ಭಾನುವಾರ, ಏಪ್ರಿಲ್ 18, 2021
32 °C

ಕರ್ತವ್ಯದೆಡೆ ಹೆಜ್ಜೆ ಹಾಕಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹಸಿರಿನಿಂದ ಕಂಗೊಳಿಸುವ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯ (ಪಿಟಿಸಿ)ದಲ್ಲಿ ನಿರ್ಗಮನ ಪಥ ಸಂಚಲನ ಸಿದ್ಧತೆ ಕಂಡ ವರುಣನೂ ಸೋತಿದ್ದ! ಸ್ವಚ್ಛಗೊಳಿಸಿದ ಅಂಗಣದಲ್ಲಿ ಬರೆದ ರಂಗೋಲಿ, ನಕಾಶೆ, ಹೂವು, ಗೆರೆಗಳ ಚಿತ್ತಾರ ಅಳಿದು ಹೋಗದಂತೆ ಮಧ್ಯಾಹ್ನ ತನಕ ತಡೆದು ನಿಂತಿದ್ದ.ಶಿಸ್ತು, ಸಂಯಮ, ನಿಖರತೆಯ ಕಾರ್ಯಕ್ರಮವು ಸುಂದರವಾಗಿ ನಡೆಯಲು ಸಹಕರಿಸಿದ್ದ. ರಾಜ್ಯಾದ್ಯಾಂತ ಮಳೆ ಭರಿಸುತ್ತಿರುವ ಚಂಡಮಾರುತ `ನೀಲಂ~ ಕೂಡಾ ಇಲ್ಲಿ ಬೆಳಿಗ್ಗೆ ತಡವರಿಸಿತ್ತೋ ಏನೋ...!

ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಶನಿವಾರ 7ನೇ ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್  ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನವು ಅಚ್ಚುಕಟ್ಟಾಗಿ ನಡೆಯಿತು. 2011ರ ನವೆಂಬರ್‌ನಲ್ಲಿ ನಡೆದ ಪಿಎಸ್‌ಐ ನಿರ್ಗಮನ ಪಥ ಸಂಚಲನದಂತೆ ಈ ಬಾರಿಯೂ ಸುಂದರವಾಗಿ ಆಯೋಜಿಸಲಾಗಿತ್ತು.ಸರ್ಕಾರ- ಇಲಾಖೆಯ ಸುದೀರ್ಘ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ಇಲ್ಲಿ 9 ನವಮಾಸ ತರಬೇತಿ ಪಡೆದ 588 ಕಾನ್‌ಸ್ಟೆಬಲ್‌ಗಳು ಸೇವೆಗೆ ತೆರಳಲು ಸಿದ್ಧರಾದರು. ತಮ್ಮ ಮಕ್ಕಳು, ಸಂಬಂಧಿಕರು, ಸೋದರರು ಸೇವೆಗೆ ಹೊರಡುತ್ತಿರುವ ದೃಶ್ಯ ಕಣ್ತುಂಬಿಕೊಳ್ಳಲು ಕುಟುಂಬದವರು ಗುರುವಾರವೇ ನಗರಕ್ಕೆ ಬಂದು ಶುಕ್ರವಾರ ಅಂಗಣದ ಆಸುಪಾಸು ನೆರೆದಿದ್ದರು. ಅಧಿಕಾರಿಗಳು, ಕುಟುಂಬದವರು, ನೆರೆದವರ ನಡುವೆಯೇ ಪ್ರಶಿಕ್ಷಣಾರ್ಥಿಗಳು `ಪೊಲೀಸ್~ ಎಂಬ ಹೆಮ್ಮೆಯಿಂದ ಕರ್ತವ್ಯದೆಡೆ ಹೆಜ್ಜೆ ಇಟ್ಟರು. ಸಮಾರಂಭದಲ್ಲಿ ಪೊಲೀಸ್ ಮಹಾನಿರೀಕ್ಷಕ (ತರಬೇತಿ) ಡಾ.ಎಸ್. ಪರಶಿವಮೂರ್ತಿ ಮಾತನಾಡಿ, ಸಮಾಜದ ಕಟ್ಟಕಡೆಯ ಮನುಷ್ಯನಿಗೆ ನ್ಯಾಯ ದೊರಕಿಸಿದಾಗ ಸೇವೆಯ ಸಾರ್ಥಕತೆ ದೊರೆಯುತ್ತದೆ. ವೃತ್ತಿಪರತೆ, ಜನಪರತೆ, ನ್ಯಾಯ ಸಮ್ಮತ ಬದುಕು ನಡೆಸಿಕೊಂಡು ಮುನ್ನಡೆಯಿರಿ ಎಂದು ಹಿತವಚನ ಹೇಳಿದರು.ಜನತೆಗೆ ಸಂವಿಧಾನ ಕಲ್ಪಿಸಿದ ಸ್ವಾತಂತ್ರ್ಯವನ್ನು ರಕ್ಷಿಸುವ ಪೊಲೀಸರು ಕೆಲವೊಂದು ಸಂದರ್ಭದಲ್ಲಿ ವ್ಯಕ್ತಿ ಸ್ವಾತಂತ್ರ್ಯ ನಿಯಂತ್ರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಸಂದರ್ಭಗಳೂ ಬರುತ್ತವೆ. ಆ ನಿಟ್ಟಿನಲ್ಲಿ ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿ ಪೊಲೀಸರ ಮೇಲಿದೆ ಎಂದರು.ರಾಜ್ಯದ ಹುಬ್ಬಳ್ಳಿ, ಬೆಂಗಳೂರು ಹಾಗೂ ಕಡೂರಗಳಲ್ಲಿ ನೂತನ ಪೊಲೀಸ್ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕ (ತರಬೇತಿ) ಸುಶಾಂತ ಮಹಾಪಾತ್ರ  ತಿಳಿಸಿದರು.ತರಬೇತಿಯಲ್ಲಿನ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಕೋಲಾರದ ಕೇಶವ ಪಡೆದರು. ತರಬೇತಿ ಕಾಲೇಜಿನ ಪ್ರಾಚಾರ್ಯ ಎಚ್.ಕೆ. ಸನಾವುಲ್ಲಾ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಮಧುಕರ್ ಪವಾರ್, ಎಎಸ್ಪಿ ಭೂಷಣ ಬೊಸರೆ, ಡಿವೈಎಸ್ಪಿ ಎಸ್.ಎಲ್.ಝಂಡೇಕರ್, ಡಿವೈಎಸ್ಪಿ ಎಸ್.ಪಿ. ತೋಳಮಟ್ಟಿ  ಮತ್ತಿತರರು ಇದ್ದರು.ಗುಲ್ಬರ್ಗದ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಿರ್ಗಮನ ಪಥಸಂಚಲನಕ್ಕೆ ಸಿಂಗರಿಸಿದ್ದ ಮೈದಾನದಲ್ಲಿ ಪ್ರಶಿಕ್ಷಣಾರ್ಥಿಗಳು ಗಾಂಭೀರ್ಯದಿಂದ ಹೆಜ್ಜೆ ಹಾಕಿದರು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.