ಗುರುವಾರ , ಆಗಸ್ಟ್ 5, 2021
22 °C

`ರೈಲು ಬೋಗಿ ನಿರ್ಮಾಣ ಘಟಕ ಸ್ಥಾಪಿಸಿ'

-ಆರ್.ಚೌಡರೆಡ್ಡಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: `ಇದ್ದ ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸುವುದಕ್ಕಿಂತ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಕೆಲಸ ಮಾಡಬೇಕು. ಈ ಭಾಗದಲ್ಲಿ ರೈಲು ಬೋಗಿ ನಿರ್ಮಾಣ ಘಟಕ ಸ್ಥಾಪಿಸಿದರೆ ಜನರಿಗೆ ಉದ್ಯೋಗ ಸಿಗುತ್ತದೆ.  ಕೇಂದ್ರ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಇದನ್ನು ಮಾಡಿ ತೋರಿಸಲಿ' ಎಂದು ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.

ನಗರದ ಸೂಪರ್ ಮಾರ್ಕೆಟ್‌ನಲ್ಲಿ ರಾಜ್ಯ ಪ್ರಾಂತ ಸಂಘ ಸೋಮವಾರ ಆಯೋಜಿಸಿದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

`371 (ಜೆ) ತಿದ್ದುಪಡಿ ಹಸಿದ ಹೊಟ್ಟೆಗೆ ಬಿಸ್ಕೆಟ್ ಕೊಟ್ಟ ಹಾಗೆ. ಹೊಟ್ಟೆ ತುಂಬ ಅನ್ನ ಸಿಗಬೇಕಾದರೆ ಹೊಸ ಹೊಸ ಕಂಪೆನಿಗಳು ನಮ್ಮಲ್ಲಿ ಸ್ಥಾಪನೆಯಾಗಬೇಕು' ಎಂದ ಅವರು, `ಈ ಭಾಗದಲ್ಲಿ ರೈಲ್ವೆ ಬಿಡಿ ಭಾಗಗಳನ್ನು ತಯಾರಿಸುವ ರೈಲು ಬೋಗಿ ನಿರ್ಮಾಣ ಘಟಕ ಸ್ಥಾಪಿಸಿದರೆ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ' ಎಂದು ಹೇಳಿದರು.

`ಎಲ್ಲರಿಗೂ ಆಹಾರ ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಬೇಕು. ಈ ಕುರಿತು ಒತ್ತಾಯಿಸಲು ದೆಹಲಿಯಲ್ಲಿ 50ಲಕ್ಷ ಜನರನ್ನು ಸೇರಿಸಿ ಪ್ರತಿಭಟನೆ ನಡೆಸುತ್ತೇವೆ' ಎಂದರು. `ರಾಜ್ಯ ಸರ್ಕಾರ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ಕೊಡುವುದಾಗಿ ಹೇಳಿ ಇದುವರೆಗೂ ವಿತರಿಸಿಲ್ಲ.  ದಿನಕ್ಕೊಂದು ಕುಂಟು ನೆಪ ಹೇಳುತ್ತಿದ್ದಾರೆ ಎಂದರು. ಈಗಾಗಲೇ ದೇಶದ 10ರಾಜ್ಯಗಳಲ್ಲಿ ಒಂದು ರೂಪಾಯಿಗೆ ಕೆ.ಜಿ.

ಅಕ್ಕಿ ಕೊಡುತ್ತಿದ್ದಾರೆ. 8 ಕೋಟಿ ಟನ್ ಆಹಾರಧಾನ್ಯ ಗೋದಾಮುಗಳಲ್ಲಿ ಕೊಳೆಯುತ್ತಿದೆ. ಅದನ್ನು ಬಡವರಿಗೆ ಕೊಟ್ಟರೆ ಸಂತೋಷ ಪಡುತ್ತಾರೆ.

ಆದರೆ ಕೇಂದ್ರದ ಕಾಂಗ್ರೆಸ್ ಸರ್ಕಾರ ಈ ಕೆಲಸಕ್ಕೆ ಮುಂದಾಗುತ್ತಿಲ್ಲ' ಎಂದು ಹರಿಹಾಯ್ದರು.

`ಎಲ್ಲರಿಗೂ ಏಕ ರೂಪದ ಪಡಿತರ ಚೀಟಿ ಮಾಡಿ ಒಂದು ರೂಪಾಯಿಗೆ ಕೆ.ಜಿ. ಅಕ್ಕಿ ವಿತರಿಸಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌರಮ್ಮ ಪಾಟೀಲ, ರಾಜ್ಯ ಘಟಕದ ಉಪಾಧ್ಯಕ್ಷ ಯು. ಬಸವರಾಜ, ಶರಣಬಸಪ್ಪ ಮಮಶೆಟ್ಟಿ, ಸುಭಾಷ ಜೇವರ್ಗಿ, ಮೇಘರಾಜ ಕಠಾರೆ ಮತ್ತಿತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.