ಶನಿವಾರ, ಜೂಲೈ 11, 2020
28 °C

ಶಮನವೇ.. ಬೂದಿ ಮುಚ್ಚಿದ ಕೆಂಡವೇ..?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೇಳುವುದು ಕಷ್ಟ. ಯಡಿಯೂರಪ್ಪ ಯಾವ ಗಳಿಗೆಯಲ್ಲಿ ಅಧಿಕಾರ ವಹಿಸಿಕೊಂಡರೋ ಏನೋ? ಕಷ್ಟಪಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದ ಆ ಮನುಷ್ಯನಿಗೆ ನೆಮ್ಮದಿಯಿಲ್ಲ. ಅದಕ್ಕೆ ಅವರೇ ಕಾರಣವೇ? ಕೇಡರ್ ಪಕ್ಷದಲ್ಲಿ ಹುಟ್ಟಿರುವ ಹೊಸ ‘ಆಕಾಂಕ್ಷೆ’ಗಳು, ‘ದಾಹಗಳು’ ಕಾರಣವೇ? ಅಧಿಕಾರ ಎಲ್ಲರನ್ನು ಹಾಳು ಮಾಡುತ್ತದೆ ಎಂಬ ಮಾತು ಕಾರಣವೇ? ಹೇಳುವುದು ಕಷ್ಟ. ಮೊನ್ನೆ ಬೆಂಗಳೂರು ಹೊರವಲಯದ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಮಂದಹಾಸಗಳು ಹೊರಹೊಮ್ಮಿವೆ. ಕೊನೆಯ ಪಕ್ಷ ಯಡಿಯೂರಪ್ಪ ಮತ್ತು ಅನಂತಕುಮಾರ್ ಛಾಯಾಗ್ರಾಹಕರ ಕಡೆಗೆ ಮುಖಮಾಡಿ ಕಷ್ಟಪಟ್ಟು ನಕ್ಕಿದ್ದಾರೆ. ಅದೃಷ್ಟಕ್ಕೆ ವಿಧಾನಸಭೆಯಲ್ಲಿ ಆದ ಹಾಗೆ ರೆಸಾರ್ಟ್‌ನಲ್ಲಿ  ಮಾರಾಮಾರಿಯಾಗಿಲ್ಲ. ಆದರೆ, ಸಭೆ ಸುಖಾಂತವಾಗಿ ಮುಗಿದರೂ ಯಡಿಯೂರಪ್ಪ ಅವರಿಗೆ ಕಷ್ಟಗಳ ಸರಮಾಲೆಯನ್ನೇ ಶಾಸಕರು ಹಾಕಿ ಹೊರಗೆ ಕಳುಹಿಸಿದ್ದಾರೆ. ಯಡಿಯೂರಪ್ಪ ಅವರ ನೆಮ್ಮದಿ ಏನಿದ್ದರೂ ಬಜೆಟ್ ಮಂಡಿಸುವವರೆಗೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.ಶಾಸಕರು ಈಗ ಹಾಕಿರುವ ಷರತ್ತುಗಳನ್ನು ಯಾವ ಮುಖ್ಯಮಂತ್ರಿಯಾದರೂ ಈಡೇರಿಸಲು ಸಾಧ್ಯವೇ? ಎಲ್ಲ ಸಚಿವರ ರಾಜೀನಾಮೆ ಪಡೆಯಲು ಸಾಧ್ಯವೇ? ರಾಜೀನಾಮೆ ಪಡೆದು ಕೆಲವರನ್ನು ಬಿಟ್ಟರೆ ಅಧಿಕಾರದ ರುಚಿ ಕಂಡವರು ಸುಮ್ಮನೆ ಇರುತ್ತಾರೆಯೇ?

ನಿಗಮ-ಮಂಡಳಿಗಳ ಅಧ್ಯಕ್ಷರ ರಾಜೀನಾಮೆ ಕಥೆಯೂ ಅಷ್ಟೇ ಅಲ್ಲವೇ? ‘ಅಧಿಕಾರ ಉಳಿಸಿಕೊಳ್ಳಲು ನಾನು ತಪ್ಪು ಮಾಡಿದೆ’ ಎಂದು ಯಡಿಯೂರಪ್ಪ ಏಕೆ ಹೇಳಿದ್ದಾರೆ ಎಂಬುದು ಅರ್ಥವಾಯಿತೇ? ಹಾಗಾದರೆ ಸಮಸ್ಯೆಯ ಮೂಲ ಎಲ್ಲಿ ಇದೆ? ಈ ಸರ್ಕಾರದ  ರಚನೆಯಲ್ಲಿಯೇ ಆ ಸಮಸ್ಯೆ ಇದೆ. ಕನಿಷ್ಠ ಹತ್ತಿಪ್ಪತ್ತು ಶಾಸಕರು ಸದಾ ಅತೃಪ್ತರಾಗಿರುತ್ತಾರೆ.ಅವರು ಅಧಿಕಾರದಲ್ಲಿ ಇದ್ದರೂ ಅಷ್ಟೇ ಇಲ್ಲದಿದ್ದರೂ ಅಷ್ಟೇ. ಒಂದು ಸಾರಿ ರೆಡ್ಡಿ ಬಣದವರು ಯಡಿಯೂರಪ್ಪನವರ ಬೆವರು ಇಳಿಸಿದರೆ ಇನ್ನೊಂದು ಸಾರಿ ಮತ್ತೊಂದು ಬಣ ಅದೇ ಕೆಲಸ ಮಾಡುತ್ತದೆ. ಅವರ ಒತ್ತಡಕ್ಕೆ ಒಂದು ಸಾರಿ ಮಠಾಧೀಶರು ತಾಳ ತಟ್ಟಿದರೆ ಇನ್ನೊಂದು ಸಾರಿ ಸಂಘದವರು ಆ ಕೆಲಸ ಮಾಡುತ್ತಾರೆ. ಮಗದೊಂದು ಸಾರಿ ಮಠಾಧೀಶರು ಮತ್ತು ಸಂಘದವರು ಸೇರಿಕೊಂಡು ಯಡಿಯೂರಪ್ಪನವರ ಮೇಲೆ ಒತ್ತಡ ಹಾಕುತ್ತಾರೆ. ಅಧಿಕಾರ ಉಳಿಸಿಕೊಳ್ಳಲು ಯಡಿಯೂರಪ್ಪನವರು ಮತ್ತೆ ಮತ್ತೆ ಎಡವುತ್ತಾರೆ. ರೇಣುಕಾಚಾರ್ಯ ಮಂತ್ರಿಯಾದುದು ಇಂಥ ಒತ್ತಡದಿಂದ. ನಾಯಕನಾದವನು ಒತ್ತಡಕ್ಕೆ ಮಣಿಯುತ್ತಾನೆ ಎಂದು ಒಂದು ಸಾರಿ ಗೊತ್ತಾದರೆ ಸಾಕು; ಅಧಿಕಾರದ ಆಕಾಂಕ್ಷಿಗಳು ಒತ್ತಡದ ಮೂಲಗಳನ್ನು ಹುಡುಕಿಕೊಂಡು ಹೋಗುತ್ತಾರೆ.ಮಾರ್ಚ್ ನಂತರ ಯಡಿಯೂರಪ್ಪ ಸಂಪುಟ ಪುನರ್‍ರಚನೆಗೆ ಕೈ ಹಾಕಿದರೆ ಏನಾದೀತು ಎಂದು ಭವಿಷ್ಯ ಹೇಳಲು ಕೋಡಿ ಮಠದ ಸ್ವಾಮಿಗಳೂ ಬೇಕಾಗಿಲ್ಲ. ಸೋಮಯಾಜಿಗಳೂ ಬೇಕಾಗಿಲ್ಲ. ರಾಜಕೀಯದ ಅಲ್ಪ ಅನುಭವ ಇರುವವರಿಗೂ ಅದು ಗೊತ್ತಾಗುತ್ತದೆ. ಯಡಿಯೂರಪ್ಪನವರಿಗೆ ಇದು ಗೊತ್ತಿಲ್ಲ ಎಂದಲ್ಲ. ಆದರೆ, ಆ ಕಷ್ಟದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಎಂಬುದು ಗೊತ್ತಿಲ್ಲ. ಒಂದು ದಿನ ತಳ್ಳಿದರೆ ಸಾಕು, ಅದೇ ನೆಮ್ಮದಿ ಎಂದುಕೊಂಡಿದ್ದಾರೆ ಅವರು. ಮುಖ್ಯಮಂತ್ರಿ ನೆಮ್ಮದಿಯ ದಿನಗಳನ್ನು ಎಣಿಸುವಾಗ ಆಡಳಿತದ ಗತಿ ಏನಾಗುತ್ತದೆ ನೋಡಿ. ಯಡಿಯೂರಪ್ಪ ಸಾವಿರಾರು ಜನರ ಎದುರು ಹಸಿರು ಶಾಲು ಹೊದ್ದು ರೈತನ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಂಡಿದ್ದಾರೆ ಎಂಬ ‘ಸಂದೇಶ’, ‘ಸಂಕೇತ’ ಅಧಿಕಾರಿಗಳಿಗೆ ಮರೆತು ಹೋಗುತ್ತದೆ.ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿಯೇ ದಂಡ ಹಿಡಿದು ರೈತರನ್ನು ಹೊಡೆಯಲು ಹೋಗುತ್ತಾರೆ. ಧಾರವಾಡದಲ್ಲಿ ಪೊಲೀಸರು ರೈತರ ಕೈಗಳಿಗೆ ಕೋಳ ತೊಡಿಸುತ್ತಾರೆ. ಯಡಿಯೂರಪ್ಪ ಮತ್ತೆ ಆ ತಪ್ಪು ತಿದ್ದಲು ಬಿಡದಿವರೆಗೆ ನಡೆದುಕೊಂಡು ಹೋಗಬೇಕಾಗುತ್ತದೆ. ಆಡಳಿತದಲ್ಲಿ ಶಿಥಿಲತೆ ಹೇಗೆ ಬರುತ್ತದೆ, ಏಕೆ ಬರುತ್ತದೆ ಎಂಬುದಕ್ಕೆ ಇದು ಒಂದು ನಿದರ್ಶನ ಅಷ್ಟೇ.ಯಡಿಯೂರಪ್ಪ ವಿಧಾನಸೌಧದಲ್ಲಿ ಗಟ್ಟಿಯಾಗಿ ಕುಳಿತುಕೊಂಡು ಎಷ್ಟು ದಿನ ಆಡಳಿತ ನಡೆಸಿದ್ದಾರೆ? ಅವರು ಗಟ್ಟಿಯಾಗಿ ಕುಳಿತುಕೊಳ್ಳಲು ಅವರ ಪಕ್ಷದವರೇ ಬಿಡುವುದಿಲ್ಲ. ಹಾಗೆ ನೋಡಿದರೆ ವಿರೋಧ ಪಕ್ಷಗಳು ಮಾಡಬೇಕಾದ ಕೆಲಸವನ್ನು ಬಿಜೆಪಿ ಶಾಸಕರೇ ಅತ್ಯಂತ ಸಮರ್ಥವಾಗಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಕೆಲ ಮುಖಂಡರು ಯಡಿಯೂರಪ್ಪನವರ ‘ಪೇರೋಲ್’ನಲ್ಲಿ ಇದ್ದಾರೆ ಎಂದು  ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದಾರೆ. ವಿರೋಧ ಪಕ್ಷಗಳ ಟೀಕೆ ಮೊನಚು ಕಳೆದುಕೊಂಡಿರುವುದನ್ನು ನೋಡಿದರೆ ಅವರ ಮಾತು ನಿಜ ಇರಬೇಕು ಎಂದೂ ಅನಿಸುತ್ತದೆ. ಕುಮಾರಸ್ವಾಮಿ ಬಳಿ, ಈ ಆರೋಪಕ್ಕೆ ದಾಖಲೆಗಳೂ ಇರುವಂತಿದೆ!