ಭಾನುವಾರ, ಡಿಸೆಂಬರ್ 8, 2019
25 °C
ಹಸಿವು ಮುಕ್ತ, ಸಂಪೂರ್ಣ ಶಿಕ್ಷಣ, ಸಶಕ್ತೀಕರಣದ ಆಶಯ

ಬದುಕಿನ ಭದ್ರತೆಗೆ ಕೇಂದ್ರ ಬದ್ಧ: ಖರ್ಗೆ

Published:
Updated:
ಬದುಕಿನ ಭದ್ರತೆಗೆ ಕೇಂದ್ರ ಬದ್ಧ: ಖರ್ಗೆ

ಗುಲ್ಬರ್ಗ: ಸಾರ್ವಜನಿಕರ ಹಿತ, ಹಿಂದುಳಿದ ವರ್ಗದ, ಅಲ್ಪ ಸಂಖ್ಯಾತರ, ಬಡ ಜನರ, ಕೂಲಿ ಕಾರ್ಮಿಕರ, ಬೀದಿ ವ್ಯಾಪಾರಿಗಳ, ಮಹಿಳೆಯರ, ವಿದ್ಯಾರ್ಥಿ­ಗಳ ಹಾಗೂ ದೀನ ದಲಿತರ ಬದುಕಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಹಲವು ಯೋಜನೆ­ಗಳನ್ನು ಕಾಯಿದೆ ಮೂಲಕ ಹಕ್ಕನ್ನಾಗಿ ನೀಡಿದೆ. ಇದರ ಮಾಹಿತಿ ಹಾಗೂ ಲಾಭವನ್ನು ಅರ್ಹರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.  ಅವರು ಮಂಗಳವಾರ ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಭಾರತ ಸರ್ಕಾರದ ವಾರ್ತಾ  ಇಲಾಖೆ, ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಮಾಧ್ಯಮ ಘಟಕ­ಗಳು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಹಭಾಗಿತ್ವದಲ್ಲಿ ಆಯೋ­ಜಿ­ಸಿದ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನವನ್ನು ಉದ್ಘಾ­ಟಿಸಿ ­ಮಾತನಾಡಿದರು. ಆದರೆ ಸಾಮಾನ್ಯ ಜನರಿಗೆ ಸಮರ್ಪಕ ಮಾಹಿತಿ ಇಲ್ಲದ ಪರಿಣಾಮ ಇಂತಹ ಯೋಜನೆ­ಗಳನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.  ದಲ್ಲಾಳಿಗಳು ಹುಟ್ಟಿಕೊಂಡಿ­­­ದ್ದಾರೆ. ಇದನ್ನು ತಡೆ­ಯುವ ಉದ್ದೇಶದಿಂದ ಈ ಸಾವರ್ಜನಿಕ ಮಾಹಿತಿ ಆಂದೋಲನ ನಡೆಸಲಾ­ಗುತ್ತಿದೆ ಎಂದರು.  ಆಹಾರ ಭದ್ರತೆ: ದೇಶದ ಬಡ ಜನರ ಹಸಿವು ಹೋಗಲಾಡಿಸಲು ಕೇಂದ್ರ ಸರ್ಕಾರವು ಆಹಾರ ಭದ್ರತೆ ಮಸೂದೆಯನ್ನು ಜಾರಿ­ಗೊಳಿಸಿದೆ.

ಇದರಡಿಯಲ್ಲಿ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 35 ಕೆ.ಜಿ. ಅಕ್ಕಿಯನ್ನು ನೀಡಲಾಗುವುದು. ಇದ­ಕ್ಕಾಗಿ ಸುಮಾರು ಒಂದು ಲಕ್ಷದ ನಲ­ವತ್ಮೂರು ಸಾವಿರ ಕೋಟಿ  ರೂಪಾಯಿ­ಯನ್ನು ಸರ್ಕಾರ ವಿನಿಯೋಗಿಸಲಿದೆ ಎಂದರು.  

