ಮೌಢ್ಯತೆಯಿಂದ ವೈಜ್ಞಾನಿಕ ಯುಗಕ್ಕೆ ಹೊಂದಿಕೊಳ್ಳಿ

ಮಂಗಳವಾರ, ಜೂಲೈ 16, 2019
28 °C

ಮೌಢ್ಯತೆಯಿಂದ ವೈಜ್ಞಾನಿಕ ಯುಗಕ್ಕೆ ಹೊಂದಿಕೊಳ್ಳಿ

Published:
Updated:

ಗುಲ್ಬರ್ಗ: ಜನರು ಸಂಪ್ರದಾಯಗಳ ಹೆಸರಿನಲ್ಲಿ ಮೌಢ್ಯತೆಗೆ ಒಳಗಾಗದೇ ವೈಜ್ಞಾನಿಕ ಯುಗಕ್ಕೆ ಹೊಂದಿಕೊಂಡು ಜೀವನ ಸಾಗಿಸಬೇಕೆಂದು ಚಿಂತಕ ಬಿ.ವಿ. ಚಕ್ರವರ್ತಿ ಹೇಳಿದರು.ಸಾಮಾಜಿಕ ಪರಿವರ್ತನಾ ಜನಾಂದೋಲನ, ಜಿಲ್ಲಾ ದಲಿತ ಯುವ ಸಮನ್ವಯ ಸಮಿತಿ, ಸ್ವಾಭಿಮಾನಿ ಜಾಗೃತಿ ವೇದಿಕೆ ಮತ್ತು ಸಾಮಾಜಿಕ ನ್ಯಾಯ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ನಾಗರ ಪಂಚಮಿ ಹಬ್ಬ ನಿಮಿತ್ತ ಮಕ್ಕಳಿಗೆ ಹಾಲು ವಿತರಿಸಿ ಅವರು ಮಾತನಾಡಿದರು.ಜನರ ದೈನಂದಿನ ಚಟುವಟಿಕೆಗಳು ವೈಜ್ಞಾನಿಕವಾಗಿದ್ದರೂ, ಮಾನಸಿಕವಾಗಿ ಅವರು ಇನ್ನೂ ಅಂಧಶ್ರದ್ಧೆಯಲ್ಲೇ ಇದ್ದಾರೆ. ಅದರಿಂದ ಜನರು ಹೊರಬಂದು ಆಧುನಿಕ ಯುಗಕ್ಕೆ ಹೊಂದಿಕೊಳ್ಳಬೇಕು ಎಂದರು.ಸಂತೋಷ ಮೇಲ್ಮನಿ ಮಾತನಾಡಿ, ಹಿಂದಿನ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಕಳೆದ ಎರಡು ತಿಂಗಳಲ್ಲಿ ಗುಲ್ಬರ್ಗ ಜಿಲ್ಲೆಯಲ್ಲಿ ಒಟ್ಟು 3,220 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅನೇಕ ಮಕ್ಕಳು ಹಸಿವು, ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.ಸರ್ಕಾರವು ಮಕ್ಕಳ ಆರೋಗ್ಯ ದೃಷ್ಟಿಯಿಂದ ಅಂಗನವಾಡಿ, ಬಾಲಮಂದಿರ, ಶಿಶುಪಾಲನ ಕೇಂದ್ರ, ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲೆಗಳಲ್ಲಿ ಸ್ಥಳೀಯವಾಗಿ ಸಿಗುವ ಪೌಷ್ಟಿಕಾಂಶ ಪದಾರ್ಥಗಳ ಜತೆಗೆ ಹಾಲು, ಹಣ್ಣು, ಮೊಟ್ಟೆ ವಿತರಣೆ ಮಾಡುವುದರ ಮುಖಾಂತರ ಮಕ್ಕಳ ಭವಿಷ್ಯದ ಉಳಿವಿಗಾಗಿ ಕಾರ್ಯಪ್ರವರ್ತರಾಗಬೇಕೆಂದು ಅವರು ಹೇಳಿದರು.ಸಾಮಾಜಿಕ ಪರಿವರ್ತನಾ ಜನಾಂದೋಲನ ವಲಯ ಸಂಘಟಕ ವಿಠ್ಠಲ ಚಿಕಣಿ, ಹಣಮಂತ ಇಟಗಿ, ಶಿವಕುಮಾರ ದೊಡ್ಡಮನಿ, ದತ್ತಾತ್ರೇಯ ಕುಡಕಿ, ಸುನೀಲ ರಾಜಾಪೂರ, ಮಲ್ಲಿಕಾರ್ಜುನ ಖನ್ನಾ, ಸತೀಶ ಹಾಗೂ ಬಾಲಮಂದಿರದ ಸಿಬ್ಬಂದಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry