ಶನಿವಾರ, ಏಪ್ರಿಲ್ 17, 2021
23 °C

ನ್ಯಾನೋ ಕಥೆಗೆ ಇನ್ನೋವಾ ಅರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಂದಿನ ಧಾವಂತದ ಜೀವನದಲ್ಲಿ ಯಾರಿಗೂ ಪುರುಸೊತ್ತಿಲ್ಲ. ಹೀಗಾಗಿ ರಾಜಕೀಯ, ಕ್ರಿಕೆಟ್ ಸೇರಿದಂತೆ ಎಲ್ಲವೂ ಟ್ವೆಂಟಿ, ಟ್ವೆಂಟಿ ಎನ್ನುವ ರೀತಿಯಲ್ಲಿ ನಡೆದಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಭಾನುವಾರ ನಗರದ ಕನ್ನಡ ಭವನದಲ್ಲಿ `ನನ್ನೊಳಗಿನ ನೀನೋ.. ಅದುವೇ ನ್ಯಾನೋ..~ ಪುಟ್ಟ ಕಥೆಗಳ ಓದುವ ಸಂಭ್ರಮ ಎನ್ನುವ ವಿನೂತನ, ವಿಶಿಷ್ಟ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ದಿನಾ ಸಾಯೋರಿಗೆ ಅಳೋರು ಯಾರು? ಎನ್ನುವ ಮಾತಿನ ಅರ್ಥ ಹೊರ ಹೊಮ್ಮಿಸುವ `ಪ್ರೀತಿ ಎಂಬ ಪರಿಮಳ~ ಶೀರ್ಷಿಕೆ ಅಡಿಯಲ್ಲಿ ಶಂಕ್ರಯ್ಯ ಘಂಟಿ ಅವರು ಮೊದಲು ಓದಿದ ಕಥೆ ಅಮ್ಮಾವ್ರ ಗಂಡಂದಿರನ್ನು ನೆನಪಿಸುವಂತಿತ್ತು. ಸಂತೋಷಕುಮಾರ ತೊಟ್ನಳ್ಳಿ ಅವರ `ಉಳಿವಿಗಾಗಿ ಹೋರಾಟ~ ಹಿರಿಯರ ಮತ್ತು ಯುವಕರ ಮಧ್ಯದ ಮನಸ್ಥಿತಿಯ ವ್ಯತ್ಯಾಸವನ್ನು ವಿವರಿಸುವಂತಿತ್ತು. ಲಿಂಗ, ನೋಟ ಎನ್ನುವ ತಲೆಬರಹದ ಅಡಿಯಲ್ಲಿ ಲಿಂಗರಾಜ ಶಾಸ್ತ್ರಿ ಓದಿದ ಕಥೆ ನಮ್ಮ ಇಂದಿನ ವ್ಯಥೆಯನ್ನು ತಿಳಿಸಿಕೊಡುವಂತಿತ್ತು.`ಈ ಲೋಕವೇ ವಿಚಿತ್ರ. ಉಳ್ಳವರ ಚಲ್ಲಾಟ, ಹಸಿದವರ ಗೋಳಾಟ ಎಂದು ಜೋರು ದನಿಯಲ್ಲಿ ತಮ್ಮ ಕಥೆಗಳನ್ನು ವಾಚಿಸಿದ ಮುರಗಾನೂರ ಹುಸೇನಭಾಷಾ `ಹಸಿವು~ ಕಥೆ ಹದಗೆಟ್ಟ ವಾಸ್ತವ ಸ್ಥಿತಿಯ ಚಿತ್ರಣ ನೀಡುವಂತಿತ್ತು.

ಡಿ.ಎಂ. ನದಾಫ್, ಜ್ಯೋತಿ ಕುಲಕರ್ಣಿ, ಪ್ರಭಾಕರ ಜೋಶಿ, ಪ್ರಭುಲಿಂಗ ನೀಲೂರೆ, ಬಿ.ಎಂ. ರಾವ್, ಕಿರಣ ಪಾಟೀಲ, ಮಂಡಲಗಿರಿ ಪ್ರಸನ್ನ ಅವರು ತಮ್ಮ ಕಥೆಗಳಿಗೆ  `ನ್ಯಾನೋ~ ಉಡುಪು ತೊಡಿಸಿ ಓದಿದ್ದು ಗಮನ ಸೆಳೆಯುವಂತಿದ್ದವು.ಬದುಕಿನಲ್ಲಿ ಎಲ್ಲರೂ ಕಂಡು, ಅನುಭವಿಸಿದ, ಮನಸ್ಸಿನ ತಾಕಲಾಟಗಳ ಸರಕು ಹೊತ್ತು ತಂದಿದ್ದ ಕಥೆಗಾರರು ತಮ್ಮ ಖುಷಿ, ನೋವು, ನಲಿವು, ನಿರಾಸೆ, ವಿಷಾದ, ಆಕ್ರೋಶ, ಪ್ರೀತಿ, ವಾತ್ಸಲ್ಯ, ಕರುಣೆ ಮುಂತಾದ ಭಾವನೆಗಳಿಗೆ `ನ್ಯಾನೋ~ ಮಾದರಿಯ ಕಥೆಯ ಹೊದಿಕೆ ತೊಡಿಸಿದ್ದರು. ಇನ್ನು ಕೆಲವರು `ಇನ್ನೋವಾ~ ರೀತಿಯಲ್ಲಿ ಉದ್ದನೆಯ ಕಥೆಗಳನ್ನು ಓದಿ ಸಂತೃಪ್ತರಾದರು. ಇಲ್ಲಿ ವಾಚಿಸಿದ ಕಥೆಗಳು ಗಾತ್ರದಲ್ಲಿ ನ್ಯಾನೋ ರೀತಿಯಲ್ಲಿದ್ದರೂ ಅರ್ಥದಲ್ಲಿ `ಇನ್ನೋವಾ~ ಹೋಲುವಂತಿದ್ದವು.ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸುಭಾಷ ರಾಠೋಡ್ ಅವರ ನ್ಯಾನೋ ಗಾತ್ರದ ಉದ್ಘಾಟನಾ ಭಾಷಣ ಹಿಡಿಸಿತು. ಮುಖ್ಯ ಅತಿಥಿಯಾಗಿದ್ದ ಕಥೆಗಾರ ಸಿದ್ಧರಾಮ ಹೊನ್ಕಲ್, ಕಥಾ ಹಂದರ ಕುರಿತು ಮಾತನಾಡಿದರು.

 

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ವೇಗದ ಯುಗದಲ್ಲಿ ಈ ಪ್ರಯೋಗ ವಿಶಿಷ್ಟ ಮತ್ತು ವಿಭಿನ್ನ ಎಂದು ಹೇಳಿದರು. ವಿಜಯಕುಮಾರ ಚಿಮಕೋಡ ಅತಿಥಿಯಾಗಿದ್ದರು. ಬಿ.ಎಚ್. ನಿರಗುಡಿ ನಿರೂಪಿಸಿದರು. ಸುರೇಶ ಬಡಿಗೇರ ಸ್ವಾಗತಿಸಿದರು. ವಿಜಯಕುಮಾರ ತೇಗಲತಿಪ್ಪಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.