ಆಹಾರ ಭದ್ರತೆ ಮಸೂದೆಯಡಿ ಕಡುಬಡವ ಕುಟುಂಬಗಳಿಗೆ ಪ್ರತಿ ಕೆ.ಜಿ.ಗೆ 3 ರೂ ದರದಲ್ಲಿ ಅಕ್ಕಿ, 2 ರೂ.­ದರದಲ್ಲಿ ಗೋಧಿ ಹಾಗೂ ಒಂದು ರೂ. ದರದಲ್ಲಿ ಜೋಳವನ್ನು ವಿತರಿಸಲಾ­ಗುತ್ತಿದೆ. ದೇಶದ ಹಳ್ಳಿಗಳಲ್ಲಿ ವಾಸವಾ­ಗಿರುವ ಶೇ 75 ಹಾಗೂ ಪಟ್ಟಣಗಳ ಸುಮಾರು ಶೇ 50  ಜನರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರವು ಒಂದು ಕೆ.ಜಿ.ಅಕ್ಕಿಗೆ ಸುಮಾರು 15 ರೂ.ಗಳ ಸಬ್ಸಿಡಿ  ನೀಡು­ತ್ತಿದೆ. ಇದಕ್ಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಒಂದು ರೂ. ದರದಲ್ಲಿ ಅಕ್ಕಿಯನ್ನು ನೀಡುತ್ತಿದೆ ಎಂದರು.ಮಕ್ಕಳು ಶಿಕ್ಷಣದಿಂದ ವಂಚಿತರಾಗ­ಬಾರದು ಎಂಬ ಉದ್ದೇಶದಿಂದ ಕಡ್ಡಾಯ ಶಿಕ್ಷಣದ ಹಕ್ಕನ್ನು ಕಾನೂನು ರೂಪದಲ್ಲಿ 2010 ರಿಂದ ಜಾರಿಗೊಳಿಸಿದೆ. ಇದರಡಿ ಎಲ್ಲರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಎಂದು ಅವರಿಗೆ ಮಧ್ಯಾಹ್ನದ ಬಿಸಿ­ಯೂಟ, ಸರ್ವಶಿಕ್ಷಣ ಅಭಿಯಾನ­ಗಳಂಥ ಕಾರ್ಯಕ್ರಮಗಳನ್ನು ಹಮ್ಮಿ­ಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಶಿಕ್ಷಣಕ್ಕಾಗಿ 41 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಹೈದರಾಬಾದ್‌ ಕರ್ನಾಟಕ ಪ್ರದೇಶವು ಶಿಕ್ಷಣದಲ್ಲಿ ಹಿಂದುಳಿದಿದೆ. ಈ ನಿಟ್ಟಿನಲ್ಲಿ ಎಲ್ಲ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಶಿಕ್ಷಣ ಕೊಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ದೇಶದ ಅಲ್ಪಸಂಖ್ಯಾತರ ಶ್ರೇಯೋ­ಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳು 15 ಅಂಶಗಳ ಕಾರ್ಯಕ್ರಮವನ್ನು ಜಾರಿ     ಗೊ­ಳಿಸಿದ್ದಾರೆ. ಇದರಿಂದ ಅಲ್ಪಸಂಖ್ಯಾತ ಹೆಣ್ಣು ಮಕ್ಕಳು ಶಾಲಾ- ಕಾಲೇಜುಗಳಿಗೆ ಹೋಗುವಂತಾಗಿದೆ.ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ, ಕೌಶಲ್ಯಾಭಿವೃದ್ಧಿ ತರಬೇತಿ, ಹೊರದೇಶ­ಗಳಲ್ಲಿ ವ್ಯಾಸಂಗ ಮಾಡುವ­ವರಿಗೆ ವಿದ್ಯಾರ್ಥಿ ವೇತನ, ಆರ್ಥಿಕ ಸಹಾಯ, ಬ್ಯಾಂಕುಗಳಿಂದ ಸಾಲದ ಸಹಾಯ ಹಾಗೂ ಮದರಸಾ­ಗಳಿಗೆ ಸಹಾಯ­ವನ್ನು ಮಾಡಲಾಗು­ವುದು ಎಂದರು.

