ಭಾನುವಾರ, ಡಿಸೆಂಬರ್ 8, 2019
25 °C

ಚೌತಿಗೆ ಬಂದಗಣೇಶ!

Published:
Updated:
ಚೌತಿಗೆ ಬಂದಗಣೇಶ!

ಗುಲ್ಬರ್ಗ: ಇದು ಹಬ್ಬಗಳ ಹಂಗಾಮ. ಇನ್ನೊಂದೇ ವಾರ, ಭಾದ್ರಪದ ಬಂತು. ವಿಘ್ನನಾಶಕ ಗಣಪನ ಸ್ತುತಿಗೀತೆ,  ಆರಾಧನೆ ಎಲ್ಲೆಲ್ಲೂ ಮೊಳಗುವ ಹೊತ್ತು. ಇದಕ್ಕಾಗಿ ಗುಲ್ಬರ್ಗ ಸಜ್ಜಾಗಿದೆ.  ಎಲ್ಲೆಲ್ಲೂ ಬಹುರೂಪಿ, ಬಹು ಗಾತ್ರದ ಗಣೇಶ ವಿಗ್ರಹಗಳು ಬಣ್ಣಗಳ ಮೆರುಗಿನೊಂದಿಗೆ ಕಂಗೊಳಿಸತೊಡಗಿವೆ.  ಸಾಮಗ್ರಿಗಳ ಬೆಲೆ  ದುಬಾರಿಯಾಗಿದ್ದರೂ ಎಲ್ಲೆಡೆ ಚೌತಿ ಸಂಭ್ರಮ ಮನೆ ಮಾಡಿದೆ.ಆಗರ್ಭ ಶ್ರೀಮಂತನಾಗಿದ್ದರೂ ಆಡಂಬರ ತೋರಿಸಲು ಚಿನ್ನ-ಬೆಳ್ಳಿ, ಲೋಹ, ಮರದ ಮೂರ್ತಿ ಬಳಸುವುದಿಲ್ಲ; ಮಣ್ಣಿಂದ ಹುಟ್ಟಿ ಮಣ್ಣಾಗುವ ಮೃತ್ತಿಕಾ ಮೂರ್ತಿಗಳಿಗೇ ಆದ್ಯತೆ. ಇದುವೇ ದೇವರಿಗೂ , ಭಕ್ತರಿಗೂ  ಇಷ್ಟ, ಇದು ಗಣೇಶಾರಾಧನೆಯ ವಿಶೇಷ. ಆದರೆ ವಿಗ್ರಹಯೋಗ್ಯ ಮಣ್ಣು ದೊರೆಯದ ಗುಲ್ಬರ್ಗದಲ್ಲಿ  ಬೃಹತ್ ಗಾತ್ರದ ಗಣಪನ ತಯಾರಿಗೆ `ಪ್ಲಾಸ್ಟರ್ ಆಫ್ ಪ್ಯಾರೀಸ್' (ಪಿಒಪಿ, ಜಿಪ್ಸಂ)  ಬಳಕೆಯಾಗುತ್ತಿದೆ.ಗಣೇಶ ಚತುರ್ಥಿ ದಿನದಿಂದ ಎಲ್ಲೆಲ್ಲೂ `ಗಣಪತಿ ಬಪ್ಪ ಮೋರೆಯಾ' ಧ್ವನಿ ಮೊರೆಯುತ್ತದೆ. ನಗರದ ಬಿದ್ದಾಪುರ ರಸ್ತೆ, ಬಾಂಡಿ ಬಜಾರ್, ಚಪ್ಪಲ್ ಬಜಾರ್, ಮುಂತಾದೆಡೆ ಗಳಲ್ಲೆಲ್ಲಾ ಬೃಹತ್ ಗಣೇಶ ಮೂರ್ತಿಗಳು ಭಕ್ತರ ಮನಸೂರೆಗೊಳ್ಳಲು ಸಜ್ಜಾಗಿವೆ.ಶಿವರೂಪಿ ಗಣಪ,  ಕೃಷ್ಣರೂಪಿ ಮುಂತಾದ  ವಿನ್ಯಾಸಗಳು ಒಂದೆಡೆಯಾದರೆ, `ಹೆಚ್ಚು ಬೇಡಿಕೆ ಇರುವ ಪುಣೆ ಮುಂತಾದೆಡೆ ಪೂಜಿಸುವ ಬಂಗಾರ ಸುರಿಸುವ `ದಗಡುಶೇಟ ಗಣಪ', `ಮೋದಕ ಗಣಪ', ಮುಂಬೈನ `ಲಾಲ್‌ಬಾಗ್ ರಾಜ', `ಬಾಲಾಜಿ', ಚಿನ್ನದ ಗಡಿಗೆ ಮೇಲೆ ಕುಳಿತ `ಸ್ವರ್ಣ ಗಣಪ'... ಇಂಥ ಮೂರ್ತಿಗಳು  ಹೆಚ್ಚು ಮಾರಾಟವಾಗುತ್ತಿವೆ. ನಮ್ಮಲ್ಲಿ  ರೂ. 3,000 ದಿಂದ 10,000 ವರೆಗಿನ ಬೆಲೆಯ ಮೂರ್ತಿಗಳಿವೆ. ಸೊಲ್ಲಾಪುರದಿಂದ ಪಿಒಪಿ, ಬಣ್ಣಗಳನ್ನು ತಂದು ಚೌತಿ ಗಣಪ, ನವರಾತ್ರಿ ಕಾಲದ ದೇವಿ ವಿಗ್ರಹ ಮುಂತಾದವುಗಳನ್ನು ಮಾಡುತ್ತೇವೆ.ಮಣ್ಣಿನ ಗಣಪನೇ ಮುಖ್ಯ ಆದರೆ ಇಲ್ಲಿನ ಮಣ್ಣಲ್ಲಿ  ಮೂರ್ತಿ ಮಾಡಿದರೆ  ಮುರಿಯುತ್ತದೆ ' ಎನ್ನುತ್ತಾರೆ ತಿವಾರಿ ಗಲ್ಲಿ ಎನ್.ಎ. ಆರ್ಟ್ಸ್‌ನ( ತಿವಾರಿ ಆರ್ಟ್ಸ್) ಮಾಲೀಕರಾದ ಆಳಂದದ ಬಾಬುರಾವ ದಂಗಾಪುರ ಹಾಗೂ ನೀಲಕಂಠ  ಅಡಗಲಿ.`ಆಂಧ್ರಪ್ರದೇಶದ ಉಸ್ಮಾನಾಬಾದ್‌ನಿಂದ ಕಚ್ಛಾವಸ್ತುಗಳನ್ನು ತಂದು ಇವರು ಪಿಒಪಿ ಮೂರ್ತಿಗಳನ್ನು ತಯರಿಸುತ್ತಿದ್ದೇವೆ. ರೂ. 50ರಿಂದ  ರೂ.1000. ವರೆಗೆ ಬೆಲೆಯ ಮೂರ್ತಿಗಳಿವೆ.ನಗರದ ಸಾಂಪ್ರದಾಯಿಕ ಗಣೇಶನನ್ನು ಬಯಸುವರು ನಮ್ಮಲ್ಲಿಗೇ ಬರ್ತಿರ್ತಾರೀ ಎಂದು ಬಾಂಡಿ ಬಜಾರ್‌ನ ಶಿವಾನಂದ ಹಿರೇಮಠ ಹೆಮ್ಮೆಯ ಮಾತು  ಗಳನ್ನಾಡುತ್ತಾರೆ.`ನಾವು ಕುಂಬಾರರೇ ಆದ್ರೂ ಮಣ್ಣಿನ ಮೂರ್ತಿ ಮಾಡಲ್ರೀ, ಜನರಿಗೆ ಬೇಕಾದಂಥ ಪಿಒಪಿ ಮೂರ್ತಿಗಳನ್ನೇ ಮಾರ‌್ತೀವಿ. ಕಚ್ಛಾ ಸಾಮಗ್ರಿಗಳ ಬೆಲೆ ದುಪ್ಪಟ್ಟಾಗಿದೆ, ಆದರೆ ಮೂರ್ತಿ ಬೆಲೆ ಹೆಚ್ಚಿಸಿದರೆ ಜನ ಕೇಳಲ್ರೀ' ಇದು ತಿವಾರಿ ಗಲ್ಲಿಯ ಎ.ಕೆ. ಕಡಗಂಚಿ ಮೂರ್ತಿ ಮಳಿಗೆ ಮಾಲೀಕ ಅಂಬಾರಾಯ ಕಡಗಂಚಿ ಅವರ ಮಾತು.ರಾಜಸ್ತಾನದಿಂದ ಬಂದು ಗುಲ್ಬರ್ಗದ ಬಿದ್ದಾಪುರ ರಸ್ತೆ ಬದಿ ಟೆಂಟ್‌ಗಳಲ್ಲಿ ಬೃಹತ್ ಗಣೇಶ ಮೂರ್ತಿಗಳನ್ನು ನಿರ್ಮಿಸಿ ಮಾರಾಟ ಮಾಡುವ ಶ್ರವಣ್ ಕುಮಾರ್ ಹಾಗೂ ಪತ್ನಿ ಶತ್ರು ದಂಗಾಲ್ ದಂಪತಿ, ಶ್ರವಣ್ ಅವರ ತಂದೆ  ಪವಾರ್‌ಲಾಲ್, ಪತ್ನಿ ಮಥುರಾ ದಾಂಗಲ್,  ಶ್ರವಣ್‌ರ ಸೋದರ ಸಕಾಲ್ ರಾಮ್ ಇಲ್ಲೇ ಬೇರೆಬೇರೆ ಟೆಂಟ್‌ಗಳಲ್ಲಿ ವಿವಿಧ  ಗಾತ್ರ, ಬೆಲೆಯ ಗಣಪನನ್ನು  ಭಕ್ತರಿಗಾಗಿ ಸಿದ್ಧ ಪಡಿಸಿಇಟ್ಟಿದ್ದಾರೆ.` ಹನುಮಂತನ ಹೆಗಲೇರಿ ಕುಳಿತ ಗಣೇಶ ಈಬಾರಿ ನಮ್ಮ ವಿಶೇಷ. ಎಂಟು ವರ್ಷಗಳಿಂದ ಇಲ್ಲಿ ಮೂರ್ತಿ ಮಾರಾಟ ಮಾಡ್ತಿದ್ದೀವಿ. ರೂ. 3,000 ದಿಂದ ರೂ. 8,000 ಬೆಲೆಯ ವಿಗ್ರಹಗಳು ಇವೆ. ಇಡೀ ಕುಟುಂಬ ಈ ಗಳಿಕೆಯನ್ನೇ  ಆಧರಿಸಿದೆ.' ಎನ್ನುತ್ತಾರೆ ಶ್ರವಣ ಕುಮಾರ್.ಮಣ್ಣಿನ ಮೂರ್ತಿ ಕಷ್ಟ

ಮಣ್ಣಿನಿಂದ ಮೂರ್ತಿ ನಿರ್ಮಿಸಿದರೆ ಅದನ್ನು ಉಳಿಸುವುದು ಕಷ್ಟ. ಈಗ ಯೋಗ್ಯ ಮಣ್ಣು ಸಿಗುತ್ತಿಲ್ಲ.  ಶ್ರಮಕ್ಕೆ ತಕ್ಕ ಹಣವೂ ಲಭಿಸುವುದಿಲ್ಲ. ಜನರು ಅಗ್ಗದ ಮೂರ್ತಿ  ಖರೀದಿಸುವ ಕಾರಣ ಪಿಒಪಿ ಮೂರ್ತಿ ಮಾಡುತ್ತಿದ್ದೇವೆ.

-ಲಕ್ಷ್ಮಿಬಾಯಿ ಕಡಗಂಚಿ, ಮೂರ್ತಿ ತಯಾರಕರು ತಿವಾರಿ ಗಲ್ಲಿ.ಅಣ್ಣನ ಬಾಂಧವ್ಯ

ನಮ್ಮ ಅಣ್ಣ ಹುಟ್ಟಿದಾಗ ಮನೆಮಂದಿ ಗಣೇಶ ಮೂರ್ತಿ ಇರಿಸಿ ಚೌತಿಪೂಜೆ ಆರಂಭಿಸಿದರಂತೆ. ಅಲ್ಲಿಂದ ಇಲ್ಲಿವರೆಗೂ 37 ವರ್ಷಗಳಿಂದ ವರ್ಷವೂ ಬಿಡದೆ ಐದು ದಿನಗಳ ಕಾಲ ಗಣಪತಿ ಕೂರಿಸಿ, ಪೂಜಿಸ್ತಿದ್ದೀವಿ. ನೌಕರಿಯಲ್ಲಿರುವ ಅಣ್ಣ ಗಣೇಶನೂ ಸೇರ‌್ತಾನೆ. ಸಾಂಪ್ರದಾಯಿಕ ಶೈಲಿಯ ಗಣಪತಿಯೇ ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ.

-ದತ್ತು ಧನವಾಡಕರ, ಶಹಾಬಜಾರ್ಸಾಂಪ್ರದಾಯಿಕ ಗಣಪಗೆ ಬೇಡಿಕೆ

ಗಣೇಶ ಮೂರ್ತಿಗಳು ಕಲಾವಿದನ ಭಾವನೆಗೆ ತಕ್ಕಂತೆ ವಿವಿಧ ಆಕಾರ, ವಿವಿಧ ವಾಹನ , ಆಯುಧಗಳ ಸಮೇತ ಇರುವಂತೆ ನಿರ್ಮಿಸಲಾಗಿದ್ದರೂ ಗುಲ್ಬರ್ಗದ ಜನರು ಸಾಂಪ್ರದಾಯಿಕ ವರದ ಹಸ್ತ, ಮೋದಕ ಪ್ರಿಯ, ಮೂಷಿಕ ವಾಹನ ಗಣಪನನ್ನೇ ಖರೀದಿಸಲು ಇಷ್ಟಪಡುತ್ತಾರೆ.

-ಬಾಬುರಾವ ದಂಗಾಪುರ, ಎನ್.ಎ. ಆರ್ಟ್ಸ್ ( ತಿವಾರಿ ಆರ್ಟ್ಸ್),ತಿವಾರಿ ಗಲ್ಲಿ ಮೆಟಲ್ ಗಣಪ...

ಇದು ಲೋಹದಿಂದ ತಯಾರಿಸಿದಂತೆಯೇಕಾಣಿಸ್ತಿದೆ ನೋಡ್ರಿ... ಇದು ಈ ಬಾರಿ ನಮ್ಮ ವಿಶೇಷ. ಬಾರಾ ಸೌ (ರೂ. 1200) ಬೆಲಿ ಐತ್ರಿ.  ಬಂದೋರೆಲ್ಲಾ ಈ ಮೆಟಲ್ ಗಣಪನನ್ನೇ ಇಷ್ಟಾ  ಪಡ್ತಾರ‌್ರೀ.

-ಶಿವಾನಂದ ಹಿರೇಮಠ

ಮಳಿಗೆ ಮಾಲೀಕ ಬಾಂಡಿ ಬಜಾರ

ಪ್ರತಿಕ್ರಿಯಿಸಿ (+)