ಗುಲ್ಬರ್ಗ: ಸಚಿವ ಸಂಪುಟದ ಕೊಡುಗೆ

7

ಗುಲ್ಬರ್ಗ: ಸಚಿವ ಸಂಪುಟದ ಕೊಡುಗೆ

Published:
Updated:
ಗುಲ್ಬರ್ಗ: ಸಚಿವ ಸಂಪುಟದ ಕೊಡುಗೆ

ಗುಲ್ಬರ್ಗ: ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಗುಲ್ಬರ್ಗದಲ್ಲಿ ನಾಲ್ಕನೇ ಬಾರಿಗೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುವ ಹಲವು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಅದರಲ್ಲೂ ಗುಲ್ಬರ್ಗ ನಗರದ ವಿವಿಧ ಯೋಜನೆಗಳಿಗೆ ಒಟ್ಟು ರೂ. 259 ಕೋಟಿಗೂ ಹೆಚ್ಚಿನ ಅನುದಾನ ಒದಗಿಸಿರುವುದು ಗಮನಾರ್ಹ.ಮುಖ್ಯಮಂತ್ರಿ ರೂ. 100 ಕೋಟಿ ಪ್ಯಾಕೇಜ್ ಕಾಮಗಾರಿಯಲ್ಲಿ ರೂ. 40 ಕೋಟಿ ಭೂಸ್ವಾಧೀನಕ್ಕೆ ಬಳಕೆಯಾದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿ ಮುಂದುವರಿಸಲು ಗುಲ್ಬರ್ಗ ಮಹಾನಗರ ಪಾಲಿಕೆಗೆ ವಿಶೇಷ ಅನುದಾನ ರೂ. 40 ಕೋಟಿ, ಕೋಟನೂರ-ಡಿ ಪ್ರದೇಶದಲ್ಲಿ ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರವು ರೂ. 147 ಕೋಟಿ ವೆಚ್ಚದ ವಸತಿ ಬಡಾವಣೆಯನ್ನು ಅಭಿವೃದ್ಧಿ ಪಡಿಸಲು ಗುಲ್ಬರ್ಗದಲ್ಲಿ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಚಿತ್ರ ಕಲಾವಿದರಿಗೆ ಅನುಕೂಲ ಮಾಡಿಕೊಡಲು ಗುಲ್ಬರ್ಗದ ಎಂಎಂಕೆ ಕಾಲೇಜ್ ಆಫ್ ವಿಜ್ಯುಯಲ್ ಆರ್ಟ್ಸ್ ಸಿಬ್ಬಂದಿಯನ್ನು ವೇತನಾನುದಾನಕ್ಕೆ ಒಳಪಡಿಸಲಾಗಿದ್ದು, ಇದಕ್ಕಾಗಿ ಸರ್ಕಾರವು ಪ್ರತಿ ವರ್ಷ ರೂ. 45 ಲಕ್ಷ ಭರಿಸಲಿದೆ. ಗುಲ್ಬರ್ಗದ ಆಳಂದ ರಸ್ತೆಯಲ್ಲಿರುವ ಕುಷ್ಠರೋಗ ಪುನರ್‌ವಸತಿ ಮತ್ತು ಅಭಿವೃದ್ಧಿ ಕೇಂದ್ರವನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಾಗಿ ಪರಿವರ್ತಿಸಲು ಒಪ್ಪಿಗೆ ನೀಡಲಾಗಿದ್ದು, ಇದಕ್ಕಾಗಿ ಕಟ್ಟಡ ದುರಸ್ತಿ ಹಾಗೂ ನವೀಕರಣಕ್ಕೆ ರೂ 2.82 ಕೋಟಿ ನೀಡಲಾಗಿದೆ.ಗುಲ್ಬರ್ಗದ 500 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಗೆ 300 ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಲು ವಾರ್ಷಿಕ ರೂ. 7.5 ಕೋಟಿ ತೆಗೆದಿಡಲಾಗಿದೆ. ನಗರದ ಅಫಜಲಪುರ ರಸ್ತೆಯ ಎಲ್‌ಸಿ 83-ಬಿ ಸ್ಥಳದಲ್ಲಿ ಹಾಗೂ ಮದರ್ ತೆರೆಸಾ ಶಾಲೆಯ ಹತ್ತಿರ ಒಟ್ಟು ಎರಡು ರಸ್ತೆ ಮೇಲು ಸೇತುವೆಗಳನ್ನು ನಿರ್ಮಿಸಲು ಶೇ 50ರಷ್ಟು ಅನುದಾನ ರೂ. 15.33 ಕೋಟಿ ಒದಗಿಸಲಾಗುತ್ತಿದೆ. ಇನ್ನುಳಿದ ಶೇ 50ರಷ್ಟು ಹಣವನ್ನು ಕೇಂದ್ರದ ರೈಲ್ವೆ ಇಲಾಖೆ ನೀಡಬೇಕಾಗುವುದು.2012-13ನೇ ಸಾಲಿನಲ್ಲಿ ಗುಲ್ಬರ್ಗದಲ್ಲಿ ಬಹುಕುಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಶೇ 50ರಷ್ಟು ಅನುದಾನ ರೂ. 39 ಕೋಟಿಗೆ ಅನುಮೋದನೆ ನೀಡಲಾಗಿದೆ. ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮ (ಎನ್‌ಕೆಯುಎಸ್‌ಐಪಿ) ಅಡಿಯಲ್ಲಿ ನಿರಂತರ ನೀರು ಸರಬರಾಜು ಮತ್ತು ಗೃಹ ಸಂಪರ್ಕ ಕಾಮಗಾರಿ ಕೈಗೊಳ್ಳಲು ಅನುದಾನ ಒದಗಿಸಲಾಗಿದೆ.