ಕೂಲಿ ಕಾರ್ಮಿಕರು ಗುಳೆ ಹಾಗೂ ವಲಸೆ ತಪ್ಪಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಹಕ್ಕಾಗಿ ಪರಿವರ್ತಿ­ಸಲಾಗಿದೆ.   ಕೂಲಿಯನ್ನು ಕಾರ್ಮಿ­ಕರ ಬ್ಯಾಂಕ್ ಖಾತೆಗಳ ಮೂಲಕ ಪಾವತಿಸಲಾ­ಗುತ್ತಿದೆ. ಈ ಹಿಂದಿನ 7 ವರ್ಷಗಳಿಂದ ಕೇಂದ್ರ ಸರ್ಕಾರ ಸುಮಾರು 41ಸಾವಿರ ಕೋಟಿ ರೂಪಾಯಿ ನೀಡುತ್ತಿದೆ. ಬಡ ಕುಟುಂಬಗಳಿಗೆ ಈ ಯೋಜನೆ ತುಂಬಾ ಸಹಾಯಕವಾಗಿದ್ದು ಅವರಿಗೆ ಹೆಚ್ಚಿನ ಕೂಲಿ ಮೊತ್ತ ದೊರೆಯುತ್ತಿದೆ ಎಂದರು. ಇದಲ್ಲದೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಹೆಣ್ಣು ಮಕ್ಕಳ ಸಬಲೀಕರಣ, ಸಾಮಾಜಿಕ ಅರಣ್ಯ, ಮಾಹಿತಿ ಹಕ್ಕು ಕಾಯ್ದೆ, ಭೂಸ್ವಾಧೀನ ಕಾಯ್ದೆ, ಮಲಹೊರುವ ಪದ್ದತಿ ನಿರ್ಮೂ­ಲನೆ, ಬೀದಿಗಳಲ್ಲಿ ತರಕಾರಿ ಹಾಗೂ ಹಣ್ಣು ಮಾರುವವರಿಗೆ ಗುರು­ತಿನ ಚೀಟಿ, ರಾಷ್ಟ್ರೀಯ ಸ್ವಾಸ್ಥ ಬಿಮಾ ಯೋಜನೆಗಳಂಥಹ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ­ರಾದ ಖಮರುಲ್ ಇಸ್ಲಾಂ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರ್ಕಾರದ ಕೆಲವು ಯೋಜನೆ­ಗಳಲ್ಲಿ ರಾಜ್ಯ ಸರ್ಕಾರದ ಸಹಭಾಗಿತ್ವವೂ ಇದೆ. ಈ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿ ಗ್ರಾಮೀಣ ಬಡ ಜನರಿಗೆ ತಲುಪಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.          

    

ಲೋಕಸಭಾ ಸದಸ್ಯ ಎನ್. ಧರ್ಮಸಿಂಗ್, ಶಾಸಕ ಜಿ. ರಾಮಕೃಷ್ಣ,  ಗುಲ್ಬರ್ಗ  ಪಂಚಾಯಿತಿ ಅಧ್ಯಕ್ಷ ಚನ್ನ­ವೀರಪ್ಪ ಸಲಗರ್, ಜಿಲ್ಲಾಧಿಕಾರಿ ಡಾ. ಎನ್. ವಿ. ಪ್ರಸಾದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ, ಪೊಲೀಸ್ ವರಿಷ್ಠಾಧಿಕಾರಿ ಡಾ. ಅಮಿತ್ ಸಿಂಗ್,  ಹೈದರಾಬಾದ್‌ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ  ಹೆಚ್ಚುವರಿ ಮಹಾನಿರ್ದೇಶಕ ಎಂ.ವಿ.ವಿ.ಎಸ್.­ಮೂರ್ತಿ, ಬೆಂಗಳೂರು ಹೆಚ್ಚುವರಿ ಮಹಾನಿರ್ದೇಶಕ ಎಸ್. ವೆಂಕಟೇಶ್ವರ ಇದ್ದರು. ಜಾಥಾ: ಇದಕ್ಕೂ ಮೊದಲು ಸಚಿವ ಖಮರುಲ್ ಇಸ್ಲಾಂ ಅವರು ಜಗತ್ ವೃತ್ತದಲ್ಲಿ ಭಾರತ ನಿರ್ಮಾಣ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.ಮಾಹಿತಿ– ಪ್ರದರ್ಶನ: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ, ಕೃಷಿ, ಅರಣ್ಯ, ನಿರ್ಮಲ ಭಾರತ ಅಭಿಯಾನ, ತೋಟಗಾರಿಕೆ, ಜಲಾನಯನ, ವಿದ್ಯುತ್ ಹಾಗೂ ದೂರವಾಣಿ, ಸರ್ವಶಿಕ್ಷಣ ಅಭಿಯಾನ, ಮಧ್ಯಾಹ್ನದ ಬಿಸಿಯೂಟ, ಐ.ಸಿ.ಡಿ.­ಎಸ್. ಮಹಿಳಾ ಸಶಕ್ತಿಕರಣ, ಮಹಾತ್ಮಾ­ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿ­ಯಾನ, ಆಹಾರ ಭದ್ರತೆ,  ಸಾಮಾಜಿಕ ಭದ್ರತೆ, ನೇರ ನಗದು ವರ್ಗಾವಣೆ, ಸಕಾಲ, ಭೂಸ್ವಾಧೀನ ಕಾಯ್ದೆ, ರೇಷ್ಮೆ ಸೇರಿದಂತೆ ಹಲವು ಇಲಾಖೆ ಹಾಗೂ ಯೋಜನೆಗಳ ವಿವರ ನೀಡುವ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ಪ್ರತಿಕ್ರಿಯಿಸಿ (+)