`ಸ್ತ್ರೀ ಶಕ್ತಿಯಿಂದ ಮನೆ ಉದ್ಧಾರ'

7

`ಸ್ತ್ರೀ ಶಕ್ತಿಯಿಂದ ಮನೆ ಉದ್ಧಾರ'

Published:
Updated:
`ಸ್ತ್ರೀ ಶಕ್ತಿಯಿಂದ ಮನೆ ಉದ್ಧಾರ'

ಗುಲ್ಬರ್ಗ: ಒಂದು ಮನೆ ಆದಾಯದಿಂದ ಮಾತ್ರ ನಡೆಯುವುದಿಲ್ಲ, ಮನೆಯ ಮಕ್ಕಳಿಗೆ ಉತ್ತಮ ನಡವಳಿಕೆ ಕಲಿಸಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡುವುದು ಈ ಸ್ತ್ರೀ ಶಕ್ತಿಯೇ, ಇವರಿಂದ ಮನೆಯ ಉದ್ಧಾರವಾಗುವುದು ಎಂದು ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ನಗರದ ಎನ್.ವಿ. ಸಂಸ್ಥೆಯ ಸಂಗಮೇಶ್ವರ ಸಭಾಗೃಹದಲ್ಲಿ ಮಹಿಳಾ ಒಕ್ಕೂಟ ಮತ್ತು ಸ್ತ್ರೀ ಸ್ವ ಸಹಾಯ ಸಂಘಗಳು ಭಾನುವಾರ ಹಮ್ಮಿಕೊಂಡಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371 (ಜೆ)ನೇ ಕಲಂ ತಿದ್ದುಪಡಿಗಾಗಿ ಹೋರಾಡಿದ ಗಣ್ಯರಿಗೆ ಅಭಿನಂದನೆ ಮತ್ತು ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಒಂದು ಸಂವಿಧಾನ ತಿದ್ದುಪಡಿಯಾಗಬೇಕಾದರೆ ಸುಲಭದ ಕೆಲಸ ಅಲ್ಲ, ತಿದ್ದುಪಡಿಗೆ ಸಂಸತ್ತಿನ 2/3ನೇ ಭಾಗ ಒಪ್ಪಿಗೆ ಸೂಚಿಸಬೇಕಾಗುತ್ತದೆ. ಸಂವಿಧಾನದ 371(ಜೆ)ನೇ ಕಲಂ ತಿದ್ದುಪಡಿಗಾಗಿ ಶ್ರಮವಹಿಸಿ ಸಂಸತ್ತಿನಲ್ಲಿ ಎಲ್ಲರ ಮನವೊಲಿಸಿ ಈ ಕಾರ್ಯ ಮಾಡಲಾಗಿದೆ. ಸಂಸತ್ತಿನಲ್ಲಿ ಯಾರೂ ವಿರೋಧ ಮಾಡದೆ, ಮೂರೇ ದಿನದಲ್ಲಿ ಬಿಲ್ ಪಾಸಾಗಿ ಬಂದಿದೆ. ಇದೊಂದು ಐತಿಹಾಸಿಕ ತಿದ್ದುಪಡಿ ಎಂದರು.ಹಿಂದುಳಿದ ಈ ಭಾಗದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರ ಹೋರಾಟದ ಫಲವಾಗಿ ತಿದ್ದುಪಡಿಯಾದ 371ಕಲಂಗೆ ಒಂದು ಅಂತಿಮ ರೂಪ ದೊರೆತಿದೆ. ತಿದ್ದುಪಡಿಯಾಗಿರುವುದು ಈ ಭಾಗದ ಜನರ ಆಸ್ತಿಯಾಗಿದೆ. ಅಭಿವೃದ್ಧಿಗೋಸ್ಕರ ಏನು ಮಾಡಬೇಕು ಎಂಬುದರ ಕುರಿತು ಚಿಂತನೆ ನಡೆಸುವುದು ಮುಂದಿನ ಕೆಲಸವಾಗಿದೆ. ತಿದ್ದುಪಡಿಯಾಗಿದೆ ಎಂದು ಸುಮ್ಮನೆ ಕೂಡಬಾರದು, ಪ್ರತಿಯೊಬ್ಬರೂ ಇದರ ಲಾಭ ಪಡೆಯಬೇಕು, ಹೋರಾಟ ಇನ್ನೂ ಮುಗಿದಿಲ್ಲ ಎಂದು ತಿಳಿಸಿದರು.ಮಹಿಳೆಯರು ಪುರುಷರಿಗೆ ಸರಿಸಮಾನರಾಗಿದ್ದಾರೆ. ತಿದ್ದುಪಡಿಯಿಂದ ಮಹಿಳೆಯರಿಗೂ ವಿಶೇಷ ಸ್ಥಾನಮಾನ, ಮೀಸಲಾತಿ ದೊರೆಯಲಿದೆ. ಸ್ತ್ರೀಯರು ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಮುಂದೆ ಬಂದು ಆರ್ಥಿಕವಾಗಿ ಸಬಲರಾಗಲು ಕರೆ ನೀಡಿದರು. ಸಂಸದರ ಅನುದಾನದಿಂದ 5-10ಲಕ್ಷ ರೂಪಾಯಿ ಸ್ತ್ರೀ ಸ್ವಸಹಾಯ ಸಂಘಕ್ಕೆ ಕೊಡುವುದಾಗಿ ಘೋಷಣೆ ಮಾಡಿದರು.ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎನ್. ಧರ್ಮಸಿಂಗ್ ಹಾಗೂ ಮಾಜಿ ಸಚಿವ ವೈಜನಾಥ ಪಾಟೀಲರನ್ನು ಸನ್ಮಾನಿಸಲಾಯಿತು.ಗುಲ್ಬರ್ಗ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಎಸ್.ಖೂಬಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಂಗಮೇಶ್ವರ ಮಹಿಳಾ ಮಂಡಳದ ಅಧ್ಯಕ್ಷೆ ಇಂದಿರಾ ಮಾನ್ವಿಕರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ ಮತ್ತಿತರರು ಇದ್ದರು.ಗಣ್ಯರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಿಸಲಾಯಿತು. ಭಾರತಿ ಸಾಲಿಮಠ ನಿರೂಪಿಸಿದರು.ಸರ್ವಮಂಗಳ ಹಿರೇಮಠ ಸ್ವಾಗತಿಸಿದರು. ಆರತಿ ತಿವಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry