ಬುಧವಾರ, ಏಪ್ರಿಲ್ 21, 2021
32 °C

ಭಕ್ತರ ಕುಲದೇವಿ ಚಂದ್ರಲಾ ಪರಮೇಶ್ವರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಚಿತ್ತಾಪುರ ತಾಲ್ಲೂಕಿನ ಶಹಾಬಾದ ಪಟ್ಟಣದಿಂದ ಸುಮಾರು 8 ಕಿಮೀ ದೂರದ ಹೊನಗುಂಟಿ ಗ್ರಾಮದಲ್ಲಿ ಸಾವಿರಾರು ಭಕ್ತರ ಕುಲದೇವಿಯಾದ ಅನೇಕರ ಇಷ್ಟ ದೇವತೆಯಾದ ಹಾಗೂ ನಂಬಿದವರಿಗೆ ಅಭಯವನ್ನೀಯುವ ಶ್ರೀ ಚಂದ್ರಲಾ ಪರಮೇಶ್ವರಿ ದೇವಸ್ಥಾನವಿದೆ. ಈ ದೇವಸ್ಥಾನವು ಭೀಮಾ ಕಾಗಿಣಾ ನದಿಗಳ ಸಂಗಮ ತೀರದಲ್ಲಿದ್ದು ಧಾರ್ಮಿಕ- ಸಾಂಸ್ಕೃತಿಕ ಕ್ಷೇತ್ರವಾಗಿದೆ. ಐತಿಹಾಸಿಕ ಹಿನ್ನೆಲೆ: ಬಾದಾಮಿ ಚಾಲುಕ್ಯರ ಆಳರಸರ ಇಷ್ಟದೇವತೆಯಾಗಿ, ಆರಾಧ್ಯ ದೇವತೆಯಾಗಿ ಅವರಿಗೆ ಸದಾಶಕ್ತಿ ಹಾಗೂ ಚೈತನ್ಯವನ್ನು ನೀಡುತ್ತಿದ್ದಳೆಂಬುದು ಶ್ರೀ ಚಂದ್ರಲಾ ಪರಮೇಶ್ವರಿ ಸುಪ್ರಭಾತದಲ್ಲಿ ಬರುವ ಸಾಲುಗಳಿಂದ ಗೊತ್ತಾಗುತ್ತದೆ. ಧರ್ಮಸ್ಥಳದ ಮಂಜುನಾಥೇಶ್ವರ ಟ್ರಸ್ಟ್‌ನವರು ದೇವಸ್ಥಾನದ ವಿಶ್ವಸ್ತ ಮಂಡಳಿಯ ಸಹಯೋಗದೊಂದಿಗೆ ಜೀರ್ಣೋದ್ಧಾರ ಕೈಗೊಳ್ಳುವಾಗ ಈ ಮಂದಿರವು ಸುಮಾರು 1,200 ವರ್ಷ ಪುರಾತನವಾಗಿದ್ದು, ಚಾಲುಕ್ಯ ಶ್ರೀ ಆಕಾರದ ಶಿಖರದ ನಿರ್ಮಾಣವಿದೆ ಎಂದು ತಜ್ಞರು ಊಹಿಸಿದ್ದಾರೆ. ಈ ದೇವಾಲಯದ ಕಟ್ಟಡ ವಿಶಿಷ್ಟ ಹಾಗೂ ಅಪರೂಪದ್ದಾಗಿದೆ. ಯಾರೇ ಆಗಲಿ ನೇರವಾಗಿ ದ್ವಾರದಿಂದ ಗರ್ಭಗುಡಿಯವರೆಗೆ ಹೋಗಲು ಸಾಧ್ಯವಿಲ್ಲ. ದ್ವಾರದ ಎದುರು ಒಂದು ಚಿಕ್ಕ ಕಿಂಡಿ. ಅದರ ಮುಖಾಂತರ ದರ್ಶನ ಪಡೆದು ಅಲ್ಲಿಂದ ಎಡಕ್ಕೆ ಇಕ್ಕಟಾದ ತಿರುವಿನ ಮುಖಾಂತರ ರಂಗಮಂದಿರಕ್ಕೆ ಪ್ರವೇಶ. ಅಲ್ಲಿ ಎದುರಿಗೆ ಗರ್ಭಗುಡಿಯಲ್ಲಿ ದೇವತೆಯ ದರ್ಶನವಾಗುವುದು. ಚಂದ್ರಲಾ ಪರಮೇಶ್ವರಿ ದೇವಾಲಯದ ಗರ್ಭಗುಡಿಯ ಆವರಣದಲ್ಲಿ ಕಾಲಭೈರವ, ಗಣಪತಿ ಹನುಮಂತ ಹಾಗೂ ಶಿವ ದೇವಾಲಯಗಳು  ನಿರ್ಮಾಣಗೊಂಡಿದೆ.ಋಷಿಗಳ ಆಶ್ರಮಕ್ಕೆ ತಕ್ಕದಾದ ಈ ಸ್ಥಳದಲ್ಲಿ ಶ್ರೀ ನಾರಾಯಣ ಮುನಿಗಳು ತಮ್ಮ ಪತ್ನಿ ಚಂದ್ರವದನೆಯೊಂದಿಗೆ ಕುಟೀರ ಕಟ್ಟಿಕೊಂಡು ತಮ್ಮ ದಿನಚರಿ ಸಾಗಿಸಿದ್ದರು. ಸನ್ನತಿಯ ರಾಜ ಸೇತುರಾಜ ಬೇಟೆಯಾಡುತ್ತಾ ಬಂದಾತ ಚಂದ್ರವದನೆಯನ್ನು ಕಂಡು, ರೂಪಿಗೆ ಮನಸೋತು ತನ್ನನ್ನು ಮದುವೆಯಾಗುವಂತೆ ಬಲವಂತಪಡಿಸಿದ.