ಭಾನುವಾರ, ಏಪ್ರಿಲ್ 18, 2021
23 °C

ಸತ್ಯಂಪೇಟೆ ಮರೋಣೋತ್ತರ ವರದಿ ವಿಳಂಬ: ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹಿರಿಯ ಸಾಹಿತಿ, ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ ಅಸಹಜವಾಗಿ ಸಾವಿಗೀಡಾಗಿ 20 ದಿನ ಕಳೆದರೂ ಇನ್ನೂ  ಶವಪರೀಕ್ಷೆ ವರದಿ ಬರದೇ ಇರುವುದಕ್ಕೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರವಿ ಮದನಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈ ರೀತಿ ವಿಳಂಬವಾಗುದನ್ನು ಗಮನಿಸಿರೆ, ಇದರಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಅಡಗಿದೆ ಎಂಬ ಸಂಶಯ ಕಂಡುಬರುತ್ತಿದೆ. ಸತ್ಯಂಪೇಟೆಯವರು ಕೊಲೆಯಾಗುವ ಮುಂಚೆ ಒಂದು ತಿಂಗಳ ಹಿಂದೆ ಯಾರೋ ಅಪರಿಚಿತ ವ್ಯಕ್ತಿ ಅವರ ಮೊಬೈಲ್‌ಗೆ  ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದರು ಎಂದು ಕುಟುಂಬ ಮೂಲಗಳು ತನಿಖಾಧಿಕಾರಿಗಳಿಗೆ ಈ ಮೊಬೈಲ್ ಸಂಖ್ಯೆಯನ್ನು ಒಪ್ಪಿಸಿದ್ದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಆರೋಪಿಸಿದ್ದಾರೆ.ಗುಲ್ಬರ್ಗದ ಜನನಿಬಿಡ ಪ್ರದೇಶವಾದ ಶರಣ ಬಸವೇಶ್ವರ ದೇವಸ್ಥಾನದ ಎದುರಿನಲ್ಲಿ ಸತ್ಯಂಪೇಟೆ ಅವರ ಸಂಶಯಾಸ್ಪದ ಸಾವು ಸಂಭವಿಸಿತು. ಪೊಲೀಸರು ಹೃದಯಾಘಾತದಿಂದ ಸಾವನಪ್ಪಿದಾರೆ ಎಂದು ಕಟ್ಟುಕಥೆ ಕಟ್ಟಿದ್ದಾರೆ. ಒಂದುವೇಳೆ ಅವರಿಗೆ ಹೃದಯಾಘಾತವಾಗಿದ್ದರೆ ಶವ ರಸ್ತೆ ಮೇಲೆಯೆ ಬೀಳುತ್ತಿತ್ತು. ಆದರೆ ಕೊಲೆ ಪಾತಕಿಗಳು ಮೈಮೇಲಿನ ಶರ್ಟ್, ಪಂಚೆ ಬಿಚ್ಚಿ ಶವವನ್ನು ಪಕ್ಕದ ಚರಂಡಿಯಲ್ಲಿ  ಬಿಸಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.ಮರುದಿನದಿಂದ ಹಲವಾರು ಸಂಘಟನೆಗಳು ಗುಲ್ಬರ್ಗ-ಯಾದಗಿರಿ ಜಿಲ್ಲೆ ಸೇರಿ ಹೈದರಾಬಾದ್ ಕರ್ನಾಟಕ ಪ್ರದೇಶದ ಬಹುತೇಕ ಕಡೆಗಳಲ್ಲಿ ಪ್ರತಿಭಟನೆ ನಡೆಸಿದವು. ವಿಧಾನಸಭೆ-ವಿಧಾನಪರಿಷತ್ ಅಧಿವೇಶನದಲ್ಲಿ ಈ ಕುರಿತು ಚರ್ಚೆಯಾಯಿತು. ಇಷ್ಟೆಲ್ಲ ಆದರೂ ಪೋಲಿಸರು ನಿಷ್ಪಕ್ಷಪಾತ ತನಿಖೆ ಮಾಡದೆ ಶರಣಬಸವೇಶ್ವರ ದೇವಸ್ಥಾನದ ಇಬ್ಬರು  ಕಾವಲುಗಾರರನ್ನು ಬಂಧಿಸಿದರು.ಆದರೆ ಈ ಇಬ್ಬರಿಂದ ನಿಜ ಸಂಗತಿ ತಿಳಿಯುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ. ಇದೀಗ ಸತ್ಯಂಪೇಟೆ ಅವರ ಕೊಲೆ ಪ್ರಕರಣ ಸರ್ಕಾರ ಸಿಐಡಿಗೆ ವಹಿಸಿದೆ. ಪ್ರಕರಣ ವಿಳಂಬವಾದಂತೆ ಸತ್ಯ ಹೊರ ಬೀಳುವುದು ಸಂಶಯಾಸ್ಪದವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಂಶಯಾಸ್ಪದ ಸಾವಿನ ಕುರಿತು ಸಿಬಿಐ ವಿಚಾರಣೆ ನಡೆಸುವ ಮೂಲಕ ನಾಡಿನ ಜನತೆಗೆ ಶೀಘ್ರ ನ್ಯಾಯ ಒದಗಿಸಬೇಕು. ವಿಳಂಬನೀತಿ ಅನುಸರಿಸಿದರೆ ರಾಜ್ಯದಾದ್ಯಂತದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸುವುದಾಗಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.    

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.