ತೊಗರಿಸಂಶೋಧನೆಗೆ ಸಲಹೆ

ಗುಲ್ಬರ್ಗ: ತೊಗರಿ ಕಣಜವೆಂದು ಖ್ಯಾತಿಗಳಿಸಿರುವ ಜಿಲ್ಲೆಯಲ್ಲಿ ಈಗಾಗಲೇ ಟಿ.ಎಸ್. 3 ಆರ್ ತಳಿಯ ತೊಗರಿಯನ್ನು ರೈತರು ಬೆಳೆಯುತ್ತಿದ್ದಾರೆ. ಇದು ಉತ್ತಮ ಇಳುವರಿ ನೀಡುತ್ತಿದೆ. ಇದಕ್ಕಿಂತಲೂ ಹೆಚ್ಚಿನ ಇಳುವರಿಗಾಗಿ ಸುಧಾರಿತ ಮಾರುತಿ ಮಾದರಿಯ ಟಿ.ಎಸ್.3ಆರ್. ತೊಗರಿ ಬೀಜಗಳನ್ನು ಸಂಶೋಧಿಸುವಂತೆ ಕರ್ನಾಟಕ ರಾಜ್ಯ ಕೃಷಿ ಮಿಷನ್ನ ಅಧ್ಯಕ್ಷ ಡಾ.ಎಸ್.ಎ. ಪಾಟೀಲ್ ಕರೆ ನೀಡಿದರು.
ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬುಧವಾರ ಆಯೋಜಿಸಲಾಗಿದ್ದ `2013-14ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ದ್ವಿದಳ ಧಾನ್ಯಗಳ ರಾಜ್ಯಮಟ್ಟದ ಕಾರ್ಯಾಗಾರ'ವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಗುಲ್ಬರ್ಗ ಶೇ 60ರಷ್ಟು ದ್ವಿದಳ ಧಾನ್ಯ ಬೆಳೆಯುವ ಜಿಲ್ಲೆಯಾಗಿದೆ. ದೇಶದಲ್ಲೇ ಅತೀ ಹೆಚ್ಚು ಅಂದರೆ 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯವನ್ನು ಇಲ್ಲಿ ಬೆಳೆಯಲಾಗುತ್ತದೆ. ಈ ಜಿಲ್ಲೆಯಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಾದರೆ ರಾಜ್ಯದ ಉತ್ಪಾದನೆ ಹೆಚ್ಚಾಗುವುದೆಂಬ ಉದ್ದೆೀಶದಿಂದ ಸರ್ಕಾರ ವಿನೂತನ ಯೋಜನೆಗಳನ್ನು ರೂಪಿಸುತ್ತಿದೆ.
ಆದಾಗ್ಯೂ ಪ್ರಕೃತಿ ವಿಕೋಪದಿಂದ ಸಾಧ್ಯವಾಗುತ್ತಿಲ್ಲ. ಇನ್ನು ಮುಂದೆ ತಂತ್ರಜ್ಞಾನ ಬಳಸಿಕೊಂಡು ಉತ್ಪಾದನೆ ಹೆಚ್ಚಿಸಬೇಕಾಗಿದೆ. ಗುಲ್ಬರ್ಗ ಜಿಲ್ಲೆಯಲ್ಲಿ 250 ದಾಲ್ಮಿಲ್ಗಳಿದ್ದು 20 ಲಕ್ಷ ಟನ್ ಸರಾಸರಿ ರೂ 800 ಕೋಟಿ ವಹಿವಾಟು ಪ್ರತಿವರ್ಷ ನಡೆಯುತ್ತದೆ. ಆದಾಗ್ಯೂ ಈ ಜಿಲ್ಲೆಗೆ ತೊಗರಿ ಇಳುವರಿ ಹೆಚ್ಚಿಸಲು ಮಹತ್ವ ನೀಡಬೇಕಾಗಿದೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ತೊಗರಿ ಕಾಳನ್ನು ಸಂಸ್ಕರಿಸಿದಾಗ ಶೇ 65 ಬೇಳೆ, ಶೇ 15 ಬೇಳೆ ನುಚ್ಚು ಹಾಗೂ ಶೇ 20 ಭೂಸಾ ದೊರೆಯುತ್ತದೆ. ಈ ಬೇಳೆಯ ಪ್ರಮಾಣವು ಶೇ 70 ರಷ್ಟು ಬರುವಂತಾದರೆ ರೈತರಿಗೆ ಇನ್ನು ಹೆಚ್ಚಿನ ಆರ್ಥಿಕ ಪ್ರಯೋಜನವಾಗುತ್ತದೆ.
ಗುಲ್ಬರ್ಗ ಜಿಲ್ಲೆಯಲ್ಲಿ ಮಳೆ ಬಂದರೂ ಕಾಲಕಾಲಕ್ಕೆ ನಿಖರವಾಗಿ ಬರುವುದಿಲ್ಲ. ಹೊಲಗಳಲ್ಲಿ ಹಸಿ ಸಂಗ್ರಹ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಲ್ಯಾಂಡ್ ಇಂಜಿನಿಯರಿಂಗ್ ವಿಭಾಗವನ್ನು ಪ್ರಾರಂಭಿಸಬೇಕು.
ತಿಪ್ಪೆ ಗೊಬ್ಬರ ಹಾಗೂ ಸಾವಯವ ಗೊಬ್ಬರಕ್ಕೆ ಹೆಚ್ಚಿನ ಪ್ರಮಾಣದ ನೀರು ಹೀರಿಕೊಳ್ಳುವ ಶಕ್ತಿ ಇರುವುದರಿಂದ ರೈತರು ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು ಎಂದು ಹೇಳಿದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ವಿ.ಪಾಟೀಲ್ ಮಾತನಾಡಿ, ಈ ಭಾಗದಲ್ಲಿ ತೊಗರಿ ಬೆಳೆ ಸುಧಾರಣೆಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು ಕಪ್ಪು ಮಣ್ಣಿನಲ್ಲಿ 150 ರಿಂದ 160 ದಿವಸಗಳಲ್ಲಿ ಬೆಳೆಯು ಕಟಾವಿಗೆ ಬರುವ ತಳಿ ಮುಖ್ಯವಾಗಿ ಬೇಕಾಗಿದೆ.
ಈ ನಿಟ್ಟಿನಲ್ಲಿ 118 ಸಂಖ್ಯೆಯ ತೊಗರಿ ತಳಿಯನ್ನು ಕಂಡು ಹಿಡಿಯಲಾಗಿದ್ದು, ಈ ವರ್ಷ ರೈತರ ಹೊಲದಲ್ಲಿ ಪ್ರಾಯೋಗಿಕವಾಗಿ ಬಿತ್ತನೆ ಮಾಡಲಾಗುವುದು. ಇದಕ್ಕೆ ನೆಟೆ ರೋಗ ನಿರೋಧಕ ಶಕ್ತಿ ಇರುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ನಿರ್ದೇಶಕ ಡಾ. ಕೆ.ವಿ.ಸರ್ವೇಶ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಪ್ರಭಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಐ.ಈ. ಬಳತಕರ್ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ದ್ವಿದಳ ಧಾನ್ಯಗಳ ಅಧಿಕ ಇಳುವರಿಗಾಗಿ ಸುಧಾರಿತ ತಂತ್ರಜ್ಞಾನಗಳ ಕೈಪಿಡಿ ಹಾಗೂ ವಿವಿಧ ಯೋಜನೆಗಳ ಮಾಹಿತಿಯ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.