ಬುಧವಾರ, ಮೇ 12, 2021
18 °C

ರಾಜಕೀಯವಾಗಿ ದಲಿತರ ತುಳಿತ: ಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ:  `ಸ್ವಾತಂತ್ರ್ಯ ಸಿಕ್ಕು ಅರವತ್ತು ವರ್ಷ ಕಳೆದರೂ ದಲಿತ, ಶೋಷಿತ ವರ್ಗಕ್ಕೆ ಶಿಕ್ಷಣ, ಸಮಾನತೆ, ಸಮರ್ಪಕ ರಾಜಕೀಯ ಪ್ರಾತಿನಿಧ್ಯ ಕನಸಾಗೆ ಉಳಿದಿದೆ' ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವದ ನಿಮಿತ್ತ ಹಮ್ಮಿಕೊಂಡ `ಸ್ವಾಭಿಮಾನ ಸಂಕಲ್ಪದಿನ'ದ ಸಮಾವೇಶದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.`ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಕೇವಲ ಶೇ.35 ರಷ್ಟಿದೆ. ಸಂಸತ್ ಹಾಗೂ ವಿಧಾನಸಭೆಗಳಲ್ಲಿ ರಾಜಕೀಯ ವ್ಯಂಗ್ಯ ಎದ್ದು ಕಾಣುತ್ತಿದೆ. ಪ್ರಜಾತಂತ್ರ ವ್ಯವಸ್ಥೆ ತೀರ ಹದೆಗೆಟ್ಟಿದೆ. ಹಾಗಾಗಿ ಪ್ರಜಾಪ್ರಭುತ್ವದ ನಿಜವಾದ ಅರ್ಥದ ವಿಮರ್ಶೆ ನಡೆಯಬೇಕಿದೆ. ದಲಿತರನ್ನು ಇಂದಿಗೂ ರಾಜಕೀಯವಾಗಿ ತುಳಿಯಲಾಗುತ್ತಿದೆ'ಎಂದು ಕಿಡಿ ಕಾರಿದರು.ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, `ಅಂಬೇಡ್ಕರ್‌ರ ವಿಚಾರಗಳು ಹಾಗೂ ಸಂವಿಧಾನದ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಿದೆ. ಸಮಾನತೆಗೆ ಹೋರಾಡಿದ ಅಂಬೇಡ್ಕರ್‌ಗೆ ಕೇವಲ ದಲಿತ ನಾಯಕನ ಪಟ್ಟಕಟ್ಟಲಾಗಿದೆ' ಎಂದು ವಿಷಾದಿಸಿದರು.  ತೊನಸನಹಳ್ಳಿ(ಎಸ್)ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುರಮ್ಮ ಗುರುಪುತ್ರ ಕರಣಿಕ ಉದ್ಘಾಟಿಸಿದರು, ಉದ್ಯಮಿ ಸಂತೋಷ ಇಂಗಿನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನೂತನ ನಗರಸಭೆಯ ಎಲ್ಲ 31 ಜನ ಸದಸ್ಯರನ್ನು ಸನ್ಮಾನಿಸಲಾಯಿತು.ತಾಲ್ಲೂಕು ಪಂಚಾಯಿತಿ ಸದಸ್ಯ ನಿಂಗಣ್ಣ ಹುಳಗೋಳಕರ್, ಡಾ.ಎಂ. ಎ.ರಶೀದ್, ಪ್ರೊ. ಸಂಜಯ ಮಾಕಲ್, ಡಾ.ಎಂ.ಎ.ರಶೀದ್, ಸೋಮಶೇಖರ ನಂದಿಧ್ವಜ, ಕಲಾವಿದ ಮ.ಖದೀರ್, ಶೇಕ್ ಬಶೀರುದ್ದೀನ್ ವೇದಿಕೆಯಲ್ಲಿದ್ದರು. ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ರಾಜು ಜಂಬಗಿ, ಸ್ನೇಹಲ್ ಜಾಯಿ, ಲೋಹಿತ ಉದಯಕರ್, ಹಾಜಪ್ಪ ಮೂಲಭಾರತಿ ಪಾಲ್ಗೊಂಡಿದ್ದರು. ಬಸವರಾಜ ಮಯೂರ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.