ಶನಿವಾರ, ಸೆಪ್ಟೆಂಬರ್ 26, 2020
27 °C

ಎತ್ತಿಪೋತೆ ಜಲಪಾತ: ಮರುಕಳಿಸಿದ ವೈಭವ

ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಎತ್ತಿಪೋತೆ ಜಲಪಾತ: ಮರುಕಳಿಸಿದ ವೈಭವ

ಚಿಂಚೋಳಿ: ಹೈದರಾಬಾದ್ ಕರ್ನಾಟಕ ಭಾಗದ ಪ್ರಸಿದ್ಧ ಪ್ರವಾಸಿ ತಾಣ ತಾಲ್ಲೂಕಿನ ಕೊಂಚಾವರಂ ಬಳಿಯ ಗೋಪು ನಾಯಕ ತಾಂಡಾ ಸಂಗಾಪುರ ಮಾರ್ಗ ಮಧ್ಯೆ ಬರುವ ಎತ್ತಿಪೋತೆ ಜಲಪಾತ ಮೈದುಂಬಿ ಹರಿಯುತ್ತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ತಾಲ್ಲೂಕಿನಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ನಿತ್ಯ ವರ್ಷಧಾರೆ ಸುರಿಯುತ್ತಿದೆ. ಇದರಿಂದ ಸಣ್ಣ ಪುಟ್ಟ ನದಿ, ನಾಲಾ, ತೊರೆಗಳು ಹರಿಯಲಾರಂಬಿಸಿವೆ. ಹೀಗಾಗಿ ಎತ್ತಿಪೋತೆ ಜಲಪಾತದಲ್ಲಿ ನೀರಿನ ವೈಭವ ಮರುಕಳಿಸಿದೆ.ಮಿನಿ ಮಲೆನಾಡು ಎಂಬ ಹೆಗ್ಗಳಿಕೆ ಪಡೆದ ಕೊಂಚಾವರಂ ಕಾಡಿನ ಸೆರಗಿನಲ್ಲಿ ನೈಸರ್ಗಿಕವಾಗಿ ಮೈದಳೆದ ಎತ್ತಿಪೋತೆ ಜಲಪಾತದಲ್ಲಿ ಪ್ರವಾಸಿಗರ ಕಣ್ಮನ ಸೆಳೆಯುವ ಎರಡು ಸ್ಥಳಗಳಿವೆ. ಎರಡು ದೃಶ್ಯಗಳು ಒಂದಕ್ಕಿಂತ ಮತ್ತೊಂದು ಸುಂದರವಾಗಿ ಕಾಣುತ್ತಿದ್ದು, ಹರಿಯುವ ನೀರು ದೃಶ್ಯಕಾವ್ಯವನ್ನು ಸೃಷ್ಟಿಸುತ್ತಿದೆ.ಒಂದರಲ್ಲಿ ಬೃಹತ್ ಕಪ್ಪು ಕಲ್ಲು ಬಂಡೆಗಳ ಮೇಲಿನಿಂದ ಹಾಗೂ ಸಂದಿನಿಂದ ಹರಿದು ಬರುವ ನೀರು ವಿಶಿಷ್ಟ ಅನುಭವ ನೀಡುತ್ತದೆ.ಮತ್ತೊಂದರಲ್ಲಿ ಅಂದಾಜು 25 ಅಡಿ ಎತ್ತರದಿಂದ ಬೃಹತ್ ಕಲ್ಲು ಬಂಡೆಗಳ ಮಧ್ಯೆ ಕಾಣುವ ಬಿರುಕಿನಿಂದ ಧುಮ್ಮಿಕ್ಕಿ ಹರಿಯುವ ನೀರು ಪೃಕೃತಿಯ ಸೊಬಗಿಗೆ ಸಾಕ್ಷಿಯಾಗಿದೆ.ಸುತ್ತಲೂ ಹಚ್ಚ ಹಸಿರು ಪರಿಸರ, ನಾಲೆಯಲ್ಲಿ ಹರಿಯುವ ಸುವರ್ಣ ವರ್ಣದ ನೀರು, ಕಪ್ಪುಕಲ್ಲುಗಳ ಬಂಡೆಗಳನ್ನು ಸಂಧಿಸಿ ಎತ್ತರದಿಂದ ಒಂದೇ ಸಮನೆ ಧೋ ಎಂದು ಬೀಳುವ ನೀರು ಅರೆಕ್ಷಣ ನಮ್ಮನ್ನು ಮೈಮರೆಸುತ್ತದೆ.ಆಂಧ್ರದಲ್ಲಿ ಜನಿಸುವ ಎತ್ತಿಪೋತೆ ನಾಲೆಗೆ ಅಡ್ಡಲಾಗಿ ಕೆರೆ, ಕುಂಟೆಗಳು, ಚೆಕ್ ಡ್ಯಾಂಗಳನ್ನು ಅಲ್ಲಿನ ಸರ್ಕಾರ ನಿರ್ಮಿಸಿದೆ. ಹೀಗಾಗಿ ಇವುಗಳು ಭರ್ತಿಯಾಗುವ ವರೆಗೂ ಎತ್ತಿಪೋತೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಕಾಣುವುದಿಲ್ಲ. ಈಗ ಅವುಗಳು ಭರ್ತಿಯಾಗಿದ್ದಲ್ಲದೇ ಉತ್ತಮ ಮಳೆ ಸುರಿಯುತ್ತಿರುವುದರಿಂದ  ಎತ್ತಿಪೋತೆ ಮೈದುಂಬಿ ಹರಿಯುತ್ತಿದೆ. ಎತ್ತಿಪೋತೆ ನಾಲೆಯ ನೀರು ಗೊಟ್ಟಂಗೊಟ್ಟ ಮೂಲಕ ಚಂದ್ರಂಪಳ್ಳಿ ಜಲಾಶಯ ಸೇರುತ್ತದೆ. ಮೂಲಸೌಕರ್ಯಗಳ ಕೊರತೆ: ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಬಂದು ಕಣ್ತುಂಬಿಕೊಂಡು ಹೋಗುತ್ತಾರೆ. ಆದರೆ ಇಲ್ಲಿ ಪ್ರವಾಸಿಗರಿಗೆ ಯಾವುದೇ ರೀತಿಯ ಸೌಲಭ್ಯಗಳಿಲ್ಲ ಎಂದು ನಿವೃತ್ತ ಶಿಕ್ಷಕ ಜಗನ್ನಾಥ ರಾಠೋಡ್ ಮತ್ತು ಖೂಬಾ ನಾಯಕ್ ದೂರಿದ್ದಾರೆ.ಜಲಪಾತದಲ್ಲಿ ಹರಿಯುವ ನೀರನ್ನು ವೀಕ್ಷಿಸಲು ನಾಲೆಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಿಸುವ ಅಗತ್ಯವಿದೆ. ಸುರಿಯುವ ಮಳೆಯಿಂದ ರಕ್ಷಿಸಿಕೊಳ್ಳಲು ಒಂದು ತೆರೆದ ಶೆಡ್ ನಿರ್ಮಿಸಬೇಕು ಹಾಗೂ ಎತ್ತಿಪೋತೆ ನಾಲೆ ಎಂಬ ನಾಮ ಫಲಕವನ್ನು ಬರೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.