ಪ್ರತಿವ್ರತೆಯಾದ ಚಂದ್ರವದನೆ, ಸೇತುರಾಜನ ಬೇಡಿಕೆಯನ್ನು ತಿರಸ್ಕರಿಸಿದಳು. ಸೇತುರಾಜನು ಚಂದ್ರವದನೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದು, ಆಕೆ ಈತನ ಬಂಧನದಿಂದ ಮುಕ್ತಿ ಪಡೆಯಲು ದಿನಾಲೂ ಈಶ್ವರನನ್ನು ಪ್ರಾರ್ಥಿಸುತ್ತಿದ್ದಳು.ನಾರಾಯಣ ಮುನಿ ಈ ಸಮಸ್ಯೆ ಕುರಿತು ತಿಳಿದುಕೊಂಡು ಇಷ್ಟದೇವತೆಯಾದ ಹಿಂಗುಲಾಂಬಿಕೆಗೆ ಮೊರೆ ಹೊಕ್ಕರು. ಕೊನೆಗೂ ಈಶ್ವರ ಮತ್ತು ಹಿಂಗುಲಾಂಬಿಕೆಯ ಮೊರೆ ಹೊಕ್ಕಿದ್ದರಿಂದ ಅವರ ಸಮಸ್ಯೆ ಪರಿಹಾರಗೊಂಡಿತು.ಭೀಮಾನದಿ ತೀರದಲ್ಲಿ ಚಂದ್ರವದನೆ ಆರಾಧಿಸಿದ ಭವ್ಯ ಶಿವಾಲಯವಿದೆ. ಅನಂತರ ಚಂದಿರವದನೆ,   ಹಿಂಗುಲಾಂಬಿಕೆಯನ್ನು ಕುರಿತು ಆರಾಧಿಸಿ ತಾನು ಇದುವರೆಗೆ ಪಟ್ಟ ಕಷ್ಟವನ್ನು ವ್ಯರ್ಥವಾಗಿ ಹೋಗದಂತೆ ತನ್ನ ಪ್ರತಿವ್ರತಾ ಆಚರಣೆಯನ್ನು ಜನರಿಗೆ ಜ್ಞಾತ ಮಾಡುವಂತೆ ಭೂಲೋಕದಲ್ಲಿ ತನ್ನ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಕೃಪೆ ತೋರಬೇಕು ಎಂದು ಕೇಳಿದಳು. ಅದಕ್ಕೆ ಹಿಂಗುಲಾಂಬಿಕೆ ಈಗಾಗಲೇ ಸನ್ನತಿಪುರದಲ್ಲಿ ಅಲ್ಲಿನ ಮಹಾಜನರು ತನ್ನ ಪಾದುಕೆಯನ್ನು ಪ್ರತಿಷ್ಠಾಪಿಸಿ ದಿನನಿತ್ಯ ಆರಾಧಿಸುವುದಾಗಿ ಕೇಳಿಕೊಂಡಿದ್ದಾರೆ. ಆ ನನ್ನ ಪಾದುಕೆಗೆ ನಿನ್ನ ಹೆಸರನ್ನೇ ನೀಡಿ ಹೊನಗುಂಟೆಯಲಿಯ್ಲೂ ನಿನ್ನ ಹೆಸರನ್ನೇ ಪಡದು ಜನ ಆರಾಧಿಸುವಂತಾಗಲಿ ಎಂದು ಶ್ರೀ ಚಂದ್ರವದನೆ ಹೆಸರು ಭೂಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ವರವನ್ನು ನೀಡಿದಳು. ಸನ್ನತಿಗೆ ಬಂದವರು ಹೊನಗುಂಟಿಗೂ ಬಂದು ದರ್ಶನವನ್ನು ಪಡೆದುಕೊಂಡಾಗ ಯಾತ್ರೆ ಪೂರ್ಣವಾಗುತ್ತದೆ ಎಂದು ಹೇಳಿದಳು.ಅಂತೆಯೇ ಈ ಪರಂಪರೆ ಮುಂದುವರೆದಿದೆ. ಹಿಂಗುಲಾಂಬಿಕೆ ಹಾಗೂ ಸನ್ನಿತಿಯ ಭ್ರಮರಾಂಬಿಕೆಯೂ ಶ್ರೀ ಚಂದ್ರಲಾಪರಮೇಶ್ವರಿಯಾಗಿ, ಚಂದ್ರಲಾಂಬಿಕೆಯಾಗಿ, ಚಂದ್ರವದನೆಯಾಗಿ, ಜಗನ್ಮಾತೆಯಾಗಿ ಜನರು ಸ್ತುತಿಗೈಯುತ್ತಿದ್ದಾರೆ.ಹೊನಗುಂಟಾ ಕ್ಷೇತ್ರದಲ್ಲಿ ನೆಲಸಿರುವ ಕಾಶ್ಮೀರ ಪುರವಾಸಿ ಹಿಂಗುಲಾಂಬಿಕೆಗೆ ಇಂದಿಗೂ (ಹರಿದ್ರಾ) ಕಾಗಿಣಾ ನದಿಯ ನೀರಿನಿಂದಲೇ ಪೂಜೆ ನೆರವೇರುತ್ತದೆ. ಹೊನಗುಂಟಿ ಹಾಗೂ ಸನ್ನಿತಿಯಲ್ಲಿ ಉತ್ಸವ (ಪೂಜೆ, ಅಭಿಷೇಕ, ನೈವೇದ್ಯ, ಮಂಗಳಾರತಿ, ಪಲಕ್ಲಿ ಸೇವೆ, ರಥೋತ್ಸವ) ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.