ದಿನಕ್ಕೆ 200 ಟನ್ ತ್ಯಾಜ್ಯ: ವಿಲೇವಾರಿ 160 ಟನ್

ಬುಧವಾರ, ಜೂಲೈ 24, 2019
28 °C

ದಿನಕ್ಕೆ 200 ಟನ್ ತ್ಯಾಜ್ಯ: ವಿಲೇವಾರಿ 160 ಟನ್

Published:
Updated:

ಗುಲ್ಬರ್ಗ: ಗುಲ್ಬರ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಬಡಾವಣೆಗಳು ಅಭಿವೃದ್ಧಿಯಾದಂತೆ, ತ್ಯಾಜ್ಯದ ಪ್ರಮಾಣವು ಹೆಚ್ಚಳವಾಗಿದೆ.ತ್ಯಾಜ್ಯ ವಿಲೇವಾರಿ ನಿರಂತರ ನಡೆದಿದೆ ಎನ್ನುವುದು ಪಾಲಿಕೆ ಲೆಕ್ಕ. ವಾಸ್ತವವಾಗಿ ನಗರದಲ್ಲಿದ್ದ ಬಹುತೇಕ ಕೆರೆಗಳು ವಿಲೇವಾರಿಗೊಳ್ಳದ ತ್ಯಾಜ್ಯದಲ್ಲೇ ಮುಚ್ಚಿ ಹೋಗಿವೆ. ನಗರದಲ್ಲಿನ ತ್ಯಾಜ್ಯ ಸಾಗಿಸುವ ಕೆಲಸವನ್ನು ಸಮರ್ಪಕವಾಗಿ ಮಾಡದಿರುವ ಪಾಲಿಕೆಯು, ಉದನೂರು ಗ್ರಾಮದ ಬಳಿ ಹಾಕುತ್ತಿರುವ ತ್ಯಾಜ್ಯದ  ವೈಜ್ಞಾನಿಕ ವಿಲೇವಾರಿ ಬಗ್ಗೆಯೂ ದಿವ್ಯ ನಿರ್ಲಕ್ಷ್ಯ ತಾಳಿದೆ.ಪಾಲಿಕೆ ಲೆಕ್ಕದ ಪ್ರಕಾರ, ನಗರದಲ್ಲಿ ಪ್ರತಿದಿನ 200 ಟನ್ ತ್ಯಾಜ್ಯ ಬೀಳುತ್ತದೆ. ಅದರಲ್ಲಿ ಪ್ರತಿದಿನ 160 ಟನ್ ತ್ಯಾಜ್ಯವನ್ನು ಮಾತ್ರ ಉದನೂರು ಸಮೀಪದ ವಿಲೇವಾರಿ ಪ್ರದೇಶಕ್ಕೆ ರವಾನಿಸಲು ಸಾಧ್ಯವಾಗುತ್ತಿದೆ.ಈಚೆಗಷ್ಟೆ ಪಾಲಿಕೆಯು 13 ಟ್ರ್ಯಾಕ್ಟರ್‌ಗಳನ್ನು ಖರೀದಿಸಿದೆ. ಜೊತೆಗೆ ಗುತ್ತಿಗೆ ಆಧಾರದ ಟ್ರ್ಯಾಕ್ಟರ್‌ಗಳು ಇವೆ.ಹೀಗಾಗಿ ತ್ಯಾಜ್ಯ  ವಿಲೇವಾರಿಯನ್ನು ಸಮರ್ಪಕಗೊಳಿಸುವತ್ತ ಮುಂದಾಗಿದೆ. ಇದಕ್ಕೂ ಮೊದಲು ಗುತ್ತಿಗೆ ಆಧಾರದ ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ತ್ಯಾಜ್ಯವು ಉದನೂರು ವಿಲೇವಾರಿ ಪ್ರದೇಶಕ್ಕೆ ತಲುಪುತ್ತಲೇ ಇರಲಿಲ್ಲ. ಮಾರ್ಗ ಮಧ್ಯೆದಲ್ಲೆ ರೈತರ ಹೊಲದಲ್ಲೆ ತ್ಯಾಜ್ಯವನ್ನು ಸುರಿದು, ಪಾಲಿಕೆಯನ್ನು ವಂಚಿಸಲಾಗುತ್ತಿತ್ತು.ಜಿಪಿಎಸ್ ಅಳವಡಿಕೆ: ಉದನೂರು ಗ್ರಾಮದ ರೈತರು ತ್ಯಾಜ್ಯದ ವಿರುದ್ಧ ಹೋರಾಟ ನಡೆಸಲು ಗಟ್ಟಿ ಮನಸ್ಸ ಮಾಡಿದ್ದೇ ಗುತ್ತಿಗೆ ಆಧಾರದ ಟ್ರ್ಯಾಕ್ಟರ್‌ಗಳ ಉಪದ್ರವದಿಂದ. ಗ್ರಾಮದ ಸಮೀಪ ಟ್ರ್ಯಾಕ್ಟರ್ ಕಂಡರೆ ರೈತರು ದಾಳಿ ನಡೆಸುತ್ತಾರೆ ಎನ್ನುವ ಭಯ ಟ್ರ್ಯಾಕ್ಟರ್ ಚಾಲಕರಲ್ಲಿ ಮನೆಮಾಡಿತ್ತು. ಅತ್ತ ಪಾಲಿಕೆಯಿಂದಲೂ ಸೈ ಎನಿಸಿಕೊಳ್ಳಬೇಕೆಂದು ಟ್ರ್ಯಾಕ್ಟರ್ ಚಾಲಕರು ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರು. ಇದರ ಮೇಲೆ ನಿಗಾ ಎನ್ನುವುದೇ ಇರಲಿಲ್ಲ. ಉದನೂರು ಗ್ರಾಮಸ್ಥರು ತೀವ್ರ ಹೋರಾಟಕ್ಕಿಳಿದ ಪರಿಣಾಮ ಹಾಗೂ ಟ್ರ್ಯಾಕ್ಟರ್ ಚಾಲಕರು ಬೋಗಸ್ ಲೆಕ್ಕಕ್ಕೆ ಕಡಿವಾಣ ಹಾಕಲು ಟ್ರ್ಯಾಕ್ಟರ್‌ಗಳಿಗೆ ಈಗ `ಜಿಪಿಎಸ್' ತಂತ್ರಜ್ಞಾನ ಅಳವಡಿಸಲಾಗಿದೆ.ತ್ಯಾಜ್ಯ ಸಾಗಿಸುವ ವಾಹನಗಳ ಸಂಚಾರವನ್ನು ಪಾಲಿಕೆ ಕಚೇರಿಯಲ್ಲೆ ಕುಳಿತುಕೊಂಡು ಅಧಿಕಾರಿಗಳು ವೀಕ್ಷಿಸಲು ಸಾಧ್ಯವಾಗಿದೆ. ಗುತ್ತಿಗೆ ಆಧಾರದ ಟ್ರ್ಯಾಕ್ಟರುಗಳ ಮಾಲೀಕರಿಗೆ ಬಿಲ್ ಕೊಡುವಾಗ ಅದನ್ನು ಗಮನಿಸಲಾಗುತ್ತಿದೆ. ಅಲ್ಲದೆ, ಈ ಮೊದಲು ಎಷ್ಟು ಸಾರಿ ತ್ಯಾಜ್ಯ ವಿಲೇವಾರಿ ಮಾಡಿದರೂ ಎನ್ನುವುದು ಕೂಡಾ ಲೆಕ್ಕ ತಪ್ಪಿತ್ತು. ಒಂದು ಟ್ರ್ಯಾಕ್ಟರ್ ಎರಡು ಬಾರಿ ಮಾತ್ರ ತ್ಯಾಜ್ಯ ವಿಲೇವಾರಿ ಮಾಡಲು ಅವಕಾಶ ನೀಡಲಾಗಿದೆ.160 ಟನ್ ತ್ಯಾಜ್ಯ ಸಾಗಣೆ: ನಗರದಿಂದ ಪಾಲಿಕೆ ಒಡೆತನದ 13 ಟ್ರ್ಯಾಕ್ಟರ್, ಗುತ್ತಿದೆ ಆಧಾರದ 30 ಟ್ರ್ಯಾಕ್ಟರ್‌ಗಳು ಪ್ರತಿದಿನ ಎರಡು ಬಾರಿಯಂತೆ ತ್ಯಾಜ್ಯವನ್ನು ಉದನೂರಿಗೆ ಸಾಗಿಸುತ್ತಿವೆ. ಒಂದು ಟ್ರ್ಯಾಕ್ಟರ್‌ನಿಂದ ಪ್ರತಿದಿನ ಎರಡು ಟನ್ ತ್ಯಾಜ್ಯ ಸಾಗಣೆಯಾಗುತ್ತದೆ. ಇವುಗಳಲ್ಲದೆ ನಾಲ್ಕು `ಡಂಪರ್ ಪ್ಲೇಸರ್' ವಾಹನಗಳಿವೆ. ಒಂದು ವಾಹನ ಒಂದು ಬಾರಿಗೆ ಎರಡು ತ್ಯಾಜ್ಯದ ಡಬ್ಬಿ (ಕಂಟೇನರ್)ಗಳನ್ನು ಎತ್ತಿಕೊಂಡು ಹೋಗುತ್ತದೆ. ಒಂದು ಡಂಪರ್ ಪ್ಲೇಸರ್ ವಾಹನ ಪ್ರತಿದಿನ ಸರಾಸರಿ 3 ಟನ್ ತ್ಯಾಜ್ಯ ಸಾಗಿಸುತ್ತದೆ.ಅತ್ಯಾಧುನಿಕ ವಾಹನವಾದ `ಕಾಂಪ್ಯಾಕ್ಟ್ ಕಂಟೇನರ್' ಒಂದು ಬಾರಿಗೆ 20 ಟನ್ ತ್ಯಾಜ್ಯವನ್ನು ಸಾಗಿಸುತ್ತದೆ. ಈ ವಾಹನಕ್ಕೆ ತ್ಯಾಜ್ಯ ತುಂಬಿಸಲು 50 ಪ್ರತ್ಯೇಕ ಕಂಟೇನರ್‌ಗಳನ್ನು ನಗರದ ವಿವಿಧ ಕಡೆಗಳಲ್ಲಿ ಇಡಲಾಗಿದೆ. ನಗರದಾದ್ಯಂತ ಒಟ್ಟು 300 ತ್ಯಾಜ್ಯದ ಡಬ್ಬಿಗಳನ್ನು ಇರಿಸಲಾಗಿದೆ. ಒಟ್ಟು ಸಂಗ್ರಹವಾಗುವ ತ್ಯಾಜ್ಯ 200 ಟನ್. ಆದರೆ ಸಾಗಿಸಲು ಸಾಧ್ಯವಾಗುತ್ತಿರುವುದು 160 ಟನ್. ಒಂದು ವಾಹನದಲ್ಲಿ ನಾಲ್ಕು ಪೌರಕಾರ್ಮಿಕರು ಹಾಗೂ ಒಬ್ಬ ಚಾಲಕ ಇರುತ್ತಾರೆ.`ಗುತ್ತಿಗೆ ಆಧಾರದ ಟ್ರ್ಯಾಕ್ಟ್‌ರ್‌ಗಳ  ಟ್ರಾಲಿ ಮೇಲೆ ಹೊದಿಕೆ ಅಳವಡಿಸುವುದು ಕಡ್ಡಾಯಗೊಳಿಸಲಾಗಿದೆ. ಪಾಲಿಕೆ ಖರೀದಿಸಿದ ಹೊಸ ಟ್ರ್ಯಾಕ್ಟರ್‌ಗಳ ಮೇಲೆ ಲೋಹದ ಮುಚ್ಚಳಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ' ಎಂದು ಪಾಲಿಕೆ ಪರಿಸರ ಅಧಿಕಾರಿ ಅಭಯಕುಮಾರ ವಿವರಿಸಿದರು.`ಹೇಳಾವ್ರಿಲ್ಲ, ಕೇಳಾವ್ರಿಲ್ಲ'

ನಿಯಮದ ಪ್ರಕಾರ ಮಹಾನಗರಗಳಲ್ಲಿನ ತ್ಯಾಜ್ಯವನ್ನು ವಸತಿ ಪ್ರದೇಶಗಳಿಂದ ಕನಿಷ್ಠ 25 ಕಿ.ಮೀ. ದೂರದಲ್ಲಿ ವಿಲೇವಾರಿ ಮಾಡಬೇಕು. ಆದರೆ, ಮಹಾನಗರ ಪಾಲಿಕೆಯು ನಿಯಮಗಳನ್ನು ಗಾಳಿಗೆ ತೂರಿದೆ. ರಿಂಗ್‌ರಸ್ತೆಯಿಂದ ನಾಲ್ಕು ಕಿಲೋ ಅಂತರದ ಜಾಗದಲ್ಲಿ ತ್ಯಾಜ್ಯ ಹಾಕುತ್ತಿದೆ. ಜನವಸತಿ ಇರುವ ಉದನೂರು ಗ್ರಾಮ ಹಾಗೂ ಅಲ್ಲಿನ ಜನರು ಪಾಲಿಕೆಗೆ ಕಾಣಿಸುತ್ತಿಲ್ಲ. ಪಾಲಿಕೆಗೆ ಹೇಳಾವ್ರಿಲ್ಲ, ಕೇಳಾವ್ರಿಲ್ಲ.

-ಹಣಮಂತ ಚವ್ಹಾಣ ಗ್ರಾಮಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry