488 ರೈತರ ನೋಂದಣಿ, 10,600 ಕ್ವಿಂಟಲ್‌ ಖರೀದಿ

7
ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಭತ್ತ ಖರೀದಿ: ಮಾರ್ಚ್‌ 31ರ ವರೆಗೆ ಅವಕಾಶ

488 ರೈತರ ನೋಂದಣಿ, 10,600 ಕ್ವಿಂಟಲ್‌ ಖರೀದಿ

Published:
Updated:

ಚಾಮರಾಜನಗರ: ಕನಿಷ್ಠ ಬೆಂಬಲ ಯೋಜನೆ ಅಡಿಯಲ್ಲಿ ಜಿಲ್ಲಾಡಳಿತ ಇದುವರೆಗೆ ಸಣ್ಣ ರೈತರಿಂದ ನೇರವಾಗಿ 10,600 ಕ್ವಿಂಟಲ್‌ ಭತ್ತ ಖರೀದಿಸಿದೆ. 

ಸಂತೇಮರಹಳ್ಳಿ, ಯಳಂದೂರು ಮತ್ತು ಕೊಳ್ಳೇಗಾಲದಲ್ಲಿ ಆರಂಭಿಸಿರುವ ಖರೀದಿ ಕೇಂದ್ರಗಳಲ್ಲಿ ಒಟ್ಟು 488 ರೈತರು ನೋಂದಣಿ ಮಾಡಿಕೊಂಡಿದ್ದು, ಈ ವರೆಗೆ 268 ರೈತರು ಭತ್ತವನ್ನು ಸರ್ಕಾರಕ್ಕೆ ಮಾರಾಟ ಮಾಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಭತ್ತ ಖರೀದಿಸುವ ಪ್ರಕ್ರಿಯೆ ಡಿಸೆಂಬರ್‌ 5ರಂದು ಆರಂಭವಾಗಿತ್ತು. ಮೊದಲಿಗೆ ಡಿಸೆಂಬರ್‌ 15ರ ವರೆಗೆ ನೋಂದಣಿ ಹಾಗೂ 16ರಿಂದ 31ರ ವರೆಗೆ ಖರೀದಿ ನಡೆಸಲಾಗುವುದು ಎಂದು ಜಿಲ್ಲಾಡಳಿತ ಹೇಳಿತ್ತು.

ಆದರೆ, ಆರಂಭಿಕ ಹಂತದಲ್ಲಿ ರೈತರು ಯಾರೂ ನೋಂದಣಿ ಮಾಡಿಕೊಳ್ಳಲು ಆಸಕ್ತಿ ತೋರಲಿಲ್ಲ. ಹಾಗಾಗಿ ನೋಂದಣಿ ಅವಧಿಯನ್ನು ಫೆ.28ರ ವರೆಗೆ ಹಾಗೂ ಖರೀದಿ ಪ್ರಕ್ರಿಯೆ ಅವಧಿಯನ್ನು ಮಾರ್ಚ್‌ 31ರ ವರೆಗೂ ವಿಸ್ತರಿಸಲಾಗಿತ್ತು.

‌ಯೋಜನೆಯ ಅಡಿಯಲ್ಲಿ ಪ್ರತಿ ಕ್ವಿಂಟಲ್‌ ಭತ್ತಕ್ಕೆ (ಸಾಮಾನ್ಯ ದರ್ಜೆ) ₹ 1,750 ಹಾಗೂ ಅತ್ಯುತ್ತಮ ದರ್ಜೆಗೆ ₹ 1,770 ನಿಗದಿಪಡಿಸಲಾಗಿದೆ. ಒಬ್ಬ ಬೆಳೆಗಾರರಿಂದ ಗರಿಷ್ಠ 40 ಕ್ವಿಂಟಲ್‌ವರೆಗೆ ಭತ್ತ ಖರೀದಿಸಲು ಅವಕಾಶ ಇದೆ.

ಮೂರು ಅಕ್ಕಿ ಗಿರಣಿಗಳು: ಈ ಬಾರಿ ಸರ್ಕಾರ ನೇರವಾಗಿ ಖರೀದಿಸದೆ, ಅಕ್ಕಿ ಗಿರಣಿಗಳ ಮೂಲಕ ಖರೀದಿಸಲು ಮುಂದಾಗಿತ್ತು. ಜಿಲ್ಲಾಡಳಿತವು ಭತ್ತ ಖರೀದಿಗಾಗಿ ಜಿಲ್ಲೆಯ ಎಂಟು ಅಕ್ಕಿ ಗಿರಣಿಗಳನ್ನು ಪಟ್ಟಿ ಮಾಡಿತ್ತು.  ರೈತರಿಂದ ಖರೀದಿಸುವ ಭತ್ತದ ಪ್ರಮಾಣಕ್ಕೆ ತಕ್ಕಂತೆ ಸರ್ಕಾರಕ್ಕೆ ಹಣದ ಖಾತರಿ ನೀಡಬೇಕಾಗಿದ್ದರಿಂದ ಆರು ಅಕ್ಕಿ ಗಿರಣಿಗಳು ಮುಂದೆ ಬಂದಿರಲಿಲ್ಲ. ಕೊನೆಗೆ ಮಂಡ್ಯದ ಶ್ರೀಲಕ್ಷ್ಮಿ ಇಂ‌ಡಸ್ಟ್ರೀಸ್‌  ಎಂಬ ಅಕ್ಕಿ ಗಿರಣಿ ಮುಂದೆ ಬಂದಿತ್ತು. ಜಿಲ್ಲಾಡಳಿತ ಕೊಳ್ಳೇಗಾಲ ಮತ್ತು ಚಾಮರಾಜನಗರಗಳ ತಲಾ ಒಂದೊಂದು ಗಿರಣಿ ಅಲ್ಲದೆ, ಮಂಡ್ಯದ ಅಕ್ಕಿ ಗಿರಣಿಯ ಮೂಲಕ ಭತ್ತವನ್ನು ಖರೀದಿಸಿ ಸಂಗ್ರಹಿಸುತ್ತಿದೆ. ಸದ್ಯ ಅದು 146 ರೈತರಿಂದ 5,800 ಕ್ಚಿಂಟಲ್‌ ಅಕ್ಕಿ ಸಂಗ್ರಹಿಸಿದೆ.

‘ಇತ್ತೀಚಿನ ಕೆಲವು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ರೈತರ ಸ್ಪಂದನೆ ಉತ್ತಮವಾಗಿದೆ. ನೋಂದಣಿ ಮಾಡಿಕೊಂಡವರ ಪೈಕಿ ಈಗ 268 ರೈತರ ಭತ್ತವನ್ನು ಅಕ್ಕಿ ಗಿರಣಿಗಳು ಸಂಗ್ರಹಿಸಿಟ್ಟಿವೆ. ಮಾರ್ಚ್‌ 31ರ ವರೆಗೂ ಸಮಯ ಇದೆ. ಉಳಿದವರು ಕೂಡ ಮಾರಾಟ ಮಾಡುವ ನಿರೀಕ್ಷೆ ಇದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಆರ್‌.ರಾಚ‍ಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಂಡ್ಯದ ಲಕ್ಷ್ಮಿದೇವಿ ಇಂಡಸ್ಟ್ರೀಸ್‌ನವರು ಭತ್ತ ಸಂಗ್ರಹಿಡಲು ಒಪ್ಪಿದ್ದರಿಂದ ನಮಗೆ ಅನುಕೂಲವಾಯಿತು. ಎಲ್ಲ ಮೂರೂ ಗಿರಣಿಗಳು ಮಾರ್ಚ್‌ 31ರ ವರೆಗೂ ಕಾಯುತ್ತವೆ. ನಂತರ ಹಲ್ಲಿಂಗ್‌ ಮಾಡುತ್ತಾರೆ. ಆಮೇಲೆ ಭತ್ತವನ್ನು ನಾವು ಸಂಗ್ರಹಿಸಿಡುತ್ತೇವೆ. ಸಾಮಾನ್ಯವಾಗಿ ಈ ಅಕ್ಕಿಯನ್ನು ಪಡಿತರ ಉದ್ದೇಶಕ್ಕೆ ಬಳಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ರಾಗಿ ಖರೀದಿ: ಆಸಕ್ತಿ ತೋರದ ರೈತರು

ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಖರೀದಿ ಪ್ರಕ್ರಿಯೆಯೂ ಚಾಲನೆಯಲ್ಲಿದ್ದು, ರೈತರು ಹೆಚ್ಚಿನ ಆಸಕ್ತಿ ತೋರಿಲ್ಲ.

ಈ ಬಾರಿ ಒಂದು ಕ್ವಿಂಟಲ್‌ ರಾಗಿಗೆ ₹ 2,897 ದರ ನಿಗದಿಪಡಿಸಲಾಗಿದೆ. ಗರಿಷ್ಠ ಮಿತಿ 75 ಕ್ವಿಂಟಲ್‌ ಮೀರದಂತೆ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ರಾಗಿ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಐದು ಕೇಂದ್ರಗಳನ್ನು ತೆರೆಯಲಾಗಿದೆ.

ಆದರೆ, ಇದುವರೆಗೆ ಮೂವರು ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಅವಧಿಯನ್ನು ಫೆ.28ರ ವರೆಗೆ ವಿಸ್ತರಿಸಲಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !