ಗುರುವಾರ , ಮೇ 13, 2021
44 °C

ಎಲ್ಲೆಡೆ ಕಾರಹುಣ್ಣಿಮೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲೆಡೆ ಕಾರಹುಣ್ಣಿಮೆ ಸಂಭ್ರಮ

ಗುಲ್ಬರ್ಗ: ರೈತರ ಮುಂಗಾರು ಹಬ್ಬ ಕಾರಹುಣ್ಣಿಮೆಯು ಜಿಲ್ಲೆಯಾದ್ಯಂತ ಭಾನುವಾರ ನಡೆಯಿತು. ಹಲವು ದಿನಗಳಿಂದ ಮನೆಯಲ್ಲಿ ಕಟ್ಟಿ ಮೇಯಿಸಿದ ಎತ್ತುಗಳ ಓಟದ ಸ್ಪರ್ಧೆಯನ್ನು ರೈತರು ಸಂಭ್ರಮದಿಂದ ಆಚರಿಸಿದರು.ಪ್ರತಿವರ್ಷ ಇಷ್ಟೊತ್ತಿಗೆ ಮಳೆ ಆರಂಭಗೊಂಡು ಊರ ಮುಂದಿನ ಹಳ್ಳ, ಕೆರೆಗಳು ತುಂಬಿಕೊಳ್ಳತ್ತಿದ್ದವು. ರೈತರು ತಮ್ಮ ಎತ್ತುಗಳನ್ನು ಮೈಯನ್ನು ಹಳ್ಳದಲ್ಲಿ ತೊಳೆದುಕೊಂಡು ಬಾಜಾ-ಭಜಂತ್ರಿಯೊಂದಿಗ ಮೆರವಣಿಗೆ ಮಾಡಿಕೊಂಡು ಊರೊಳಗೆ ಬರುತ್ತಿದರು. ಆದರೆ ಈ ವರ್ಷ ಮಳೆ ವಿಳಂಬಗೊಂಡು ಈ ದೃಶ್ಯ ವಿರಳವಾಗಿತ್ತು.   ಆದರೂ ಇದ್ದ ನೀರಿನಲ್ಲಿಯೇ ರೈತರು ಬಸವನ ಮೈ ತೊಳೆದು ಸಿಂಗರಿಸಿ ನಲಿದಾಡಿದರು. ಕಾರಹುಣ್ಣಿಮೆಗೆ ಸಂಸ್ಕೃತದಲ್ಲಿ `ಅನಡ್ ವಾಹ ಪೌರ್ಣಿಮಾ' ಎನ್ನುತ್ತಾರೆ.ಅನಡ್‌ವಾಹ ಎಂದರೆ ಎತ್ತು, ಸಾಂಸ್ಕೃತಿಕ ಪರಂಪರೆಯ ಇತಿಹಾಸದಲ್ಲಿ ಎತ್ತು ಕೃಷಿಕನ ಪ್ರಧಾನ ಮಿತ್ರನಾಗಿರುವುದರಿಂದ ಇದಕ್ಕೆ ಎತ್ತಿನ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ಕಾರಹುಣ್ಣಿಮೆ ಹಬ್ಬ ಎರಡು ದಿನ ನಡೆಯುತ್ತದೆ. ಶುದ್ಧ ಚತುರ್ದಶಿ ಕಾರಹಬ್ಬದ ಮೊದಲ ದಿನವಾಗಿದ್ದು, ಹುಣ್ಣಿಮೆ ಎರಡನೇ ದಿನವಾಗಿರುತ್ತದೆ. ಚತುರ್ದಶಿಗೆ `ಹೊನ್ನುಗ್ಗೆ' ಎಂದು ಕರೆಯುತ್ತಾರೆ. ಬೆಲೆ ಏರಿಕೆ ಬಿಸಿಯಿಂದ ವಸ್ತುಗಳು ಎಷ್ಟೇ ತುಟ್ಟಿಯಾದರೂ ಎತ್ತುಗಳ ಸಿಂಗಾರಕ್ಕೆಂದು ಮತಾಟಿ, ಮಗಡಾ, ಹಣಿಕಟ್ಟು, ಗೊಂಡ್ಯಾ, ಕೊರಳ ಪಟ್ಟಿ, ಮಿಂಚು ಪಟ್ಟಿ ಸೇರಿದಂತೆ ವಿವಿಧ ವರ್ಣರಂಜಿತ ಹಗ್ಗದ ವಸ್ತುಗಳನ್ನು  ಭರಾಟೆಯಿಂದ ಖರೀದಿಸುವ ದೃಶ್ಯ ಗುಲ್ಬರ್ಗ ಮತ್ತಿತರ ಪಟ್ಟಣಗಳಲ್ಲಿ ಕಂಡುಬಂತು. ಈ ದಿನ ರೈತರು ತಮ್ಮ ಮನೆಯ ಎತ್ತು, ಹೋರಿ, ಆಕಳುಗಳಿಗೆ ಸಿಂಗರಿಸಿ, ಕೊರಳಿಗೆ ಹುರಿಗೆಜ್ಜೆ, ಕಿರುಗಂಟೆಗಳ ಸರ ಹಾಕಿ ಸಿಂಗರಿಸಿದ್ದರು. ಗಳೆ, ನೊಗ, ಗಾಡಿ, ಹಗ್ಗ, ಪಲಗ, ದಿಂಡು ಮಂತಾದ ಕೃಷಿ ಸಲಕರಣೆಗಳನ್ನು ಸಜ್ಜುಗೊಳಿಸಿ ಪೂಜೆ ಮಾಡಿದರು.ನೈವೇದ್ಯಕ್ಕೆಂದು ಜೋಳ ಕುಟ್ಟಿ, ಜೋಳದ ತಯಾರಿಸಿದ  ಕಿಚಡಿ ಅಂಬಲಿಯನ್ನು ಎತ್ತುಗಳಿಗೆ ತಿನ್ನಿಸಿದರು. ಸಿಂಗರಿಸಿದ ಎತ್ತು, ಹೋರಿಗಳನ್ನು ಮಧ್ಯಾಹ್ನ ಊರಲೆಲ್ಲ ಓಡಿಸುವ ದೃಶ್ಯ ಕಂಡು ಬಂತು. ಮನೆಯವರೆಲ್ಲ ಊರ ಬೀದಿಗಳಲ್ಲಿ ನಿಂತು ನೋಡುತ್ತಿದ್ದರೆ, ಈ ಒಂದು ದಿನ ಮಾತ್ರ ಎಲ್ಲ ಹಳ್ಳಿಗಳಲ್ಲಿ ಜನ ತುಂಬಿ ತುಳುಕುತ್ತಿತ್ತು.ಬಣ್ಣದ ಸಿರೆಯುಟ್ಟುಕೊಂಡು ಬಂದು ನಿಂತು ನೊಡುವ ಹೆಣ್ಣು ಮಕ್ಕಳೆದುರಿಗೆ ಎತ್ತಿನ ಗಾಡಿಯ ಮೇಲೆ ನಿಂತು ರಭಸದಿಂದ ಒಡಿಸುವ ಗಂಡು ಮಕ್ಕಳು ತಮ್ಮ ಸಾಹಸ ಪ್ರದರ್ಶನ ಮಾಡಿದರು.ಸಂಜೆ ವಿವಿಧ ಬಣ್ಣಗಳ ಎತ್ತುಗಳನ್ನು ತಂದು ಊರ ಅಗಸಿಯಲ್ಲಿ ಕರಿ ಹಾಯಿಸಲಾಯಿತು. ಕೆಲವು ಕಡೆ ಓಟದ ಸ್ಪರ್ಧೆಯಲ್ಲಿ ಮುಂದೆ ಬಂದ ಎತ್ತು ಕರಿ ಹರಿದರೆ ಇನ್ನೂ ಕೆಲವೆಡೆ ಸಾಂಪ್ರದಾಯದಂತೆ ಹಿಂದಿನ ವರ್ಷದ ಎತ್ತುಗಳು ಕರಿ ಹರಿದವು. ಯಾವ ಬಣ್ಣದ ಎತ್ತು ಮುಂದೆ ಬರುತ್ತವೆಯೋ, ಆ ಬಣ್ಣದ ದವಸ ಧಾನ್ಯಗಳು ಮುಂಗಾರು ಬೆಳೆಯಲ್ಲಿ ಅಧಿಕ ಫಸಲು ಕೊಡುತ್ತವೆ ಎಂದು ರೈತರ ನಂಬಿಕೆ ರೈತರಲ್ಲಿದೆ.

ಹೀಗಾಗಿ ಎತ್ತಿಗೆ ಬಣ್ಣ ಹಚ್ಚುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.