ಕ್ಯಾನ್ಸರ್ ಚಿಕಿತ್ಸೆ: ಸೂಕ್ತ ತಂತ್ರಜ್ಞಾನ ಬಳಕೆ ಅಗತ್ಯ

7

ಕ್ಯಾನ್ಸರ್ ಚಿಕಿತ್ಸೆ: ಸೂಕ್ತ ತಂತ್ರಜ್ಞಾನ ಬಳಕೆ ಅಗತ್ಯ

Published:
Updated:

ಗುಲ್ಬರ್ಗ: ವಿಧಾನ ಮತ್ತು ತಂತ್ರಜ್ಞಾನ ಬಳಕೆಯ ಹಿನ್ನಡೆಯಿಂದ ಕ್ಯಾನ್ಸರ್ ಮತ್ತಷ್ಟು ಮಾರಕ ರೋಗವಾಗಿ ಕಾಡುತ್ತಿದೆ ಎಂದು ಹೆಲ್ತ್ ಕ್ಯಾರ್ ಗ್ಲೋಬಲ್ (ಎಚ್‌ಸಿಜಿ) ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎಸ್.ಅಜಯಕುಮಾರ್ ಅಭಿಪ್ರಾಯ ಪಟ್ಟರು.

ಹೈದರಾಬಾದ್ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ನಡೆದ  ಸಮಾರಂಭದಲ್ಲಿ ಅವರು ಮಾತನಾಡಿದರು.ಬಡ ದೇಶಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ `ಕೊಬಾಲ್ಟ್' ತಂತ್ರಜ್ಞಾನದ ಯಂತ್ರವನ್ನು ಹೆಚ್ಚಾಗಿ ಬಳಸುತ್ತಾರೆ. ಅದನ್ನು ಉತ್ಪಾದಿಸುವ ಕೆನಡಾ ದೇಶದ್ಲ್ಲಲೇ ಬಳಕೆ ಇಲ್ಲ. `ಲೀನಿಯರ್ ಆ್ಯಕ್ಸಿಲೇಟರ್', `ಮೊಲಿಕ್ಯೂಲಾರ್ ಇಮೇಜಿಂಗ್' ಮತ್ತಿತರ ಉನ್ನತ ತಂತ್ರಜ್ಞಾನ ಅಳವಡಿಸಿದ್ದಾರೆ. ಅದಕ್ಕಾಗಿ ನಾವು (ಎಚ್‌ಸಿಜಿ) ಉನ್ನತ ತಂತ್ರಜ್ಞಾನ ಅಳವಡಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೋಗ ಪತ್ತೆ ಕಾರ್ಯ, ತಡೆಗಟ್ಟುವುದು ಮತ್ತು ಚಿಕಿತ್ಸೆಯ ಮೂರು ಹಂತಗಳು ಪ್ರಮುಖವಾಗುತ್ತದೆ. ವೈದ್ಯರು ತಂತ್ರಜ್ಞಾನ ಮತ್ತು ಚಿಕಿತ್ಸಾ ವಿಧಾನದಲ್ಲಿ ರಾಜಿ ಮಾಡಿಕೊಳ್ಳದಿದ್ದರೆ ಕ್ಯಾನ್ಸರ್ ನಿರ್ವಹಿಸಬಹುದಾದ ಕಾಯಿಲೆ ಎಂದರು.

ರೋಗಕ್ಕೆ ಬಡವ-ಶ್ರೀಮಂತ ಎಂಬ ಭೇದವಿಲ್ಲ. ಎಲ್ಲರಿಗೂ ಚಿಕಿತ್ಸೆ ಸಾಧ್ಯ. ಆದರೆ ಬಡ ಕ್ಯಾನ್ಸರ್ ರೋಗಿಗಳು ತಡವಾಗಿ ಆಸ್ಪತ್ರೆಗೆ ಬರುತ್ತಾರೆ. ಆಗ ರೋಗ ಉದ್ದೀಪನಗೊಂಡು ಅಪಾಯ ಹೆಚ್ಚಿರುತ್ತದೆ. ಇದರಿಂದ ಚಿಕಿತ್ಸಾ ಯಶಸ್ಸು ಮತ್ತು ರೋಗಿಯ ಜೀವಿತಾವಧಿ ಕಡಿಮೆ ಆಗಿರುತ್ತದೆ ಎಂದರು.ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಸಂಪೂರ್ಣ ಗುಣಮುಖವಾಗದ `ಜೀವನ ಶೈಲಿ'ಯ ರೋಗ ಎಂದ ಅವರು, ಕೊಬ್ಬು, ಅನಿಯಮಿತ ಆಹಾರ ಪದ್ಧತಿ, ವ್ಯಾಯಾಮ ಕೊರತೆ ಮತ್ತಿತರ ಕಾರಣದಿಂದ ಬರುತ್ತದೆ. ಚೀನಾ ಮತ್ತು ಭಾರತ ದೇಶದಲ್ಲಿ ಕ್ಯಾನ್ಸರ್ ಸಮಸ್ಯೆ ವ್ಯಾಪಕವಾಗಿದೆ ಎಂದರು.ನಮ್ಮಲ್ಲಿ ಅರ್ಹ ವೈದ್ಯರು ಇದ್ದಾರೆ. ಈಗ ತಂತ್ರಜ್ಞಾನವೂ ಬೆಳೆದಿದೆ. ಆದರೆ ಆಸ್ಪತ್ರೆ ನಿರ್ಮಿಸುವ ನಿಟ್ಟಿನಲ್ಲಿ ಬಂಡವಾಳ ಹೂಡುವವರು ಬೇಕು. ಈ ನಿಟ್ಟಿನಲ್ಲಿ ವೈದ್ಯರು ಸಮಾಜ ಸೇವೆ ನಿಟ್ಟಿನಲ್ಲಿ ಉದ್ಯಮಶೀಲತಾ ಮನೋಭಾವ ಬೆಳೆಸಿಕೊಳ್ಳುವುದು ಉತ್ತಮ ಎಂದರು.

ಖೂಬಾ ಕಲ್ಯಾಣ ಮಂಟಪದ ಸ್ಥಳದಲ್ಲಿ ಮುಂದಿನ 18 ತಿಂಗಳಲ್ಲಿ ಎಚ್‌ಸಿಜಿಯ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ತಲೆ ಎತ್ತಲಿದೆ. ಬಡವರಿಗೆ ರಿಯಾಯಿತಿಯಲ್ಲಿ ಚಿಕಿತ್ಸೆ ಲಭ್ಯವಿದೆ. ಹೈ-ಕ ಭಾಗದ ಎಲ್ಲ ರೋಗಿಗಳಿಗೆ ಇಲ್ಲಿಯೇ ಚಿಕಿತ್ಸೆ ನೀಡುವಂತೆ ಆಗಬೇಕು ಎಂಬುದು ನಮ್ಮ ಆಶಯ ಎಂದರು.`ಕ್ಯಾನ್ಸರ್ ಕಳ್ಳನ ಹಾಗೆ ನೋವಿಲ್ಲದೇ ಬರುವ ಕಾಯಿಲೆ. ಇದಕ್ಕೆ ತಂಬಾಕು ಸೇವನೆ ಪ್ರಮುಖ ಕಾರಣ. ಬಡವರಿಗೆ ಇದರ ಅರಿವಿಲ್ಲದ ಕಾರಣ ಅಂತ್ಯಾವಸ್ಥೆಯಲ್ಲಿ ಆಸ್ಪತ್ರೆಗೆ ದೌಡಾಯಿಸುತ್ತಾರೆ' ಎಂದ ವೈದ್ಯ ಡಾ.ಪಿ.ಎಸ್.ಶಂಕರ್, ವೈದ್ಯರು ಹಾಗೂ ಆಸ್ಪತ್ರೆಯಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳಿರಬೇಕು ಎಂದರು.`ಬೆಂಗಳೂರಿನ ಕ್ಯಾನ್ಸರ್ ಆಸ್ಪತ್ರೆಗೆ ಬರುವ ಶೇ 25ಕ್ಕೂ ಹೆಚ್ಚು ರೋಗಿಗಳು ಉತ್ತರ ಕರ್ನಾಟಕದವರು. ಅವರಿಗೆ ಚಿಕಿತ್ಸೆ ಜೊತೆ ಬೆಂಗಳೂರಿನಲ್ಲಿ ತಂಗುವುದೂ ದುಬಾರಿ ಆಗಿದೆ. ಈ ನಿಟ್ಟಿನಲ್ಲಿ ಗುಲ್ಬರ್ಗದಲ್ಲಿ ಆಸ್ಪತ್ರೆ ನಿರ್ಮಿಸಬೇಕು ಎಂಬ ಕನಸಿತ್ತು' ಎಂದು ವೈದ್ಯ ಶೇಖರಗೌಡ ಪಾಟೀಲ್ ಹೇಳಿದರು.

ಇಎಸ್‌ಐ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಕಾಲೇಜು, ಕೇಂದ್ರೀಯ ವಿವಿ ವೈದ್ಯಕೀಯ ಕಾಲೇಜು, ಹಲವು ಖಾಸಗಿ ಆಸ್ಪತ್ರೆಗಳು ಬರಲಿರುವ ಕಾರಣ ಗುಲ್ಬರ್ಗವು ಶೀಘ್ರವೆ `ವೈದ್ಯಕೀಯ ತಾಣ' ಆಗಲಿದೆ ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಆಶಿಸಿದರು. ಡಾ.ರಾಜಶೇಖರ್ ಹಲ್ಕೂಡ, ಶಶಿಕಾಂತ ಪಾಟೀಲ್, ಸಂದೀಪ್ ಜಾವಳ್ಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry