ಕಾಳಸಂತೆಯಲ್ಲಿ ಆಹಾರ ಮಾರಾಟ

7

ಕಾಳಸಂತೆಯಲ್ಲಿ ಆಹಾರ ಮಾರಾಟ

Published:
Updated:

ವಾಡಿ: `ಹಲವಾರು ವರ್ಷಗಳಿಂದ ಅಂಗನವಾಡಿ ಕೇಂದ್ರ ತೆರೆಯದೆ ಮಕ್ಕಳ ಮತ್ತು ಗರ್ಭಿಣಿ ಹಾಗೂ ಬಾಣಂತಿಯರಿಗೆ ಸರ್ಕಾರ ನೀಡುವ ಉಚಿತ ಪೌಷ್ಟಿಕ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಅರ್ಹ ಫಲಾನುಭಾವಿಗಳಿಗೆ ನೀಡದೇ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ' ಎಂದು ಗ್ರಾಮದ ಬಿಜೆಪಿ ಯುವ ಮುಖಂಡ ಅನವರ್ ಪಟೇಲ ಆರೋಪಿಸಿದ್ದಾರೆ.ಪಟ್ಟಣದ ಸಮೀಪ ಇರುವ ಕಡಬೂರ್ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿವೆ. `ಮೊದಲನೇ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಮಲ್ಲಮ್ಮ ಕೇಂದ್ರವನ್ನು ತೆರೆಯದೇ ಮಕ್ಕಳಿಗೆ  ಪೌಷ್ಟಿಕ ಆಹಾರ ಕೊಡದೇ ಕೊಡಲಾಗಿದೆ ಎಂದು ದಾಖಲಾತಿಯಲ್ಲಿ ನಮೂದಿಸಿದ್ದಾರೆ. ಅದನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ' ಎಂದು ಗ್ರಾಮಸ್ಥರು ದೂರಿದ್ದಾರೆ.`ಮಕ್ಕಳ ಮತ್ತು ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರವನ್ನು ಗ್ರಾಮದ ಶರಣಪ್ಪ ಎಂಬುವರ ಮನೆಯಲ್ಲಿ ದಾಸ್ತಾನು ಮಾಡಲಾಗಿದೆ. ನಂತರ ತಿಂಗಳ ಕಡೆ ವಾರದಲ್ಲಿ ಅದನ್ನು ಕಾಳ ಸಂತೆಯಲ್ಲಿ ರಾತ್ರೋರಾತ್ರಿ ಮಾರಾಟ ಮಾಡುತ್ತಾರೆ. ಅಧಿಕಾರಿಗಳು ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಅಧಿಕಾರಿಗಳ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.`ಅಂಗನವಾಡಿ ಕಾರ್ಯಕರ್ತೆ ಮಲ್ಲಮ್ಮ ಶಹಾಬಾದ್ ಹತ್ತಿರ ಇರುವ ತೊನಸನಳ್ಳಿ ಗ್ರಾಮದಲ್ಲಿ ವಾಸಮಾಡುತ್ತಾರೆ. ಆದ್ದರಿಂದ ಅವರು ಅಂಗನವಾಡಿ ಕೇಂದ್ರಕ್ಕೆ ಬರುವದೇ ಅಪರೂಪ. ಮತ್ತು ರಾಜಕೀಯ ಪ್ರಭಾವ ಇರುವುದರಿಂದ ಬೇಕಾಬಿಟ್ಟಿಯಾಗಿ ಕೇಂದ್ರ ನಡೆಸುತ್ತಾರೆ' ಎಂದು ಗ್ರಾಮದ ಬಿಜೆಪಿ ಯುವ ಮುಖಂಡ ಅನವರ್‌ಪಟೇಲ ದೂರಿದ್ದಾರೆ.`ಅಂಗನವಾಡಿ ಕೇಂದ್ರ 2ರ ಅಂಗನವಾಡಿ ಕಾರ್ಯಕರ್ತೆ ಬಸಮ್ಮ ಅವರು ವಾರಕ್ಕೊಮ್ಮೆ ಕೇಂದ್ರ ತೆರೆಯುತ್ತಾರೆ. ಆದರೆ ಮಕ್ಕಳಿಗೆ ಸರಿಯಾಗಿ ಪೌಷ್ಟಿಕ ಆಹಾರ ವಿತರಿಸುವುದಿಲ್ಲ. ಆದರೆ ತಮಗೆ ಇಷ್ಟವಾದವರಿಗೆ ಅಲ್ಪ ಸ್ವಲ್ಪ ಪೌಷ್ಟಿಕ ಆಹಾರ ನೀಡುತ್ತಾರೆ' ಎಂದು ಗ್ರಾಮಸ್ತರು ಹೇಳುತ್ತಾರೆ.ನಡೆಯದ ಗರ್ಭಿಣಿಯರ ಸಭೆ: `ಗ್ರಾಮದ ಗರ್ಭಿಣಿಯರಿಗೆ ಇಲ್ಲಿಯವರೆಗೆ ಯಾವುದೇ ಆಪ್ತಾ ಸಮಲೋಚನಾ ಸಭೆ ನಡೆಸಿಲ್ಲ. ಅವರಿಗೆ ಯಾವುದೇ ರೀತಿಯ ಸೌಲಭ್ಯ ಒದಗಿಸಿಲ್ಲ. ಇದರಿಂದ ಬಹುತೇಕ ಹಸುಗೂಸುಗಳು ಸಾವನ್ನಪ್ಪಿವೆ' ಎಂದು ಗ್ರಾಮಸ್ಥರು ದೂರಿದ್ದಾರೆ.`ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಂಗನವಾಡಿ ಕೇಂದ್ರ ತೆರೆಯಿಸಬೇಕು. ಸಮರ್ಪಕವಾಗಿ ಪೌಷ್ಟಿಕ ಆಹಾರ ವಿತರಿಸಲು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು' ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry