ಜಿಲ್ಲೆ:ಮಲೇರಿಯಾ ನಿಯಂತ್ರಣ

7
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ

ಜಿಲ್ಲೆ:ಮಲೇರಿಯಾ ನಿಯಂತ್ರಣ

Published:
Updated:
ಜಿಲ್ಲೆ:ಮಲೇರಿಯಾ ನಿಯಂತ್ರಣ

ಗುಲ್ಬರ್ಗ: ಐದು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ವಿಪರೀತವಾಗಿದ್ದ ಮಲೇರಿಯಾ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯ ಇಳಿಕೆಯಾಗಿದೆ.ಮಲೇರಿಯಾ ನಿಯಂತ್ರಣಗೊಳಿಸಲು ಸರ್ಕಾರ ಅನುಸರಿಸಿದ ಹೊಸ ವಿಧಾನಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿವೆ ಎನ್ನುವುದನ್ನು ಜಿಲ್ಲಾ ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಸಂಖ್ಯೆಗಳು ಮನದಟ್ಟು ಮಾಡುತ್ತವೆ.2010ರಲ್ಲಿ ಆಶಾ ಕಾರ್ಯಕರ್ತೆಯರಿಗೆ ಒದಗಿಸಿದ `ಮಲೇರಿಯಾ ಪತ್ತೆ ಹಚ್ಚುವ ಕಿಟ್'ನಿಂದಾಗಿ ಮಲೇರಿಯಾ ಪೀಡಿತರಿಗೆ ತಕ್ಷಣ ಚಿಕಿತ್ಸೆ ಒದಗಿಸಲು ಸಾಧ್ಯವಾಗಿರುವುದು ಪ್ರಮುಖ ಕಾರಣವಾಗಿದೆ. ಅಲ್ಲಿಂದ ಮಲೇರಿಯಾ ರೋಗಕ್ಕೆ  ತುತ್ತಾಗುವವರ ಸಂಖ್ಯೆಯೂ ಕಡಿಮೆಯಾಗುತ್ತಾ ಬಂದಿದೆ.2007 ರಲ್ಲಿ 3,78,315 ಮಂದಿಯ ರಕ್ತ ತಪಾಸಣೆ ಮಾಡಲಾಗಿತ್ತು. ಅದರಲ್ಲಿ  5,194 ಮಂದಿಯಲ್ಲಿ ಮಲೇರಿಯಾ ಪತ್ತೆಯಾಗಿ, 588 ಜನರು ಗಂಭೀರ ಸ್ಥಿತಿಗೆ ತಲುಪಿದ್ದರು. ಜಿಲ್ಲೆಯಲ್ಲಿ ಮೂರು ಮಂದಿ ಸಾವನ್ನಪ್ಪಿದರು. 2010ರಲ್ಲಿ 3,77,801 ಮಂದಿಯ ರಕ್ತ ತಪಾಸಣೆ ಮಾಡಲಾಗಿತ್ತು. ಅದರಲ್ಲಿ 7,114 ಮಂದಿಯಲ್ಲಿ ಮಲೇರಿಯಾ ಪತ್ತೆಯಾಗಿ, 1,148 ಜನರು ಗಂಭೀರ ಸ್ಥಿತಿಗೆ ತಲುಪಿದ್ದರು. ಜಿಲ್ಲೆಯಲ್ಲಿ ಇಬ್ಬರು ಮಂದಿ ಸಾವನ್ನಪ್ಪಿದರು.  ಮಲೇರಿಯಾ 2011ರಲ್ಲಿ ಗಣನೀಯ ನಿಯಂತ್ರಣವಾಗಿದೆ. 3,56,473 ಮಂದಿಯ ರಕ್ತ ತಪಾಸಣೆ ಮಾಡಲಾಗಿತ್ತು. ಅದರಲ್ಲಿ 3,966 ಮಂದಿಯಲ್ಲಿ ಮಲೇರಿಯಾ ಪತ್ತೆಯಾಗಿ, 290 ಜನರು ಮಾತ್ರ ಗಂಭೀರ ಸ್ಥಿತಿಗೆ ತಲುಪಿದ್ದರು.  ಸಾವು ಸಂಭವಿಸಿರಲಿಲ್ಲ. ಅದೇ ರೀತಿ 2012ರಲ್ಲಿ ಗಂಭೀರ ಸ್ಥಿತಿಗೆ ತಲುಪಿದವರ ಸಂಖ್ಯೆ 60ಕ್ಕೆ ಇಳಿಮುಖವಾಯಿತು.ಜನರಲ್ಲಿ ಜಾಗೃತಿ:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಜಿಲ್ಲಾ ಅಶ್ರಿತ ರೋಗಗಳ ನಿಯಂತ್ರಣ ಇಲಾಖೆಯು ಸೊಳ್ಳೆಯಿಂದ ಹರಡುವ ರೋಗಗಳ ಬಗ್ಗೆ ಸದಾ ಸಂಶೋಧನೆ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಜೂನ್ ತಿಂಗಳಲ್ಲಿ ಜಿಲ್ಲೆಯಾದ್ಯಂತ `ಮಲೇರಿಯಾ ಮಾಸಾಚರಣೆ' ಹಮ್ಮಿಕೊಂಡು ಜನರಲ್ಲಿ ಸೊಳ್ಳೆ ಉತ್ಪತ್ತಿ ಹಾಗೂ ಅದರ ನಿಯಂತ್ರಣ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ.`ಸೊಳ್ಳೆಯಿಂದ ಹರಡುವ ನಾಲ್ಕು ರೋಗಗಳಲ್ಲಿ ಮಲೇರಿಯಾ ಪ್ರಮಾಣವು ಗುಲ್ಬರ್ಗ ಜಿಲ್ಲಾ ಮಟ್ಟಿಗೆ ಸಾಕಷ್ಟು ಕಡಿಮೆಯಾಗಿದೆ. ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ಸಮುದಾಯ ಪಾಲ್ಗೊಳ್ಳುವಿಕೆ ತುಂಬಾ ಮುಖ್ಯ. ಇತ್ತೀಚೆಗೆ ಜನರು ಸ್ವಚ್ಛತೆ ಕಡೆಗೆ ಗಮನ ಹರಿಸುತ್ತಿರುವುದರಿಂದ ಹಾಗೂ ಇಲಾಖೆಯಿಂದ ಸಾಕಷ್ಟು ಸೂಚನೆಗಳನ್ನು ನೀಡುವುದರ ಜೊತೆಗೆ ಅನುಷ್ಠಾನವಾಗುವಂತೆ ನೋಡಿ ಕೊಳ್ಳಲಾಗುತ್ತಿರುವುದರಿಂದ ಮಲೇರಿಯಾ ನಿಯಂತ್ರಣವಾಗಿದೆ' ಎಂದು ಜಿಲ್ಲಾ ಅಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ (ಡಿವಿಬಿಡಿಸಿಒ) ಡಾ. ರವಿ ಬಿರಾದಾರ ಹೇಳಿದರು.ಮಲೇರಿಯಾ ಎಂದರೆ?

ಅನಾಫಿಲಿಸ್ ಎನ್ನುವ ಹೆಣ್ಣು ಸೊಳ್ಳೆಯು ಮಲೇರಿಯಾ ರೋಗವನ್ನು ಹರಡುತ್ತದೆ. ಮಲೇರಿಯಾ ಪೀಡಿತರಿಗೆ ಕಚ್ಚುವ ಸೊಳ್ಳೆಗಳು ರೋಗವನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಆರಂಭದಲ್ಲಿ ಮಲೇರಿಯಾ ಪೀಡಿತರು ಚಳಿ, ಜ್ವರಕ್ಕೀಡಾಗುತ್ತಾರೆ. ತಲೆನೋವು, ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ. ಸಂಶಯವಿದ್ದವರು ಕೂಡಲೇ ರಕ್ತ ತಪಾಸಣೆ ಮಾಡಿಸಿಕೊಂಡು ಮಲೇರಿಯಾ ಖಚಿತಗೊಂಡರೆ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು.ಔಷಧಿ ಕ್ರಮದಲ್ಲಿ ಬದಲಾವಣೆ

ರೋಗಿಗಳಿಗೆ ನೀಡುತ್ತಿದ್ದ ಔಷಧಿಯಲ್ಲಿ ಬದಲಾಗಿದೆ. ಜಿಲ್ಲೆಯಾದ್ಯಂತ ನೀರಿನ ಕೊಳಗಳಲ್ಲಿ ವಿಶೇಷ ಜಾತಿ ಮೀನು (ಸೇವನೆಗೆ ನಿಷಿದ್ಧ) ಬಿಟ್ಟು ಸೊಳ್ಳೆ ಉತ್ಪತ್ತಿ ನಿಯಂತ್ರಿಸಿರುವುದು, ನೀರು ನಿಲ್ಲುವ ಸ್ಥಳಗಳಲ್ಲಿ ಔಷಧಿ ಸಿಂಪರಣೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಈಚೆಗೆ ನೀಡಿರುವ ವಿಶೇಷ ಕಿಟ್- ಈ ಎಲ್ಲಾ ಅಂಶಗಳಿಂದಾಗಿ ಗುಲ್ಬರ್ಗ ಜಿಲ್ಲೆಯಲ್ಲಿ ಮಲೇರಿಯಾ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಲು ಕಾರಣ.

-ಡಾ.ಶಿವರಾಜ ಸಜ್ಜನ, ಜಿಲ್ಲಾ ಆರೋಗ್ಯಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry