ಶನಿವಾರ, ಮೇ 15, 2021
24 °C
ನಗರ ಸಂಚಾರ

ಕಾಯಕಲ್ಪಕ್ಕೆ ಕಾದಿದೆ ಬಾಲಭವನ

ನವೀನ ಕುಮಾರ್ ಜಿ./ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗಾಳಿ, ಬೆಳಕು ಇಲ್ಲದ ಸಭಾಂಗಣ, ಕಾರ್ಯಕ್ರಮಗಳಿಗೆ ಬರುವವರಿಗೆ ಕುಳಿತುಕೊಳ್ಳಲು ಆಸನಗಳಿಲ್ಲ, ವಾಹನ ನಿಲುಗಡೆಗೆ ವ್ಯವಸ್ಥೆಯಿಲ್ಲ, ಮಳೆ ಬಂದರೆ ಸೋರುವ ಕಟ್ಟಡ-ಇದು ನಗರದಲ್ಲಿರುವ ಜಿಲ್ಲಾ ಬಾಲಭವನದ ವಾಸ್ತವ ಸ್ಥಿತಿ.ಮಕ್ಕಳ ಚಟುವಟಿಕೆಗಳಿಗಾಗಿಯೇ ನಗರದಲ್ಲಿ ಸ್ಥಾಪನೆಯಾದ ಬಾಲ ಭವನ ಸೂಕ್ತ ಸೌಲಭ್ಯಗಳಿಲ್ಲದೆ ಸೊರಗುತ್ತಿದೆ. ಮಕ್ಕಳ ಕಾರ್ಯಕ್ರಮಗಳೂ ಸೇರಿದಂತೆ ಹಲವು ಸಮಾರಂಭಗಳು ಇಲ್ಲಿ ನಿರಂತರ ನಡೆಯತ್ತಿವೆ. ಆದರೆ, ಈ ಸಭಾಂಗಣಕ್ಕೆ ಸೂಕ್ತ ಸೌಲಭ್ಯ ಒದಗಿಸಲು ಸಂಬಂಧಪಟ್ಟವರು ಮುಂದಾಗುತ್ತಿಲ್ಲ ಎನ್ನುವುದು ಕಾರ್ಯಕ್ರಮ ಆಯೋಜಕರ ಅಳಲು.ಜವಾಹರ್ ಬಾಲ ಭವನ ಸಮಿತಿ ಬೆಂಗಳೂರು ಅಡಿಯಲ್ಲಿ ಕಾರ್ಯ ನಿರ್ವಹಿಸುವ ಈ ಭವನದ ಸಮಿತಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷರು ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕಾರ್ಯದರ್ಶಿಯಾಗಿದ್ದಾರೆ.ಬಾಲ ಭವನವನ್ನು ಮಕ್ಕಳ ಚಟುವಟಿಕೆಗಳಿಗಾಗಿಯೇ ನಿರ್ಮಿಸಲಾಗಿದೆ. ಆದರೆ, ಭವನದ ಆವರಣ ನೋಡಿದರೆ ಮಕ್ಕಳ ಚಟುವಟಿಕೆಗಳಿಗೆ ಪೂರಕವಾದ ವಾತಾವರಣವೇ ಇಲ್ಲ. ಮಕ್ಕಳ ಗ್ರಂಥಾಲಯ, ಪಾರ್ಕ್ ಯಾವುದೂ ಕಂಡು ಬರುವುದಿಲ್ಲ. ಭವನದ ಮುಂಭಾಗದಿಂದ ಹಾದು ಹೋಗುವ ರಸ್ತೆಯೂ ಹದಗೆಟ್ಟಿದೆ. ಕಟ್ಟಡದ ಪಕ್ಕ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಯಿಲ್ಲದೆ ಕಾರ್ಯಕ್ರಮಕ್ಕೆ ಆಗಮಿಸುವವರು ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಬೇಕಾಗಿದೆ.`ಬಾಡಿಗೆ ನೀಡಿ ಮಕ್ಕಳ ಕಾರ್ಯಕ್ರಮ ಆಯೋಜಿಸಿದರೆ ಬಂದವರಿಗೆ ಕುಳಿತುಕೊಳ್ಳಲು ಕುರ್ಚಿ ಇಲ್ಲ. ಮಕ್ಕಳ ಕಾರ್ಯಕ್ರಮಗಳಿಗಾಗಿಯೇ ನಿರ್ಮಿಸಿದ್ದರೂ ಇಲ್ಲಿ ವಾರಕ್ಕೊಮ್ಮೆಯಾದರೂ ಮಕ್ಕಳ ಕಾರ್ಯಕ್ರಮ ನಡೆಯುತ್ತಿಲ್ಲ. ದಿನವೊಂದಕ್ಕೆ 500 ರೂಪಾಯಿಯಂತೆ ಬಾಡಿಗೆ ಪಡೆಯಲಾಗುತ್ತಿದೆ. ಆದರೆ, ಸೌಕರ್ಯಗಳಿಲ್ಲ.`ಬಾಲಭವನ ಸಮಿತಿಯಲ್ಲಿರುವವರಿಗೆ ಈ ಕುರಿತು ಎಳ್ಳಷ್ಟು ಕಾಳಜಿ ಇಲ್ಲ' ಎಂದು ಹೆಸರು ಹೇಳಲಿಚ್ಛಿಸದ ಸಂಘಟಕರೊಬ್ಬರು ಬೇಸರ ವ್ಯಕ್ತಪಡಿಸಿದರು.`ಗುಲ್ಬರ್ಗ ಬಾಲಭವನಕ್ಕೆ ಮಕ್ಕಳನ್ನು ಸದಸ್ಯರನ್ನಾಗಿಸುವ ಕಾರ್ಯವೂ ನಡೆಯುತ್ತಿಲ್ಲ. ಮಕ್ಕಳಿಗೆ ವಾರಕ್ಕೊಮ್ಮೆ ಚಿತ್ರಕಲೆ, ನೃತ್ಯ, ಯೋಗ ಮೊದಲಾದ ಚಟುವಟಿಕೆಗಳನ್ನು ನಡೆಸಬೇಕು. ಅದಕ್ಕಾಗಿ ಒಬ್ಬರು ತರಬೇತುದಾರರನ್ನು ನೇಮಿಸಿ ಮಕ್ಕಳ ಪ್ರತಿಭೆ ಪೋಷಿಸಲು ಬಾಲಭವನ ಸಮಿತಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಕಟ್ಟಡ ಬಾಡಿಗೆ ಮೊದಲಾದವುಗಳ ಹಣವನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸಿದರೆ ಭವನದ ಅಭಿವೃದ್ಧಿ ಸಾಧ್ಯ' ಎಂದು ಅವರು ಅಭಿಪ್ರಾಯಪಟ್ಟರು.`ಪ್ರತಿ ವರ್ಷದಂತೆ ಈ ಬಾರಿಯೂ ಭವನದಲ್ಲಿ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದೆವು. ಅದೇ ರೀತಿ ಎಲ್ಲಾ ತಾಲ್ಲೂಕುಗಳಲ್ಲಿ ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸರ್ವ ಶಿಕ್ಷಣ ಅಭಿಯಾನದ ಆಶ್ರಯದಲ್ಲಿ ಬೇಸಿಗೆ ಶಿಬಿರ ಹಮ್ಮಿಕೊಳ್ಳಲು ಬೆಂಗಳೂರು ಬಾಲಭವನದಿಂದ ಮಂಜೂರಾದ ರೂ. 35 ಸಾವಿರ ವಿತರಿಸಿದ್ದೇವೆ. ಆದರೆ ಚುನಾವಣೆ ಬಂದಿದ್ದರಿಂದ ಹಲವೆಡೆ ಶಿಬಿರ ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ.ಅಲ್ಲದೆ ವಾರಕ್ಕೊಂದು ಬಾರಿ ಬಾಲ ಭವನದ ವತಿಯಿಂದ ಮಕ್ಕಳ ಚಟುವಟಿಕೆಗಳಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಇದಕ್ಕಾಗಿ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಸಿಇಒ ಜೊತೆ ಮಾತುಕತೆ ನಡೆಸಿದ್ದೇನೆ' ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರತ್ನಾ ಕಲಂದಾನಿ ತಿಳಿಸಿದರು. `

ಗುಲ್ಬರ್ಗ, ಯಾದಗಿರಿ, ಬೀದರ್ ಪ್ರದೇಶದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ವಿಜ್ಞಾನ ಸ್ಪರ್ಧೆಗಳಿಗೆ ಅಣಿಗೊಳಿಸಲು ಮತ್ತು ವಿಜ್ಞಾನ ಆವಿಷ್ಕಾರಗಳ ಮಾದರಿ ತಯಾರಿಸಲು ತರಬೇತಿ ನೀಡಲು ಧಾರವಾಡ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಒಂದು ದಿನದ ಕಾರ್ಯಾಗಾರ ಶೀಘ್ರ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದೇವೆ' ಎಂದೂ ಅವರು ತಿಳಿಸಿದರು.ಶೀಘ್ರ ಕಟ್ಟಡ ದುರಸ್ತಿ

`ಈಗ ಮಳೆಗಾಲ ಆರಂಭವಾಗಿರುವುದರಿಂದ ಬಾಲಭವನ ಕಟ್ಟಡ ಅಲ್ಲಲ್ಲಿ ಸೋರುತ್ತಿದೆ. ಕೂಡಲೆ ಇದರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕಟ್ಟಡಕ್ಕೆ ಇತರ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಬಾಲಭವನ ಸಮಿತಿಯನ್ನು ಸಂಪರ್ಕಿಸಲಾಗುವುದು'

-ರತ್ನಾ ಕಲಂದಾನಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.