ಕಾರ್ಮಿಕರಿಗೆ ಪರಿಷ್ಕೃತ ವೇತನ: ಆಗ್ರಹ

ಭಾನುವಾರ, ಜೂಲೈ 21, 2019
26 °C
ಸಿಮೆಂಟ್ ವೇತನ ಮಂಡಳಿ

ಕಾರ್ಮಿಕರಿಗೆ ಪರಿಷ್ಕೃತ ವೇತನ: ಆಗ್ರಹ

Published:
Updated:

ಗುಲ್ಬರ್ಗ: ವಿಭಾಗದಲ್ಲಿನ ಸಿಮೆಂಟ್ ಕಾರ್ಖಾನೆಗಳ ಗುತ್ತಿಗೆ ಕಾರ್ಮಿಕರಿಗೆ ಸಿಮೆಂಟ್ ವೇತನ ಮಂಡಳಿ (ವೇಜ್ ಬೋರ್ಡ್) ನಿಗದಿಪಡಿಸಿದ ವೇತನ ನೀಡದಿದ್ದರೆ ಜು.15ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಶ್ರಮಜೀವಿಗಳ ವೇದಿಕೆ ಎಚ್ಚರಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ, `ರಾಜಶ್ರೀ ಸಿಮೆಂಟ್ (ಆಲ್ಟ್ರಾಟೆಕ್) ಮಳಖೇಡ, ವಾಸವದತ್ತಾ ಸಿಮೆಂಟ್ ಸೇಡಂ, ಚೆಟ್ಟಿನಾಡ ಸಿಮೆಂಟ್ ಚಿಂಚೋಳಿ, ಗಿಣಿಗೇರಾ ಸಿಮೆಂಟ್ ಕೊಪ್ಪಳ ಕಂಪೆನಿಗಳಲ್ಲಿ ಸುಮಾರು 8,500 ಗುತ್ತಿಗೆ ಕಾರ್ಮಿಕರು 15 ರಿಂದ 20 ವರ್ಷದಿಂದ ದುಡಿಯುತ್ತಿದ್ದಾರೆ. ಇವರಿಗೆ ಸಿಮೆಂಟ್ ವೇತನ ಮಂಡಳಿ (ವೇಜ್ ಬೋರ್ಡ್) ಅನುಸಾರ ಸಂಬಳ ನೀಡುತ್ತೇವೆ ಎಂದು ಈ ಸಂಸ್ಥೆಗಳ ಪ್ರಧಾನ ಪ್ರಬಂಧಕರು 11 ಫೆಬ್ರುವರಿ 2011ರಂದು ಕೇಂದ್ರ ಕಾರ್ಮಿಕ ಆಯುಕ್ತರ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದರೆ ಜಾರಿಗೊಳಿಸಿಲ್ಲ' ಎಂದು ದೂರಿದರು.`ಇದನ್ನು ಪ್ರಶ್ನಿಸಿ ವೇದಿಕೆ ನಡೆಸಿದ ಹೋರಾಟ ನಡೆಸಿತ್ತು. ಅದರ ಫಲವಾಗಿ ಪ್ರಾದೇಶಿಕ ಕಾರ್ಮಿಕ ಆಯುಕ್ತರು  19 ಫೆಬ್ರುವರಿ 2013ರಂದು ಸಿಮೆಂಟ್ ಕಂಪೆನಿಗಳಿಗೆ ಪತ್ರ ಬರೆದು, ಕೂಡಲೇ ವೇತನ ಜಾರಿಗೊಳಿಸಿ ಎಂದು ಸೂಚಿಸಿದ್ದಾರೆ. ಆದರೂ ಈ ತನಕ ವೇತನ ನೀಡಿಲ್ಲ' ಎಂದರು.`ವೇತನ ಮಂಡಳಿ ನಿಯಮಾವಳಿ ಪ್ರಕಾರ ಈ ಕಾರ್ಮಿಕರಿಗೆ ಸುಮಾರು 16 ಸಾವಿರ ರೂಪಾಯಿ ಮಾಸಿಕ ವೇತನ ಸಿಗಬೇಕು. ಆದರೆ ಸಂಸ್ಥೆಯು ಕೇವಲ 3ರಿಂದ 6 ಸಾವಿರ ರೂಪಾಯಿ ಕೂಲಿ ಮಾತ್ರ ನೀಡುತ್ತಿದೆ. ಈ ನಿರಂತರ ಶೋಷಣೆ ಬಗ್ಗೆ ಜಿಲ್ಲೆಯ ಅಧಿಕಾರಿಗಳು, ಶಾಸಕರು, ಸಚಿವರು ಕ್ರಮ ಕೈಗೊಳ್ಳಲು ಮುಂದಾಗಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.`ಹಿಂದಿನ ಪ್ರಾದೇಶಿಕ ಆಯುಕ್ತರಾದ ರತ್ನ ಪ್ರಭಾ ಆದೇಶದ ಮೇರೆಗೆ ಅಂದಿನ ಸೇಡಂ ಉಪವಿಭಾಗಾಧಿಕಾರಿ ಡಿ.ಕೆ. ರವಿ ಈ ಬಗ್ಗೆ ತನಿಖೆ ನಡೆಸಿದ್ದರು. ಬಳಿಕ ವರದಿಯಲ್ಲಿ `ಈ ಗುತ್ತಿಗೆ ಕಾರ್ಮಿಕರು ಹಲವು ವರ್ಷಗಳಿಂದ ಕಂಪೆನಿಗಳಲ್ಲಿ ಕಾಯಂ ಕೆಲಸ ಮಾಡುತ್ತಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸಿಮೆಂಟ್ ವೇತನ ಮಂಡಳಿ ಅನ್ವಯ ಸಂಬಳಕ್ಕೆ ಅರ್ಹರಾಗಿದ್ದಾರೆ' ಎಂದು ಶಿಫಾರಸು ಮಾಡಿದ್ದರು. ಆದರೂ ಕಂಪೆನಿಗಳು ಸ್ಪಂದಿಸಲಿಲ್ಲ. ಈ ಕ್ರಮವನ್ನು ಪ್ರತಿಭಟಿಸಿ ವೇದಿಕೆ ವತಿಯಿಂದ ಕಂಪೆನಿಗಳ ಆಡಳಿತ ಮಂಡಳಿಗಳಿಗೆ 45 ದಿನಗಳ ಹಿಂದೆ ನೋಟಿಸ್ ನೀಡಲಾಗಿದೆ. ಕಂಪೆನಿ ಸ್ಪಂದಿಸದಿದ್ದರೆ ಆಮರಣಾಂತ ಉಪವಾಸ ನಡೆಸಲಾಗುವುದು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry