ಬಿಸಿಯೂಟದಲ್ಲಿ ಹಲ್ಲಿ: 50 ಮಕ್ಕಳು ಆಸ್ಪತ್ರೆಗೆ

7

ಬಿಸಿಯೂಟದಲ್ಲಿ ಹಲ್ಲಿ: 50 ಮಕ್ಕಳು ಆಸ್ಪತ್ರೆಗೆ

Published:
Updated:

ಲಿಂಗಸುಗೂರ:  ತಾಲ್ಲೂಕಿನ ಹಾಲಭಾವಿ ಪ್ರಾಥಮಿಕ ಶಾಲೆ ಬಿಸಿಯೂಟದಲ್ಲಿ ವಿದ್ಯಾರ್ಥಿಗಳಿಗೆ ಬಡೆಸುವಾಗ ಆಹಾರದಲ್ಲಿ ಹಲ್ಲಿ ಕಾಣಿಸಿಕೊಂಡಿದೆ. ಹಲ್ಲಿ ಬಿದ್ದಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ವಾಂತಿ, ಹೊಟ್ಟೆ ಉರಿ ಆಗುತ್ತಿದೆ ಎಂದು ವಿದ್ಯಾರ್ಥಿಗಳು ಕಣ್ಣೀರಿಡಲು ಆರಂಭಿಸಿದರು. 50ಕ್ಕೂ ಹೆಚ್ಚು ಮಕ್ಕಳನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ದಾಖಲಿಸಲಾಗಿದೆ.ಶುಕ್ರವಾರ ಮಧ್ಯಾಹ್ನ ಬಿಸಿಯೂಟ ಬಡಿಸುತ್ತಿದ್ದಾಗ ಸಾಂಬರ್‌ನಲ್ಲಿ ಹಲ್ಲಿ ಕಾಣಿಸಿಕೊಂಡಿದೆ. ಸ್ವತಃ ಶಿಕ್ಷಕರೇ ಹಲ್ಲಿಯನ್ನು ಹೊರತೆಗೆದು ಪುನಃ ವಿದ್ಯಾರ್ಥಿಗಳಿಗೆ ಊಟಕ್ಕೆ ಬಡಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಅಸ್ವಸ್ತತೆ ಕಂಡು ಬಂದಿದ್ದು, 50ಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಗೆ ಕರೆ ತರಲಾಗಿದೆ. ಆ ಪೈಕಿ 25 ಮಕ್ಕಳನ್ನು ದಾಖಲಿಸಿಕೊಂಡಿದ್ದು ಮಕ್ಕಳ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ.ಆಸ್ಪತ್ರೆಗೆ ಏಕಾಏಕಿ 50ಕ್ಕೂ ಹೆಚ್ಚು ಮಕ್ಕಳು ಹಾಗೂ ಪಾಲಕರು ಆಗಮಿಸಿದರು. ಆಸ್ಪತ್ರೆ ಸಿಬ್ಬಂದಿ ಈ ವಾತಾವರಣ ಕಂಡು ಪರದಾಡಿದರು.  ಪೊಲೀಸ್ ಮಧ್ಯಸ್ಥಿಕೆಯಲ್ಲಿ ವಾತಾವರಣ ಹದಗೆಡದಂತೆ ಎಚ್ಚರಿಕೆ ವಹಿಸಿ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಿಸಿದರು.ಈ ಮಧ್ಯೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಣೆ ನಡೆಸಿದರು. ಆಸ್ಪತ್ರೆ ಮುಖ್ಯ ವೈದ್ಯ ಡಾ. ಶಿವಬಸಪ್ಪ ಹೆಸರೂರ, ಡಾ. ದಿಗಂಬರ ಹೆರೂರ, ತಹಶೀಲ್ದಾರ ಎಸ್.ಜಿ. ಮಹಾಜನ್ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಣೆ ನಡೆಸಿ, ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry