ಫಲ ನೀಡುವ `ಮೀನಾ ಮೇಳ'

7

ಫಲ ನೀಡುವ `ಮೀನಾ ಮೇಳ'

Published:
Updated:

`ಶಾಲೆ ಬಿಟ್ಟ ಬಾಲೆಯ ಕರೆದು ತರುವೆವು ನಾವು/ ಬಾಲ್ಯದಲ್ಲಿ ನಡೆವ ಮದುವೆ ತಡೆದು ಹಿಡಿವೆವು/ ಪಟ್ಟ ಭದ್ರ ಶಕ್ತಿಗಳ ಮಟ್ಟ ಹಾಕುವೆವು/ದೌರ್ಜನ್ಯದ ಅಟ್ಟಹಾಸ ಮೆಟ್ಟಿ ನಿಲ್ಲುವೆವು

ಇಟ್ಟ ಹೆಜ್ಜೆಯಿಂದ ಎಂದಿಗೂ ಹಿಂದೆ ಸರಿಯೆವು ನಾವು .....'ಇದು ಮೀನಾ ತಂಡದ ಗೀತೆ, ಇದರಲ್ಲಿಯ ಅಂಶಗಳು ಅಕ್ಷರಶಃ ನಮ್ಮ ಕಣ್ಣೆದುರಿಗೆ ಬಂದದ್ದು ಗುಲ್ಬರ್ಗದ ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ಮೀನಾ ಮೇಳದಲ್ಲಿ.  ಮೀನಾ ಯಾವುದೇ ಕನಸಿನ ಲೋಕದ ಸ್ವಪ್ನ ಸುಂದರಿಯಲ್ಲ. ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸಬಲೀಕರಣದ ಹಿನ್ನೆಲೆಯಲ್ಲಿ ಬಾಲಕಿಯರನ್ನು ಉತ್ತೇಜಿಸಲು ಕೈಗೊಂಡ ಕಾರ್ಯಕ್ರಮದ ಹೆಸರು.ಇದು ಒಂದು ಬಾಲೆಯ ಹೆಸರು ಹೌದು. ಹೆಣ್ಣ ಮಕ್ಕಳ ಸಬಲೀಕರಣಕ್ಕಾಗಿ ಲಿಂಗ ಸಮಾನತೆಗಾಗಿ ಎಲ್ಲ ಬಾಲೆಯರ ಪ್ರತಿನಿಧಿಯಾಗಿ ಕಲ್ಪಿಸಿಕೊಂಡ ಸುಂದರ ಹೆಸರು. ಮೀನಾ ಸಮಾನ ಮನಸ್ಕ ಗೆಳೆಯ- ಗೆಳತಿಯರನ್ನು ಒಳಗೊಂಡ ಕ್ರೀಯಾಶೀಲ ಬಳಗ. ಒಂದೊಂದು ಮೀನಾ ತಂಡದಲ್ಲಿ 15 ಹುಡುಗಿಯರು 5ಹುಡುಗರುಗಳಿಂದ ಸೇರಿದ 20 ಸದಸ್ಯರಿರುತ್ತಾರೆ.ಉತ್ತರ ಪ್ರದೇಶದ ಹೆಚ್ಚಿನ ಶಾಲೆಗಳಲ್ಲಿ ಆರಂಭವಾದ ಮೀನಾ ಕಾರ್ಯಕ್ರಮ 2005ರ ವೇಳೆಗೆ  28,771 ಶಾಲೆಗಳಲ್ಲಿ ರಚನೆಗೊಂಡು ಯಶಸ್ಸು ಕಂಡಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಕಡಿಮೆ ಇರುವ ನಮ್ಮ ರಾಜ್ಯದಲ್ಲೂ ಶೈಕ್ಷಣಿಕ ಪ್ರಗತಿಗಾಗಿ 2008 ರಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯ ಸರ್ಕಾರ ಈ ಸಾಲಿನಿಂದ ಎಲ್ಲ ಶಾಲೆಗಳಲ್ಲಿ ಮೀನಾ ತಂಡ ರಚನೆ, ಕಾರ್ಯಕ್ರಮಗಳ ಅನುಷ್ಠಾನಕ್ಕೆ ಈ ತರಬೇತಿ ಆಯೋಜಿಸಲಾಗಿದೆ. ಕೌಶಲಗಳನ್ನು ಗಳಿಸಿ ಬಳಸಿ ಅಭಿವೃದ್ಧಿಗೊಳಿಸುವುದು, ಗೆಳೆಯರೊಂದಿಗೆ ಬಾಲ್ಯ ಸಂತಸದಿಂದ ಕಳೆಯುವುದು, ಗೆಳೆಯ ಗೆಳತಿಯರನ್ನು ಶಾಲೆಗೆ ಕರೆತರುವುದು. ಸವಾಲುಗಳನ್ನು ವೈಯಕ್ತಿಕವಾಗಿ, ಗುಂಪಾಗಿ ಎದುರಿಸುವ ಗುಣ ಬೆಳೆಸಿಕೊಳ್ಳುವುದು, ಸಾಧಕರ ಬಗ್ಗೆ ಅರಿತು ಎಲ್ಲರೊಂದಿಗೆ ವಿಚಾರ ಹಂಚಿಕೊಳ್ಳುವುದು.ನಾನು ಎಲ್ಲರಿಗಾಗಿ ಎಲ್ಲರು ನನಗಾಗಿ' ಎಂಬ ಭಾವನೆ ಬೆಳೆಸಿಕೊಳ್ಳುವುದು, ಹಕ್ಕುಗಳನ್ನು ಅರಿತು ಕೊಳ್ಳುವುದು, ತಿಂಗಳಿಗೊಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವುದು ಮೀನಾ ತಂಡದ ಕಾರ್ಯ ಚಟುವಟಿಕೆಗಳಾಗಿವೆ. ಮೀನಾ ತಂಡದ ಸದಸ್ಯರು ಉತ್ತಮ ಸಂವಹನ, ವಾಕ್ ಚಾತುರ್ಯ, ನಾಯಕತ್ವಗುಣ, ಸಕಾರಾತ್ಮಕ ಮನೋಭಾವ ಪಠ್ಯದ ಜೊತೆಗೆ ಪಠೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿರಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಉಪಸಮನ್ವಯಾಧಿಕಾರಿ ಸಿ.ಎಸ್. ಮುಧೋಳ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.ಜಿಲ್ಲೆಯ 8ತಾಲ್ಲೂಕಿನ ಪ್ರಾಥಮಿಕ ಶಾಲೆ ಮಕ್ಕಳು ತಮ್ಮ ಪ್ರತಿಭೆಯನ್ನಿಲ್ಲಿ ಅನಾವರಣ ಗೊಳಿಸಿದರು. ಪ್ರತಿ ತಾಲೂಕಿನಿಂದ 3ಮೀನಾ ತಂಡಗಳು ಭಾಗವಹಿಸಿದ್ದವು.  24 ತಂಡಗಳ ಒಟ್ಟು 480 ಮಕ್ಕಳು ಈ ಮೇಳದಲ್ಲಿ ಭಾಗವಹಿಸಿದ್ದರು.ಮೇಳದಲ್ಲಿ ವಿವಿಧ ಮೀನಾ ತಂಡಗಳ ಮಕ್ಕಳು ತಯ್ಯಾರಿಸಿದ ಕರಕುಶಲ ವಸ್ತುಗಳು ಮಕ್ಕಳ ಕೈ ಚಳಕದ ಪರಿಣಾಮದಿಂದ ಹೊರಬಿದ್ದ ಸುಂದರ ಆಕರಗಳಾಗಿ ನೋಡಗರನ್ನು ಆಕರ್ಷಿಸುತ್ತಿದ್ದವು. ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಸುಂದರ ಕಲಾಕ್ರತಿಗಳನ್ನು ತಾಯ್ಯಾರಿಸಿದ್ದರು. ಮಕ್ಕಳು ತಮ್ಮ ಕೈಯಿಂದಲೇ ತಯ್ಯಾರಿಸಿದ ಊದಿನ ಕಡ್ಡಿ, ಉಡುಗೆ, ಹುಗುಚ್ಚ ಗೊಂಬೆಗಳು, ಐಸ್‌ಕ್ರೀಂ ಕಡ್ಡಿಗಳಿಂದ ಮಾಡಿದ ಸುಂದರ ಆಕೃತಿಗಳು, ಉಲನಗಳಿಂದ ತಯ್ಯಾರಿಸಿದ ಪರದೆಗಳು, ಕೈ ಚೀಲಗಳು ಹಾಗೂ ಇತರ ಗೃಹ ಅಲಂಕಾರಿಕ ವಸ್ತುಗಳನ್ನು ಪ್ರದರ್ಶಿಸಿ ವಿವರಣೆ ನಿಡುವಾಗ ಸ್ವಯಂ ಉದ್ಯೋಗ ಮಾಡಿಕೊಂಡು ಬಾಳು ನಡೆಸುವ ಅವರ ಸುಂದರ ಭವಿಷ್ಯ ನೋಡುಗರ ಕಣ್ತೆರೆಸಿತು.ಜೇವರ್ಗಿಯ ತಾಲ್ಲೂಕಿನ ಮಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪಿರಾಮಿಡ್, ಆಕೃತಿ, ಬೆಂಕಿಯೊಳಗಿಂದ ಹಾರುವುದು ಸೇರಿದಂತೆ ಮೈ ರೊಮಾಂಚನಗೊಳಿಸುವ ವಿವಿಧ ಕವಾಯತುಗಳನ್ನು ಪ್ರದರ್ಶಿಸಿ ಸಾಹಸ ಮೆರೆದರು.ಕೋಲಿ ನಾಲಿ ಮಾಡಿ ಬದುಕುತ್ತಿರುವ ಮಕ್ಕಳಿಗೆ, ಪಾಲಕರಿಗೆ ಅರಿವು ಮೂಡಿಸಿ ಮಕ್ಕಳನ್ನು ಹೇಗಾದರೂ ಮಾಡಿ ಶಾಲೆಗೆ ಸೇರಿಸಿಕೊಳ್ಳಲು ತವಕಿಸುತ್ತಿರುವ ಶಿಕ್ಷಕನಿಗೆ ಎದುರಾಗುವ ಸಮಸ್ಸೆಗಳು, ಉರಲ್ಲಿ ಗೌಡ ಕುಲ್ಕರ್ಣಿಗಳನ್ನು ಎದುರು ಹಾಕಿಕೊಂಡು ಕೊನೆಗೂ ಮಕ್ಕಳಿಗೆ ಶಾಲೆಗೆ ಸೇರಿಸಿಕೊಳ್ಳುವ ಶಿಕ್ಷಕನ ಛಲದ ಕುರಿತಾದ `ಕೂಲಿಯಿಂದ ಶಾಲೆಗೆ' ನಾಟಕವನ್ನು ಆಳಂದ ತಾಲ್ಲೂಕಿನ  ಮೀನಾ ತಂಡದ ಮಕ್ಕಳು ಪ್ರದರ್ಶಿಸಿದರು.  ಗುಲ್ಬರ್ಗದ ಕೆಜಿಬಿವಿ ಮೀನಾ ತಂಡ ಕರಾಟೆ ಪ್ರದರ್ಶನ ಮಾಡಿತು. ಕೊನೆಗೆ ಜಿಲ್ಲಾ ಮೀನಾ ಮೇಳದ ಕುರಿತು ಮಕ್ಕಳು ಅನುಭವ ಹಂಚಿಕೊಂಡರು.ಸಾರ್ವಜನಿಕ ಶಿಕ್ಷಣ ಇಲಾಖೆ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹಮ್ಮಿಕೊಂಡ ಈ ಯೋಜನೆ ಮುಂದಿನ ದಿನಗಳಲ್ಲಿ ಫಲಕೊಡುವ ಮುನ್ಸೂಚನೆ ಈ ಕಾರ್ಯಕ್ರಮದಲ್ಲಿ ಕಂಡುಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry