ಶುಕ್ರವಾರ, ಮೇ 7, 2021
21 °C
`ರಂಗ ಜಂಗಮ ಆಲ್ದಾಳ' ಮನಬಿಚ್ಚಿದಾಗ...

`ನಾನು ಹಿಂದು- ಮುಸ್ಲಿಂ ಅಲ್ಲ'

ಚಿದಾನಂದ ಕಮ್ಮಾರ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಾಟಕಕಾರನ ಕಷ್ಟ-ಸುಖ, ಪ್ರೇಕ್ಷಕರ ಬದಲಾದ ಅಭಿರುಚಿ, ಗಡಿಭಾಗದ ನಾಟಕ ಕಂಪೆನಿಗಳ ಕುರಿತು ಸರ್ಕಾರದ ಅಸಡ್ಡೆ, ಬರಹಗಾರನ ನಿಷ್ಠೆ, ಬಡತನದ ಸುಖ.... ಎಲ್ಲ ಒಂದೊಂದಾಗಿ ಭಾವತೆರೆಯ ಮೇಲೆ ತೇಲಿ ಬಂದ ಕ್ಷಣ, ಬದುಕೆಂಬ ನಾಟಕದ ಪಾತ್ರಗಳ ಬಣ್ಣ ಕಳಚಿ, ಮುಖವಾಡವಿಲ್ಲದ ಮನುಷ್ಯನ ಹುಡುಕಾಟ ನಡೆಯಿತು.ಭಾನುವಾರ ನಗರದ ಕನ್ನಡ ಭವನದಲ್ಲಿ ನಡೆದ 13ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಾಲ್ಕನೇ ಗೋಷ್ಠಿ `ರಂಗ ಜಂಗಮ ಆಲ್ದಾಳ' ಅವರ ಬದುಕಿನ ಭಾವಪ್ರಪಂಚವನ್ನು ತೆರೆದಿಟ್ಟಿತು. `ಜಾತಿ, ಲಿಂಗ ತಾರತಮ್ಯದ ಮೇಲಾಟವಿದ್ದ 70ರ ದಶಕದಲ್ಲಿ ನಾಟಕಕಾರರಾಗಿ ಬೆಳೆದದ್ದು ಹೇಗೆ? ನಿಮ್ಮ ನಿಷ್ಠಾವಂತಿಕೆ ಯಾರಿಗಾಗಿ? ನಿಮ್ಮ ದೊಡ್ಡಸ್ತಿಕೆಯಲ್ಲಿ ನಿಮ್ಮ ಪತ್ನಿಯ ಪಾಲು ಇಲ್ಲವೇ? ಅದನ್ನ್ಯಾಕೆ ನೀವು ದಾಖಲಿಸಿಲ್ಲ' ಎಂದು ತರಾಟೆ ರೂಪದ ಪ್ರಶ್ನೆ ಎತ್ತಿದ ಶಂಕ್ರಯ್ಯ ಘಂಟಿ, ಸಮ್ಮೇಳನಾಧ್ಯಕ್ಷ ಎಲ್‌ಬಿಕೆ ಆಲ್ದಾಳ ಅವರೊಂದಿಗಿನ `ಸಂವಾದ'ಕ್ಕೆ ದಾರಿ ಮಾಡಿಕೊಟ್ಟರು.   ನಮಗ ನಾವ ಬಂಗಾರ...

ಘಂಟಿ ಅವರ ಗಟ್ಟಿ ಪ್ರಶ್ನೆಗೆ ದಿಟ್ಟವಾಗಿಯೇ ಉತ್ತರಿಸಿದ ಆಲ್ದಾಳರು ನೆನಪಿನಂಗಳಕ್ಕೆ ಜಾರಿದರು. “ಮೂರು ವರ್ಷದವನಿದ್ದಾಗ ತಂದೆ ತೀರಿಕೊಂಡರು. ನನ್ನ ಪತ್ನಿ ಮೂರು ತಿಂಗಳು ಕೂಸಿದ್ದಾಗಲೇ ಆಕೆಯ ತಾಯಿಯೂ ತೀರಿಕೊಂಡಿದ್ದರು. ನನ್ನ ತಾಯಿಯ ಮಡಿಲಲ್ಲಿಯೇ ಆಡಿ ಬೆಳೆದ ನಮ್ಮಿಬ್ಬರ ಬದುಕು ಕಬ್ಬಿಗೆ ಜೇನು ಇಟ್ಟಂತೆ.“ನಾಟಕ ಕಂಪೆನಿಗಳಲ್ಲಿದ್ದಾಗ ಸಿಗುತ್ತಿದ್ದ ಅಷ್ಟೋ ಇಷ್ಟೋ ಹಣವನ್ನು ತಾಯಿಯ ಕೈಗೆ ಕೊಡ್ತಿದ್ದೆ. ಪತ್ನಿ ಕೂಲಿ ಮಾಡಿ ಮಕ್ಕಳನ್ನು ಸಲುಹಿದಳು. ನಾಟಕ ಕಂಪೆನಿಗಳ ಜತೆ ಊರೂರು ತಿರುಗುತ್ತಿದ್ದ ನಾನು ಮನೆತನಕ್ಕೆ `ತಂದು ಹಾಕಿದ್ದು' ಅಷ್ಟರಾಗ ಐತಿ. ಆದರೆ, `ಆ ಯಮ್ಮ' (ಪತ್ನಿ ಅಮಿನಬಾಯಿ) ಇದ್ದುದರಲ್ಲಿಯೇ ಸಂಸಾರ ಸರಿದೂಗಿಸಿಕೊಂಡು ಹೋಗುತ್ತಿದ್ದಳು. ಒಂದು ದಿನಾನೂ ಆಕಿ ಬಂಗಾರ, ಬೆಳ್ಳಿ, ಒಡವಿ, ವಸ್ತ್ರ ಅಂತ ಏನೂ ಕೇಳಲಿಲ್ಲ. ನಮ್ಮಳಗ ನಂದು-ತಂದು ಅಂತ ಭೇದಭಾವವೇ ಇಲ್ಲ. ನನಗ ಆಕಿ, ಆಕಿಗೆ ನಾನ್‌ಅ ಬಂಗಾರ.“ ರಾತ್ರಿ ಉಂಡು ಮಲಗುವಾಗ ನನ್ನ ಹಾಸಿಗೆ ಬಳಿ ಹಾಳೆ, ಪೆನ್ನು, ಪುಸ್ತಕ ಇಟ್ಟು ಮಲಗಿಕೊಳ್ಳತಿದ್ಲು. ನಾನು ಎಷ್ಟೊತ್ತಿನ್ಯಾಗ ಎದ್ದು ಬರೀತಿದ್ದೆನೋ ಏನೋ. ಆದರೆ, ನನ್ನ ಬರವಣಿಗೆ ಬಗ್ಗೆ ಕಾಳಜಿ ಮಾಡುತ್ತಿದ್ದ ಆಕಿ, ನಾನು ಇಷ್ಟೆಲ್ಲ ನಾಟಕ ಬರೀಲಿಕ್ಕೆ ಆಸರೆಯಾಗಿದ್ದಳು”.ಬರೆದಾಗಲ್ಲ; ಆಡಿದಾಗ ತೃಪ್ತಿ

ಹವ್ಯಾಸಿ ನಾಟಕಗಳನ್ನು ಏಕೆ ಬರೀಲಿಲ್ಲ? ಮಠ-ಮಾನ್ಯ, ಸಾಧು-ಸಂತರು, ಮಠಾಧೀಶರ ಕುರಿತು ನಾಟಕ ಬರಿದೀರಿ. ಮುಸ್ಲಿಂ ಸಮುದಾಯದಿಂದ ಬಂದ ನೀವು ಸೂಫಿ ಸಂತ ಖ್ವಾಜಾ ಬಂದೇನವಾಜ್ ಅವರ ಕುರಿತು ಯಾಕೆ ಬರಿಲಿಲ್ಲ; ನಾಟಕ ಮಾಡಿಸಲಿಲ್ಲ ಅಂತ ತಕರಾರು ಎತ್ತಿದ ಸುಬ್ರಾವ್ ಕುಲಕರ್ಣಿ ಅವರಿಗೆ `ರಂಗ ಜಂಗಮ' ಹೀಗೆ ಖಡಕ್ ಉತ್ತರ ನೀಡಿದರು.

“ವೃತ್ತಿ ರಂಗಭೂಮಿ ನಾನು ನಡೆದು ಬಂದ ದಾರಿ. ವೃತ್ತಿ ರಂಗಭೂಮಿ-ಹವ್ಯಾಸಿ ರಂಗಭೂಮಿ ಪ್ರತ್ಯೇಕವಲ್ಲ.ಹವ್ಯಾಸಿ ರಂಗಭೂಮಿಗೆ ವೃತ್ತಿ ರಂಗಭೂಮಿಯೇ ತಾಯಿಬೇರು. ಹೇಳುವ ರೀತಿ ಬೇರೆ ಅಷ್ಟೆ. ನಮ್ದು ಎಲ್ಲರಿಗೂ ತಿಳಿಯುವ ನಾಟಕ. ಹಳ್ಳಿಗಳಲ್ಲಿ ಲಕ್ಷಾಂತರ ಜನರನ್ನು ತಲುಪುತ್ತದೆ. ಒಂದೊಂದು ನಾಟಕ ನೂರು ಪ್ರದರ್ಶನ ಕಂಡಿದ್ದರೆ, ವಿಶ್ವಾರಾಧ್ಯರ ಕುರಿತ ನಾಟಕ ಸಾವಿರಾರು ಪ್ರದರ್ಶನ ಕಂಡಿದೆ. ಆಧುನಿಕ ನಾಟಕ ಕೇವಲ ವಿದ್ಯಾವಂತರಿಗೆ ಮಾತ್ರ. ವೃತ್ತಿ ರಂಗಭೂಮಿ ಎಲ್ಲರಿಗೂ ಸಲ್ಲುವಂತದ್ದು.“ಶರಣರ ಬದುಕಿನ ಕುರಿತು ನಾನು ಬರೆದ 45 ನಾಟಕಗಳು ಹಿಂದು-ಮುಸ್ಲಿಂ ಭಾವೈಕ್ಯ ಸಾರುತ್ತವೆ. ನಾಟಕ ಬರೆಯೋದು ದೊಡ್ಡದಲ್ಲ; ಆಡೂದು ದೊಡ್ಡದು. ನಾಟಕ ಕೃತಿ ರಂಗದ ಮೇಲೆ ಪ್ರಯೋಗ ಕಂಡಾಗಲೇ ಅದಕ್ಕೆ ಸಾರ್ಥಕತೆ. ನಾಟಕ ಮಾಡಿಸಲಿಕ್ಕೆ ಮಾಲೀಕರು ಮೊದಲು  ತಯ್ಯಾರಾಗಬೇಕು. ನಾಟಕ ಬರೆದಾಗಲ್ಲ; ಆಡಿದಾಗ ನಾಟಕಕಾರನಿಗೆ ತೃಪ್ತಿ ಆಗ್ತದ.“ಬಂದೇನವಾಜ್ ಅವರ ಕುರಿತು ನಾಟಕ ಯಾಕ ಬರಿದಿಲ್ಲ ಅಂತ ಕೇಳೋರು ನಾಟಕ ಆಡಾಕ ತಯಾರಾಗಿರಿ. ನೀವು ಆಡ್ತೀನಂದ್ರ ಎರಡು ತಿಂಗಳದಾಗ ಬರೆದು ಕೊಡ್ತೀನಿ”.`ಸರಸ್ವತಿ'ಯ ಪ್ರೇರಣೆ

ಹಿಂದು ಸಂಸ್ಕೃತಿಯಷ್ಟು ಸೂಫಿ  ಸಂಸ್ಕೃತಿ ನಿಮ್ಮ ಸಾಹಿತ್ಯದಲ್ಲಿ ಮೂಡಿಬಂದಿಲ್ಲ ಏಕೆ? ನಾಟಕ ಪ್ರಕಾರಕ್ಕೇ ನೀವು ಒತ್ತು ಕೊಟ್ಟಿದ್ದೇಕೆ ಅಂತ ಕೇಳುತ್ತಲೇ, ಬರವಣಿಗೆ `ಪ್ರೇರಣೆ'ಯನ್ನೂ ಕೆದಕಿದವರು ಡಾ. ಶ್ರೀಶೈಲ ಬಿರಾದಾರ. “ನಾನು ಹಿಂದು ಅಥವಾ ಮುಸ್ಲಿಂ ಅಲ್ಲ. ನಾನೊಬ್ಬ ಮನುಷ್ಯ ಅಷ್ಟೆ. ಇಂತಹದ್ದು ಬರೀಬೇಕು, ಬರೀಬಾರದು ಅಂತ ನನ್ನ ತೆಲಿಯೊಳಗ ಇಲ್ಲ. ಇನ್ನು, ನನ್ನ ಬರವಣಿಗೆಗೆ ಪ್ರೇರಣೆ `ಸರಸ್ವತಿ' ಎಂಬ ಸಹೋದರಿ. ಫಂಡರಪುರಕ್ಕೆ ಹೊರಟ ಆಕೆಯ ಬದುಕಿನ ಹಾದಿ ನನ್ನ ಮನೆಯನ್ನೂ ಹಾಯ್ದು ಹೋಯಿತು. ಆಕೆಯ ಬಗ್ಗೆ ಮುಂದೆ ಬರೆಯುವೆ” ಎಂದು ಮಾತು ಕೊಟ್ಟರು ಆಲ್ದಾಳ.ಬದುಕು-ಬರಹ ಬೇರೆಯಲ್ಲ

ನಾಟಕಗಳಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳು ಹೆಚ್ಚಾಗುತ್ತಿವೆಯಲ್ಲ ಎನ್ನುವ ಎಸ್. ಎನ್. ದಂಡಿನಕುಮಾರ ಅವರ ಆತಂಕಕ್ಕೆ, “ ಹಾಸ್ಯಪಾತ್ರದವರು ಜನ ನಗ್ತಾರೆ ಅಂತ ಅಶ್ಲೀಲ ಸಂಭಾಷಣೆ ಬಳಸ್ತಾರೆ. ಆದರೆ, ಯಾವ ನಾಟಕಕಾರನೂ ಅಶ್ಲೀಲ ಸಂಭಾಷಣೆ ಬರೆಯೋದಿಲ್ಲ. ನಾಟಕ ಕಂಪೆನಿಗಳ ಮಾಲೀಕರು ತಿದ್ದಿಕೊಳ್ಳಬೇಕು. ಉತ್ತಮ ನಾಟಕ ಪ್ರದರ್ಶನ ನೀಡಬೇಕು. ನನಗೆ ಬದುಕು-ಬರಹ ಬೇರೆ ಬೇರೆ ಅಲ್ಲ” ಅಂತ ಪರಿಹಾರವನ್ನೂ ಮುಂದಿಟ್ಟರು. ಸದಭಿರುಚಿ ಇರಲಿ

ಅಂದು-ಇಂದಿನ ನಾಟಕಗಳಲ್ಲಿ ವ್ಯತ್ಯಾಸದೊಂದಿಗೆ ಆಲ್ದಾಳರ `ಸಂದೇಶ' ತಿಳಿಯಲೆತ್ನಿಸಿದ ಸಿದ್ದಲಿಂಗಯ್ಯಸ್ವಾಮಿ ಮಲಕೂಡ, ಪಂಡಿತ ನೆಲ್ಲಗಿ, ಡಾ.ಶಂಕರ ಬಾಳಿ ಅವರ ಪ್ರಶ್ನೆ ಯ ನೆಪದಲ್ಲಿ ಅಧ್ಯಕ್ಷರು,  “ರಂಗಭೂಮಿಗಾಗಿ ಸರ್ಕಾರ ಇಂದು ಲಕ್ಷಾಂತರ ರೂಪಾಯಿ ಅನುದಾನ ನೀಡುತ್ತಿದೆ.ನಾಟಕಕಾರ ಜನಸಮುದಾಯಕ್ಕೆ ಒಳ್ಳೆಯ ನಾಟಕ ಕೊಡಬೇಕು. ಪ್ರೇಕ್ಷಕರೂ ಸದಭಿರುಚಿ ಬೆಳೆಸಿಕೊಳ್ಳಬೇಕು. ಆದರೆ, ಅವರು ಹೆಣ್ಣಿನ ಆಂಗಿಕ ಅಭಿನಯಕ್ಕೆ ಮರುಳಾಗಿದ್ದಾರೆ.ಅರೆಬರೆ ಬಟ್ಟೆ ಮುಚ್ಚಿದ ತೊಡೆಗಳ ಕುಣಿತಕ್ಕೆ ದಾಸರಾಗಿ ಹಾಳಾಗುತ್ತಿದ್ದಾರೆ. ಇಂಥದ್ದೆಲ್ಲ ಬೇಡ ಅಂತ ಜನ ಪ್ರತಿಜ್ಞೆ ಮಾಡಿದರೆ, ಇದು ನಿಲ್ಲುತ್ತದೆ” ಅಂತ `ಎಚ್ಚರ'ದ ಸಂದೇಶವನ್ನೇ ರವಾನಿಸಿದರು.`ಕಷ್ಟಗಳೇ ರೂಪಿಸಿದ ಆಲ್ದಾಳರು'

ಬದುಕಿನಲ್ಲಿ ಅನುಭವಿಸಿದ ಕಷ್ಟಗಳೇ ಆಲ್ದಾಳರ ವ್ಯಕ್ತಿತ್ವ ರೂಪಿಸಿವೆ. ಸಮಾಜಮುಖಿ ಚಿಂತನೆ, ಸರಳ ಜೀವನದಿಂದಾಗಿ ಆಲ್ದಾಳರು ಎಲ್ಲರಿಗೂ ಪ್ರಿಯರು. ಅರ್ಥಪೂರ್ಣ ಬೆಡಗಿನ ವಚನಗಳನ್ನು ಕೊಟ್ಟ ಅವರು ರಂಗು ರಂಗಿನ ಜೀವನಕ್ಕೆ ಮರುಳಾದವರಲ್ಲ. ಭೂಮಿತೂಕ ಕಾಯ್ದುಕೊಂಡ ಸಂವೇದನಾಶೀಲ ಹಿರಿಜೀವ.

- ಡಾ.ಟಿ.ಎಂ.ಭಾಸ್ಕರ, ಆಡಳಿತಾಧಿಕಾರಿ, ಸ್ನಾತಕೋತ್ತರ ಕೇಂದ್ರ, ಹಾವೇರಿ.`ಬಹು ಸಂಸ್ಕೃತಿಯ ಕಂಪೂ ಇದೆ'

ಆಲ್ದಾಳ ರಂಗಕರ್ಮಿ ಮಾತ್ರವಲ್ಲ; ಅವರು ರಂಗ ಸಂತ, ರಂಗ ಜಂಗಮ. ಶೂನ್ಯ ಸಂಪಾದನೆಯೆಡೆ ಸಾಗುತ್ತಿರುವ ಅವರ ಅಧ್ಯಕ್ಷತೆಯ ಈ ಜಿಲ್ಲಾ ಸಮ್ಮೇಳನ, ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುನ್ನುಡಿಯಾಗಲಿ. ಹೈ.ಕ ಪ್ರದೇಶ ಹಿಂದುಳಿದದ್ದು ಅಲ್ಲ. ಕವಿರಾಜಮಾರ್ಗಕಾರನ ನೆಲದಲ್ಲಿ ಭೀಮಾನದಿಯ ತಂಪು ಇದೆ. ಬಹು ಸಂಸ್ಕೃತಿಯ ಕಂಪೂ ಇದೆ.

-ವಸಂತ ಕುಷ್ಟಗಿ, ಸಾಹಿತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.