ಚಿಂಚೋಳಿ:ಆಟೊಗಳ ಅಡ್ಡಾದಿಡ್ಡಿ ಸಂಚಾರ

ಭಾನುವಾರ, ಜೂಲೈ 21, 2019
21 °C

ಚಿಂಚೋಳಿ:ಆಟೊಗಳ ಅಡ್ಡಾದಿಡ್ಡಿ ಸಂಚಾರ

Published:
Updated:

ಚಿಂಚೋಳಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಆಟೊಗಳು ಬಸ್‌ಗಳಿಗೆ ಮುತ್ತಿಕೊಳ್ಳುತ್ತಿದ್ದು, ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅಣವಾರ ಗ್ರಾಮದ ಮುಖಂಡ ಸುಭಾಷ ಗಂಗನಪಳ್ಳಿ ದೂರಿದ್ದಾರೆ.ರಾಯಚೂರು ವನ್ಮಾಪರಪಳ್ಳಿ ರಾಜ್ಯ ಹೆದ್ದಾರಿ 15ರ ಮುಲ್ಲಾಮಾರಿ ನದಿಯ ಸೇತುವೆಯ ಇಳಿಜಾರಿನಲ್ಲಿ ಬಸ್‌ಗಳಿಗೆ ಆಟೊಗಳು ಅಡ್ಡಾದಿಡ್ಡಿಯಾಗಿ ಮುತ್ತಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.ನ್ಯಾಯಾಲಯ ಮತ್ತು ಪೊಲೀಸ್ ಠಾಣೆ ಹೊರತು ಪಡಿಸಿದರೆ, ಎಲ್ಲಾ ಇಲಾಖೆಗಳ ಕಚೇರಿಗಳು ಇಲ್ಲಿನ ಚಂದಾಪುರದಲ್ಲಿವೆ.  ಹೀಗಾಗಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು, ಸಾರ್ವಜನಿಕರು ಬಸ್ಸಿನಲ್ಲಿ ಪ್ರಯಾಣಿಸಿ ಇದೇ ವೃತ್ತದಲ್ಲಿ ಇಳಿದು ಆಟೊಗಳ ಮೂಲಕ ಚಂದಾಪುರಕ್ಕೆ ತೆರಳುವುದು ಸಾಮಾನ್ಯ. ಆಟೊ ಚಾಲಕರು ಇಲ್ಲಿ ಬಸ್‌ನ ಬರುವಿಕೆಗೆ ಕಾಯುತ್ತ, ಬಸ್ ಕಂಡ ತಕ್ಷಣ ಮುತ್ತಿಕೊಂಡು ಜನರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ಗುಲ್ಬರ್ಗ ಹಾಗೂ ಸೇಡಂನಿಂದ ಬರುವ ಬಸ್‌ಗಳು ಇದೇ ವೃತ್ತದಿಂದ ಚಿಂಚೋಳಿಗೆ ತೆರಳುತ್ತವೆ. ಇನ್ನೊಂದು ರಸ್ತೆ ಚಂದಾಪುರಕ್ಕೆ ಹೋಗುತ್ತದೆ. ಅತಿಗಣ್ಯ ವ್ಯಕ್ತಿಗಳು ಇಲ್ಲಿಗೆ ಆಗಮಿಸುವಾಗ ಮಾತ್ರ ಈ ವೃತ್ತದಲ್ಲಿ ಪೊಲೀಸ್ ಪೇದೆಯನ್ನು ನಿಯೋಜಿಸುತ್ತಾರೆ.ಉಳಿದ  ಸಮಯದಲ್ಲಿ ಯಾರೂ ಇರುವುದಿಲ್ಲ. ಪೊಲೀಸ್ ಅಧಿಕಾರಿಗಳು ಇದೇ ವೃತ್ತದಿಂದಲೇ ತಮ್ಮ ಕಚೇರಿಗೆ ತೆರಳುತ್ತಾರೆ. ಆದರೆ ಅವರು ಆಟೊಗಳ ಹಾವಳಿ ನಿಯಂತ್ರಿಸಲು ಮುಂದಾಗುತ್ತಿಲ್ಲ ಎಂದು ಜನರು ಅಳಲು ತೋಡಿಕೊಳ್ಳುತ್ತಾರೆ.ಈ ವೃತ್ತದ ಪಕ್ಕ ರಸ್ತೆ ಬದಿಯಲ್ಲಿ ಆಟೊಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಿ, ಪ್ರಯಾಣಿಕರ ತೊಂದರೆ ಸರಿಪಡಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.ಪೇದೆ ನಿಯೋಜನೆ:  ಈ ಸಮಸ್ಯೆ ನನ್ನ ಗಮನಕ್ಕೆ ಈವರೆಗೆ ಬಂದಿರಲಿಲ್ಲ. ನಾಳೆಯಿಂದಲೇ ಚಂದಾಪುರದ ಪಿ.ಯು. ಕಾಲೇಜು ಬಳಿ ಸೇವೆಗೆ ನಿಯೋಜನೆಗೊಳ್ಳುವ ಪೇದೆಯನ್ನು ಬಸವೇಶ್ವರ ವೃತ್ತಕ್ಕೂ, ಪ್ರತಿ ಗಂಟೆಗೊಮ್ಮೆ ಕಳುಹಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದಾಗಿ ಸರ್ಕಲ್ ಇನ್ಸ್‌ಪೆಕ್ಟರ್ ನಿರಂಜನ ಪಾಟೀಲ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry