ಗುರುವಾರ , ಏಪ್ರಿಲ್ 22, 2021
28 °C

ಉತ್ಸಾಹದ ತೆರವು, ಸ್ವಚ್ಛತೆಗೆ ಮರೆವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ:  ಪಟ್ಟಣದಲ್ಲಿ ಮಾರ್ಚ್ 27ರಿಂದ ನಡೆದಿರುವ ರಸ್ತೆ ವಿಸ್ತರಣೆ ಹಾಗೂ ಅನಧಿಕೃತ ಕಟ್ಟಡಗಳ ನೆಲಸಮ ಕಾರ್ಯಾಚರಣೆಗೆ ಇನ್ನೊಂದು ವಾರ ಕಳೆದರೆ ತಿಂಗಳು ತುಂಬುತ್ತದೆ. ನಗರಸಭೆ ವ್ಯಾಪ್ತಿಯ ಎಲ್ಲ 31 ವಾರ್ಡ್‌ಗಳಲ್ಲಿ ಭೂಕಂಪದ ಛಾಯೆಯಂತೆ ನೆಲಸಮವಾದ ಕಟ್ಟಡಗಳು ಉಳಿದಿವೆ. ಅವಶೇಷ ಎತ್ತಿ ಹಾಕುವ ಕೆಲಸ ಕೆಲ ಪ್ರದೇಶಗಳಲ್ಲಿ ಪ್ರಗತಿಯಲ್ಲಿದೆಯಾದರೂ ಒಟ್ಟಾರೆ ಸ್ವಚ್ಛತೆ ಆಮೆಗತಿಯಲ್ಲಿ ಸಾಗಿದೆ. ಒಂದೆರಡು ಜೆಸಿಬಿ ಯಂತ್ರ ಹಾಗೂ ಟ್ರಾಕ್ಟರ್‌ಗಳನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.ವಿಪಿ ಚೌಕ್, ಭಾರತ ಚೌಕ್,  ಬಸ್ ನಿಲ್ದಾಣದ ರಸ್ತೆ, ಗಿಸಾಡಿ ಗಲ್ಲಿ, ಮಿಲ್ಲತ್ ನಗರ ಸೇರಿದಂತೆ ಹಲವೆಡೆ ಅವಶೇಷ ಎತ್ತಿ ಹಾಕಲಾಗಿದೆಯಾದರೂ ಇದು ಸುಗಮ ಸಂಚಾರ ನಡೆಯುವಷ್ಟಕ್ಕೆ ಸೀಮಿತವಾಗಿದೆ. ಮುಖ್ಯರಸ್ತೆ(ಬಡೆ ಬಜಾರ), ಶಾಸ್ತ್ರಿ ಚೌಕ್-ಲೋಹರ ಗಲ್ಲಿ ಪ್ರದೇಶದ ಸ್ವಚ್ಛತೆ ನಗರಸಭೆ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ. ಮುಖ್ಯರಸ್ತೆಯಲ್ಲಿ 2-3 ಅಂತಸ್ತಿನ ಕಟ್ಟಡಗಳ  ಅವಶೇಷ ಹೆಚ್ಚಾಗಿದೆ, ಲೋಹಾರ ಗಲ್ಲಿಯಲ್ಲಿ ಹಳೆ ಕಟ್ಟಡಗಳು ಹೆಚ್ಚುಕಡಿಮೆ ನಾಶವಾಗಿವೆ. ಕೆಲವು ಕಡೆ ನಗರಸಭೆಗೆ ಸೇರಿದ ಮಳಿಗೆಗಳು ಸಂಪೂಣ ನೆಲಕಚ್ಚಿದ್ದು ಈ ಕಟ್ಟಡಗಳ ಅವಶೇಷ ಸಿಬ್ಬಂದಿಗೆ ಸವಾಲಾಗಿವೆ. ಪ್ರಸ್ತುತ ಸ್ವಚ್ಛತೆ ಕೆಲಸವನ್ನು ನಗರಸಭೆ ಉದ್ಯೋಗಿಗಳಲ್ಲದ ಕೆಲ ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ.ಮಳೆಯಿಂದ ಸಮಸ್ಯೆ
: ಈ ಮಧ್ಯೆ ಪಟ್ಟಣದಲ್ಲಿ ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಅರೆಬರೆ ಉಳಿದ ರಸ್ತೆಯ ಮೇಲೆ ನೀರು ಸಮಸ್ಯೆ ಸೃಷ್ಟಿಯಾಗಿದೆ. ಚರಂಡಿಗಳು ಕಲ್ಲು-ಮಣ್ಣಿನಿಂದ ಮುಚ್ಚಿಹೋಗಿವೆ.ಮಳೆಗಾಲಕ್ಕೂ ಮುಂಚೆ ಈ ಚರಂಡಿಗಳು ಸ್ವಚ್ಛವಾಗದಿದ್ದಲ್ಲಿ ಜನತೆ ನರಕಯಾತನೆ ಅನುಭವಿಸುವುದು ಖಚಿತ. ಪಟ್ಟಣ ಮೊದಲೆ ಸೊಳ್ಳೆಗಳ ಆಗರ. ಕಟ್ಟಡ ನೆಲಸಮದಿಂದ ಎಲ್ಲೆಂದರಲ್ಲಿ ನಿಲ್ಲುತ್ತಿರುವ ನೀರು ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.