`ಸುಸ್ಥಿರ ಅಭಿವೃದ್ಧಿ ಇಂದಿನ ಅಗತ್ಯ'

7

`ಸುಸ್ಥಿರ ಅಭಿವೃದ್ಧಿ ಇಂದಿನ ಅಗತ್ಯ'

Published:
Updated:

ಗುಲ್ಬರ್ಗ: `ಮೂರು ದಶಕಗಳ ಹಿಂದೆಯೇ ಭಾರತಕ್ಕೆ ಸಂದಿಗ್ಧ ಸಮಯ ಎದುರಾಗಿದ್ದು ಮಣ್ಣು, ನೀರು ಮತ್ತು ಅರಣ್ಯ ಸವಕಳಿ ತಡೆಗಟ್ಟುವಂತೆ ತಜ್ಞರು ಎಚ್ಚರಿಕೆ ನೀಡಿದ್ದರು. ಹೀಗಾಗಿ, ಈ ಬಗ್ಗೆ ಜಾಗೃತಿ ವಹಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ' ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಎಸ್‌ಇಸಿ) ಮಾಜಿ ನಿರ್ದೇಶಕ ಪ್ರೊ.ಆರ್.ಎಸ್.ದೇಶಪಾಂಡೆ ಹೇಳಿದರು.ಗುಲ್ಬರ್ಗ ವಿಶ್ವವಿದ್ಯಾನಿಲಯದ `ಮಂಥನ ಸಭಾಂಗಣ'ದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯದ ವ್ಯವಹಾರ ಅಧ್ಯಯನ ವಿಭಾಗ ಹಾಗೂ ಸಾಮಾಜಿಕ ವಿಜ್ಞಾನದ ಸಂಶೋಧನೆಯ ಭಾರತೀಯ ಮಂಡಳಿ (ಐಸಿಎಸ್‌ಎಸ್‌ಆರ್) ಶುಕ್ರವಾರ ಏರ್ಪಡಿಸಿದ್ದ `ಸುಸ್ಥಿರ ಅಭಿವೃದ್ಧಿ ಮತ್ತು ಯೋಜನೆ' ಕುರಿತ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.`1950ರಿಂದ ಯೋಜನೆಗಳನ್ನು ರೂಪಿಸಲು ಆರಂಭಿಸಲಾಯಿತು. ಸ್ವಾತಂತ್ರ್ಯರೋತ್ತರ ಕಾಲದಲ್ಲಿ ದೇಶ ಕಟ್ಟುವ ಕೆಲಸ ಪ್ರಮುಖವಾಗಿತ್ತು. ಕಟ್ಟಡ, ಅಣೆಕಟ್ಟೆ ನಿರ್ಮಾಣ, ಕೃಷಿಗೆ ಆದ್ಯತೆ ನೀಡಲಾಯಿತು. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮಾರುಕಟ್ಟೆ ಪರವಾಗಿದ್ದರು. ಹೀಗಾಗಿ, ಮಿಶ್ರಣ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಆದರೆ, ಸದ್ಯ ಕಾಲ ಬದಲಾಗಿದ್ದು ಸುಸ್ಥಿರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು 20 ವರ್ಷಗಳ ಹಿಂದೆ ಹೇಳಿದ್ದರೆ ಜನ ನಗುತ್ತಿದ್ದರು. ಆದರೆ, ಇಂದು ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 1964ರಲ್ಲಿ ದೇಶದ ಆರ್ಥಿಕ ಪ್ರಗತಿಗೆ ಕೃಷಿಯ ಕೊಡುಗೆ ಅಪಾರವಾಗಿತ್ತು. ಇಂದು ಕೃಷಿ ಸಂಕಷ್ಟದ ಸ್ಥಿತಿಯಲ್ಲಿದೆ' ಎಂದರು.`1965ರಿಂದ ಮೂರು ವರ್ಷಗಳ ಕಾಲ ದೇಶವನ್ನು ಬರ ಇನ್ನಿಲ್ಲದಂತೆ ಕಾಡಿತು. ಅದೇ ಸಂದರ್ಭದಲ್ಲಿ ಪಾಕಿಸ್ತಾನ, ಚೀನಾ ದೇಶಗಳು ನಮ್ಮ ದೇಶದ ಮೇಲೆ ಯುದ್ಧ ಸಾರಿದವು. ಇದರಿಂದಾಗಿ ಭಾರತದ ಆರ್ಥಿಕ ಸ್ಥಿತಿ ಹದಗೆಟ್ಟಿತು. ರಕ್ಷಣಾ ಇಲಾಖೆ ಖರ್ಚು ವೆಚ್ಚಗಳನ್ನು ಭರಿಸಲು ಜನರು ಟನ್‌ಗಟ್ಟಳೆ ಚಿನ್ನವನ್ನು ದಾನವಾಗಿ ನೀಡಿದರು. ಆ ಬಳಿಕ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಹತೋಟಿಗೆ ಬಂದಿತು. 10 ವರ್ಷಗಳಿಗೊಮ್ಮೆ ಬರ ಬಂದೇ ಬರುತ್ತದೆ. ಅದನ್ನು ಎದುರಿಸಲು ಸಜ್ಜಾಗಬೇಕು. ಭಾರತ ಅತಿ ದೊಡ್ಡ ದೇಶವಾಗಿದ್ದು, ದೇಶದ ಒಟ್ಟು ಕೃಷಿ ಉತ್ಪಾದನೆಯಲ್ಲಿ ಶೇ 20ರಷ್ಟನ್ನು ಭಾರತವೇ ಬಳಸುತ್ತಿದೆ' ಎಂದು ಹೇಳಿದರು.ಕೇಂದ್ರೀಯ ವಿ.ವಿ ಕುಲಪತಿ ಪ್ರೊ.ಎಸ್.ಎಸ್.ಮೂರ್ತಿ ಮಾತನಾಡಿ, `ಸುಸ್ಥಿರ ಅಭಿವೃದ್ಧಿ ದೇಶದ ನಿರ್ಣಾಯಕ ಪರೀಕ್ಷಾ ಕಾಲವಾಗಿದೆ. ಒಂದರ್ಥದಲ್ಲಿ ನಾವು ನಿಜವಾದ ಪ್ರಳಯವನ್ನು ಎದುರಿಸುತ್ತಿದ್ದೇವೆ. ಜಾಗತಿಕ ತಾಪಮಾನ ಬದಲಾವಣೆಯಿಂದ ಮುಂದಿನ 5ರಿಂದ 10 ವರ್ಷಗಳಲ್ಲಿ ಭೂಮಿಯ ಮೇಲಿನ ಉಷ್ಣಾಂಶ ಶೇ 5ರಷ್ಟು ಹೆಚ್ಚಾಗಲಿದೆ. ಅದರ ಜತೆಯಲ್ಲೇ ಬಡತನವೂ ದೇಶವನ್ನು ಕಾಡಲಿದೆ.ಆದ್ದರಿಂದ, ಸುಸ್ಥಿರ ಅಭಿವೃದ್ಧಿ ಜತೆಗೆ ಬಡತನ ನಿರ್ಮೂಲನೆ ಬಗ್ಗೆಯೂ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ' ಎಂದು ಅಭಿಪ್ರಾಯಪಟ್ಟರು.ಕೇಂದ್ರೀಯ ವಿ.ವಿ ವ್ಯವಹಾರ ಅಧ್ಯಯನ ನಿಖಾಯದ ಮುಖ್ಯಸ್ಥ ಡಾ.ಎಂ.ವಿ. ಅಳಗವಾಡಿ, ಸಮ ಕುಲಪತಿ ಪ್ರೊ.ಎಂ.ಎನ್.ಎಸ್. ರಾವ್, ಪ್ರೊ.ಕೆ. ಪದ್ಮಶ್ರೀ, ಸಫಿನಾ ಪರ್ವಿನ್, ಶಿವಕುಮಾರ ದೀನೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry