ಸೋಮವಾರ, ಮಾರ್ಚ್ 1, 2021
24 °C

ನಿರಾಶ್ರಿತೆ ಸಾಯಬಕ್ಕಗೆ ಕಾಲು ಕೊಡಿ

ಪ್ರಜಾವಾಣಿ ವಾರ್ತೆ / ವಿಷ್ಣು ಭಾರದ್ವಾಜ್ Updated:

ಅಕ್ಷರ ಗಾತ್ರ : | |

ನಿರಾಶ್ರಿತೆ ಸಾಯಬಕ್ಕಗೆ ಕಾಲು ಕೊಡಿ

ಗುಲ್ಬರ್ಗ: ಅಲ್ಲಿ ಕಟ್ಟೆಯ ಆಚೆ ಒಂದು ಕಾಲು ಆಕಾಶಕ್ಕೆ ಮುಖಮಾಡಿ ಮುಂದೆ ಸಾಗುತ್ತಿತ್ತು!  ಆ ಕಾಲಿನ ಪಾದಕ್ಕೆ ಬ್ಯಾಂಡೇಜ್ ಇತ್ತು. ಎಲ್ಲರ ಪಾದ ನೆಲಕ್ಕೆ ತಾಗಿರುತ್ತದೆ, ಆದರೆ ಇದು ಆಕಾಶದತ್ತ ಇದೆ. ಆದರೂ ಚಲಿಸುತ್ತಿದೆ. ತಲೆ ಎಲ್ಲಿ...? ಈ ಕಾಲು ಯಾರದ್ದು? ಈಕೆ ಹೆಸರು ಸಾಯಬಕ್ಕ. ಅತ್ತ ಸಾಯಲಾರದೆ, ಇತ್ತ ಬದುಕಲಾರದೆ ನರಳುವ  ಜೀವ. ನಿರಾಶ್ರಿತರ ಕೇಂದ್ರದಲ್ಲಿ ಈಕೆಯ ಸಂಚಾರ ಸಾಮಾನ್ಯವೇನೋ ಎಂಬಂತಿದೆ.  ಆದರೆ ಹೊಸದಾಗಿ ನೋಡುವವರಿಗೆ ತಲೆಯೇ ಇಲ್ಲದೆ ಕಾಲು ಮಾತ್ರ ಚಲಿಸುತ್ತಿರುವಂತೆ ಭಾಸವಾಗುತ್ತದೆ!ಇದಕ್ಕೆ ಕಾರಣವೂ ಇದೆ. ಸಾಯಬಕ್ಕಗೆ ನಡೆಯಲಾಗುವುದಿಲ್ಲ. ವೃದ್ಧಾಪ್ಯದಿಂದಲ್ಲ, ಬಲಕಾಲನ್ನೇ ತೊಡೆವರೆಗೆ ನುಂಗಿ ಹಾಕಿರುವ ಹಸಿಹಸಿ ಗಾಯ ಹಾಗೂ ಮೂಳೆ ಮುರಿತ. ದಬ್ಬೆ ಕಟ್ಟಿ ಮಡಿಸಲಾರದಂತೆ ನೇರವಾಗಿಯೇ ಇಡಬೇಕಾದ ಕಾಲು. ನಿರಾಶ್ರಿತರ ಕೇಂದ್ರದೊಳಗೆ ಮಹಿಳಾ ವಿಭಾಗದ ಸುತ್ತ, ಚಲಿಸಬೇಕಾದಲ್ಲೆಲ್ಲ ಈಕೆ ಕುಳಿತು, ಎರಡು ಕೈ, ಒಂದುಕಾಲನ್ನು ಊರಿ ಗಾಯಗೊಂಡು ಸೆಟೆದು, ಕೀವು ತುಂಬಿ ಬಾತಿರುವ ಕಾಲನ್ನು ಮೇಲಕ್ಕೆತ್ತಿ ಮುಂದೆ ಸಾಗುತ್ತಾಳೆ!ಇದರಿಂದಾಗಿಯೇ ಕಟ್ಟೆಯ ಆ ಬದಿಯಿಂದ ನೋಡುವವರಿಗೆ ಕಾಲು ಮಾತ್ರ ತಲೆ ಇಲ್ಲದೆ ಚಲಿಸುವಂತೆ ಕಾಣುತ್ತದೆ. ಕರುಣಾ ಜನಕ ಕಥೆ: ಸಾಯಬಕ್ಕ ಆರು ತಿಂಗಳ ಹಿಂದಷ್ಟೇ ನಿರಾಶ್ರಿತರ ಕೇಂದ್ರಕ್ಕೆ ಬಂದಿದ್ದಾಳೆ. ಈಕೆ ಭಿಕ್ಷುಕಿ ಅಲ್ಲ, ಬೀದಿಯ ತಿಪ್ಪೆ ಬದಿ ಇದ್ದಾಕೆಯೂ ಅಲ್ಲ. ಕೂಲಿನಾಲಿ ಮಾಡಿ ಸ್ವಾಭಿಮಾನದಿಂದ ಬದುಕು ನಡೆಸಿದ್ದ ಕಾರ್ಮಿಕ ಮಹಿಳೆ.ಸಾಯಬಕ್ಕ ಸೇಡಂ ಬಳಿ ನೆಲೆಸಿದ್ದರು. ಮನೆ-ಕುಟುಂಬ ಎಲ್ಲ ಇತ್ತು. ಅಲ್ಲೇ ಇದ್ದ  ತೊಗರಿ ಕಾರ್ಖಾನೆಯಲ್ಲಿ ಧಾನ್ಯ ಸಂಸ್ಕರಿಸುವ, ಟ್ರ್ಯಾಕ್ಟರ್ ಮುಂತಾದ ಸಾಗಣೆ ವಾಹನಗಳಿಗೆ ಮೂಟೆಗಳನ್ನು ತುಂಬುವ, ಇಳಿಸುವ ಕೆಲಸ. ಮೂಟೆ ತುಂಬುವ ವೇಳೆ ಟ್ರ್ಯಾಕ್ಟರ್ ಚಲಿಸಿದ ಕಾರಣ ಕಾಲು ಚಕ್ರದಡಿ ಸಿಲುಕಿ ಮೊಣಕಾಲು ಸೇರಿದಂತೆ  ಪಾದದವರೆಗೆ  ನುಜ್ಜುಗುಜ್ಜಾಯಿತು.

ಆಸ್ಪತ್ರೆ ವೆಚ್ಚಕ್ಕೆ ಹಣವೂ ಇಲ್ಲದೆ ಈಕೆ ಹಸಿಹಸಿ ಗಾಯಗಳೊಂದಿಗೆ ಅಕ್ಷರಶಃ ಬೀದಿಗೆ ಬಿದ್ದಿದ್ದಳು. ಸ್ಥಿತಿಯನ್ನು ಕಂಡ ಅಲ್ಲಿನ ಅಧಿಕಾರಿಗಳು ಗುಲ್ಬರ್ಗದ ನಿರಾಶ್ರಿತರ ಕೇಂದ್ರಕ್ಕೆ  ಸೇರಿಸಿದರು. `ಪರಿಹಾರದ ಹಣ ಸಿಕ್ಕಿಲ್ಲೇನವ್ವಾ...?' ಎಂದು ಸಾಯಬಕ್ಕನಲ್ಲಿ ಕೇಳಿದರೆ, `ಎರಡು ಸಾವ್ರ ರೂಪಾಯಿ ಕೊಟ್ಟಾರ‌್ರಿ, ಅದ್ನ ಮನೆಮಂದಿ ಚಿನ್ನ ಮಾಡಿಸ್ಯಾರ‌್ರೀ...' ಎಂದು  ಉತ್ತರಿಸಿದರು.`ಜಿಲ್ಲಾಸ್ಪತ್ರೆ ಡಾಕ್ಟ್ರು ಬಂದು ವಾರಕ್ಕೊಮ್ಮೆ ಔಸ್ತಿ ಕೊಡ್ತಾರ‌್ರಿ...' ಎನ್ನುವ ಸಾಯಬಕ್ಕಗೆ ಆ ಮುರಿದ ಕಾಲು, ಹಸಿ ಗಾಯ ಎಷ್ಟು ಗಂಭೀರ ಸ್ಥಿತಿಯಲ್ಲಿದೆ ಎಂಬ ಅರಿವಿಲ್ಲ. `ಕಾಲನ್ನು ಭಾಗಶಃ ಕತ್ತರಿಸಬೇಕು ಎಂದು ಡಾಕ್ಟರ್ ಹೇಳಿದ್ದಾರೆ. ಈ ಕೇಂದ್ರಕ್ಕೆ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್ ಅವರೂ ಚಿಕಿತ್ಸೆಗೆ ಸರ್ಕಾರಿದಿಂದ ನೆರವಾಗುವ ಇಂಗಿತ ವ್ಯಕ್ತಪಡಿಸಿದ್ದರು' ಎನ್ನುತ್ತಾರೆ ಸಿಬ್ಬಂದಿ.ಆಸ್ಪತ್ರೆಯಲ್ಲೇ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದ ಗಂಭೀರ ಸ್ಥಿತಿ ಸಾಯಬಕ್ಕನ ಕಾಲಿನ ಗಾಯಕ್ಕಿದೆ. ಹಾಗಾಗಿಯೇ ಆಕೆ ಅತ್ತ ಕೊಠಡಿಯಲ್ಲಿ ಸಹವರ್ತಿಗಳೊಂದಿಗೂ ಇರಲಾರದೆ, ಹೊರಗೆ ಮಳೆ ಬಿಸಿಲಿಗೆ ಮೈಯೊಡ್ಡಲಾಗದೆ ಜಗುಲಿ, ವರಾಂಡ ಎಂದು ನಿರಾಶ್ರಿತ ಕೇಂದ್ರದಲ್ಲಿ ನೋವಿನ ಗಂಟು ಹೊತ್ತು ನರಳಾಡುತ್ತಿದ್ದಾಳೆ. ಇಂಥ ಇನ್ನೂ ಹಲವು ಮುಖಗಳು ಇಲ್ಲಿವೆ. ಕತ್ತಲು-ಬೆಳಕಿನಾಟಕ್ಕೆ ಮನನೊಂದು ದಿನ ಎಣಿಸುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.