`371ನೇ ಕಲಂ'ಗೆ ಅಸ್ತು : ಹರಿದ ಸಂತಸದ ಹೊನಲು

7

`371ನೇ ಕಲಂ'ಗೆ ಅಸ್ತು : ಹರಿದ ಸಂತಸದ ಹೊನಲು

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಲೋಕಸಭೆ `ಅಸ್ತು' ಅನ್ನುತ್ತಲೇ ಮಂಗಳವಾರ ಜಿಲ್ಲೆಯಾದ್ಯಂತ ಹರ್ಷದ ಹೊನಲು ಹರಿಯಿತು.ಈ ಕುರಿತು ಸುದ್ದಿ ಪ್ರಕಟವಾಗುತ್ತಿದ್ದಂತೆ, ನಗರದ ವಿವಿಧೆಡೆ ಸಂಘಟನೆಗಳು ವಿಜಯೋತ್ಸವ- ಸಂಭ್ರಮ ಆಚರಿಸಿದವು. ಕಾರ್ಯಕರ್ತರು ಘೋಷಣೆ ಹಾಕಿ,  ಸಿಹಿ ಹಂಚಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.ಅಭಿವೃದ್ಧಿಗೆ ನಾಂದಿ: ಉಮಾಕಾಂತ

“ತಿದ್ದುಪಡಿಗೆ ಲೋಕ ಸಭೆ ಅಸ್ತು ಎಂದಿರುವುದು ಈ ಭಾಗದ ಅಭಿವೃದ್ಧಿಗೆ ನಾಂದಿ ಹಾಡಿದಂತೆ” ಎಂದು ಹೈ-ಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಉಮಾಕಾಂತ ನಿಗುಡಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮರಾಠವಾಡಾ ಹಾಗೂ ತೆಲಂಗಾಣ ಸೇರಿದಂತೆ ಹಲವು ಪ್ರದೇಶಗಳು 371ನೇ ಕಲಂ ತಿದ್ದುಪಡಿ ಸೌಲಭ್ಯ ಪಡೆದಿದ್ದರೂ ನಮಗೆ ಆ ಸೌಕರ್ಯ ಸಿಗಲು ದಶಕಗಳ ಕಾಲ ಕಾಯಬೇಕಾಯಿತು. ಶಿಕ್ಷಣ ಹಾಗೂ ಉದ್ಯೋಗಾವಕಾಶದಿಂದ ವಂಚಿತರಾದವರು ಎಷ್ಟೋ ಜನ.

ಹೀಗಾಗಿ 371ನೇ ಕಲಂ ತಿದ್ದುಪಡಿ ಬೇಡಿಕೆಯನ್ನು ವರ್ಷಗಳಿಂದಲೂ ಕೇಳುತ್ತ ಹೋರಾಟ ನಡೆಸಿದ್ದೇವೆ. ಇನ್ನು ಮುಂದೆ ಈ ಭಾಗದ ಅಭಿವೃದ್ಧಿ ಶುರುವಾಗಲಿದೆ.ಇದಕ್ಕಾಗಿ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ, ವೈಜನಾಥ ಪಾಟೀಲ ಹಾಗೂ ಎಲ್ಲ ಸಂಘ-ಸಂಸ್ಥೆಗಳಿಗೂ ಅಭಿನಂದನೆ ಸಲ್ಲಿಸುವೆ ಎಂದು ಅವರು ಹೇಳಿದ್ದಾರೆ.`ಕಣ್ಣೊರೆಸುವ ತಂತ್ರವಾಗದಿರಲಿ':  ರಾಜು ಕುಳಗೇರಿ

ಲೋಕಸಭೆ ಅಂಗೀಕಾರ ನೀಡಿದ್ದನ್ನು ಹೃತ್ಪೂರ್ವವಾಗಿ ಸ್ವಾಗತಿಸುತ್ತೇವೆ. ಆದರೆ ಇದು ಬರೀ ಕಣ್ಣೊರೆಸುವ ತಂತ್ರವಾಗಬಾರದು ಎಂದು ಹೈ-ಕ ಯುವ ಹೋರಾಟ ಸಮಿತಿ ವಿಭಾಗೀಯ ಅಧ್ಯಕ್ಷ ಡಾ. ರಾಜು ಕುಳಗೇರಿ ಪ್ರತಿಕ್ರಿಯಿಸಿದ್ದಾರೆ.“ತಿದ್ದುಪಡಿಯಿಂದ ಹೆಚ್ಚು ಅನುದಾನ ಕೊಡದೇ ಇದ್ದರೆ ಸಮಗ್ರ ಅಭಿವೃದ್ಧಿ ಕನಸಾಗಿಯೇ ಉಳಿಯುತ್ತದೆ. ಒಂದು ವೇಳೆ ಸಾಕಷ್ಟು ಹಣ ಬಂದರೂ ಅದರ ಸಮರ್ಪಕ ವಿನಿಯೋಗವಾಗದೇ ಹೋದರೆ ಪ್ರಗತಿ ಎಂಬುದು ಮರೀಚಿಕೆಯಾಗಿ ಉಳಿಯುತ್ತದೆ. ಹೈ-ಕ ಭಾಗಕ್ಕೆ ಸಿಗುವ ಅನುದಾನದ ಖರ್ಚಿನ ಮೇಲೆ ನಿಗಾ ವಹಿಸುವ ವ್ಯವಸ್ಥೆಯೊಂದನ್ನು ರೂಪಿಸುವುದು ಅತ್ಯಗತ್ಯ” ಎಂದು ಅವರು ಸಲಹೆ ಮಾಡಿದ್ದಾರೆ.ಜೆಡಿಎಸ್ ಸ್ವಾಗತ 

ಹೈ-ಕ ಭಾಗದ ಜನರ ಬಹುದಿನಗಳ ಕನಸು ನನಸಾಗುತ್ತಿದೆ ಎಂದು ಜೆಡಿಎಸ್ ಸಂತಸ ವ್ಯಕ್ತಪಡಿಸಿದೆ.ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಲವು ಸಲ ಕೇಂದ್ರವನ್ನು ಒತ್ತಾಯಿಸಿ, 371ನೇ ಕಲಂ ತಿದ್ದುಪಡಿಗೆ ಆಗ್ರಹಿಸಿದ್ದರು ಎಂಬುದನ್ನು ಸ್ಮರಿಸಿರುವ ಪಕ್ಷದ ಜಿಲ್ಲಾಧ್ಯಕ್ಷ, ಶಾಸಕ ಸುಭಾಷ ಗುತ್ತೇದಾರ, ಶಾಸಕಿ ಅರುಣಾ ಪಾಟೀಲ, ಮಾಜಿ ಸಚಿವ ಎಸ್.ಕೆ.ಕಾಂತಾ, ವಕ್ತಾರ ಉದಯಕುಮಾರ ಜೇವರ್ಗಿ ಇತರರು, “ಲೋಕಸಭೆಯಲ್ಲಿ ಮಂಗಳವಾರ ಕೈಗೊಂಡ ನಿರ್ಣಯವು ಹಿಂದುಳಿದ ಭಾಗದ ಅಭಿವೃದ್ಧಿಗೆ ನೆರವಾಗಲಿದೆ” ಎಂದು ಬಣ್ಣಿಸಿದ್ದಾರೆ.`ಸಂತಸದ ದಿನ':   ಶರಣಪ್ರಕಾಶ ಪಾಟೀಲ

“ಹೈದರಾಬಾದ್ ಕರ್ನಾಟಕ ಪ್ರದೇಶದ ಜನತೆಗೆ ಇದೊಂದು ಸಂಭ್ರಮದ ದಿನ” ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಾಸಕ ಡಾ. ಶರಣಪ್ರಕಾಶ ಪಾಟೀಲ ಬಣ್ಣಿಸಿದ್ದಾರೆ.“ಈ ವಿಧೇಯಕವನ್ನು ಸಂಸತ್ತಿನಲ್ಲಿ ಅವಿರೋಧವಾಗಿ ಅಂಗೀಕರಿಸಲಾಗಿರುವುದು ಗಮನಾರ್ಹ. ಇದಕ್ಕಾಗಿ ಶ್ರಮಿಸಿದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಸೇರಿದಂತೆ ಎಲ್ಲ ಮುಖಂಡರಿಗೂ ಅಭಿನಂದನೆಗಳು. ಹೈ-ಕ ಭಾಗದ ಸಮಗ್ರ ಅಭಿವೃದ್ಧಿಗೆ ನಾಂದಿಯಾದ ಇಂದಿನ ದಿನ ಹೈ-ಕ ಭಾಗದ ಜನತೆಗೆ ಹೆಚ್ಚು ಸಂಭ್ರಮ ತಂದಿದೆ” ಎಂದು ಡಾ. ಪಾಟೀಲ               ಹೇಳಿದರು.ಬೆಳಮಗಿ ಅಭಿನಂದನೆ: ಬೆಳಮಗಿ)

ಲೋಕಸಭೆಯಲ್ಲಿ 371ನೇ ಕಲಂ (ಜೆ) ಅಂಗಿಕಾರವು ಈ ಭಾಗದ ಬಹುದಿನಗಳ ಆಶೋತ್ತರಗಳನ್ನು ಈಡೇರಿಸಿದೆ. ಮುಂದಿನ ಅಭಿವೃದ್ಧಿ ಪರ್ವಕ್ಕೆ ಇದು ನಾಂದಿ ಹಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಯತ್ನಿಸಿದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಹಾಗೂ ಹಾಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಮಲಿಕ್ಲಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ಹೋರಾಟ ನಡೆಸಿದ ಸಂಘ-ಸಂಸ್ಥೆಗಳ ಸದಸ್ಯರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.`ಭರವಸೆ ಈಡೇರಿದೆ':   ಅಲ್ಲಮಪ್ರಭು

“ಹೈ-ಕ ಭಾಗದ ಜನತೆಗೆ ಅತ್ಯಂತ ಸಂತಸ ನೀಡಿದ ದಿನ. ಇದಕ್ಕಾಗಿ ಶ್ರಮಿಸಿದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಹೇಳಿದ್ದಾರೆ.ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಗುಲ್ಬರ್ಗ- ಬೀದರ್‌ಗೆ ಆಗಮಿಸಿದ್ದಾಗ, 371ನೇ ಕಲಂ ಜಾರಿ ಕುರಿತು ಆಶ್ವಾಸನೆ ಕೊಟ್ಟಿದ್ದರು. ತಮ್ಮ ವಚನವನ್ನು ಅವರು ಈಡೇರಿಸಿದ್ದಾರೆ ಎಂದು ಪಾಟೀಲ ಸಂತಸ ಸೂಚಿಸಿದ್ದಾರೆ.ಕಸಾಪ ಅಧ್ಯಕ್ಷರ ಸಂತಸ

ಹೈದರಾಬಾದ್-ಕರ್ನಾಟಕದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ಕಲಂ 371(ಜೆ)ಕ್ಕೆ ಮಂಗಳವಾರ ಲೋಕಸಭೆಯಲ್ಲಿ ಅಂಗಿಕಾರ ದೊರೆತಿದ್ದು ಸಂಭ್ರಮ   ಮೂಡಿಸಿದೆ. ಅತ್ಯಂತ ಸುದಿನವಿದು ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಹಿಪಾಲ ರೆಡ್ಡಿ ಮುನ್ನೂರ ಸಂತಸ ವ್ಯಕ್ತಪಡಿಸಿದ್ದಾರೆ.ಇದಕ್ಕಾಗಿ ಶ್ರಮಿಸಿದ ಎಲ್ಲ ಜನಪ್ರತಿನಿಧಿಗಳು, ಹೋರಾಟಗಾರರನ್ನು ಅವರು    ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry