ಸೋಮವಾರ, ಮೇ 23, 2022
30 °C

ಬದುಕಿನ ಬಣ್ಣ ಕಳೆಯದಿರಲಿ ರಂಗಿನಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದುಕಿನ ಬಣ್ಣ ಕಳೆಯದಿರಲಿ ರಂಗಿನಾಟ

ಗುಲ್ಬರ್ಗ: ಕಂಡವರಿಗೆಲ್ಲ ಬಣ್ಣ ಬಳಿ, ಇದು ಹೋಳಿ ಎಂಬ ಉತ್ಸಾಹ, ಸಂಭ್ರಮದ ಹಬ್ಬ ಇದು. ಬದುಕು ಬಣ್ಣಗಳಿಂದ ಕೂಡಿರಲಿ ಎಂಬುದು ಹಬ್ಬದ ಆಶಯ. ಆದರೆ ದೇಹವೂ, ದೇಹದ ಚರ್ಮವೂ ಬಣ್ಣಮಯವಾಗುತ್ತದೆ. ಆದರೆ ಹೋಳಿಯ ಪರಿಣಾಮಗಳು ತ್ವಚೆಯ ಮೇಲೆ ನೇರವಾಗಿ ಆಗುವ ಸಂಭವಗಳೂ ಹೆಚ್ಚು. ಸುರಕ್ಷಿತ ಹೋಳಿ ಹೇಗೆ ಎಂಬುದನ್ನು ಎಂ.ಆರ್.ಎಂ.ಸಿಯಲ್ಲಿ ಚರ್ಮ ತಜ್ಞರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ಡಾ.ಕೆ.ಎಂ.ಬಿರಾದಾರ ‘ಪ್ರಜಾವಾಣಿ’ ಓದುಗರಿಗೆ ಸಲಹೆಗಳನ್ನು ನೀಡಿದ್ದಾರೆ.ಸಾಮಾನ್ಯವಾಗಿ ಚರ್ಮದಲ್ಲಿ ಉರಿಯೂತದಿಂದ ಬಳಲುವವರು ಚಿಕಿತ್ಸೆಗೆ ಬರುತ್ತಾರೆ.  ಚರ್ಮದ ಉರಿ, ತುರಿಕೆಗಾಗಿಯೂ, ಗಾಯಗಳಿಗಾಗಿಯೂ ಚಿಕಿತ್ಸೆಗೆ ಬರುತ್ತಾರೆ. ಹಬ್ಬದ ಹುರುಪಿನಲ್ಲಿ ಬಣ್ಣ ಬಳಿದುಕೊಳ್ಳುವ ಜನರಿಗೆ ಅದನ್ನು ಒಂದೇ ಸ್ನಾನದಲ್ಲಿ ಹೋಗಿಸುವ ಹಟ. ಹಬ್ಬದ ಬಣ್ಣವನ್ನು ಒಂದೆರಡು ದಿನಗಳ ವರೆಗೆ ಅನುಭವಿಸುವ ಸಂಯಮವೂ ಇರಬೇಕು.ಗಾಢ ವರ್ಣಗಳನ್ನು ನೀರಿನಲ್ಲಿ ಕಲಿಸಿ ಬಳಸುವುದರಿಂದ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.  ಒಣ ಬಣ್ಣದ ಪುಡಿಗೆ ಎಣ್ಣೆ ಬೆರೆಸಿ ಹಚ್ಚುವುದು, ಅಥವಾ ವಾರ್ನಿಷ್ ಬಳಸುವುದು ಖಂಡಿತವಾಗಿಯೂ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇವುಗಳನ್ನು ಬಳಸದಿರುವುದೇ ಸೂಕ್ತ. ಎರಡನೆಯ ಕಾರಣ ಬಣ್ಣವನ್ನು ತೊಳೆಯಲು ಕೆಲವೆಡೆ ಸೀಮೆಎಣ್ಣೆಯನ್ನು ಬಳಸುತ್ತಾರೆ. ಬಣ್ಣ ಹಾಗೂ ಸೀಮೆಎಣ್ಣೆಯ ಸಂಯುಕ್ತದಿಂದಾಗಿ ಉರಿ ಕಂಡು ಬರುತ್ತದೆ. ಕೆಲವರು ಸೀಮೆ ಎಣ್ಣೆಯ ಬದಲು ಪೆಟ್ರೋಲ್ ಅಥವಾ ವರ್ಣ ತಿಳಿಗೊಳಿಸುವ ‘ಥಿನ್ನರ್’ ಸಹ ಬಳಸುತ್ತಾರೆ. ಇವೆಲ್ಲವೂ ತ್ವಚೆಗೆ ಹಾನಿಯುಂಟು ಮಾಡುತ್ತವೆ.ಮಧ್ಯಾಹ್ನದ ನಂತರ ಬಣ್ಣವಾಡುವುದು ಬೇಡ. ಬಣ್ಣದೊಂದಿಗೆ ಬಿಸಿಲಿನಲ್ಲಿ ಅಡ್ಡಾಡುವುದೂ ಬೇಡ ಎನ್ನುವುದು ಅವರ ಇನ್ನೊಂದು ಮಹತ್ವದ ಸಲಹೆ. ಬೆಳಗಿನ ಬಿಸಿಲು ಬಿರುಸಾಗುವ ಮುನ್ನ ಬಣ್ಣ ಆಡಿಬಿಡಿ. ಇಲ್ಲದಿದ್ದರೆ ಸೂರ್ಯನ ಕಿರಣಗಳು ತ್ವಚೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳೂ ಇಲ್ಲದಿಲ್ಲ.ರಸಾಯನಿಕ ಬಣ್ಣಗಳನ್ನು ಹೆಚ್ಚು ಹೊತ್ತು ದೇಹದ ಮೇಲೆ ಬಿಟ್ಟಂತೆ, ಚರ್ಮದ ಸಹನಾಶಕ್ತಿ ಕಡಿಮೆಯಾಗುತ್ತಲೇ ಹೋಗುತ್ತದೆ. ಹಾಗಾಗಿ ಹಬ್ಬದ ಅವಧಿಯನ್ನು ಬೆಳಗಿನ ಹೊತ್ತಿಗೆ ಸೀಮಿತವಾಗಿರಿಸಿ. ಮಧ್ಯಾಹ್ನ ವಿಶ್ರಮಿಸಿ ಎಂಬುದು ಅವರ ಸಲಹೆ.ಹಬ್ಬವನ್ನು ಆನಂದಿಸಿದಷ್ಟೇ ಸಹಜವಾಗಿ ಬಣ್ಣಗಳನ್ನೂ ಆನಂದಿಸಿ. ಆದರೆ  ಬಣ್ಣವನ್ನು ಹಬ್ಬಕ್ಕೇ ತೊಳೆಯಬೇಕು ಎಂಬ ಹಟ ಬಿಡಿ. ಆಗ ಚರ್ಮವೂ ಸುರಕ್ಷಿತ, ಹಬ್ಬದ ಸ್ಮರಣೆಯೂ ಉಳಿಯುತ್ತದೆ ಎನ್ನುತ್ತಾರೆ ಅವರು.ಇದು ಸುರಕ್ಷಿತ ಹೋಳಿ ಹಬ್ಬಕ್ಕೆ ಸಲಹೆಗಳು. ಕೇವಲ ತ್ವಚೆ ಹಾಗೂ ಆರೋಗ್ಯದ ಸಂರಕ್ಷಣೆಗೆ ಈ ಕ್ರಮ ಕೈಗೊಳ್ಳಬಹುದು.  ಸಮಾಜದ ಸ್ವಾಸ್ಥ್ಯ ಹಾಗೂ ಶಾಂತಿಗಾಗಿಯೂ ಕೆಲ ಸಲಹೆಗಳನ್ನು ಗುಲ್ಬರ್ಗ ಜಿಲ್ಲಾ ಎಸ್.ಪಿ. ಆಗಿರುವ ಬಿ.ಎ.ಪದ್ಮನಯನ ಸಲಹೆ ನೀಡಿದ್ದಾರೆ.ಅಪರಿಚಿತರ ಮೇಲೆ ಬಣ್ಣ ಎರಚಬೇಡಿ. ಅನ್ಯ ಧರ್ಮೀಯರನ್ನು ಗೌರವಿಸಿ. ಬಲವಂತದ ಬಣ್ಣದ ಸ್ನಾನ ಬೇಡ. ಹಬ್ಬದ ನೆಪದಲ್ಲಿ ಅಸಭ್ಯ ವರ್ತನೆ ತೋರಿದರೆ ಶಿಕ್ಷೆ ಕಾದಿಟ್ಟ ಬುತ್ತಿಯಾಗಿದೆ.ಎಲ್ಲ ಪ್ರದೇಶಗಳನ್ನೂ ಸೂಕ್ಷ್ಮ ಪ್ರದೇಶಗಳೆಂದೇ ಪರಿಗಣಿಸಿ, ಹೆಚ್ಚಿನ ಭದ್ರತೆಗೆ ಕ್ರಮಕೈಗೊಳ್ಳಲಾಗಿದೆ. ಮಾರ್ಚ್ 19 ಮತ್ತು 20ರಂದು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ.ಅಕ್ರಮವಾಗಿ ಮಾರಾಟ ಅಥವಾ ಸೇವನೆ ಕಂಡು ಬಂದಲ್ಲಿ ಉಗ್ರ ಕ್ರಮ ಕೈಗೊಳ್ಳುವುದಾಗಿ ದ್ವಿಚಕ್ರ ವಾಹನಗಳ ಮೇಲೆ ಇಬ್ಬರಿಗಿಂತ ಹೆಚ್ಚು ಜನರು ಸಂಚರಿಸುವಂತಿಲ್ಲ. ಅಸಭ್ಯ, ಅಶ್ಲೀಲವಾಗಿ ಕೂಗುವಂತಿಲ್ಲ. ಸ್ವಾತಂತ್ರ್ಯದ ಮೇರೆ ಮೀರಿ ಸ್ವೇಚ್ಛೆಗಿಳಿದರೆ, ಹಬ್ಬದ ಉತ್ಸಾಹ ಗುಂಪು ಕಟ್ಟಿಕೊಂಡು ಇನ್ನೊಬ್ಬರ ಮೇಲೆ ಹಲ್ಲೆ ಮಾಡುವುದಾಗಲೀ ರಸ್ತೆಗಳಲ್ಲಿ ಕೂಗಾಡುವುದಾಗಲೀ ಶಿಸ್ತು ಭಂಗವೆಂದು ಪರಿಗಣಿಸಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ.ಹೋಳಿ ವೈಮನಸುಗಳನ್ನು ನಿವಾರಿಸುವ ಹಬ್ಬ. ಹೊಸ ಸಮಸ್ಯೆಗಳನ್ನು ಸೃಷ್ಟಿಸುವುದಕ್ಕಲ್ಲ ಎಂಬುದು ನೆನಪಿರಲಿ ಎನ್ನುತ್ತಾರೆ ಅವರು.ಶಾಂತಿ ಮತ್ತು ಸುರಕ್ಷಿತ ಹೋಳಿಯ ಬಣ್ಣಗಳು ಎಲ್ಲೆಡೆಯೂ ಸಂಭ್ರಮವನ್ನೇ ಹಂಚಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.