮಾಲಿನ್ಯವಿಲ್ಲ; ಹೊಗೆಯಿಲ್ಲ:
`ಬಯಲು ಶೌಚಾಲಯದಿಂದ ವಾತಾವರಣವೆಲ್ಲ ದುರ್ಗಂಧಮಯವಾಗುತ್ತದೆ. ಇದನ್ನು ತಡೆಯಲು ಶೌಚಾಲಯ ಅಗತ್ಯ. ಮಹಿಳೆಯರಿಗೆ ಆಗುವ ಮುಜುಗರವನ್ನೂ ತಪ್ಪಿಸಬಹುದು. ಇನ್ನೊಂದೆಡೆ ಜೈವಿಕ ಅನಿಲ ಘಟಕದಿಂದ ಬರುವ ಅನಿಲವನ್ನು ಅಡುಗೆ ತಯಾರಿಗೆ ಬಳಸಬಹುದು.



ಗೃಹಿಣಿಯರಿಗೆ ಹೊಗೆಯ ಕಾಟವಿಲ್ಲ; ಪರಿಸರ ಮಾಲಿನ್ಯವಿಲ್ಲ. ರೈತರೇ ಅಧಿಕ ಸಂಖ್ಯೆಯಲ್ಲಿರುವ ಈ ಹಳ್ಳಿಯಲ್ಲಿ ಎಲ್ಲರ ಮನೆಯಲ್ಲೂ ಜಾನುವಾರುಗಳಿವೆ. ಅವುಗಳ ಸೆಗಣಿಯನ್ನು ಮಾನವ ಮಲಮೂತ್ರದ ಜತೆ ಬೆರೆಸಿ ಅನಿಲ ಉತ್ಪಾದಿಸಿದರೆ ಉರುವಲಿಗೆ ಎಲ್‌ಪಿಜಿ, ಸೀಮೆ ಎಣ್ಣೆ ಅಥವಾ ಕಟ್ಟಿಗೆ ಬೇಕಾಗಿಲ್ಲ` ಎಂದು ನಿಂಗಪ್ಪ ಹೇಳುತ್ತಾರೆ.



ಜೈವಿಕ ಘಟಕದಿಂದ ಹೊರಬರುವ ತ್ಯಾಜ್ಯವನ್ನು ಗೊಬ್ಬರದ ತೊಟ್ಟಿಗೆ ಹಾಕಿ, ಎರೆಗೊಬ್ಬರ ಉತ್ಪಾದಿಸುವ ವಿಧಾನವನ್ನು ಹಳ್ಳಿಗರು ಅಳವಡಿಸಿಕೊಂಡಿದ್ದಾರೆ. ಒಂದೊಂದು ಘಟಕದಿಂದಲೂ ಪ್ರತಿ ವರ್ಷ ಟನ್‌ಗಟ್ಟಲೇ ಎರೆಗೊಬ್ಬರ ಉತ್ಪಾದನೆಯಾಗುತ್ತಿದೆ.



ಈ ವಿಧಾನದ ಬಗ್ಗೆ ಆರಂಭದಲ್ಲಿ ಕುಹಕವಾಡಿದ್ದ ಜನರು ಈಗ ನಿಧಾನವಾಗಿ ತಾವೂ ಅದರತ್ತ ಮನಸ್ಸು ಮಾಡುತ್ತಿದ್ದಾರೆ. `ನಾವು ಮೂರು ಮಂದಿ ಇದ್ದೀವ್ರಿ. ನಾಕು ಆಕಳ ಅದಾವೆ. ಎಲ್ಲ ಸೇರಿ ದಿನಕ್ಕ ಮೂರು ತಾಸು ಗ್ಯಾಸ್ ಸಿಗ್ತಾದ್ರಿ. ಅಡಿಗಿಗೆ ಸಾಕಾಗ್ತದ` ಎಂದು ಅನುಭವ ಹಂಚಿಕೊಂಡ ಮಲ್ಲಮ್ಮ ವೀರಶೆಟ್ಟಿ, `ಮಾಸ್ತರ್ ಮಾತು ಕೇಳಿ ಹಾಳಾಗ್ತೀರಿ ಅಂತ ನಮ್ಗ ಬೈದಿದ್ರು. ಈಗ ಮಂದಿ ತಾವೂ ಸಂಡಾಸ್ ಕಟ್ಟಿಸಿಕೊಳ್ಳಿಕ್ಕೆ ಹತ್ಯಾರ` ಎಂದು ನಗೆ ಬೀರಿದರು.



ಗ್ರಾಮ ಪಂಚಾಯಿತಿ ಸದಸ್ಯೆ ಸರಸ್ವತಿ ಶಾಂತಪ್ಪ ಕೌಂಟೇರ್ ತಮ್ಮ ಮನೆ ಪಕ್ಕದ ಜಾಗದಲ್ಲಿ ಈಗಾಗಲೇ ಶೌಚಾಲಯ ಕಟ್ಟಿಸಿಕೊಂಡಿದ್ದಾರೆ. ಇನ್ನು ಜೈವಿಕ ಅನಿಲ ಘಟಕ ಸ್ಥಾಪನೆ ಕೆಲಸ ಮಾತ್ರ ಬಾಕಿಯಿದೆ. `ಅಡುಗಿ ಮಾಡ್ಲಕ್ಕ ಕಟ್ಟಿಗಿ ಒಲಿ ಬಳಸಿ ಕಣ್ಣುರಿ ಬಂದಾವ್ರಿ. ಇನ್ ಮ್ಯಾಲ ಆ ಪ್ರಾಬ್ಲಂ ಇರಾದಿಲ್ಲ ಬಿಡ್ರಿ` ಎಂದು ಅವರು ಸಂತಸ ವ್ಯಕ್ತಪಡಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.