`ಕಲ್ಯಾಣ' ಗಳಿಗೆ: ಕುಮಾರ ಮುನ್ನುಡಿ

7

`ಕಲ್ಯಾಣ' ಗಳಿಗೆ: ಕುಮಾರ ಮುನ್ನುಡಿ

Published:
Updated:
`ಕಲ್ಯಾಣ' ಗಳಿಗೆ: ಕುಮಾರ ಮುನ್ನುಡಿ

ಗುಲ್ಬರ್ಗ: ಮಾಜಿ ಶಾಸಕ ಚಂದ್ರಶೇಖರ ಪಾಟೀಲ ರೇವೂರ 56ನೇ ಜನ್ಮದಿನದ ಅಂಗವಾಗಿ ಸೋಮವಾರ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 151 ಜೋಡಿ ನವಜೀವನಕ್ಕೆ ಕಾಲಿರಿಸಿದರೆ, ವೇದಿಕೆಯು `ರಾಜಕೀಯ ಮಹಾಸಂಗಮ' ಏರ್ಪಟ್ಟಿತ್ತು. ಈ ನಡುವೆಯೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ದತ್ತಾತ್ರೇಯ ಪಾಟೀಲ (ಅಪ್ಪುಗೌಡ) ರಾಜ್ಯರಾಜಕಾರಣ ಪ್ರವೇಶಕ್ಕೆ `ಮುನ್ನುಡಿ' ಬರೆದರು. `ಅರುಣಾ ಪಾಟೀಲ ಅವರನ್ನು ಗೆಲ್ಲಿಸಿದ ಋಣಭಾರ ನನ್ನ ಮೇಲಿದೆ. ಮಹಿಳೆ ಹಾಗೂ ವಿರೋಧ ಪಕ್ಷದಲ್ಲಿದ್ದ ಕಾರಣ ಅವರಿಗೆ ನಿರೀಕ್ಷೆ ಮಟ್ಟ ತಲುಪಲು ಸಾಧ್ಯವಾಗಿಲ್ಲ. ಆದರೆ ಅರುಣಾ ಅವರು ವಿಶ್ರಾಂತಿ ಮತ್ತು ನೆಮ್ಮದಿಯ ಜೀವನ ಬಯಸಿದ್ದಾರೆ. ಅಪ್ಪುಗೌಡರು ದುಡುಕಿನಲ್ಲಿ ತಪ್ಪು `ನಿರ್ಧಾರ' ಮಾಡಿದ್ದರೆ, ಮನೆ ಮಗನಂತೆ ಕ್ಷಮಿಸಿದ್ದೇವೆ. ಅಪ್ಪುಗೌಡರನ್ನು ನೀವೆಲ್ಲ ಆಶೀರ್ವದಿಸಿ' ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು. ರೈತರ ಸಂಕಷ್ಟ ಮೆರೆಯಾಗುವ ಕಾಲ ಬಂದಿದೆ. ಅವರ ಸಾಲಮನ್ನಾ ಮಾಡಬೇಕಾಗಿದೆ. ಹೈದರಾಬಾದ್ ಕರ್ನಾಟಕದಲ್ಲಿ ಗರ್ಭಿಣಿಯರ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ಬಡ ಗರ್ಭಿಣಿಯರಿಗೆ (ಮೊದಲ 2 ಮಕ್ಕಳು) ತಿಂಗಳಿಗೆ 5 ಸಾವಿರ ರೂಪಾಯಿ ನೀಡುವ ಚಿಂತನೆಯಿದೆ. ಇದಕ್ಕೆಲ್ಲ ನಿಮ್ಮ ಆಶೀರ್ವಾದ ಬೇಕು' ಎಂದು ಮತ್ತೊಮ್ಮೆ ಮನವಿ ಮಾಡಿದರು. ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ ಪತಿ ಎಚ್‌ಡಿಕೆಯನ್ನು ಶ್ಲಾಘಿಸಿದರು. ಜೆಡಿಎಸ್ ಬೆಂಬಲಿಸಿ ಎಂದರು.