ಮಂಗಳವಾರ, ಮೇ 11, 2021
20 °C
ಜಿಲ್ಲಾ 13 ನೆಯ ಕನ್ನಡ ಸಾಹಿತ್ಯ ಸಮ್ಮೇಳನ

15ರಂದು ಉಮಾಶ್ರೀ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜೂ.15 ಹಾಗೂ 16 ರಂದು ನಡೆಯುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಚಟುವಟಿಕೆಗಳೆಲ್ಲವೂ ದೇಶಿ ಸೊಗಡಿನಿಂದ ಕಂಗೊಳಿಸಬೇಕೆಂಬ ಆಶಯದಿಂದ ಜಿಲ್ಲೆಯ ಎಲ್ಲ ಕನ್ನಡಿಗರಿಗೆ `ನಿಮಗಿದೋ ಸಮ್ಮೇಳನ ಕರೆಯೋಲೆ' ಬಿಡುಗಡೆಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ವಿವರಿಸಿದರು.ಎರಡು ದಿನದ ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಲು ವಿಶಿಷ್ಟ ಶೀರ್ಷಿಕೆಯಡಿ ಆರು ಗೋಷ್ಠಿಗಳು ಹಾಗೂ ಎರಡು ಕವಿಗೋಷ್ಠಿಗಳನ್ನು ಸಂಯೋಜನೆ ಮಾಡಲಾಗಿದೆ. 13ನೇ ಸಮ್ಮೇಳನದಲ್ಲಿ 13 ಕೃತಿಗಳ ಲೋಕಾರ್ಪಣೆಯಾಗಲಿವೆ ಎಂದು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಜಿಲ್ಲಾ ಸಮ್ಮೇಳನಕ್ಕೆ ಒಂದು ಸಾವಿರ ಕನ್ನಡಿಗರು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲಾ ಕಸಾಪದ 5 ಸಾವಿರ ಸದಸ್ಯರೆಲ್ಲರಿಗೂ ಈ ಬಾರಿ ಅಂಚೆ ಮೂಲಕ ಆಮಂತ್ರಣ ಪತ್ರಿಕೆ ತಲುಪಿಸಿ ಸಮ್ಮೇಳನಕ್ಕೆ ಆಹ್ವಾನಿಸುತ್ತಿದ್ದೇವೆ. ಸಮ್ಮೇಳನಕ್ಕೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಬೇಕು ಎನ್ನುವ ಅಪೇಕ್ಷೆ ಇದೆ. ಸಮ್ಮೇಳನಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ ಎಂದರು.ಜಿಲ್ಲೆಯ ಎಲ್ಲ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಭಾನುವಾರ ಬೆಳಿಗ್ಗೆ ಸಭೆ ನಡೆಸಲಾಯಿತು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯ ನೆರವು ನೀಡಿ, ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಸಮ್ಮೇಳನದ ಯಶಸ್ವಿಗೆ ಎಲ್ಲ ಹಿರಿಯರ ಮಾರ್ಗದರ್ಶನ ಪಡೆಯಲಾಗುತ್ತಿದೆ ಎಂದು ಹೇಳಿದರು.ಬನ್ನಿ.. ಎಳೆಯೋಣ ಕನ್ನಡದ ತೇರು:

ಜೂ. 15ರ ಬೆಳಿಗ್ಗೆ 8.30ಕ್ಕೆ ಜಗತ್ ವೃತ್ತದಲ್ಲಿ ಬಸವೇಶ್ವರ ಹಾಗೂ ಡಾ. ಅಂಬೇಡ್ಕರ್ ಅವರ ಪ್ರತಿಮೆಗೆ ಹೂಮಾಲೆ ಅರ್ಪಿಸಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭ.ಮಹಾನಗರ ಪಾಲಿಕೆ ಆಯುಕ್ತ ಪಿ.ಎನ್. ರವೀಂದ್ರ ಮೆರವಣಿಗೆ ಉದ್ಘಾಟಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಸತೀಶಕುಮಾರ, ಡಿಡಿಪಿಐ ಟಿ. ಜಯರಾಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಬಿ. ನಾಗರಾಜ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಗತ್ ವೃತ್ತದಿಂದ ಎಸ್‌ವಿಪಿ ವೃತ್ತದ ಮೂಲಕ ಜನಪದ ಕಲಾ ತಂಡಗಳೊಂದಿಗೆ ಕನ್ನಡ ಭವನಕ್ಕೆ ಮೆರವಣಿಗೆ ತಲುಪುವುದು.ಉದ್ಘಾಟನೆ: ಬೆಳಿಗ್ಗೆ 10.30ಕ್ಕೆ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಉದ್ಘಾಟಿಸುವರು. ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಜಿಲ್ಲಾ ಕಸಾಪ ಸಿದ್ಧಪಡಿಸಿದ್ದ ವೆಬ್‌ಸೈಟ್‌ಗೆ ಚಾಲನೆ ನೀಡುವರು. ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿಶೇಷ ಆಮಂತ್ರಿತರಾಗಿ ಭಾಗವಹಿಸುವರು.ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರ ನುಡಿಗಳ ನಂತರ ಸಮ್ಮೇಳನಾಧ್ಯಕ್ಷ ಹಿರಿಯ ರಂಗಚೇತನ ಎಲ್.ಬಿ.ಕೆ. ಆಲ್ದಾಳ ಭಾಷಣ ಮಾಡುವರು. ಡಾ.ಶರಣಬಸಪ್ಪ ಅಪ್ಪ, ಸುಲಫಲ ಮಠದ ಮಹಾಂತ ಶಿವಾಚಾರ್ಯರಿಂದ ಶುಭನುಡಿಗಳು. ಅನಂತರ 13 ಲೇಖಕರ 13 ಕೃತಿಗಳನ್ನು ವಿವಿಧ ಗಣ್ಯರು ಲೋಕಾರ್ಪಣೆ ಮಾಡುವರು.1ನೇ ಗೋಷ್ಠಿ `ಗುಲ್ಬರ್ಗ ಸಾಹಿತ್ಯ ಮಂಥನ' (ಹೆಜ್ಜೆಗಳು ಸದ್ದು ಮಾಡ್ಯಾವೋ), 2ನೇ ಗೋಷ್ಠಿ `ಗುಲ್ಬರ್ಗ ಕಲಾ ಚೇತನ' (ಚಿತ್ರ ಬಿಡಿಸ್ಯಾರೊ ಬಿಸಿಲ ಮಂದಿ), 3ನೇ ಗೋಷ್ಠಿ `ದಲಿತ ಸಾಹಿತ್ಯ ಚಿಂತನ' (ಬೆವರ ಹನಿ ಮೂಡ್ಯಾವೋ), 4ನೇ ಗೋಷ್ಠಿ `ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ' (ರಂಗ ಜಂಗಮ ಆಲ್ದಾಳ ಅಂದ್ರೆ), 5ನೇ ಗೋಷ್ಠಿ `ವರ್ತಮಾನದ ತಲ್ಲಣಗಳು' (ಬಿಟ್ಟೀಗಿ ಬಂದಿಲ್ಲ ದವತಿ ಲೆಕ್ಕಣಿಕೆ), 6ನೇ ಗೋಷ್ಠಿ `ಗುಲ್ಬರ್ಗ ಸಂಕೀರ್ಣ ಸಾಹಿತ್ಯ' (ತಿಟ್ಹತ್ತಿ ತಿರುಗಿ).1ನೇ ಕವಿಗೋಷ್ಠಿ `ಕವಿತೆಗಳ ತನನಂ ತನನಂ' (ಬೆಣ್ಣೆತೊರೆ ಹರಿಯಲಿ), 2ನೇ ಕವಿಗೋಷ್ಠಿ `ಯುವ ಕವಿತೆಗಳ ತೋಂ ತನನ' (ಜೀವದನಿ ಮಿಡಿಯಲಿ).

ಜೂ. 15ರ ರಾತ್ರಿ `ನೀನಾಸಂ ಹೆಗ್ಗೋಡು' ತಂಡದಿಂದ `ಬಯಲ ಬದುಕು' ನಾಟಕ ಪ್ರದರ್ಶನ ನಡೆಯುವುದು. ಮಂಗಳಮುಖಿಯರ ಜೀವನ ಬಿಂಬಿಸುವ ಕಥಾವಸ್ತುವನ್ನು ಈ ನಾಟಕ ಹೊಂದಿದೆ.ಜೂ. 16ರ ಸಂಜೆ 5ಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರ ಸನ್ಮಾನ ಮಾಡಲಾಗುತ್ತದೆ. ಸಂಜೆ 6ಕ್ಕೆ `ನಮ್ ನಮಸ್ಕಾರ ನಿಮಗಾ...' ಸಮಾರೋಪ ಸಮಾರಂಭ. ಹಿರಿಯ ಪತ್ರಕರ್ತ ಜೋಗಿ ಅವರಿಂದ ಸಮಾರೋಪ ಭಾಷಣ. ನಾಲವಾರ ಶ್ರೀಮಠದ ತೋಟೆಂದ್ರ ಶಿವಾಚಾರ್ಯ ಹಾಗೂ ಹಾರಕೂಡ ಶ್ರೀಮಠದ ಚನ್ನವೀರ ಶಿವಾಚಾರ್ಯ ಅವರಿಂದ ಶುಭನುಡಿ. ಎನ್‌ಇಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್.ಶಿವಮೂರ್ತಿ ವಿಶೇಷ ಆಮಂತ್ರಿತರು. ಸಮ್ಮೇಳನಾಧ್ಯಕ್ಷರ ನುಡಿ.ಸಾಹಿತಿಗಳಾದ ರೇವಣಸಿದ್ದಯ್ಯ ರುದ್ರಸ್ವಾಮಿಮಠ, ಗೀತಾ ನಾಗಭೂಷಣ, ಡಾ. ಚೆನ್ನಣ್ಣ ವಾಲೀಕಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ್ ನಿರ್ಣಯ ಮಂಡಿಸುವರು. ಶಾಸಕರಾದ ಖಮರುಲ್ ಇಸ್ಲಾಂ ಹಾಗೂ ದತ್ತಾತ್ರೇಯ ಪಾಟೀಲ ರೇವೂರ ಉಪಸ್ಥಿತರಿರುವರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಸುರೇಶ ಬಡಿಗೇರ, ಬಿ.ಎಚ್. ನಿರಗುಡಿ, ರಾಜಶೇಖರ ಮಾಂಗ, ಡಾ. ರಾಜೇಂದ್ರ ಹಾಗೂ ಶಿವಕುಮಾರ ದೊಡ್ಮನಿ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.