ಇತ್ತ ಜನ ತಮ್ಮನ್ನು ಏಕೆ ಅಧಿಕಾರಕ್ಕೆ ತಂದರು ಎಂಬುದು ಬಿಜೆಪಿ ಮಂದಿಗೆ ಮರೆತು ಹೋಗಿದೆ. ಅಥವಾ ಮತ್ತೆ ತಾವು ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂಬುದು ಇಷ್ಟು ಬೇಗ ಮನವರಿಕೆಯಾಗಿದೆ. ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಿದ್ದವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಬೇಕೋ ಅದನ್ನೇ ಎಲ್ಲರೂ ಮಾಡುತ್ತಿದ್ದಾರೆ. ಇದಕ್ಕೆ, ಪಕ್ಷಕ್ಕೆ ಹೊರಗಿನಿಂದ ಬಂದವರು, ಸಂಘದ ಘನ ಆದರ್ಶಗಳಿಂದ ಬಂದವರು ಎಂಬ ವ್ಯತ್ಯಾಸವೇನೂ ಇಲ್ಲ. ಅಪವಾದಗಳು ಇದ್ದರೆ ಒಂದು ಕೈ ಬೆರಳಿನ ಎಣಿಕೆಯಷ್ಟು ಮಾತ್ರ!ಯಡಿಯೂರಪ್ಪ ಸರ್ಕಾರಕ್ಕೆ ಬರುವ ತಿಂಗಳು ನಡೆಯುವ ಬೆಂಗಳೂರು ಮಹಾ ನಗರ ಪಾಲಿಕೆ ಚುನಾವಣೆ ಒಂದು ದೊಡ್ಡ ಅಗ್ನಿಪರೀಕ್ಷೆ. ಜನ ಈ ಸರ್ಕಾರದ ಬಗ್ಗೆ ಏನು ಅಂದುಕೊಂಡಿದ್ದಾರೆ ಎಂಬುದಕ್ಕೆ ಈ ಚುನಾವಣೆ ಫಲಿತಾಂಶ ಉತ್ತರ ಕೊಡುತ್ತದೆ. ಬಿಜೆಪಿ ನಗರ ಕೇಂದ್ರಿತ ಪಕ್ಷ. ಗ್ರಾಮಾಂತರದಲ್ಲಿ ಇನ್ನೂ ಆಳವಾದ ಬೇರುಗಳು ಇಲ್ಲ.ಬೆಂಗಳೂರು ನಗರದಲ್ಲಿ 2008ರ ವಿಧಾನಸಭೆ ಚುನಾವಣೆಯಲ್ಲಿ 17 ಮಂದಿ ಬಿಜೆಪಿ ಶಾಸಕರು ಗೆದ್ದು ಬಂದಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ನಗರದ ಬಹುತೇಕ ಶೇ 90ರಷ್ಟು ಪ್ರದೇಶವನ್ನು ಪ್ರತಿನಿಧಿಸುವ ಮೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಗೆದ್ದಿದ್ದರು. ವಿಧಾನಸಭೆಗೆ ಅಷ್ಟು ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಶಾಸಕರು ಆಯ್ಕೆಯಾದುದು ‘ವಚನಭ್ರಷ್ಟತೆ’ಯ ವಿರುದ್ಧದ ಜನಾದೇಶವಾಗಿತ್ತು. ಕಳೆದ ಒಂದೂಮುಕ್ಕಾಲು ವರ್ಷದ ಬಿಜೆಪಿ ಆಡಳಿತದ ಬಗ್ಗೆ ಬೆಂಗಳೂರು ಜನರ ಅಭಿಪ್ರಾಯ ಈಗ ಬೇರೆಯೇ ಇದ್ದಂತೆ ಇದೆ. ರಾಜ್ಯ ಸರ್ಕಾರದ ಆಡಳಿತ ವೈಖರಿಯಿಂದ ಅವರು ಬೇಸತ್ತು ಹೋಗಿರಲು ಸಾಕು. ಅದು ಮತದಾನದಲ್ಲಿ ವ್ಯಕ್ತವಾಗಿ ಪಾಲಿಕೆಯ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಸಾಧ್ಯವಾಗದಿದ್ದರೆ ಮತ್ತೆ ವಿಧಾನಸಭೆಗೆ ಚುನಾವಣೆ ನಡೆಯಲು 2013ರ ವರೆಗೆ ಕಾಯಬೇಕಾದ ಅಗತ್ಯ ಕಾಣುವುದಿಲ್ಲ. ‘ಹೇಗಿದ್ದರೂ 2013ರ ವರೆಗೆ ನಾವು ಕಾಯುವುದೇ ಇಲ್ಲ. ಚುನಾವಣೆ ಯಾವಾಗ ಬೇಕಾದರೂ ನಡೆಯಬಹುದು’ ಎಂದು ಬಿಜೆಪಿಯವರೇ ಈಗ ಹೇಳುತ್ತಿದ್ದಾರೆ!ಯಡಿಯೂರಪ್ಪನವರ ನಿದ್ದೆಗೆಡಿಸಲು ಕಾಂಗ್ರೆಸ್ ಮತ್ತು ಜೆ.ಡಿ (ಎಸ್) ಈಗಾಗಲೇ ಮೇಲ್ಮನೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿವೆ. ಪಾಲಿಕೆ ಚುನಾವಣೆಯಲ್ಲಿಯೂ ಈ ಮೈತ್ರಿ ಸಾಧ್ಯವಾದರೆ ಬಿಜೆಪಿಗೆ ಗೆಲುವು ಮತ್ತಷ್ಟು ಕಷ್ಟವಾಗುತ್ತದೆ. ಬೆಂಗಳೂರಿನಲ್ಲಿ ಜೆ.ಡಿ (ಎಸ್)ಗೆ ಹೇಳಿಕೊಳ್ಳುವಂಥ ನೆಲೆಯಿಲ್ಲ. ದೇವೇಗೌಡರಿಗೆ ಕೊಳೆಗೇರಿ ನಿವಾಸಿಗಳ ಮೇಲೆ ಈಗ ಇದ್ದಕಿದ್ದಂತೆ ಪ್ರೀತಿ ಉಕ್ಕುತ್ತಿರುವುದಕ್ಕೆ ಪಾಲಿಕೆ ಚುನಾವಣೆಯೇ ಕಾರಣ. ಕಾಂಗ್ರೆಸ್ ಜತೆಗೆ ಮೈತ್ರಿ ಸಾಧ್ಯವಾದರೆ ಅದರಿಂದ ಜೆ.ಡಿ (ಎಸ್) ಬಲ ವೃದ್ಧಿಯಾಗುತ್ತದೆ. ಪ್ರತಿಯಾಗಿ ದೊಡ್ಡ ಸಂಖ್ಯೆಯಲ್ಲಿ ಇರುವ ಒಕ್ಕಲಿಗ ಮತಗಳು ಕಾಂಗ್ರೆಸ್‌ಗೂ ದೊರಕಬಹುದು. ಗೋವಿಂದರಾಜನಗರ ಉಪ ಚುನಾವಣೆಯಲ್ಲಿ ಇದು ಸಾಬೀತಾಗಿದೆ.ಜೆ.ಡಿ (ಎಸ್) ಜತೆಗೆ ಮೈತ್ರಿ ಮಾಡಿಕೊಳ್ಳಲು ಸ್ಥಳೀಯ ಕಾಂಗ್ರೆಸ್ ನಾಯಕರಿಗಿಂತ ಕೇಂದ್ರದ ಆಸ್ಕರ್ ಫರ್ನಾಂಡಿಸ್ ಮತ್ತು ಬಿ.ಕೆ.ಹರಿಪ್ರಸಾದ್ ಉತ್ಸುಕರಾಗಿದ್ದಾರೆ. ಅವರಿಗೆ ಬರುವ ಜುಲೈ ತಿಂಗಳಲ್ಲಿ ಮತ್ತೆ ರಾಜ್ಯಸಭೆ ಪ್ರವೇಶಿಸಬೇಕಿದೆ. ಈಗ ವಿಧಾನಸಭೆಯಲ್ಲಿ ಇರುವ 74 ಕಾಂಗ್ರೆಸ್ ಶಾಸಕರ ಬಲದ ಮೇಲೆ ಇಬ್ಬರೂ ರಾಜ್ಯಸಭೆ ಪ್ರವೇಶಿಸಲು ಆಗುವುದಿಲ್ಲ. ಜೆ.ಡಿ (ಎಸ್) ಬೆಂಬಲವೂ ಸೇರಿ ಒಟ್ಟು 92 ಮತಗಳು ಬೇಕೇ ಬೇಕು. ಆ ಬೆಂಬಲ ಪಡೆಯುವ ಸಲುವಾಗಿಯೇ ಆಸ್ಕರ್ ಮತ್ತು ಹರಿಪ್ರಸಾದ್ ಇಬ್ಬರೂ ಕುಮಾರಸ್ವಾಮಿ ಹೆಗಲ ಮೇಲೆ ಕೈ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಜೂನ್ ತಿಂಗಳಲ್ಲಿ ವಿಧಾನಸಭೆಯಿಂದ ಮೇಲ್ಮನೆಗೆ ನಡೆಯುವ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆಲ್ಲುವ ಸಂಖ್ಯಾಬಲವಿದ್ದರೂ ಕಾಂಗ್ರೆಸ್ ಒಂದೇ ಸ್ಥಾನಕ್ಕೆ ಸ್ಪರ್ಧಿಸಿ ಇನ್ನೊಂದು ಸ್ಥಾನವನ್ನು ಜೆ.ಡಿ (ಎಸ್)ಗೆ ಬಿಟ್ಟುಕೊಡುವ ಸಾಧ್ಯತೆಯೂ ಇದೆ. ಉಳಿದ ಎರಡು ಸೀಟುಗಳು ಬಿಜೆಪಿಗೆ ಹೋಗಲಿವೆ.ಕಾಂಗ್ರೆಸ್-ಜೆ.ಡಿ (ಎಸ್) ಮೈತ್ರಿ ಮಾಡಿಕೊಂಡು ಬಹಿರಂಗ ಸಮರ ಸಾರುವ ಜತೆಗೆ ಬಿಜೆಪಿ ಅತೃಪ್ತರ ಜತೆಗೆ ನಿತ್ಯ ಹೊಕ್ಕುಬಳಕೆ ಮಾಡುತ್ತಿರುವುದು ಯಡಿಯೂರಪ್ಪ ಸರ್ಕಾರಕ್ಕೆ ಇನ್ನೊಂದು ಬೆದರಿಕೆ. ವಿಧಾನಸಭಾಧ್ಯಕ್ಷರ ಚುನಾವಣೆಯನ್ನು ತರಾತುರಿಯಲ್ಲಿ ಮುಗಿಸಿದ್ದಕ್ಕೆ ಈ ಬೆದರಿಕೆಯೇ ಕಾರಣ. ಈ ಚುನಾವಣೆ ಒಂದು ದಿನ ಮುಂದೆ ಹೋಗಿದ್ದರೂ ಕೆಲವರು ಬಿಜೆಪಿ ಶಾಸಕರು ಕೈ ಕೊಟ್ಟು ಆಡಳಿತ ಪಕ್ಷಕ್ಕೆ ಮುಖಭಂಗ ಮಾಡಲು ಸಿದ್ಧರಾಗಿದ್ದರು. ಅದನ್ನು ತಿಳಿದೇ ವಿರೋಧ ಪಕ್ಷದವರು ಚುನಾವಣೆ ತಡೆಯಲು ಅಷ್ಟೊಂದು ಕೋಲಾಹಲ ಮಾಡಿದ್ದು. ಅಂತೂ ಯಡಿಯೂರಪ್ಪನವರು ಹೀಗೆ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಮತ್ತೆ ಮತ್ತೆ ಪಾರಾಗುತ್ತಿದ್ದಾರೆ. ಬಜೆಟ್ ಮಂಡನೆ ನಂತರ ಅವರು ಅಪಾಯವನ್ನು ಮತ್ತೆ ಮೈಮೇಲೆ ಎಳೆದು ಕೊಳ್ಳುತ್ತಾರೆಯೇ? ಅಥವಾ ಅದೇ ಅವರ ಮೈಮೇಲೆ ಏರಿ ಬರುತ್ತದೆಯೇ? ಹೇಳುವುದು ಕಷ್ಟ.


ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.