ಶುಕ್ರವಾರ, ಮೇ 14, 2021
31 °C

ಗುಟ್ಕಾ ತೊರೆಯುವ ಸಮಯದ ಸುಖ ದುಃಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಟೀಚರ್, ಬಾಬಾ, ಮಾಲಿನಿ, ಗೀತಾಂಜಲಿ, ನಶಾ, 24 ಕ್ಯಾರೆಟ್, ಕಿಂಗ್, ಆರ್‌ಆರ್, 555, ಗೋವಾ ಮತ್ತಿತರ ತರಹೇವಾರಿ ಹೆಸರಿನ ಗುಟ್ಕಾ ಬ್ರಾಂಡ್‌ಗಳು ನಗರದಲ್ಲಿ ಭರ್ಜರಿ ವ್ಯಾಪಾರ ಕಾಣುತ್ತಿದ್ದವು. ರಾಜ್ಯ ಸರ್ಕಾರ ಗುಟ್ಕಾ, ಪಾನ್ ಮಸಾಲ ಮತ್ತಿತರ ತಂಬಾಕು ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟ ನಿಷೇಧ ಮಾಡಿದ ಪರಿಣಾಮ ಇವೆಲ್ಲ ಇನ್ನು ಮಾರುಕಟ್ಟೆಯಿಂದ ಮಾಯವಾಗಲಿವೆ.ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಿಂದ ಹಿಡಿದು ಬಸ್ ತಂಗುದಾಣದ ತನಕ ಉಗುಳಿ ಕೆಂಪಾದ ಗೋಡೆಗಳು, ರಾಶಿ ಬಿದ್ದ ಪ್ಲ್ಯಾಸ್ಟಿಕ್ ಸ್ಯಾಚೆಟ್‌ಗಳು ಕಡಿಮೆಯಾಗಲಿವೆ! ಹೋಟೆಲ್, ಬಾರ್, ವೈನ್‌ಶಾಪ್, ಖಾನಾವಳಿ, ಭೋಜನಾಲಯಗಳ ಮುಂದೆ ನಡೆಯುತ್ತಿದ್ದ `ಗುಟ್ಕಾ' ವ್ಯಾಪಾರ ನಿಂತು ಹೋಗಲಿದೆ. 6ರ ಮಕ್ಕಳಿಂದ ಹಿಡಿದು 60ರ ಮುದುಕರ ತನಕ ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಹಲವರ ಚಟಕ್ಕೆ ಕಾರಣವಾದ ಗುಟ್ಕಾ ನಿಷೇಧದ ಹಿನ್ನೆಲೆಯಲ್ಲಿ ಜನತೆಯಿಂದ ಸ್ವಾಗತ ವ್ಯಕ್ತವಾಗಿದೆ.ನಿಷೇಧದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ನಗರದಲ್ಲಿ ಗುಟ್ಕಾಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಈ ಪೈಕಿ ಜನಪ್ರಿಯ ಬ್ರಾಂಡ್ `ಮಾಣಿಕ್ ಚಂದ್' ಯಾನೆ `ಆರ್‌ಎಂಡಿ'ಯ ಮುದ್ರಿತ ಬೆಲೆ 10 ರೂಪಾಯಿ. ಶುಕ್ರವಾರ ಬೆಳಿಗ್ಗೆ  ಅದು 20 ರೂಪಾಯಿಗೆ ಏರಿತು. ಸಂಜೆಯಾಗುತ್ತಲೇ 35 ರೂಪಾಯಿ ಗಡಿ ದಾಟಿತ್ತು. ಬೇಡಿಕೆ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಕೊರತೆ ಸೃಷ್ಟಿಯಾಗಿತ್ತು. ಇದು ಗುಲ್ಬರ್ಗದ ಗುಟ್ಕಾ ಖಯಾಲಿಗೊಂದು ನಿದರ್ಶನ.ಬೆಳೆದ ಉದ್ಯಮ: ಜನತಾ, ಸ್ವಾಮಿ, ರಸಾಳ್ಕರ್, ಬಾಬು ಭಾಯಿ, ಗುಡನ್‌ಭಾಯಿ ಇತ್ಯಾದಿ ನಗರದ ಹಳೇ ಮತ್ತು ಪ್ರಮುಖ ಪಾನ್‌ಶಾಪ್‌ಗಳು. ಕೆಲವು ದಶಕಗಳ ಹಿಂದೆ ಇನ್ನೂರರ ಆಸುಪಾಸಿದ್ದ ಪಾನ್ ಶಾಪ್‌ಗಳ ಸಂಖ್ಯೆ ಈಗ ಎರಡು ಸಾವಿರದ ಗಡಿ ದಾಟಿವೆ. ಸುಮಾರು ಸಾವಿರ ಮಂದಿಯ ವೃತ್ತಿಯಾಗಿದ್ದ `ಪಾನ್' ವ್ಯಾಪಾರವು ಈಗ ಸಾವಿರಾರು ಮಂದಿಯನ್ನು ಒಳಗೊಂಡಿದೆ. ಪಾನ್‌ಶಾಪ್‌ಗಳ ಮಾಲೀಕರುಗಳ ಪ್ರಕಾರ 10 ಸಾವಿರಕ್ಕೂ ಅಧಿಕ ಜನ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಈ ವ್ಯಾಪಾರದಲ್ಲಿ ಇದ್ದಾರೆ. ಇಷ್ಟು ವ್ಯಾಪಕ ಬೆಳವಣಿಗೆಗೆ ಕಾರಣ ಸುಮಾರು ಎರಡು ದಶಕದ ಹಿಂದೆ ಮಾರುಕಟ್ಟೆಗೆ ಬಂದ `ಗುಟ್ಕಾ'. ಅದೀಗ ನಿಷೇಧಕ್ಕೆ ಗುರಿಯಾಗಿದೆ.  ಗುಲ್ಬರ್ಗದ ಜನಸಂಖ್ಯೆ 25,64, 892 (2011 ಜನಗಣತಿ). ಜನಸಂಖ್ಯೆಯ ಶೇ 60ಕ್ಕೂ ಹೆಚ್ಚು ಮಂದಿ ತಂಬಾಕು ಸೇವನೆ ಮಾಡುತ್ತಾರೆ. ಈ ಪೈಕಿ ಶೇ 40ರಷ್ಟು ಮಂದಿ ಗುಟ್ಕಾ ಸೇವನೆ ಮಾಡುತ್ತಾರೆ ಎಂದು ಗುಟ್ಕಾ ವ್ಯಾಪಾರದ ಗಣೇಶ್, ದತ್ತು, ರಫೀಕ್ ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಜೀವನ: `30ವರ್ಷಕ್ಕೂ ಹಿಂದಿನಿಂದ ಗುಲ್ಬರ್ಗದಲ್ಲಿ ಪಾನ್ ವ್ಯಾಪಾರ ಮಾಡುತ್ತಿದ್ದೇನೆ. ನಮ್ಮಲ್ಲಿ ಎಲೆ, ಅಡಿಕೆ ಮತ್ತು ಬೇಕಾದವರಿಗೆ ತಂಬಾಕು ಬಳಸಿ ಪಾನ್ ಮಾಡುತ್ತಿದ್ದೆವು. 20 ವರ್ಷದ ಹಿಂದೆ ಪಾನ್ ಮಸಾಲಾ ಬಂತು. ಆ ಬಳಿಕ ಪಾನ್ ಪರಾಗ್ ಬಂತು. ನಂತರ ಒಂದೊಂದಾಗಿ ಗುಟ್ಕಾಗಳು ಬಂದವು. ಇಂದು ಅಂಗಡಿಯ ಶೇ 50 ವ್ಯಾಪಾರವನ್ನು ಗುಟ್ಕಾ ಆವರಿಸಿದೆ. 35ಕ್ಕೂ ಹೆಚ್ಚು ಜನಪ್ರಿಯ ಬ್ರಾಂಡ್‌ಗಳಿವೆ. ಪಾನ್ ಅಂಗಡಿ ಮಾತ್ರವಲ್ಲ, ಹಲವರು ಸೈಕಲ್, ಸಣ್ಣ ಕುರ್ಚಿ, ಡಬ್ಬಾ, ರಸ್ತೆ ಬದಿ, ಮರದಡಿಯಲ್ಲಿ ನಿಂತು ಗುಟ್ಕಾ ಮಾರಿ ಜೀವನ ನಡೆಸುತ್ತಿದ್ದಾರೆ. ಜಗಿಯುವವರ ಸಂಖ್ಯೆಯೂ ಅಷ್ಟೇ ತೀವ್ರಗತಿಯಲ್ಲಿ ಏರುತ್ತಿದೆ' ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಜನತಾ ಪಾನ್ ಶಾಪ್ ಮಾಲೀಕ ನಾಗನಾಥ ಸೂರ್ಯವಂಶಿ ಹೇಳುತ್ತಾರೆ.`ಷೋಕಿಗೆ, ಕಾಲ ಹರಣಕ್ಕೆ(ಟೈಂ ಪಾಸ್‌ಗೆ) ಜಗಿಯುವ ಅಭ್ಯಾಸ  ಶುರುಮಾಡಿದವರು ಚಟಕ್ಕೆ ಬಿದ್ದಿದ್ದಾರೆ. ದಿನಕ್ಕೆ 1 ರಿಂದ 25ರ ತನಕ ಗುಟ್ಕಾ ತಿನ್ನುವವರೂ ಇದ್ದಾರೆ. ಗುಟ್ಕಾ ಬಂದ ಬಳಿಕ ಸಿಗರೇಟು ಚಟ ಸ್ವಲ್ಪ ಕಡಿಮೆ ಆಗಿದೆ. ಗುಟ್ಕಾದಲ್ಲಿ ಕೆಮಿಕಲ್ ಇದೆ. ಎರಡೂ ಅಪಾಯವೇ' ಎಂದರು.ಎಲ್ಲ ರದ್ದು ಮಾಡಿ: `ಗುಟ್ಕಾ ಮಾತ್ರವಲ್ಲ, ಎಲ್ಲ ತಂಬಾಕು ಸೇವನೆಯನ್ನು ರದ್ದು ಮಾಡಬೇಕು. ಆರೋಗ್ಯದ ದೃಷ್ಟಿಯಿಂದ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಬಡವರ ಗುಟ್ಕಾಕ್ಕೆ ನಿಷೇಧ, ಶ್ರೀಮಂತರ ಸಿಗರೇಟು ಪ್ರಚಾರಕ್ಕೆ ವಿರೋಧವಿಲ್ಲ, ಕುಡುಕರಿಗೆ ಅಗ್ಗದ ಮದ್ಯ ನೀಡಲು ಚಿಂತನೆ ನಡೆಸುವ ದ್ವಂದ್ವ ನಿಲುವುಗಳನ್ನು ಸರ್ಕಾರ ತೆಗೆದುಕೊಳ್ಳಬಾರದು.ಸರ್ಕಾರ ನಿಷೇಧ ಹೇರಿದರೆ ಉತ್ತಮ. ತನ್ನಿಂದ ತಾನೇ ನನ್ನ ಅಭ್ಯಾಸವೂ ಬಿಟ್ಟು ಹೋಗುತ್ತದೆ' ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸುಶಿಕ್ಷಿತರೊಬ್ಬರು ಗುಟ್ಕಾ ಜಗಿಯುತ್ತಲೇ ಪ್ರತಿಕ್ರಿಯಿಸಿದರು. ಒಟ್ಟಾರೆ ರಾಜ್ಯ ಸರ್ಕಾರದ `ಗುಟ್ಕಾ ನಿಷೇಧ' ನಿರ್ಧಾರವನ್ನು ನಗರದ ಬಹುತೇಕ ಜನತೆ ತುಂಬು ಮನಸ್ಸಿನಿಂದ ಸ್ವಾಗತಿಸಿದರು.`ಉತ್ತಮ ನಿರ್ಧಾರ'

`ಗುಟ್ಕಾ ಚಟದಿಂದ ಹಲ್ಲು, ಬಾಯಿ ಕ್ಯಾನ್ಸರ್ ಹಾಗೂ ಬಾಯಿ ತೆರೆಯಲಾರದ ಸಮಸ್ಯೆಗೆ ಹಲವರು ತುತ್ತಾಗಿದ್ದರು. ನಾನು ಗಮನಿಸಿದಂತೆ ಶೇ 5ರಷ್ಟು ಮಂದಿ ಗುಟ್ಕಾದ ದುಷ್ಟರಿಣಾಮಕ್ಕೆ ತುತ್ತಾಗಿದ್ದಾರೆ. ಮಹಾರಾಷ್ಟ್ರದ ಪ್ರಭಾವದಿಂದ ಗುಲ್ಬರ್ಗದಲ್ಲಿ ಗುಟ್ಕಾ ಸೇವನೆ ಹೆಚ್ಚಿರಬೇಕು. ಗುಟ್ಕಾ ಇಲ್ಲದೆ ತುಂಬಾ ಬೇಸರವಾಗುತ್ತದೆ ಎನ್ನುವುದು ಭ್ರಮೆ ಮಾತ್ರ. ಗುಟ್ಕಾ ಬಿಟ್ಟು ಮನಸ್ಸನ್ನು ಇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಆರೋಗ್ಯಕ್ಕೆ ಲಾಭವೇ ಹೊರತು ನಷ್ಟವಿಲ್ಲ. ಗುಟ್ಕಾ ನಿಷೇಧ ಸರ್ಕಾರದ ಉತ್ತಮ ನಿರ್ಧಾರ'.

- ಡಾ.ಶಿವರಾಜ್ ಸಜ್ಜನಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ`ಹಣ ಉಳಿಯಿತು'

`ಗುಟ್ಕಾ ಉಗುಳಿನ ಪರಿಣಾಮ ನಗರದ ಸರ್ಕಾರಿ, ಸಾರ್ವಜನಿಕ ಕಟ್ಟಡಗಳೆಲ್ಲ ಅಂದ ಕಳೆದುಕೊಂಡಿತ್ತು. ಹೈದರಾಬಾದ್ ಕರ್ನಾಟಕ ಹೊಲಸಾಗಿತ್ತು. ಇನ್ನು ಸುಣ್ಣಬಣ್ಣದ ಖರ್ಚು ಉಳಿಯಬಹುದು. ಭಾರಿ ನಷ್ಟವಿಲ್ಲ. ಒಟ್ಟಾರೆ ಶೇ 8ರಷ್ಟು ವ್ಯಾಪಾರ ನಷ್ಟ ಆಗಿರಬಹುದು. ತಕ್ಷಣಕ್ಕೆ ಕೆಲವು ವ್ಯಾಪಾರಸ್ಥರಿಗೆ ತೊಂದರೆ ಆಗಬಹುದು. ಆದರೆ ನಿಧಾನವಾಗಿ ಸಮಸ್ಯೆ ಬಗೆಹರಿಯುತ್ತದೆ. ಒಟ್ಟಾರೆ ಹೈದರಾಬಾದ್ ಕರ್ನಾಟಕದ ಜನರ ಆರೋಗ್ಯ ಉತ್ತಮಗೊಳ್ಳಲಿದೆ'.

-ಉಮಾಕಾಂತ ನಿಗ್ಗುಡಗಿ, ಅಧ್ಯಕ್ಷರು, ಎಚ್‌ಕೆಸಿಸಿಐ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.