ಮಂಗಳವಾರ, ನವೆಂಬರ್ 19, 2019
29 °C

ಸ್ಪರ್ಧೆ ಖಚಿತ: ನಮೋಶಿ ಘೋಷಣೆ

Published:
Updated:

ಗುಲ್ಬರ್ಗ: “ಬಿಜೆಪಿಯಿಂದ ಸ್ಪರ್ಧಿಸಲು ಪಕ್ಷ ಅವಕಾಶ ಕೊಡದೇ ಹೋದರೂ ಕಣಕ್ಕಿಳಿಯಲು ನಾನು ಸಿದ್ಧ” ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಪ್ರಕಟಿಸಿದ್ದಾರೆ.ವಿಧಾನಸಭೆ ಚುನಾವಣೆಯಲ್ಲಿ ಗುಲ್ಬರ್ಗ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ಹೊಂದಿರುವ ನಮೋಶಿ, ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಮ್ಮ ವಿರುದ್ಧ ಪಕ್ಷದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಜೆಡಿಎಸ್‌ನ ದತ್ತಾತ್ರೇಯ ಪಾಟೀಲ ರೇವೂರ ಬಿಜೆಪಿ ಸೇರ್ಪಡೆಯಾಗುವುದು ಹಾಗೂ ಅವರಿಗೆ ಪಕ್ಷದ ಟಿಕೆಟ್ ನೀಡುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಮೋಶಿ, ಒಂದು ವೇಳೆ ತಮಗೆ ಬಿಜೆಪಿ ಟಿಕೆಟ್ ನೀಡದೇ ಹೋದರೂ ಕಣಕ್ಕೆ ಇಳಿಯುವುದು ನಿಶ್ಚಿತ ಎಂದು ಘೋಷಿಸಿದರು.ಬಿಜೆಪಿಯ ಕೆಲವು ಹಿರಿಯ ನಾಯಕರು ದತ್ತಾತ್ರೇಯ ಪಾಟೀಲ ಅವರನ್ನು ಪಕ್ಷಕ್ಕೆ ಕರೆತರುವ ಯತ್ನ ನಡೆಸಿದ್ದಾರೆ. ಈ ಹಿಂದಿನ ಉಪ ಚುನಾವಣೆ ಸಂದರ್ಭದಲ್ಲಿ ದಿವಂಗತ ಶಾಸಕ ಚಂದ್ರಶೇಖರ ಪಾಟೀಲ ರೇವೂರ ಪತ್ನಿ ಅರುಣಾ ರೇವೂರ ಅವರಿಗೆ ಬಿಜೆಪಿ ಟಿಕೆಟ್ ನೀಡದೇ ಹೋದಾಗ, ಅವರ ಬೆಂಬಲಿಗರು ಪಕ್ಷದ ಧ್ವಜ ಸುಟ್ಟಿದ್ದಲ್ಲದೇ ರಾಷ್ಟ್ರೀಯ ನಾಯಕರ ಚಿತ್ರಗಳಿಗೆ ಚಪ್ಪಲಿಯಿಂದ ಹೊಡೆದಿದ್ದರು. ಅಂಥವರನ್ನು ಈಗ ಮತ್ತೆ ಪಕ್ಷಕ್ಕೆ ಕರೆ ತರುತ್ತಿರುವುದು ಏಕೆ? ಎಂದು ನಮೋಶಿ ಕ್ರೋಧದಿಂದ ಪ್ರಶ್ನಿಸಿದರು.22 ವರ್ಷಗಳಿಂದ ತಾವು ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾಗಿ ತಿಳಿಸಿದ ನಮೋಶಿ, ಎರಡೂವರೆ ವರ್ಷಗಳ ಹಿಂದೆ ನಡೆದ ಉಪ ಚುನಾವಣೆ ಬಳಿಕ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಲು ಸತತ ಶ್ರಮಿಸಿದ್ದಾಗಿ ಹೇಳಿದರು. “ಈ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿ, ಹಲವು ಕಾಮಗಾರಿ ಅನುಷ್ಠಾನವಾಗಲು ಶ್ರಮಿಸಿದೆ. ವಿಧಾನಸಭೆ ಚುನಾವಣೆ ಪ್ರಕ್ರಿಯೆ ಶುರುವಾದ ಬಳಿಕ ಈ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಬಂದಾಗ ಪಕ್ಷದ ಮುಖಂಡರು ನನ್ನ ಹೆಸರನ್ನೇ ಹೇಳಿದರು. ಅಷ್ಟಕ್ಕೂ ಇನ್ನೊಬ್ಬ ಯಾವ ಆಕಾಂಕ್ಷಿಯೂ ಅರ್ಜಿ ಹಾಕಿರಲೇ ಇಲ್ಲ” ಎಂದು ಸ್ಪಷ್ಟಪಡಿಸಿದರು.ಕಳವಳ: ಒಂದು ವಾರದಿಂದ ನಡೆಯುತ್ತಿರುವ ಬೆಳವಣಿಗೆಗಳು ತಮ್ಮಲ್ಲಿ ಕಳವಳ ಮೂಡಿಸಿದೆ. ಪಕ್ಷಕ್ಕಾಗಿ ಇಷ್ಟು ದುಡಿದರೂ ತಮ್ಮನ್ನು ಪಕ್ಕಕ್ಕೆ ತಳ್ಳಲಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದ ನಮೋಶಿ, “ಇದು ನನಗೆ ಬೆನ್ನಿಗೆ ಚೂರಿ ಹಾಕಿದಂತಲ್ಲ; ನೇರವಾಗಿ ಹೃದಯಕ್ಕೇ ಚೂರಿ ಹಾಕಿದಂತಾಗಿದೆ” ಎಂದು ಅಳಲು ತೋಡಿಕೊಂಡರು.“ಹಿರಿಯ ನಾಯಕರಾದ ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ, ಆರ್.ಅಶೋಕ ಅವರು ಈ ಪ್ರಯತ್ನದ ಹಿಂದೆ ಇದ್ದಾರೆ. ಆದರೆ ಪಕ್ಷದ ಜಿಲ್ಲಾ ಘಟಕದ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದತ್ತಾತ್ರೇಯ ಪಾಟೀಲರ ಸೇರ್ಪಡೆ ವಿರೋಧಿಸಿದ್ದಾರೆ. ಈ ಕುರಿತು ಪಕ್ಷದ ಮುಖಂಡರಿಗೆ ಸ್ಪಷ್ಟಪಡಿಸಿದ್ದಾರೆ” ಎಂದರು.`ದತ್ತಾತ್ರೇಯ ಪಾಟೀಲರಿಗೆ ಬಿಜೆಪಿ ಟಿಕೆಟ್ ನೀಡಿದರೆ ನಿಮ್ಮ ನಿರ್ಧಾರ ಏನು?' ಎಂದು ಸುದ್ದಿಗಾರರು ಪ್ರಶ್ನಿಸಿದಾಗ, “ನನ್ನ ಸ್ಪರ್ಧೆ ಖಚಿತ. ಬಿಜೆಪಿ ಟಿಕೆಟ್ ಕೊಡದಿದ್ದರೂ ನಾನು ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ” ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)