ರೈತರ ಅನ್ನ ಕಿತ್ತುಕೊಂಡ ಇಂಗುಕೆರೆ!

ಔರಾದ್: ರೈತರಿಗೆ ನೆರವಾಗಬೇಕಾದ ಇಂಗುಕೆರೆವೊಂದು ನೀರಿನ ರಭಸಕ್ಕೆ ಕಿತ್ತು ಹೋಗಿ ಅವರ ಬದುಕಿಗೆ ಸಂಚಾರ ತಂದ ಘಟನೆ ತಾಲ್ಲೂಕಿನ ನಂದಿಬಿಲಗಾಂವ್ ಮತ್ತು ಸುತ್ತಲಿನ ಗ್ರಾಮಗಳಲ್ಲಿ ನಡೆದಿದೆ.
ನೀರಿನ ಸಮಸ್ಯೆಗೆ ಪರಿಹಾರ ಮತ್ತು ರೈತರ ಹೊಲಗಳಿಗೆ ಸ್ವಲ್ಪ ಅನೂಕುಲವಾಗುವ ಉದ್ದೇಶದಿಂದ ಮಹಾರಾಷ್ಟ್ರದ ಗಡಿ ಅಂಚಿನಲ್ಲಿರುವ ತಾಲ್ಲೂಕಿನ ಚಿಕ್ಲಿ (ಯು) ಗ್ರಾಮದ ಬಳಿ ಇಂಗು ಕೆರೆವೊಂದು ನಿರ್ಮಾಣ ಮಾಡಲಾಗಿದೆ. ಅಧಿಕಾರಿಗಳ ಹೇಳಿಕೆ ಪ್ರಕಾರ ಈ ಕೆರೆ ಮೂರು ದಶಕದ ಹಿಂದೆ ಕಟ್ಟಲಾಗಿದೆ.
ಜಿಪಂ. ವ್ಯಾಪ್ತಿಯಲ್ಲಿ ಬರುವ ಈ ಕೆರೆ ಆಗಾಗ ದುರಸ್ತಿ ಮಾಡಲಾಗುತ್ತದೆ. ಕಳೆದ ವರ್ಷವೇ ದುರಸ್ತಿಯಾದರೂ ಇನ್ನು ಹೆಚ್ಚಿನ ಮಳೆಗಾಲ ಮುಂದೆ ಇರುವಾಗಲೇ ಕೆರೆ ಒಡೆದಿರುವ ಬಗ್ಗೆ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕೆರೆ ಒಡೆದು ಬಿತ್ತದ ಮೊಳಕೆ ಕೊಚ್ಚಿಕೊಂಡು ಹೋಗಿರುವುದು ಒಂದೆಡೆಯಾದರೆ ಕೆಲ ರೈತರ ಹೊಲಗಳು ಕಲ್ಲು ಉಸುಕಿನಡಿ ಮಾಯವಾಗಿ ಶಾಶ್ವತವಾಗಿ ಅವರ ಹೊಟ್ಟೆಗೆ ಕನ್ನಬಿದ್ದಂತಾಗಿದೆ. ಈ ಘಟನೆಯಿಂದ ಚಿಕ್ಲಿ (ಯು) ತಾಂಡಾ, ದಾಸು ನಾಯಕ ತಾಂಡಾ ಮತ್ತು ನಂದಿಬಿಜಲಗಾಂವ್ ಗ್ರಾಮದ ಜನ ನಿರಾಶ್ರಿತರಾಗಿದ್ದಾರೆ.
ಕೃಷಿ ನಮ್ಮ ಬದುಕಿನ ಮೂಲ ಆಧಾರವಾಗಿದೆ. ಜುಲೈ 3ರಂದು ರಾತ್ರಿ ಸುರಿದ ಮಳೆಯಿಂದ ಕೆರೆ ಒಡೆದು ಹೊಲಗಳಲ್ಲಿ ಕಲ್ಲು ಉಸುಕು ತುಂಬಿ ಮರಭೂಮಿಯಂತಾಗಿವೆ. ಈಗ ನಾವು ಮುಂದೇನು ಮಾಡಬೇಕು ಎಂದು ಸಂತ್ರಸ್ತ ಗ್ರಾಮಸ್ಥರು ಅಧಿಕಾರಿಗಳ ಎದುರು ಗೋಳು ತೋಡಿಕೊಂಡಿದ್ದಾರೆ.
ಹಾನಿಯಾದ ಬಗ್ಗೆ ಕೇವಲ ಸರ್ವೆ ನಡೆಸಿದರೆ ಸಾಲದು. ಆಗಿರುವ ಹಾನಿ ಪೂರ್ಣವಾಗಿ ಭರಿಸಿಕೊಡುವ ನಿಟ್ಟಿನಲ್ಲಿ ನಮ್ಮ ಜಮೀನು ಮೊದಲಿದ್ದ ಹಾಗೆ ಮಾಡಿಕೊಡಬೇಕು. ಪುನಃ ಈ ರೀತಿ ಘಟನೆ ಆಗದಂತೆ ಕೆರೆ ದುರಸ್ತಿ ಇಲ್ಲವೇ ಮರು ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.
ನಂದಿಬಿಜಲಗಾಂವ್ ಗ್ರಾಮದ ಪಂಢರಿನಾಥ ಪಾಟೀಲ, ಉಮಾಕಾಂತ ದ್ಯಾಡೆ, ಹಾವಪ್ಪ ಸಂಗ್ರಾಮಪ್ಪ, ಪ್ರಕಾಶ ನಾಗುರಾವ, ಭರತ ಉತ್ತಮರಾವ, ಬಾಲಾಜಿ ದೇವರಾವ, ಮನೋಹರ ಪಾಂಡುರಂಗ ಸೇರಿದಂತೆ ನೂರಾರು ಜನ ಸಹಿ ಮಾಡಿದ ಮನವಿಪತ್ರ ತಹಸೀಲ್ದಾರ್ಗೆ ಸಲ್ಲಿಸಿದ್ದಾರೆ. ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಅಲವತ್ತುಕೊಂಡಿದ್ದಾರೆ.
ಶಾಸಕ ಪ್ರಭು ಚವ್ಹಾಣ್, ಸಹಾಯಕ ಆಯುಕ್ತ ಪ್ರಕಾಶ, ತಹಸೀಲ್ದಾರ್ ಶಿವಕುಮಾರ ಶೀಲವಂತ ಈಚೆಗೆ ಒಡೆದು ಹೊಃೀದ ಇಂಗು ಕೆರೆಗೆ ಹೋಗಿ ಪರಿಶೀಲಿಸಿದ್ದಾರೆ. ರೈತರಿಗೆ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ. ರೈತರು ಈಗ ಇವರ ಭರವಸೆ ಮೇಲೆ ದಿನ ನೂಕುತ್ತಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.