 

ಗುಲ್ಬರ್ಗ ನಗರದ `ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ~ಗೆ ಮುಖ್ಯ ಎಂಜಿನಿಯರ್ ಹುದ್ದೆ ಸೃಷ್ಟಿಗೆ ವಾರ್ಷಿಕ ರೂ. 20 ಲಕ್ಷ ತೆಗೆದಿಡಲಾಗಿದೆ. ನಗರದ ವಿವಿಧ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಒಟ್ಟು ರೂ. 3 ಕೋಟಿ. ನಗರ ಆಶ್ರಯ ಯೋಜನೆಯಡಿ ಬಾಕಿ ಇರುವ (2002-03ರಿಂದ 2003-04) ಮನೆಗಳನ್ನು ಪೂರ್ಣಗೊಳಿಸಲು ಮತ್ತು ಹೊಸ ವಾಜಪೇಯಿ ನಗರ ವಸತಿ ಯೋಜನೆ ಕೈಗೊಳ್ಳಲು ರೂ. 3.94 ಕೋಟಿ ಹಣ ಒದಗಿಸಲು ಸಂಪುಟ ಸಭೆ ತೀರ್ಮಾನಿಸಿದೆ.ಜಿಲ್ಲೆಯ ಅಭಿವೃದ್ಧಿಗೆ ಹಣ

ಹುಬ್ಬಳ್ಳಿ-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 218ರ (376.40 ಕಿ.ಮೀ)ರಲ್ಲಿ ಬೆಣ್ಣೆತೊರಾ ನದಿಗೆ ಅಡ್ಡಲಾಗಿ ಕಟ್ಟಿರುವ ಕುರಿಕೋಟಾ ಗ್ರಾಮ ಸಮೀಪದ ಹಾನಿಯಾಗಿರುವ ಸೇತುವೆಯನ್ನು ದುರಸ್ತಿಗೆ ರೂ. 6.38 ಕೋಟಿ ಒದಗಿಸಲಾಗುತ್ತಿದೆ. ಅಫಜಲಪುರದಿಂದ ಘತ್ತರಗಾ ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿಗೆ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ನೀಡುವ ರೂ. 3 ಕೋಟಿ ವಂತಿಗೆ ಸೇರಿ ಒಟ್ಟು ರೂ. 22.11 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಆಡಳಿತಾತ್ಮಕ ಒಪ್ಪಿಗೆ.

 

ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕಾಗಿಣಾ ನದಿಗೆ ಜಟ್ಟೂರು ಬಳಿ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ರೂ. 8.55 ಕೋಟಿ ವೆಚ್ಚಕ್ಕೆ ಅನುಮೋದನೆ. ಚಿತ್ತಾಪುರ ತಾಲ್ಲೂಕಿನ ಹೆಬ್ಬಾಳ ಹಳ್ಳಿಯ ಹತ್ತಿರ ಬೆಣ್ಣೆತೋರಾ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಒಟ್ಟು ರೂ. 5.8 ಕೋಟಿ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ.

ಜೇವರ್ಗಿ ತಾಲ್ಲೂಕಿನ ಹಿಪ್ಪರಗಾ ಕೋನ- ಸರಡಗಿ (ಬಿ) ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ರೂ. 40 ಕೋಟಿ. ಕೃಷ್ಣಾ ಮೇಲ್ದಂಡೆ ಯೋಜನೆ ನಾರಾಯಣಪುರ ಎಡದಂಡೆ ಕಾಲುವೆ ಹಾಗೂ ಅದರಡಿಯ ಕಾಲುವೆ ಜಾಲದ ವಿಸ್ತರಣೆ ಹಾಗೂ ನವೀಕರಣಕ್ಕೆ ಹಣ ಮೀಸಲಾಗಿಡಲಾಗಿದೆ.

`ಕಲಬುರ್ಗಿ~ ನಾಮಕರಣ ಮಾಡಿ

ಗುಲ್ಬರ್ಗ: ಐತಿಹಾಸಿಕವಾಗಿ ಮತ್ತು ಜನಪದರು ಹೆಚ್ಚು ಬಳಸುವ `ಕಲಬುರ್ಗಿ~ ಹೆಸರನ್ನೇ ಬಳಕೆ ಮಾಡಬೇಕು ಮತ್ತು ಗುಲ್ಬರ್ಗಕ್ಕಿಂತ ಕಲಬುರ್ಗಿ ಹೆಸರೇ ಸೂಕ್ತ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಖ್ಯಮಂತ್ರಿಗೆ ಮನವಿ ಮಾಡಿದೆ.ರಾಷ್ಟ್ರಕೂಟರ ಆಳ್ವಿಕೆಯಲ್ಲೂ, ಈ ಪ್ರದೇಶವನ್ನಾಳಿದ ಅನೇಕರ ಆಳ್ವಿಕೆಯಲ್ಲಿ `ಕಲಬುರ್ಗಿ~ ಎಂದು ಹೆಸರಿತ್ತು. ಹಾಗೆಯೇ ಇಂದಿಗೂ ಜನಪದರು ಅದನ್ನೇ ಬಳಸುತ್ತಿದ್ದಾರೆ. ಆದ್ದರಿಂದ ಗುಲ್ಬರ್ಗ       ಎಂಬುದನ್ನು ಕಲಬುರ್ಗಿ ಎಂದು ಮರುನಾಮಕರಣ ಮಾಡಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಗೌರವ ಕಾರ್ಯದರ್ಶಿಗಳಾದ ಬಿ.ಎಸ್. ನಿರಗುಡಿ, ಸುರೇಶ್ ಬಡಿಗೇರ್, ಸಾಹಿತಿ ವಸಂತ ಕುಷ್ಟಗಿ, ಡಾ. ಕಾಶೀನಾಥ ಅಂಬಲಗೆ, ಪಿ.ಎಂ. ಮಣ್ಣೂರ, ಅಪ್ಪಾರಾವ ಅಕ್ಕೊಣಿ, ಲಕ್ಷ್ಮಣರಾವ ಗೋಗಿ, ಗವೀಶ ಹಿರೇಮಠ, ಶಂಕರಯ್ಯ ಘಂಟಿ, ಜಿ.ಎಸ್.ಮಾಲಿಪಾಟೀಲ್, ಸಿ.ಎಸ್. ಮಾಲಿಪಾಟೀಲ್, ಶರಣಬಸಪ್ಪ ವಡ್ಡಣಕೇರಿ ಮತ್ತಿತರರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry