ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೋಪಿಂಗ್ ಅಪರಾಧಿಗಳಿಗೆ ಕಡುಶಿಕ್ಷೆ ಕೊಡಿ: ವಲೇರಿ ಆ್ಯಡಮ್ಸ್

Published 25 ಏಪ್ರಿಲ್ 2024, 16:28 IST
Last Updated 25 ಏಪ್ರಿಲ್ 2024, 16:28 IST
ಅಕ್ಷರ ಗಾತ್ರ

ಬೆಂಗಳೂರು: ನ್ಯೂಜಿಲೆಂಡ್‌ನ ಶಾಟ್‌ಪಟ್ ಅಥ್ಲೀಟ್ ವಲೆರೀ ಆ್ಯಡಮ್ಸ್ ಅವರಿಗೆ ಕಠಿಣ ಸವಾಲುಗಳನ್ನು ಎದುರಿಸುವುದು ರಕ್ತಗತವೇ ಆಗಿಬಿಟ್ಟಿದೆ. 

15 ವರ್ಷದ ಬಾಲಕಿಯಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡ ವಲೆರೀ ಎದುರಿಸಿದ ಸಂಕಷ್ಟಗಳು ಒಂದೆರಡಲ್ಲ. ತಮ್ಮ ಅಜಾನುಬಾಹು ಶರೀರದ ಕುರಿತು ಕೇಳಿದ ವ್ಯಂಗ್ಯಗಳಿಗೂ ಲೆಕ್ಕವಿಲ್ಲ. ಅದರೆ ಅದೇ ದೇಹಬಲದಿಂದ ವಿಶ್ವದ ಅಗ್ರಮಾನ್ಯ ಶಾಟ್‌ಪಟ್ ಅಥ್ಲೀಟ್‌ ಆಗಿ ಬೆಳೆದರು.  ಬೀಜಿಂಗ್ (2008), ಲಂಡನ್ (2012) ಒಲಿಂಪಿಕ್ಸ್‌ಗಳಲ್ಲಿ ಚಿನ್ನ, ರಿಯೊ (2016) ಮತ್ತು ಟೋಕಿಯೊ (2020) ಒಲಿಂಪಿಕ್ಸ್‌ಗಳಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.  ವಿಶ್ವ ಹೊರಾಂಗಣ ಅಥ್ಲೆಟಿಕ್ಸ್‌ನಲ್ಲಿ  ನಾಲ್ಕು ಮತ್ತು ಒಳಾಂಗಣ ಅಥ್ಲೆಟಿಕ್ಸ್‌ನಲ್ಲಿ ನಾಲ್ಕು ಚಿನ್ನ ಗೆದ್ದರು.  6.4 ಅಡಿ ಎತ್ತರದ ವಲೇರಿ ಅವರ ತಮ್ಮ ಸ್ಟೀವನ್ ಆಡಮ್ಸ್‌ (ಎನ್‌ಬಿಎ ಆಟಗಾರ) ಹಾಗೂ ಸಹೋದರಿ ಲೀಸಾ ಆ್ಯಡಮ್ಸ್‌ ಪ್ಯಾರಾ ಶಾಟ್‌ಪಟ್ ಅಥ್ಲೀಟ್ ಆಗಿದ್ದಾರೆ. 

ನಿವೃತ್ತರಾದ ನಂತರವೂ ತಮ್ಮ ದೇಶದ ಕ್ರೀಡಾ ಆಡಳಿತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ 39 ವರ್ಷದ ವಲೆರೀ ಈಗ ಬೆಂಗಳೂರಿಗೆ ಬಂದಿದ್ದಾರೆ. ಇದೇ 28ರಂದು ನಡೆಯಲಿರುವ ಟಿಸಿಎಸ್ ವಿಶ್ವ ಟೆನ್ ಕೆ ಓಟದ ಪ್ರಚಾರ ರಾಯಭಾರಿಯಾಗಿದ್ದಾರೆ. 

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ಯಾರಿಸ್ ಅಥ್ಲೆಟಿಕ್ಸ್‌ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್‌ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದವರಿಗೆ ನಗದು ಪುರಸ್ಕಾರ ನೀಡುವ ನಿರ್ಧಾರವು ಸ್ವಾಗತಾರ್ಹ. ಕ್ರಿಕೆಟ್ ಅಥವಾ ರಗ್ಬಿಯಲ್ಲಿ ಆಟಗಾರರು ಬಹಳಷ್ಟು ಹಣ ಗಳಿಸುತ್ತಾರೆ. ಆದರೆ ಬೇರೆ ಕ್ರೀಡೆಗಳಲ್ಲಿ ಅಷ್ಟು ಹಣವಿಲ್ಲ. ವಿಶ್ವ ಅಥ್ಲೆಟಿಕ್ಸ್ (ಡಬ್ಲ್ಯುಎ) ಈ ನಡೆಯು ಉತ್ತಮವಾಗಿವೆ. ಬೇರೆಲ್ಲ ಫೆಡರೇಷನ್‌ಗಳೂ ಇದನ್ನು ಅನುಕರಿಸುವ ವಿಶ್ವಾಸವಿದೆ’ ಎಂದರು. 

ಉದ್ದೀಪನ ಮದ್ದು ಸೇವನೆ ಪಿಡುಗು ಕುರಿತು ಪ್ರತಿಕ್ರಿಯಿಸಿದ ಅವರು, ‘ಡೋಪಿಂಗ್ ಹಾವಳಿಯ ಬಿಸಿಯನ್ನು ನಾನು ಅನುಭವಿಸಿದ್ದೇನೆ. 2012ರ ಒಲಿಂಪಿಕ್ ಕೂಟದಲ್ಲಿ ನಾನು ಎರಡನೇ ಸ್ಥಾನ ಗಳಿಸಿದ್ದೆ. ಮೊದಲ ಸ್ಥಾನ ಜಯಿಸಿದ್ದ ಬೆಲಾರೂಸ್‌ ಅಥ್ಲೀಟ್  (ನಾದೇದಾ ಅಸ್ಟೆಪ್‌ಚುಕ್ ) ಉದ್ದೀಪನ ಮದ್ದು ಸೇವನೆ ಮಾಡಿದ್ದು ಸಾಬೀತಾಯಿತು. ಅವರನ್ನು ನಿಷೇಧಿಸಿ ಚಿನ್ನದ ಪದಕ ಮರಳಿ ಪಡೆಯಲಾಯಿತು. ನಂತರ ನನಗೆ ಚಿನ್ನ ಲಭಿಸಿತು. ಪ್ರಸ್ತುತ ಡೋಪಿಂಗ್ ನಿಯಂತ್ರಣಕ್ಕೆ ವಾಡಾ (ವಿಶ್ವ ಉದ್ದೀಪನ ಮದ್ದು ನಿಯಂತ್ರಣ ಸಂಸ್ಥೆ) ಸರಿಯಾದ ದಿಶೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ತಪ್ಪಿತಸ್ಥರಿಗೆ ಯಾವುದೇ ರೀತಿಯ ಕರುಣೆ ತೋರಿಸಲೇಬಾರದು. ಕಠಿಣ ಶಿಕ್ಷೆ ನೀಡಬೇಕು. ಕ್ರೀಡೆಯಿಂದಲೇ ಹೊರಹಾಕಬೇಕು’ ಎಂದರು. 

ಟೋಕಿಯೊ ಒಲಿಂಪಿಕ್ ಕಂಚಿನ ಪದಕ ಜಯದ ಕುರಿತು ಪ್ರತಿಕ್ರಿಯಿಸಿದ ಅವರು, ‘ಒಲಿಂಪಿಕ್ಸ್‌ನಲ್ಲಿ ಈ ಮೊದಲು ಜಯಿಸಿದ ಎರಡು ಚಿನ್ನ, ಒಂದು ಬೆಳ್ಳಿಗಿಂತಲೂ ಟೋಕಿಯೊದ ಕಂಚಿನ ಪದಕವು ನನ್ನ ಪಾಲಿಗೆ ಹೆಚ್ಚು ಮೌಲ್ಯವುಳ್ಳದ್ದು. ಏಕೆಂದರೆ ಆ ಹೊತ್ತಿಗೆ ನಾನು ಎರಡು ಮಕ್ಕಳ ತಾಯಿಯಾಗಿದ್ದೆ. ಅದರಲ್ಲೂ ಒಂದು ಸಲ ಹೆರಿಗೆಯ ಹೊತ್ತಿನಲ್ಲಿ ಜೀವನ್ಮರಣದ ಹೋರಾಟ ಮಾಡಿ ಬದುಕಿದ್ದೆ ಮಕ್ಕಳನ್ನು ಹೆತ್ತ ನಂತರ ಕ್ರೀಡಾಪಟುವಾಗಿ ಮುಂದುವರಿಯುವುದು ಬಹಳ ಕಷ್ಟ. ಎರಡು ದೊಡ್ಡ ಶಸ್ತ್ರಚಿಕಿತ್ಸೆಯ ನಂತರದ 10 ತಿಂಗಳು ಅಭ್ಯಾಸ ನಡೆಸಿದ್ದೆ. ಟೋಕಿಯೊದ ಪ್ರೇಕ್ಷಕರ ಗ್ಯಾಲರಿಯಲ್ಲಿ ನನ್ನ ಆ ಇಬ್ಬರೂ ಮಕ್ಕಳಿದ್ದರು. ಅವರ ಮುಂದೆ ಪದಕ ಜಯಿಸಿದ್ದು ಅವಿಸ್ಮರಣೀಯ’ ಎಂದರು. ತಮ್ಮ ಕೈ ಮೇಲೆ ಮಕ್ಕಳ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ಕುರಿತು ಮಾತನಾಡಿದ ಅವರು,‘ಹೋದ ಒಲಿಂಪಿಕ್ಸ್‌ನಲ್ಲಿ ಅವರು ಚಾಂಪಿಯನ್ ಆಗಿದ್ದಾರೆ. ಆದ್ದರಿಂದ ಈ ಬಾರಿ ಅವರ ಮೇಲೆ ಅಪಾರ ನಿರೀಕ್ಷೆ ಇರುತ್ತದೆ. ಅದರಿಂದ ಅವರು ಒತ್ತಡಕ್ಕೊಳಗಾಗಬಾರದು. ದೇಶಕ್ಕಾಗಿ ಆಡುವ ಹೆಮ್ಮೆಯೊಂದಿಗೆ ಕಣಕ್ಕಿಳಿಯಬೇಕು. ಉತ್ತಮ ಸಿದ್ಧತೆಗಳನ್ನು ಮಾಡಿಕೊಂಡು ಸ್ಪರ್ಧಿಸಬೇಕು. ಅವರಲ್ಲಿ ಅಪಾರ ಪ್ರತಿಭೆ ಮತ್ತು ಸಾಮರ್ಥ್ಯವಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT