ಗುರುವಾರ , ನವೆಂಬರ್ 14, 2019
19 °C

ವಿವಿಧ ಮಸೂದೆಗಳ ಜಾರಿಗೆ ವಕೀಲರ ವಿರೋಧ

Published:
Updated:

ಚಿಂಚೋಳಿ: ಕೇಂದ್ರ ಸರ್ಕಾರ ಉನ್ನತ ಶಿಕ್ಷಣ ಹಾಗೂ ರಾಷ್ಟ್ರೀಯ ಕಾನೂನು ಶಾಲೆಗಳ ಮಸೂದೆ ಸೇರಿದಂತೆ ಜಾರಿಗೆ ತರಲು ಉದ್ದೇಶಿಸಿರುವ ವಿವಿಧ ಮಸೂದೆಗಳನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿ ವಕೀಲರು ಬುಧವಾರ ಕಲಾಪ ಬಹಿಷ್ಕರಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯ ಸಿದ್ಧಪಡಿಸಿರುವ ಉನ್ನತ ಶಿಕ್ಷಣ ಸಂಶೋಧನೆ ಮಸೂದೆ -2011, ಉನ್ನತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ನಿಗದಿತ ಪ್ರಾಧಿಕಾರ ಮಸೂದೆ -2010, ಹೊರ ದೇಶದ ಶಿಕ್ಷಣ ಸಂಸ್ಥೆಗಳ ಪ್ರವೇಶ ಹಾಗೂ ಕ್ರಮ ವಹಿಸುವಿಕೆಯ ಮಸೂದೆ -2010, ಶೈಕ್ಷಣಿಕ ಮಂಡಳಿಯ ಮಸೂದೆ -2010, ರಾಷ್ಟ್ರೀಯ ಕಾನೂನು ಶಾಲೆ ಮಸೂದೆ -2011 ಜಾರಿ ದೇಶಕ್ಕೆ ಅಪಾಯಕಾರಿ ಎಂದು ವಕೀಲರು ಆರೋಪಿಸಿದ್ದಾರೆ.`ಈ ಮಸೂದೆಗಳ ಜಾರಿಯಿಂದ ದೇಶದ ಉನ್ನತ ಶಿಕ್ಷಣ ಹಾಗೂ ಕಾನೂನು ಕ್ಷೇತ್ರಕ್ಕೆ ಅಪಾಯ ಎದುರಾಗುತ್ತದೆ. ಅದು ಸಾರ್ವಜನಿಕರ ಹಿತಾಸಕ್ತಿಗೆ ಮಾರಕ~ ಎಂದು ಹಿರಿಯ ವಕೀಲರಾದ ಚಂದ್ರಾರಾವ್ ದೇಶಮುಖ್, ಶಿವಶರಣಪ್ಪ ಜಾಪಟ್ಟಿ, ಮಾಣಿಕರಾವ್ ಗುಲ್ಗುಂಜಿ, ನಾಗಭೂಷಣ ಹುಲಗುಂಡಿ, ಶಿವರಾಯ ಹಾದಿಮನಿ, ವಸಂತಕುಮಾರ ರಾಠೋಡ್, ವಿಶ್ವನಾಥ ಬೆನಕಿನ್ ಆತಂಕ ವ್ಯಕ್ತಪಡಿಸಿದ್ದಾರೆ.ನ್ಯಾಯಾಲಯದಿಂದ ಬಸ್ ಡಿಪೊ ಕ್ರಾಸ್‌ವರೆಗೆ ಮೆರವಣಿಗೆ ನಡೆಸಿದ ವಕೀಲರು, ಕೇಂದ್ರದ ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.

ಪ್ರಧಾನ ಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ ಕಚೇರಿಯ ಶಿರಸ್ತೇದಾರ ರವೀಂದ್ರ ದಾಮಾ ಸ್ವೀಕರಿಸಿದರು.ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಕೋಟಪಳ್ಳಿ, ಲಕ್ಷ್ಮಣ ಆವುಂಟಿ, ಶಶಿಕಾಂತ ಆಡಕಿ, ರೇವಣಸಿದ್ದ ಕುಡಳ್ಳಿ, ರಾಜೇಂದ್ರ ಚಿಮ್ಮನಚೋಡ, ಶ್ರೀನಿವಾಸ ಬಂಡಿ, ಸುಭಾಷ ಕಳಸ್ಕರ್, ಶಂಕರ ರಾಠೋಡ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)