ರಾಹುಕಾಲದಲ್ಲಿ ಮಕ್ಕಳು ಹುಟ್ಟಿದರೆ ಕೊಲ್ಲುತ್ತೇವೆಯೇ? ಹಾಗೆಯೇ ಒಳ್ಳೆ ಕೆಲಸ ಮಾಡಲು ನಿಗದಿತ ಸಮಯ ಬೇಕಾಗಿಲ್ಲ. ಎಲ್ಲ ಸಂದರ್ಭವೂ ಸೂಕ್ತ. ಸಾಮೂಹಿಕ ವಿವಾಹ ಉತ್ತಮ ಕಾರ್ಯ. ಚುನಾವಣೆ ಬಂದಾಗ ಮಾತ್ರವಲ್ಲ, ಎಲ್ಲ ಸಂದರ್ಭದಲ್ಲೂ ಮಾಡಿ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ನುಡಿದರು. ಸುಲಫಲ ಮಠದ ಮಹಾಂತ ಶಿವಾಚಾರ್ಯ ಮಾತನಾಡಿ, ವರದಕ್ಷಿಣೆ ಕಿರುಕುಳ ಹಾಗೂ ಸಾಂಪ್ರದಾಯಿಕ ಮದುವೆ ಖರ್ಚಿನಲ್ಲಿ ಬಡ ಕುಟುಂಬಗಳು ಬದುಕು ಕಳೆದುಕೊಳ್ಳುತ್ತಿವೆ. ಇದಕ್ಕೆ ಸಾಮೂಹಿಕ ವಿವಾಹ ಉತ್ತಮ ಪರಿಹಾರ. ನೂತನ ದಂಪತಿ `ಕುಟುಂಬಕ್ಕೊಂದೇ ಮಗು' ಎಂಬ ನಿಯಮ ಪಾಲಿಸಬೇಕು ಎಂದರು.ಎರಡು ಬಾರಿ: ಕಾರ್ಯಕ್ರಮವು ಎರಡು ಬಾರಿ ಉದ್ಘಾಟನೆಗೊಂಡಿತು. ಬಹುತೇಕ ಕಾಂಗ್ರೆಸ್ ನಾಯಕರೇ ವೇದಿಕೆಯಲ್ಲಿದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಿದರೆ, ಬಳಿಕ ಎಚ್‌ಡಿಕೆ ದೀಪ ಬೆಳಗಿಸಿದರು. ಒಟ್ಟಾರೆ ವೇದಿಕೆ  `ರಾಜಕೀಯ ಮಹಾಸಂಗಮ' ಆಗಿತ್ತು.ಶಾಸಕಿ ಅರುಣಾ ಸಿ. ಪಾಟೀಲ್ ಮಾತನಾಡಿ, ಪತಿ ಚಂದ್ರಶೇಖರ ಪಾಟೀಲರು ಹಾಗೂ ಜನತೆಯ ಪ್ರೀತಿಯನ್ನು ನೆನಪಿಸಿ ಗದ್ಗದಿತರಾದರು. ದತ್ತಾತ್ರೇಯ ಪಾಟೀಲ ಸ್ವಾಗತಿಸಿದರು. ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ, ಮುರುಘರಾಜೇಂದ್ರ ಮಹಾಸ್ವಾಮಿ, ಹಾರಕೂಡ ಚನ್ನವೀರ ಶಿವಾಚಾರ್ಯ, ಚನ್ನಮಲ್ಲ ಶಿವಾಚಾರ್ಯ, ರೇವಣ ಸಿದ್ಧ ಶಿವಾಚಾರ್ಯ ಹಾಗೂ ಹಲವು ಮಠಗಳ ಶ್ರೀಗಳು ಸಾನಿಧ್ಯ ವಹಿಸಿದ್ದರು.ರಾಜಕೀಯ ಮುಖಂಡರಾದ ಧರ್ಮಸಿಂಗ್, ವೀರಣ್ಣಮತ್ತಿಕಟ್ಟಿ, ಖಮರುಲ್ ಇಸ್ಲಾಂ, ರೇವುನಾಯಕ ಬೆಳಮಗಿ, ಶರಣಬಸಪ್ಪ ದರ್ಶನಾಪುರ, ಶರಣಪ್ರಕಾಶ ಪಾಟೀಲ ಸೇಡಂ, ಇಕ್ಬಾಲ್ ಅಹ್ಮದ್ ಸರಡಗಿ, ಬಸವರಾಜ ಪಾಟೀಲ ಸೇಡಂ, ಸುಭಾಷ್ ಆರ್. ಗುತ್ತೇದಾರ್, ಮಾಲೀಕಯ್ಯ ವಿ. ಗುತ್ತೇದಾರ್, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಸನಗೌಡ ಪಾಟೀಲ ಯತ್ನಾಳ, ಎಂ.ವೈ. ಪಾಟೀಲ್, ಸಾತಲಿಂಗಪ್ಪ ಮೇತ್ರೆ, ಸೋಮಶೇಖರ ಮೇಲಿನಮನಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry