ಭಾನುವಾರ, ಆಗಸ್ಟ್ 9, 2020
21 °C

`ನೋವು ಕೊಡದಿರುವುದೇ ಆಚಾರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನೋವು ಕೊಡದಿರುವುದೇ ಆಚಾರ'

ಗುಲ್ಬರ್ಗ: ಶರಣರು ಹೇಳಿದಂತೆ ಬದುಕಿನಲ್ಲಿ ಆಚಾರಗಳನ್ನು ಅನುಸರಿಸಿಕೊಂಡು ಹೋದರೆ ಎಲ್ಲರಿಗೂ ಮುಕ್ತಿ ದೊರಕುತ್ತದೆ. ಇನ್ನೊಬ್ಬರಿಗೆ ನೋವು ಕೊಡದಂತೆ ಬದುಕುವುದೇ ಆಚಾರ ಎಂದು ಸೋಲ್ಲಾಪುರದ ಸಿಂಧೂತಾಯಿ ಕಾಡಾದಿ ಹೇಳಿದರು.ಗುಲ್ಬರ್ಗ ಬಸವ ಸಮಿತಿಯ ಅಕ್ಕನ ಬಳಗವು `ಬಸವ ಮಂಟಪ'ದಲ್ಲಿ ಆಯೋಜಿಸಿರುವ 6ನೇ ಮಹಾದೇವಿಯಕ್ಕಗಳ ಸಮ್ಮೇಳನದಲ್ಲಿ ಭಾನುವಾರ `ಮಂಗಲದ ಹರಹು' ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.ಪ್ರತಿನಿತ್ಯ ಶರಣರನ್ನು ನೆನೆಯುತ್ತಾ ಮಾಡಿದ ಕಾಯಕಗಳೆಲ್ಲ ಶುದ್ಧಿಯಾಗುತ್ತವೆ. ಮುಟ್ಟುವ ವಸ್ತುಗಳಲ್ಲಿ ಪರಿಶುದ್ಧಿ ತುಂಬಿಕೊಳ್ಳುತ್ತದೆ. ಶರಣರ ವಚನಗಳ ಚಿಂತನೆಯನ್ನು ಮನದಲ್ಲಿ ತುಂಬಿಕೊಂಡು ನಡೆದರೆ, ಬದುಕು ಸುಂದರವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ದೇವರನ್ನು ಒಲಿಸಿಕೊಳ್ಳಲು ಮಾನಸ ಸರೋವರಕ್ಕೆ ಹೋಗಬೇಕಿಲ್ಲ. ಅಲ್ಲಿಗೆ ಹೋದರೆ ಮಾತ್ರ ಮುಕ್ತಿ ಎನ್ನುವ ಹಾಗಿದ್ದರೆ, ಬಡವರಿಗೆ ದೇವರೆ ಸಿಗುವುದಿಲ್ಲ ಎಂದಾಗುತ್ತದೆ.ಉತ್ತಮ ಆಚಾರ, ವಿಚಾರದಿಂದ ಕುಳಿತಲ್ಲಿಯೇ ದೇವರ ಸ್ಮರಣೆ ಮಾಡಿದರೂ ದೇವರು ಒಲಿಯುತ್ತಾನೆ. ಮೂಢನಂಬಿಕೆಗಳನ್ನು ಕೈ ಬಿಡಬೇಕು ಎಂದು ಮನವಿ ಮಾಡಿದರು.ಸಂಸಾರದ ಕೈಹಿಡಿದು ಸನ್ಮಾರ್ಗದಲ್ಲಿ ನಡೆದರೆ, ಮುಕ್ತಿ ಕೊಡುವುದಕ್ಕೆ ದೇವರೆ ಹುಡುಕಿಕೊಂಡು ಬರುತ್ತಾನೆ. `ಸತಿ-ಪತಿ ಒಂದಾದ ಭಕ್ತಿ ಹಿತ' ಎಂದು ಶರಣರು ಹೇಳಿದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.`ಯಥಾ ಬ್ರಹ್ಮಾಂಡ ತಥಾ ಪಿಂಡಾಂಡ' ಎನ್ನುವಂತೆ ಗಾಳಿ, ಚಳಿಗಳಿಗೆ ಮೈ ಮನಸ್ಸನ್ನು ಮುದುಡಿಸಿಕೊಳ್ಳಬಾರದು. ಸ್ವಲ್ಪ ಅದರ ಹಿತವನ್ನು ಅನುಭವಿಸಿ ದೇಹವನ್ನು ಗಟ್ಟಿ ಮಾಡಿಕೊಳ್ಳಬೇಕು.ನಿಸರ್ಗದಲ್ಲಿನ ಎಲ್ಲವನ್ನು ಒಪ್ಪಿಕೊಳ್ಳುವುದಕ್ಕೆ ಶರೀರಕ್ಕೆ ರೂಢಿ ಮಾಡಿಸಬೇಕು. ದೇಹಕ್ಕೆ ಅಷ್ಟೊಂದು ಆರೈಕೆ ಮಾಡಿದರೆ ಆರೋಗ್ಯ ಮತ್ತಷ್ಟು ಹದಗೆಡುತ್ತದೆ.ಮಿತ ಆಹಾರದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದ ಅಕ್ಕ ಮಹಾದೇವಿಯ ವಚನವನ್ನು ಪಾಲಿಸಬೇಕು ಎಂದು ಹೇಳಿದರು.ಸನ್ಮಾನ: ಪ್ರಭಾವತಿ ಧರ್ಮಸಿಂಗ್, ರಾಧಾಬಾಯಿ ಖರ್ಗೆ, ಬಸಲಿಂಗಮ್ಮ ಪಾಟೀಲ, ಭಾಗ್ಯಶ್ರೀ ಪಾಟೀಲ, ಭಾರತಿ ದರ್ಶನಾಪುರ, ಪ್ರೇಮಲತಾ ಪಾಟೀಲ, ಸರಸ್ವತಿ ಮಾಲೆ, ಮಹಾದೇವಿ ಉಪ್ಪಿನ, ಕಸ್ತೂರಿ ಮೇಳಕುಂದಿ, ಲಕ್ಷ್ಮೀಬಾಯಿ ಸುಲ್ತಾನಪುರ ಅವರನ್ನು ಡಾ. ವಿಲಾಸವತಿ ಖೂಬಾ, ಅನಸೂಯಾ ನಡಕಟ್ಟಿ ಅವರು ಸನ್ಮಾನಿಸಿದರು.ಗಿರಿಜಾದೇವಿ ನೃತ್ಯಕಲಾ ಮಂದಿರದ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ನೀಡಿದರು. ಗೀತಾ ಪಾಟೀಲ ನಿರೂಪಿಸಿದರು. ಸುವರ್ಣ ಚಿಮಕೋಡ ಪರಿಚಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.