ಶನಿವಾರ, ಮೇ 15, 2021
24 °C

371 ಜಾರಿಯಿಂದ ಹೈಕ `ಹಸಿರು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಂವಿಧಾನದ 371ನೇ (ಜೆ) ಕಲಂ ತಿದ್ದುಪಡಿ ಜಾರಿಗೊಂಡರೆ ಅಭಿವೃದ್ಧಿ ಜೊತೆ ಹೈದರಾಬಾದ್ ಕರ್ನಾಟಕದ ವನಸಿರಿಯೂ ನಳನಳಿಸಲಿದೆ. ಈ ಕಲಂನ ಅಡಿಯಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಹಲವು ಹಸಿರೀಕರಣದ  ಯೋಜನೆಗಳು ಜಾರಿಗೆ ಬರುವ ನಿರೀಕ್ಷೆ ಇದೆ. 371ನೇ (ಜೆ) ವಿಧಿ ಅಡಿಯಲ್ಲಿ ನಿಗದಿ ಮಾಡುವ ಅನುದಾನದ ಮೇಲೆ ಅರಣ್ಯ ಇಲಾಖೆ ಸೂಕ್ತ ಯೋಜನೆ ರೂಪಿಸಬೇಕಾಗಿದೆ. ಈ ಬಗ್ಗೆ ಸಿದ್ಧತೆ ನಡೆಯುತ್ತಿದ್ದು, ಸಂಬಂಧಿಸಿದ ಸಮಿತಿಗಳಿಗೆ ಇಲಾಖೆ ವರದಿ ನೀಡಬೇಕಾಗಿದೆ.ಈ ವರ್ಷ: ಪ್ರತಿವರ್ಷದಂತೆ ಈ ವರ್ಷ ಜಿಲ್ಲೆಯಲ್ಲಿ 30 ಲಕ್ಷ ಗಿಡಗಳನ್ನು ನೆಡಲು ಇಲಾಖೆಯು ಯೋಜನೆ ರೂಪಿಸಿದೆ. ರೈತರಿಂದ 4.64ಲಕ್ಷ ಗಿಡಗಳ ಬೇಡಿಕೆ ಬಂದಿದ್ದರೆ, ಗುಲ್ಬರ್ಗ ನಗರದಲ್ಲಿ 2,400 ಗಿಡ ನೆಡುವ ಗುರಿ ಇರಿಸಿದೆ. ತಾಲ್ಲೂಕು ಪಟ್ಟಣಗಳಲ್ಲಿ 34 ಎಕರೆ ಪ್ರದೇಶ ಸೇರಿದಂತೆ ಒಟ್ಟು ಜಿಲ್ಲೆಯ 2,458 ಎಕರೆ ಅರಣ್ಯೀಕರಣ ಮಾಡಲು ಇಲಾಖೆ ಸಿದ್ಧತೆ ನಡೆಸಿದೆ. ತಾಲ್ಲೂಕಿನ ಸಿರನೂರ ಬಳಿ ಗಿಡಗಳನ್ನು ಬೆಳೆಸಿರುವ ಅರಣ್ಯ ಇಲಾಖೆಯು ನಗರದ ಅರಣ್ಯ ಕಚೇರಿಯಲ್ಲಿ ಕೇವಲ 1 ರೂಪಾಯಿ ಮತ್ತು 3 ರೂಪಾಯಿ ದರದಲ್ಲಿ ಗಿಡಗಳನ್ನು ವಿತರಿಸುತ್ತಿದೆ. ಈ ಪರಿಸರದಲ್ಲಿ ಬೆಳೆಯಬಲ್ಲ ಹೊಂಗೆ, ಬೇವು, ಆಕಾಶ ಮಲ್ಲಿಗೆ, ಕಾಡು ಬಾದಾಮಿ ಮತ್ತಿತರ ಗಿಡಗಳು ಸದ್ಯಕ್ಕೆ ಲಭ್ಯ ಇವೆ. ಈ ಹಿಂದೆ ಜತ್ರೋಪಾ, ಸಿಮರೂಬಾ, ಮ್ಯಾಂಜಿಯಂ ಗಿಡಗಳನ್ನು ವಿತರಿಸಲಾಗಿತ್ತು. ಆದರೆ ಈ ಬಾರಿ ಅವುಗಳಿಗೆ ಭಾರಿ ಬೇಡಿಕೆ ಬಂದಿಲ್ಲ ಎಂಬುದು ಇಲಾಖೆಯ ಸ್ಪಷ್ಟನೆ. 

`ನಗರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿದೆ. ಆದರೆ ಎಲ್ಲೆಡೆ ಸಸಿ ನಾಟಿ ಮಾಡಲು ಜಾಗ ಸಿಕ್ಕಿಲ್ಲ. ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ನಾಟಿ ಮಾಡುವಂತಿಲ್ಲ. ಹೀಗಾಗಿ ರಸ್ತೆ ಇಕ್ಕೆಲಗಳಲ್ಲಿ ಸಸಿ ನೆಡುವ ಕಾರ್ಯ ವಿಳಂಬವಾಗಿದೆ. ಅಫಜಲಪುರ ರಸ್ತೆಯ (28 ಕಿ.ಮೀ.) ಇಕ್ಕೆಲಗಳಲ್ಲಿ ಶೀಘ್ರ ಗಿಡ ನೆಡುತ್ತೇವೆ'ಎಂದು  ಉಪ ಅರಣ್ಯಸಂರಕ್ಷಣಾಧಿಕಾರಿ ಎಚ್.ಕೆ.ಶ್ರೀನಿವಾಸನ್ ಹೇಳಿದರು.`2001ರಿಂದ ಜಿಲ್ಲೆಯಲ್ಲಿ ಹಸಿರೀಕರಣದ ಯೋಜನೆ ಬಿರುಸಾಗಿ ನಡೆಯುತ್ತಿದೆ. ಕಳೆದ ವರ್ಷ ಸುಮಾರು 20 ಸಾವಿರ ಗಿಡ ನಾಟಿ ಮಾಡಿದ್ದೇವೆ. ಬೆಂಗಳೂರು ಸೇರಿದಂತೆ ಉಳಿದ ನಗರಗಳಲ್ಲಿ ಹಸಿರು ಪ್ರಮಾಣ ಕಡಿಮೆಯಾಗುತ್ತಿದ್ದರೆ, ಜಿಲ್ಲೆಯಲ್ಲಿ ಹೆಚ್ಚಳವಾಗುತ್ತಿದೆ. ನಮ್ಮ ಅವಲೋಕನದ ಪ್ರಕಾರ ನಗರದ ಜನತೆಯಲ್ಲಿ ಗಿಡ ನೆಡುವ ಪ್ರವೃತ್ತಿಯೂ ಹೆಚ್ಚಿದೆ. 371ನೇ (ಜೆ) ತಿದ್ದುಪಡಿ ಜಾರಿಗೊಂಡರೆ, ಹಸಿರೀಕರಣಕ್ಕೂ ಅನುದಾನ ನಿಗದಿ ಮಾಡುತ್ತಾರೆ ' ಎಂದು ಅವರು ಭರವಸೆ ವ್ಯಕ್ತ ಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.