ಶುಕ್ರವಾರ, ಮೇ 14, 2021
25 °C

`ಕವಿರಾಜ ಮಾರ್ಗ'ದ ನೆಲದಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪ್ರಥಮ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸುವ 46 ವರ್ಷಕ್ಕೂ ಮೊದಲೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ನಡೆಸಿದ ಕೀರ್ತಿ `ಕವಿರಾಜ ಮಾರ್ಗ'ದ ನೆಲ ಗುಲ್ಬರ್ಗ ಜಿಲ್ಲೆಗಿದೆ. ಪ್ರಸ್ತುತ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿರುವ ಗುಲ್ಬರ್ಗವು 14ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಒಟ್ಟು 3 ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ.1928ರ ಜೂನ್‌ನಲ್ಲಿ  ಬಿ.ಎಂ. ಶ್ರೀಕಂಠಯ್ಯ ಅಧ್ಯಕ್ಷತೆಯಲ್ಲಿ 14ನೇ ಸಮ್ಮೇಳನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಶ್ರೀಕಂಠೀರವ ನರಸಿಂಹರಾಜ ಒಡೆಯರ್  ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷರಾಗಿದ್ದರು. ಆ ಬಳಿಕ 1949ರ ಮಾರ್ಚ್‌ನಲ್ಲಿ ಅಖಿಲ ಭಾರತ 32ನೇ ಸಾಹಿತ್ಯ ಸಮ್ಮೇಳನ ನಡೆಯಿತು. ರೆವರಂಡ್ ಉತ್ತಂಗಿ ಚನ್ನಪ್ಪ ಸರ್ವಾಧ್ಯಕ್ಷತೆ ವಹಿಸಿದ್ದರೆ, ತಿರುಮಲೆ ತಾತಾಚಾರ್ಯ ಶರ್ಮಾ ಕಸಾಪ ಅಧ್ಯಕ್ಷರಾಗಿದ್ದರು. ಆ ಬಳಿಕ 1982ರ ಅಕ್ಟೋಬರ್‌ನಲ್ಲಿ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸಿದ್ದಯ್ಯ ಪುರಾಣಿಕ ಅಧ್ಯಕ್ಷತೆಯಲ್ಲಿ ನಡೆಯಿತು. ಹಂಪಾ ನಾಗರಾಜಯ್ಯ ಕಸಾಪ ಅಧ್ಯಕ್ಷರಾಗಿದ್ದರು.ಜಿಲ್ಲೆ: ಗುಲ್ಬರ್ಗ ಜಿಲ್ಲೆಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು 1974ರ ಜನವರಿಯಲ್ಲಿ ನಡೆಯಿತು. 7 ವರ್ಷದ ಬಳಿಕ 2ನೇ ಸಮ್ಮೇಳನ ನಡೆದರೆ, 10 ವರ್ಷದ ಬಳಿಕ ಮೂರನೇ ಸಮ್ಮೇಳನ ನಡೆಯಿತು. ಮತ್ತೆ ತಲಾ ನಾಲ್ಕು ವರ್ಷಗಳ ಅವಧಿಯಲ್ಲಿ ನಾಲ್ಕನೇ ಮತ್ತು ಐದನೇ ಸಮ್ಮೇಳನ ಆಯೋಜಿಸಲಾಗಿತ್ತು. ಆದರೆ 1999ರ ಬಳಿಕ 14 ವರ್ಷಗಳಲ್ಲಿ 8 ಸಮ್ಮೇಳನಗಳು ನಡೆದವು. ಒಟ್ಟಾರೆ  ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನ ಆರಂಭಗೊಂಡು 39ನೇ ವರ್ಷದಲ್ಲಿ 13ನೇ ಸಮ್ಮೇಳನಕ್ಕೆ ಗುಲ್ಬರ್ಗ ಸಿದ್ಧವಾಗಿದೆ.ಕಸಾಪ ಜಿಲ್ಲಾ ಘಟಕವು ವೀರಭದ್ರ ಸಿಂಪಿ ಅಧ್ಯಕ್ಷತೆಯ ಅವಧಿಯಲ್ಲಿ ಒಟ್ಟು 5 ಜಿಲ್ಲಾ ಕನ್ನಡ ಸಮ್ಮೇಳನ ಸಂಘಟಿಸಿದೆ. ಅಲ್ಲದೇ ಡಾ.ಸರಸ್ವತಿ ಚಿಮ್ಮಲಗಿ ಅಧ್ಯಕ್ಷತೆಯಲ್ಲಿ `ಮಹಿಳಾ' (2009 ಜನವರಿ), ಕು.ಮನಿಷಾ ಪಾಟೀಲ ಅಧ್ಯಕ್ಷತೆಯಲ್ಲಿ `ಮಕ್ಕಳ' (2009 ನವೆಂಬರ್), ಅಮರ ಹಿರೇಮಠ ಅಧ್ಯಕ್ಷತೆಯಲ್ಲಿ `ಸಂಗೀತ' (2009 ಡಿಸೆಂಬರ್) ಡಾ.ಎಸ್.ಎಸ್. ಪಾಟೀಲ್ ಅಧ್ಯಕ್ಷತೆಯಲ್ಲಿ `ವೈದ್ಯ' (2010 ಫೆಬ್ರುವರಿ) ಪ್ರಥಮ ಜಿಲ್ಲಾ ಸಮ್ಮೇಳನಗಳನ್ನು ಆಯೋಜಿಸಿದ ಖ್ಯಾತಿ ಹೊಂದಿದೆ.ಡಾ.ಎಂ.ಎಸ್. ಪಾಟೀಲ್ ಅಧ್ಯಕ್ಷರಾಗಿದ್ದಾಗ 2 ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಭೀಮಶೇನರಾವ ತವಗ ಅವರೇ, ಎರಡನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ವಿಶೇಷ. ಒಟ್ಟು ಆರು ಸಮ್ಮೇಳನಗಳು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಡೆದರೆ, ಉಳಿದೆಲ್ಲವೂ ಗುಲ್ಬರ್ಗದಲ್ಲಿಯೇ ನಡೆದಿವೆ.ಕಸಾಪ ಜಿಲ್ಲಾ ಘಟಕ:  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು 1968ರಲ್ಲಿ ಅಸ್ತಿತ್ವಕ್ಕೆ ಬಂತು. ಆದರೆ ಆಗ ಕಸಾಪ ಕೇಂದ್ರ ಘಟಕವು ಜಿಲ್ಲಾ ಘಟಕದ ಅಧ್ಯಕ್ಷರನ್ನು ನೇಮಕ ಮಾಡುತ್ತಿತ್ತು. 1989ರಲ್ಲಿ ಮೊದಲ ಬಾರಿಗೆ ಗುಲ್ಬರ್ಗದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಯು ಚುನಾವಣೆ ಮೂಲಕ ನಡೆಯಿತು. ಬಿ. ಮಹಾದೇವಪ್ಪ ಚೊಚ್ಚಿಲ ಚುನಾಯಿತ ಅಧ್ಯಕ್ಷರಾದರೆ, ಪ್ರಸ್ತುತ ಮಹಿಪಾಲರಡ್ಡಿಮುನ್ನೂರ ಅಧ್ಯಕ್ಷರಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.